Advertisement

World Theatre Day: ರಂಗದಿಂದಷ್ಟು ದೂರ…

02:37 PM Mar 24, 2024 | Team Udayavani |

ಈಚೆಗೆ ರಂಗ”ಭೂಮಿ’ಯಲ್ಲಿ ಕೃಷಿಕನಾಗಿ ಕೆಲಸ ಮಾಡುತ್ತೇನೆ ಎಂದು ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇದು ಆಶಾದಾಯಕವೇನೋ ನಿಜ. ಪರಿಸ್ಥಿತಿ ಮುಂಚೆ ಹೀಗೆ ಇದ್ದಿದ್ದಿಲ್ಲ. ನಾಟಕ ರಂಗದ ಬಗ್ಗೆ ಪ್ರೇಕ್ಷಕರು ಗೌರವವನ್ನೇನೋ ಇರಿಸಿಕೊಂಡಿದ್ದರು. ರಂಗದ ಮೇಲೆ ದಶಕಗಳ ಕಾಲ ಮಿನುಗಿ ರಂಜಿಸಿದ ಹಲವು ನಟರ ನಾಟಕಗಳನ್ನು ಜನ ಮುಗಿಬಿದ್ದು ನೋಡಿದ ಉದಾಹರಣೆಗಳೂ ಸಾಕಷ್ಟಿವೆ. ಇದು ಕಲೆಯ ಆರಾಧನೆಯಾಗಿ ಸರಿ. ಆದರೆ ಇದನ್ನೇ ವೃತ್ತಿಯಾಗಿ ಸ್ವೀಕರಿಸುವ ಪ್ರಮೇಯ ಮುಂಚೆ ಒದಗಿ ಬಂದಿದ್ದರೆ ಕಥೆ ಬೇರೆ ಆಗುತ್ತಿತ್ತು. ಕಾರಣ, ದಶಕಗಳ ಹಿಂದೆ ಕಲೆಯ ಬಗ್ಗೆ ಇದ್ದ ಗೌರವ, ಕಲಾವಿದರ ಬದುಕಿನ ಬಗ್ಗೆ ಇರಲಿಲ್ಲ. ಹೆಣ್ಣುಮಕ್ಕಳಿಗೆ ಮನೆಯಿಂದ ಹೊರಬರಲಿಕ್ಕೇ ನಿರ್ಬಂಧ ಇದ್ದ ಕಾಲ ಇತ್ತು. ಅದನ್ನೂ ದಾಟಿ ಅವರು ನಾಟಕ ನೋಡಲು ಹೋದರೆ ಅವರಿಗೆ ಕೆಟ್ಟ ಪಟ್ಟ ಕಟ್ಟುವುದು ಖಾಯಂ ಆಗಿತ್ತು.

Advertisement

ಆದರೆ ಇಂದು ಪರಿಸ್ಥಿತಿ ಸುಧಾರಿಸಿದೆ. ಹೆಣ್ಣುಮಕ್ಕಳಿಗೆ ನಿರ್ಬಂಧಗಳಿಲ್ಲ ಅಂತೇನಿಲ್ಲ. ಅದನ್ನು ಮೀರಿ ಅವರು ರಂಗದ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹುಡುಗರು ಪಾಲುಗೊಳ್ಳುವ ಸಂಖ್ಯೆಯೂ ಹೆಚ್ಚುತ್ತಿ$¤ದೆ. ಎಲ್ಲಕ್ಕಿಂತ ಮಿಗಿಲಾಗಿ, ಸಾಫ್ಟ್ವೇರ್‌ ರಂಗದ ಜನ ಆರಂಭದಲ್ಲಿ ರಂಗದ ಸೆಳವಿಗೆ ಸಿಕ್ಕಿಕೊಂಡು, ನಂತರ ಅದನ್ನೇ ವೃತ್ತಿಯಾಗಿ ಸ್ವೀಕರಿಸಿ ಮುನ್ನಡೆಯುತ್ತಿರುವವರೂ ಇಂದು ಸಾಕಷ್ಟು ಮಂದಿ ಇದ್ದಾರೆ. ಆದಾಯ ಬರದಿದ್ದರೆ ಜೀವನ ನಿರ್ವಹಣೆ ಕಷ್ಟ. ಮರಳಿ ಹಳೇ ಉದ್ಯೋಗಕ್ಕೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಆ ತರಹದ ಸಂದರ್ಭಗಳು ಸೃಷ್ಟಿಯಾಗುತ್ತಿರುವುದು ಕಡಿಮೆ. ಯಾಕೆಂದರೆ ರಂಗಭೂಮಿಯಿಂದ ದುಡ್ಡು ಸಂಪಾದಿಸುವ ಮಾರ್ಗಗಳನ್ನು ಅವರು ಕಂಡುಕೊಂಡಿದ್ದಾರೆ. ದುಡ್ಡು ಹುಟ್ಟುತ್ತಿದೆ ಅಂದಮಾತ್ರಕ್ಕೆ ರಂಗಭೂಮಿಯಲ್ಲಿನ ಬೆಳೆ ಹುಲುಸಾಗಿದೆ ಅಂತೇನಿಲ್ಲ. ಇದು ವೈರುಧ್ಯದ ಸಂಗತಿ.

ವಾಸ್ತವ ಬೇರೆ ಇದೆ…

ವೃತ್ತಿ ರಂಗಭೂಮಿಯಲ್ಲಿ ದುಡ್ಡು ಇದೆ. ಮತ್ತು ಇರಬೇಕು ಕೂಡ. ಇಲ್ಲದಿದ್ದರೆ ಅವರೆಲ್ಲರ ಹೊಟ್ಟೆಪಾಡು ನಡೆಯುವುದಿಲ್ಲ. ಹಾಗಾಗಿ ಅವರು ನಾಟಕವನ್ನು ಜನರ ರಂಜನೆಗೆ ಹೇಗೆ ಬೇಕೋ ಹಾಗೆ ಬದಲಿಸಿಕೊಳ್ಳುವ ಮಾರ್ಗಕ್ಕೆ ಒಗ್ಗಿಬಿಟ್ಟಿದ್ದಾರೆ. ಮತ್ತು ಅದರ ಬಗ್ಗೆ ಅವರ್ಯಾರಲ್ಲೂ ಪಶ್ಚಾತ್ತಾಪವಿಲ್ಲ. ಪೋಲಿ ಮಾತು, ದ್ವಂದ್ವಾರ್ಥ ಬಳಸಿ ಜನರನ್ನ ರಂಜಿಸಿ ಹಣ ಸಂಪಾದಿಸುತ್ತೀರಿ ಅಂದರೂ ಅವರಿಂದೇನೂ ಆಕ್ಷೇಪಣೆ ಬರುವುದಿಲ್ಲ. ನಮ್ಮ ಪಾಡು ನಮ್ಮದು ಎಂಬಂತೆ ಅವರು ನಾಟಕಗಳನ್ನು ಮಾಡಿಕೊಂಡು, ಕಲೆಕ್ಷನ್‌ ಮಾಡಿಕೊಂಡು ಇಂದಿಗೂ ನಡೆದೇ ಇದ್ದಾರೆ. ಹವ್ಯಾಸಿಗಳು ಹಾಗಲ್ಲ. ಅವರು ನಾಟಕಗಳನ್ನ ಮಾಡುವುದೂ ದುಡ್ಡಿಗಾಗಿಯೇ. ಕೆಲವೊಮ್ಮೆ ಕಳೆದುಕೊಳ್ಳುವುದಕ್ಕಾಗಿ. ಅದು ಬೇರೆ ವಿಚಾರ. ದುಡ್ಡಿಗಾಗಿಯೇ ನಾಟಕ ಮಾಡಿದರೂ ಇವರಲ್ಲಿ ನಾಟಕಗಳ ಆಯ್ಕೆ, ವಿನ್ಯಾಸದಲ್ಲಿ ಗಂಭೀರ ಆಲೋಚನೆಗಳಿವೆ. ಇವರ ನಾಟಕಗಳನ್ನು ನೋಡಲೆಂದೇ ಒಂದು ನಿರ್ದಿಷ್ಟ ವರ್ಗವೂ ಸೃಷ್ಟಿಯಾಗಿದೆ.

ಆಸಕ್ತಿಯಲ್ಲ, ಅನಿವಾರ್ಯತೆ!

Advertisement

ಮುಖ್ಯವಾದ ಸಂಗತಿಯೆಂದರೆ, ಹವ್ಯಾಸಿ ತಂಡಗಳಲ್ಲಿ ಸಂಭಾವನೆ ಇಲ್ಲದೆ ನಟಿಸಲು ಕೆಲವು ಉದಯೋನ್ಮುಖ ನಟನಟಿಯರು ಬರುವುದುಂಟು. ಒಂದು ಗುಟ್ಟು: ಇವರು ಬೇರೆಬೇರೆ ವೃತ್ತಿಗಳಲ್ಲಿ ನಿರತರಾಗಿರುತ್ತಾರೆ. ಸಂಜೆಯ ವೇಳೆಯಲ್ಲಿ ರಂಗದ ಕಾಯಕದಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ! ಅವರಲ್ಲಿ ರಂಗದ ಬಗ್ಗೆ ಅಪಾರ ಆಸಕ್ತಿ, ಗೌರವವಿದೆ ಎಂದೇನೂ ಅಲ್ಲ. ಬದಲಿಗೆ ಬಹುತೇಕರಿಗೆ ರಂಗಭೂಮಿ ಎನ್ನುವುದು ಬೆಳ್ಳಿಪರದೆ ಪ್ರವೇಶಿಸಲಿಕ್ಕೆ ಸಹಾಯ ಮಾಡುವ ಚಿಮ್ಮುಹಲಗೆ! ಹಾಗಾಗಿ ಅವರು ಅನಿವಾರ್ಯತೆಗೆ ಕಟ್ಟುಬಿದ್ದು, ಆದರೆ ಅದನ್ನು ತೋರಗೊಡದಂತೆ ನಟಿಸುತ್ತ, ರಂಗದ ಕೆಲಸಗಳಲ್ಲಿ ಭಾಗಿಯಾಗುತ್ತಾರೆ. ಯಾಕೆಂದರೆ, ಕೆಮರಾ ಎದುರಿಸುವುದು ಸುಲಭದ ಕೆಲಸ ಅಲ್ಲ. ಅದಕ್ಕೆ ಪೂರ್ವತಯಾರಿ ಸಾಕಷ್ಟು ಬೇಕು. ರಂಗಭೂಮಿಯಲ್ಲಿ ಮಾಡುವ ಕೆಲಸ ಆ ಅನುಭವವನ್ನು ತಂದುಕೊಡುತ್ತದೆ. ಈ ಕಾರಣಕ್ಕೆ ಅವರು ರಂಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ಹೊರತು, ರಂಗದ ಮೇಲಿನ ಪ್ರೀತಿಯಿಂದಲ್ಲ. ಎಲ್ಲರನ್ನೂ ಈ ಕಕ್ಷೆಗೇ ಸೇರಿಸಬೇಕಾಗಿಲ್ಲ. ಎಲ್ಲೋ ಕೆಲವರು ರಂಗದ ಬಗ್ಗೆ ಒಲವು ತಾಳಿರುವುದೂ ಇದೆ. ಇಲ್ಲವೆಂದಲ್ಲ.

ಜನ ಬರದಿದ್ದರೂ ಹಣ ಬರುತ್ತೆ!

ಎರಡನೆಯದು, ಸಾಫ್ಟ್ವೇರ್‌ ರಂಗದಲ್ಲಿದ್ದು ದುಡ್ಡು ಕಾಣುತ್ತಿದ್ದವರೆಲ್ಲ ರಂಗಭೂಮಿಗೆ ಬಂದು, ರಂಗವನ್ನು ಕಾರ್ಪೊರೇಟ್‌ ಲೆಕ್ಕಾಚಾರದಲ್ಲಿ ನಡೆಸಲು ಆರಂಭಿಸಿದ್ದಾರೆ. ಇವರ ಸೂತ್ರ ಸರಳ. ಜನ ನಗತ್ತಲೇ ಇದ್ದರೆ ಅದು ನಾಟಕ ಅಲ್ಲ. ಹಾಸ್ಯೋತ್ಸವ ಅಷ್ಟೇ. ಹಾಗಾಗಿ ಇವರು ಗಂಭೀರ ನಾಟಕದ ಪ್ರತಿಪಾದಕರಾಗುತ್ತಾರೆ. ಇವರಿಗೆ ಕಾರ್ಪೊರೇಟ್‌ ಲೆಕ್ಕಾಚಾರಗಳು ಗೊತ್ತು. ಪ್ರಾಯೋಜಿತ ಉತ್ಸವಗಳಲ್ಲಿ ಹೇಗೆ ಅವಕಾಶ ಗಿಟ್ಟಿಸಿಕೊಳ್ಳಬೇಕು ಎನ್ನುವುದು ಗೊತ್ತು. ನಾಟಕದ ಕಲೆಕ್ಷನ್‌ನಿಂದಲೇ ಹಣ ಸಂಪಾದಿಸಬೇಕಿಲ್ಲ ಎನ್ನುವುದು ಇಂದಿನ ಬಹುದೊಡ್ಡ ಜಾಣ ಲೆಕ್ಕಾಚಾರ. ಹಾಗಾಗಿ ಗಂಭೀರ ನಾಟಕಗಳನ್ನು ಮಾಡುತ್ತಾರೆ. ಅವುಗಳನ್ನು ಜನ ನೋಡಬೇಕಾಗಿಲ್ಲ. ಬದಲಿಗೆ ಕೆಲವು ನೋಂದಾಯಿತ ಟ್ರಸ್ಟ್ ಗಳ ಜೊತೆಗೆ ಸೇರಿಕೊಂಡು ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿಕೊಳ್ಳುತ್ತಾರೆ. ಆ ಪ್ರಕಾರವಾಗಿ ಅವರು ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ.

ಮೆಚ್ಚುಗೆಯ ಜೊತೆಗೇ ಅನುಮಾನ…

ಇಂದು ಸರ್ಕಾರಿ ರಂಗಸಂಸ್ಥೆಗಳು ಆಯೋಜಿಸುವ ದೊಡ್ಡ ನಾಟಕಗಳಿಗೆ ಜನರನ್ನು ಸೆಳೆಯುವ ಶಕ್ತಿ ಇದೆ. ಜೊತೆಗೆ ಎಡಬಲ ಚರ್ಚೆಗಳನ್ನು ಉದ್ದೀಪಿಸುವ ನಾಟಕಗಳಿಗೂ ಜನ ಸೇರುತ್ತಿದ್ದಾರೆ. ಬಿಟ್ಟರೆ ಕುವೆಂಪು ಅವರಂಥ ಮೇರು ಕವಿಗಳ ಕೃತಿಗಳು ಅಹೋರಾತ್ರಿ ರಂಗಕ್ಕೆ ಬಂದಾಗ ಮಾತ್ರ ಜನ ಜಮಾಯಿಸುತ್ತಾರೆ. ಹೊರತು ಮಿಕ್ಕವರು ಮಾಡುತ್ತಿರುವ ಪ್ರಯೋಗಗಳು ಖಾಲಿಯಾಗಿಯೇ ಉಳಿಯುತ್ತಿವೆ. ಹಾಗಾಗಿ, ರಂಗದ ಬಗ್ಗೆ ನಾಟ್ಯಶಾಸ್ತ್ರದಲ್ಲಿ ವರ್ಣಿಸಿರುವ ರೀತಿಯಲ್ಲಿ ಪ್ರಶಂಸೆಗೆ ತೊಡಗಬೇಕೋ ಬೇಡವೋ ಎನ್ನುವುದನ್ನು ಇಂದು ಚರ್ಚಿಸಬೇಕಾಗಿದೆ. ಹಾಗೆಂದ ಮಾತ್ರಕ್ಕೆ ರಂಗದ ಬಗ್ಗೆ ಗೌರವವಿಲ್ಲದೆ ಇಂದು ಯಾರೂ ನಾಟಕಗಳನ್ನೇ ಮಾಡುತ್ತಿಲ್ಲ ಎಂದೇನಲ್ಲ. ಬೆರಳೆಣಿಕೆ­ಯಷ್ಟು ಮಂದಿ ತಮ್ಮ ನಿಷ್ಠೆಗೆ ಭಂಗ ತಂದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಮೆಚ್ಚುಗೆ ಇಟ್ಟುಕೊಂಡೇ ಮಿಕ್ಕವರನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣಆಗಿದೆ.

-ಎನ್‌.ಸಿ.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next