Advertisement
2021-22ರಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲೂ ನಡೆದ 5ನೇ ಹುಲಿಗಣತಿ ವರದಿ ಆ.15 ಸ್ವಾತಂತ್ರ್ಯ ದಿನಾಚರಣೆಯಂದು ಹೊರ ಬೀಳುವ ಸಾಧ್ಯತೆ ಇದ್ದು, ಈ ವರದಿ ಪ್ರಕಾರ ಕರ್ನಾಟಕ ಅಗ್ರಸ್ಥಾನ ಕಾಯ್ದುಕೊಳ್ಳುವ ಭರವಸೆ ಅಧಿಕಾರಿಗಳು ಹೊಂದಿದ್ದಾರೆ.
Related Articles
Advertisement
ಹುಲಿ ಸಾವಿನಲ್ಲಿ ಮೂರನೇ ಸ್ಥಾನ: ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳು ಸಾವನ್ನಪ್ಪಿರುವ ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಹುಲಿಗಳ ರಾಜ್ಯ ಎಂದೇ ಖ್ಯಾತಿ ಪಡೆದಿದ್ದ ಮಧ್ಯಪ್ರದೇಶದಲ್ಲಿ ಒಂದೇ ವರ್ಷದಲ್ಲಿ 74 ಹುಲಿಗಳು ಮೃತಪಟ್ಟಿವೆ. ಈ ಮೂಲಕ ಹುಲಿಗಳ ಸಾವಿನಲ್ಲೂ ಮಧ್ಯಪ್ರದೇಶ ಅಗ್ರಸ್ಥಾನ ಪಡೆದುಕೊಂಡಿದೆ. ಉಳಿದಂತೆ ಮಹಾರಾಷ್ಟ್ರದಲ್ಲಿ 15, ಕರ್ನಾಟಕದಲ್ಲಿ 11 ಹಾಗೂ ಅಸ್ಸಾಂನಲ್ಲಿ 03 ಹುಲಿ ಗಳು ಮೃತಪಟ್ಟಿವೆ ಎಂದು ರಾಷ್ಟ್ರೀಯ ಹುಲಿ ಸಂರ ಕ್ಷಣಾ ಪ್ರಾಧಿಕಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಹುಲಿ ರಾಜ್ಯಕ್ಕಾಗಿ ಪೈಪೋಟಿ: ದೇಶದಲ್ಲಿ ಹುಲಿಗಣತಿ ಆರಂಭವಾದಗಿನಿಂದಲೂ ಹುಲಿರಾಜ್ಯ ಪಟ್ಟಕ್ಕಾಗಿ ಕರ್ನಾಟಕ ಮತ್ತು ಮಧ್ಯಪ್ರದೇಶದ ನಡುವೆ ಪೈಪೋಟಿ ನಡೆಯುತ್ತಿದೆ. 2006ರಲ್ಲಿ ಮಧ್ಯ ಪ್ರದೇಶ 300 ಹುಲಿಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕ 290 ಹುಲಿ ಹೊಂದುವ ಮೂಲಕ 2ನೇ ಸ್ಥಾನದಲ್ಲಿತ್ತು. ಬಳಿಕ 2010ರ ವರದಿಯಲ್ಲಿ ಕರ್ನಾಟಕ 300 ಹುಲಿಗಳ ಮೂಲಕ ಅಗ್ರಸ್ಥಾನಕ್ಕೇರಿದರೆ, 257 ಹುಲಿಗಳೊಂದಿಗೆ ಮಧ್ಯಪ್ರದೇಶ 2ನೇ ಸ್ಥಾನಕ್ಕೆ ಕುಸಿದಿತ್ತು. ನಂತರ 2014 ಹುಲಿ ಗಣತಿಯಲ್ಲಿ ಕರ್ನಾಟಕ ರಾಜ್ಯ 406 ಹುಲಿಗಳನ್ನು ಹೊಂದುವ ಮೂಲಕ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡರೆ, ಮಧ್ಯಪ್ರದೇಶದಲ್ಲಿ 308 ಹುಲಿಗಳ ಮೂಲಕ 2ನೇ ಸ್ಥಾನದಲ್ಲಿಯೇ ಉಳಿದಿತ್ತು. ಆದರೆ, 2018ರ ಹುಲಿಗಣತಿಯಲ್ಲಿ ಮಧ್ಯಪ್ರದೇಶ ಪರಿಣಾಮಕಾರಿಯಾಗಿ ಕ್ಯಾಮೆರಾ ಟ್ರ್ಯಾಪ್ ಬಳಸಿ ಹುಲಿ ಗಣತಿ ಮಾಡಿದ್ದರಿಂದ 2019ರ ವರದಿಯಲ್ಲಿ 526 ಹುಲಿಗಳೊಂದಿಗೆ ಮೊದಲ ಸ್ಥಾನಕ್ಕೆ ಏರಿತ್ತು.
ಸಧ್ಯಕ್ಕೆ ಕರ್ನಾಟಕದಲ್ಲಿ ಈ ಬಾರಿ ಬಫರ್ ಜೋನ್ ನಲ್ಲಿಯೂ ಅರಣ್ಯ ಇಲಾಖೆ ಕ್ಯಾಮೆರಾ ಅಳವಡಿಸಿ ಯಶಸ್ವಿಯಾಗಿ ಹುಲಿ ಗಣತಿ ನಡೆಸಿದ್ದು, ಅಂದಾಜು 610ಕ್ಕೂ ಹೆಚ್ಚು ಹುಲಿಗಳಿರುವ ಬಗ್ಗೆ ತಿಳಿದುಬಂದಿದೆ.
ಭಾರತದಲ್ಲಿ ಶೇ.70 ಹುಲಿ: ಜಾಗತಿಕ ಮಟ್ಟದ ಹುಲಿ ಗಣತಿ ವರದಿ ಪ್ರಕಾರ ಜಗತ್ತಿನಲ್ಲಿ 4500ಕ್ಕೂ ಹೆಚ್ಚು ಹುಲಿಗಳಿದ್ದು, ಈ ಪೈಕಿ ಶೇ.70 ಭಾರತದಲ್ಲಿರುವುದು ಗಮನಾರ್ಹ. 2019ರ ವರದಿ ಪ್ರಕಾರ ದೇಶದಲ್ಲಿ 2967 ಹುಲಿಗಳಿದ್ದು, ಮಧ್ಯಪ್ರದೇಶದಲ್ಲಿ 526, ಕರ್ನಾಟಕದಲ್ಲಿ 524, ಉತ್ತರಾಖಂಡ-442, ಮಹಾರಾಷ್ಟ್ರ-312, ತಮಿಳುನಾಡು-262 ಹುಲಿಗಳನ್ನು ಹೊಂದಿದ್ದವು. ಆದರೆ, ಈ ಬಾರಿ ಗಣತಿಯಲ್ಲಿ ಹುಲಿಗಳ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.
ಪ್ರತಿ 4 ವರ್ಷಕೊಮ್ಮೆ ದೇಶದಲ್ಲಿ ಹುಲಿ ಗಣತಿ ನಡೆಸಲಾಗುತ್ತಿದೆ. ರಾಜ್ಯದಲ್ಲೂ ಹುಲಿ ಸಂರಕ್ಷಿತ ಪ್ರದೇಶ, ರಾಷ್ಟ್ರೀಯ ಉದ್ಯಾನಗಳಲ್ಲೂ 2021-22ರಲ್ಲಿ ಹುಲಿ ಗಣತಿ ನಡೆಸಲಾಗಿದೆ. 60 ಲಕ್ಷ ಫೋಟೋ ಎನ್‌ಟಿಸಿಗೆ ನೀಡಿದ್ದೇವೆ. ಈ ಆಧಾರದ ಮೇಲೆ ಎಷ್ಟು ಹುಲಿಗಳಿವೆ ಎಂಬುದನ್ನು ಕೇಂದ್ರ ಸರ್ಕಾರ ಶೀಘ್ರ ಪ್ರಕಟಿಸಲಿದೆ. ನಮ್ಮಲ್ಲಿ ಹುಲಿ ಸಂಖ್ಯೆ ಹೆಚ್ಚಿರುವುದು ಕಂಡು ಬಂದಿದೆ. –ಕುಮಾರ್ ಪುಷ್ಕರ್, ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ).
ದೇಶದಲ್ಲಿ ಹುಲಿ ಆವಾಸಸ್ಥಾನವನ್ನು ಸಮರ್ಪ ಕವಾಗಿ ನಿರ್ವಹಿಸಿದ್ದರೆ 10 ರಿಂದ 15 ಸಾವಿರ ಹುಲಿ ಇರುತ್ತಿದ್ದವು. ಆದರೆ, ಇಲಾಖೆ ಆ ಕೆಲಸ ಮಾಡದೇ ಕೇವಲ 3 ಸಾವಿರ ಹುಲಿ ತೋರಿಸಿ, ನಮ್ಮಲ್ಲೇ ಹುಲಿ ಇವೆ ಎಂದು ಬಿಂಬಿಸಿಕೊಳ್ಳುತ್ತಿರುವುದು ಅರ್ಥಹೀನ. – ಉಲ್ಲಾಸ್ ಕಾರಂತ್, ವನ್ಯಜೀವಿ ತಜ್ಞರು.
● ಸತೀಶ್ ದೇಪುರ