Advertisement

ಎತ್ತರ ಕುಮಾರನ ಪೌರುಷ

10:24 AM Oct 18, 2019 | mahesh |

ಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯಬೇಕು ಅಂತ ಎಲ್ಲರೂ ಆಸೆ ಪಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬೆಳವಣಿಗೆ ನಿಂತರೆ ಸಾಕೆಂದು ಪ್ರಾರ್ಥಿಸಿದ್ದ. ದೈಹಿಕವಾಗಿ ಬೆಳೆದೂ ಬೆಳೆದೂ, ಕಡೆಗೆ ಪ್ರಪಂಚದ ಎತ್ತರ ವ್ಯಕ್ತಿಯಾಗಿ ಗಿನ್ನೆಸ್‌ ದಾಖಲೆಯಲ್ಲಿ ಸೇರಿದ.

Advertisement

ಇವನಿಗೆ ಹತ್ತು ವರ್ಷ ವಯಸ್ಸಾಗುವವರೆಗೂ ಎಲ್ಲರ ಹಾಗೇ, ಸಾಮಾನ್ಯವಾಗಿಯೇ ಇದ್ದ. ಆಮೇಲೆ ಏನಾಯಿತೋ ಗೊತ್ತಿಲ್ಲ. ಅವನು ಬಿದಿರಿನ ಹಾಗೆ ಎತ್ತರೆತ್ತರ ಬೆಳೆಯತೊಡಗಿದ. ಕಡೆಗೊಮ್ಮೆ, ಎಂಟು ಅಡಿ ಮೂರು ಇಂಚು ಎತ್ತರವಾದ. ಜಗತ್ತಿನಲ್ಲೇ ಅತಿ ಎತ್ತರದ ವ್ಯಕ್ತಿ ಎಂಬ ದಾಖಲೆ ಇದ್ದುದು ಒಬ್ಬ ರೈತನದು. ಎಂಟು ಅಡಿ ಎತ್ತರವಾಗಿದ್ದ ಅವನ ದಾಖಲೆಯನ್ನು ಮುರಿದ “ಇವನು’ ಗಿನ್ನೆಸ್‌ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲೆಯಾದ. ಅವನು ಸುಲ್ತಾನ್‌ ಕೋಸೆಸ್‌.

ಅವನೇ ಊರು ಟರ್ಕಿ ದೇಶದ ಅಂಕಾರ. 1982ರಲ್ಲಿ ಜನಿಸಿದ ಅವನ ಮೂವರು ಸಹೋದರರು, ಮೂವರು ಸಹೋದರಿಯರು, ಹೆತ್ತವರು ಕೂಡ ಹೀಗೆ ಎತ್ತರದ ಆಕಾರ ಪಡೆಯದೆ ಸಾಮಾನ್ಯರಂತೆಯೇ ಇದ್ದವರು. ಇವನಿಗೇನಾದದ್ದು ಎಂದರೆ ಪಿಟ್ಯುಟರಿ ಗ್ರಂಥಿಯಲ್ಲಿ ಮೂಡಿದ ಒಂದು ಗೆಡ್ಡೆಯಿಂದಾಗಿ, ಹಾರ್ಮೋನುಗಳ ಉತ್ಪಾದನೆಗೆ ಹೆಚ್ಚಾಯಿತು. ಇದರಿಂದ ಅವನು ಎತ್ತರವಾಗುತ್ತ ಹೋದ. ಶಾಲೆಯಲ್ಲಿ ಅವನಿಗೆ ಓದು ಮುಂದುವರೆಸಲು ಎತ್ತರವೇ ಕುತ್ತು ತಂದಿತು. ದೇಹದ ಸಮತೋಲನ ಸಾಧಿಸಿ ನಡೆದಾಡಲು ಎರಡೂ ಕೈಗಳಿಗೆ ಆಧಾರವಾಗಿ ಆತ ಊರುಗೋಲುಗಳನ್ನು ಬಳಸಬೇಕಾಗಿ ಬಂದಿತ್ತು. ಓದು ಒಲಿಯದ ಕಾರಣ, ಅವನು ರೈತನಾಗಿ ಹೊಲಗಳಲ್ಲಿ ದುಡಿಯತೊಡಗಿದ. ಎತ್ತರದಲ್ಲಿ ಹಗ್ಗಗಳನ್ನು ಬಿಗಿಯಬೇಕಿದ್ದರೆ, ಬಲುºಗಳನ್ನು ಹೋಲ್ಡರ್‌ಗೆ ಸುಲಭವಾಗಿ ಸಿಕ್ಕಿಸಬೇಕಿದ್ದರೆ, ಏಣಿಯ ಬಳಕೆ ಇಲ್ಲದೆ ಕೆಲಸ ಮಾಡುತ್ತಿದ್ದ ಇವನನ್ನೇ ಜನರು ಕರೆಯುತ್ತಿದ್ದರು. ಅವನೊಬ್ಬ ಅತಿ ಮಾನುಷ ವ್ಯಕ್ತಿಯೆಂದೂ ತಿಳಿದವರಿದ್ದರು.

ಮದುವೆ ಆಸೆ
ಹಾರ್ಮೋನುಗಳ ನಿಯಂತ್ರಣಕ್ಕೆ ಬೇಕಾದ ಔಷಧಗಳು ಸಿಗದೆ ಸುಲ್ತಾನ್‌ ತುಂಬ ಬಳಲಿದ. ಇದರಿಂದಾಗಿ ಅವನ ಮೂಳೆಗಳು ದಪ್ಪವಾಗುತ್ತ ಹೋದವು. ಕೀಲುಗಳಲ್ಲಿ ನೋವುಂಟಾಯಿತು. ಕಡೆಗೆ, ಅಮೆರಿಕದ ವರ್ಜೀನಿಯಾ ವಿಶ್ವವಿದ್ಯಾಲಯದ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದರೆ ಪಿಟ್ಯುಟರಿ ಗ್ರಂಥಿಯ ಗೆಡ್ಡೆಯನ್ನು ತೆಗೆದು ಹಾರ್ಮೋನುಗಳ ಅತಿರೇಕಕ್ಕೆ ಮಂಗಳ ಹಾಡಬಹುದೆಂದು ಹೇಳಿದರು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಯಿತು. ಸುಲ್ತಾನನ ಬೆಳವಣಿಗೆ ಎಂಟು ಅಡಿ ಮೂರು ಇಂಚಿಗೇ ನಿಂತಿತು,

2014ರ ಗಿನ್ನೆಸ್‌ ದಾಖಲೆಯಲ್ಲಿ ಈತ ಸ್ಥಾನ ಪಡೆದ. ಅವನಿಗಿದ್ದ ಕನಸು ಎಂದರೆ ಬಾಳ ಸಂಗಾತಿಯನ್ನು ಪಡೆಯುವುದು. ಅದೂ ನನಸಾಯಿತು. ಅಟ್ಲಾಂಟಾದ ಹೊರ ವಲಯದ ಒಂದು ಶಾಲೆಯಲ್ಲಿ ಭೇಟಿಯಾದ ಸಿರಿಯಾದ ಸಾನ್‌ ರಿಗ್ರಾಸ್‌ ಮಾರ್ವ್‌ ಡಿಬೊ ಎಂಬ 23 ಯುವತಿಯೊಂದಿಗೆ ಪ್ರಣಯಾಂಕುರವಾಯಿತು. ಅವಳು 5. 9 ಅಡಿ ಎತ್ತರವಿದ್ದರೂ, ಅವನ ಪಕ್ಕದಲ್ಲಿ ನಿಂತರೆ ಕುಳ್ಳಿಯಾಗಿಯೇ ಕಾಣುತ್ತಿದ್ದಳು. ಅವಳ ಭಾಷೆ ಅರೆಬಿಕ್‌, ಇವನದು ಕುರ್ದಿಷ್‌. ಸಂವಹನ ಸಮಸ್ಯೆ ಎನಿಸಿದರೂ ಪ್ರೇಮಿಗಳ ಭಾಷೆ ಪ್ರತ್ಯೇಕವಿರುವುದರಿಂದ ಪರಸ್ಪರರು ಹತ್ತಿರವಾದರು. ಮದುವೆಗೆ 1,500 ಮಂದಿ ಗಣ್ಯ ಅತಿಥಿಗಳು ಬಂದಿದ್ದರು.

Advertisement

– ಪ.ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next