ಪ್ರಕೃತಿ ಮಾತೆ ಈ ನಾಡಿನಲ್ಲಿ ಒಂದಲ್ಲ ಒಂದು ಅದ್ಭುತವನ್ನು ಸೃಷ್ಟಿಸಿರುತ್ತಾಳೆ. ಪ್ರಕೃತಿಯ ಸೊಬಗು ಕಣ್ಮನ ಸೆಳೆಯುತ್ತದೆ. ಅವಳ ಸೃಷ್ಟಿಗಳಲ್ಲಿ ಜಲಪಾತವೂ ಒಂದು. ಕರಿ-ಬಿಳಿ ಮೋಡಗಳನ್ನು ಬೆಟ್ಟಗಳು ಮುತ್ತಿಕ್ಕಿ, ಜಲಪಾತಗಳು ಹಾಲ್ನೊರೆಯಂತೆ ಹರಿಯುತ್ತವೆ. ಎಷ್ಟೋ ಜಲಪಾತಗಳು, ಪ್ರವಾಸಿ ತಾಣಗಳು ಪ್ರಸಿದ್ಧಿಯನ್ನು ಹೊಂದಿವೆ. ಆದರೆ ಕೆಲವು ಪ್ರವಾಸಿ ತಾಣಗಳು ಅಡಗಿ ಕುಳಿತಿವೆ. ಅಂತವುಗಳಲ್ಲಿ ನಾ ಕಂಡ ಅಪರೂಪದ ಹಾಗೂ ಹೆಚ್ಚು ಜನಪ್ರಿಯತೆ ಹೊಂದದ ತಾಣವೇ ಕುಂಡಡ್ಕ ಜಲಪಾತ. ಇದೊಂದು ಮಾನವ ನಿರ್ಮಿತ ಜಲಪಾತ. ಅತ್ಯಂತ ಶಾಂತವಾದ ಹಾಗೂ ಅದ್ಭುತವಾದ ಪ್ರಕೃತಿ ಸೌಂದರ್ಯದ ಸ್ಥಳವಾಗಿದೆ. ಇಲ್ಲಿ ಮಳೆಗಾಲದಲ್ಲಿ ನೀರಿನ ಘರ್ಜನೆ ಜೋರಾಗಿರುತ್ತದೆ.
ಕುಂಡಡ್ಕ ಜಲಪಾತವು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ಧಾಳದ ಕೈಕುರೆ ಜಮೀನಿನಲ್ಲಿದೆ. ಇದು ಮರ್ಧಾಳದಿಂದ 2.5 ಕಿ.ಮೀ, ಮಂಗಳೂರಿನಿಂದ 90 ಕಿ.ಮೀ ಮತ್ತು ಸುಬ್ರಹ್ಮಣ್ಯದಿಂದ 19 ಕಿ. ಮೀ ದೂರದಲ್ಲಿದೆ. ಇಲ್ಲಿಗೆ ದ್ವಿ ಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳಲ್ಲಿ ಪ್ರಯಾಣಿಸಬಹುದು.
ಈ ಸ್ಥಳ ಮುಂಚೆ ಹೇಗಿತ್ತು? ಇದು ಜಲಪಾತವಾಗಿದ್ದಾದರೂ ಹೇಗೆ? ಕುಂಡಡ್ಕ ಎನ್ನುವ ಈ ಸ್ಥಳ ಮೊದಲು ಬಂಡೆಕಲ್ಲಿನ ಕೋರೆಯಾಗಿತ್ತು. ಇಲ್ಲಿನ ಕಲ್ಲುಗಳನ್ನು ಪುಡಿಪುಡಿ ಮಾಡಿ ಬೇರೆ ಕಡೆ ಸಾಗಿಸಲಾಗುತಿತ್ತು. ನಂತರ ಅದನ್ನು ನಿಲ್ಲಿಸಲಾಯಿತು. ತುಂಬಾ ಎತ್ತರವಾದ ಬಂಡೆಕಲ್ಲನ್ನು ಕೊರೆದುದರಿಂದ ಮೇಲೆ ಇರುವ ಬೆಟ್ಟದಿಂದ ನೀರು ಹರಿಯಲಾರಂಭಿಸಿತು. ಅಂದಿನಿಂದ ಇದು ಕುಂಡಡ್ಕ ಜಲಪಾತವೆಂದು ಹೆಸರಾಯಿತು.
ಇದು ಖಾಸಗಿ ಸ್ಥಳವಾಗಿದ್ದು ಶಿವಣ್ಣ ಮತ್ತು ಗಣೇಶ್ ಎಂಬವರಿಗೆ ಸಂಬಂಧ ಪಟ್ಟದ್ದಾಗಿದೆ. ಅವರ ಅನುಮತಿಯ ಮೇರೆಗೆ ಇಲ್ಲಿಗೆ ಆಗಮಿಸಬೇಕು. ಹೆಚ್ಚಿನ ಜನರಿಗೆ ಪ್ರವೇಶಕ್ಕೆ ಅವಕಾಶ ಇಲ್ಲ. ಯಾಕೆಂದರೆ ಇಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮರ್ಧಾಳಕ್ಕೆ ಸಂಬಂಧಪಟ್ಟ ನಾಗಸಾನಿಧ್ಯ ಹಾಗೂ ದೈವಗಳ ಧಾರ್ಮಿಕ ಕ್ಷೇತ್ರವಿದೆ. ಇಲ್ಲಿಗೆ ಆಗಮಿಸಿದ ಪ್ರವಾಸಿಗರು ಸ್ನಾನ ಮಾಡುವುದು, ಮದ್ಯಪಾನ, ತಿಂಡಿ-ತಿನಿಸುಗಳು, ಮಾಂಸಹಾರ ಮಾಡಲಿಕ್ಕಿಲ್ಲ. ಪ್ಲಾಸ್ಟಿಕ್ ಗಳನ್ನು ಎಸೆಯುವಂತಿಲ್ಲ. ಬಂಡೆಕಲ್ಲಿನ ಮೇಲೆ ಹತ್ತಿ ಯಾವುದೇ ಮೋಜು ಮಸ್ತಿ ಮಾಡುವಂತಿಲ್ಲ. ಸ್ವಚ್ಛತೆಯನ್ನು ಕಾಪಾಡಿ, ಇಲ್ಲಿರುವಂತಹ ಧಾರ್ಮಿಕ ಕ್ಷೇತ್ರಕ್ಕೆ ಯಾವುದೇ ಧಕ್ಕೆ ಬಾರದ ಹಾಗೆ ನಡೆದುಕೊಳ್ಳಬೇಕು. ಇದು ಮಳೆಗಾಲದಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ. ಕುಟುಂಬ ಸಮೇತರಾಗಿ ಹೋಗಿ ಆನಂದಿಸಬಹುದು.
ನಮ್ಮ ಪ್ರಕೃತಿಯಲ್ಲಿ ಇಂತಹ ಅದೆಷ್ಟೋ ಜಲಪಾತಗಳು ಕಾಣಸಿಗುತ್ತವೆ. ಆದರೆ ಮೋಜು ಮಸ್ತಿಯಿಂದ ಪ್ರಕೃತಿಗೆ ಹಾನಿಯಾಗುತ್ತಿದೆ. ನಮ್ಮಲ್ಲಿ ಕಾಣಸಿಗುವಂತಹ ನೈಸರ್ಗಿಕ ತಾಣಗಳನ್ನು ಹಾಳುಮಾಡದೆ ಅದರ ನೈಜಸ್ವರೂಪವನ್ನು ಉಳಿಸಿಕೊಂಡು ಹೋಗೋಣ..
ಪ್ರಮೀಳಾ ವಾಟೆಕಜೆ
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು