Advertisement

ದೇಶದಲ್ಲಿ ಸಂಖ್ಯಾಶಾಸ್ತ್ರ ಬಿತ್ತಿ ಬೆಳೆಸಿದ ಪ್ರೊ|ಮಹಾಲನೋಬಿಸ್‌

11:21 PM Jun 28, 2019 | mahesh |

ಸರಕಾರದ ಯೋಜನೆಗಳು, ನೀತಿ ರೂಪಣೆಗೆ ತಳಪಾಯವನ್ನು ಒದಗಿಸುವಂಥದು ಸಂಖ್ಯಾಶಾಸ್ತ್ರ. ಭಾರತದಲ್ಲಿ ಇದನ್ನು ಬಿತ್ತಿ ಬೆಳೆಸಿದವರು ಪ್ರಶಾಂತಚಂದ್ರ ಮಹಾಲನೋಬಿಸ್‌. ಅವರ ಜನ್ಮದಿನವಾಗಿರುವ ಜೂ.29ನ್ನು ರಾಷ್ಟ್ರೀಯ ಸಾಂಖ್ಯೀಕ ದಿನವನ್ನಾಗಿ ಆಚರಿಸಲಾಗುತ್ತಿದೆ.

Advertisement

ಅಂಕಿಅಂಶಗಳು ಮತ್ತು ಅವುಗಳ ವಿಶ್ಲೇಷಣೆಯ ಮೂಲಕ ಒಂದು ನಿರ್ದಿಷ್ಟ ವಿಚಾರದ ಕುರಿತು ಸಮರ್ಪಕವಾದ ಮತ್ತು ನಿಖರವಾದ ವಾಸ್ತವಿಕ ಜ್ಞಾನವನ್ನು ಪಡೆಯುವುದು ಸಂಖ್ಯಾಶಾಸ್ತ್ರದ ಮೂಲ ಉದ್ದೇಶ.

ಸರಕಾರದ ನೀತಿ ನಿರೂಪಣೆಯಲ್ಲಿ ಮತ್ತು ವಿವೇಚನೆಯುಕ್ತ ನಿರ್ಧಾರಗಳನ್ನು ಕೈಗೊಳ್ಳಲು ಸಂಖ್ಯಾಶಾಸ್ತ್ರವು ಅವಶ್ಯ. ಇದು ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಹಾಗೂ ಬೆಳವಣಿಗೆಯ ಭಾಗ ಎಂದು ನಂಬಿದ್ದವರು ಪ್ರೊ| ಮಹಾಲನೋಬಿಸ್‌. ಅವರ ವೈಜ್ಞಾನಿಕ ಸಂಶೋಧನೆಗಳು ಅಸಾಧಾರಣ ಮತ್ತು ಅದ್ವಿತೀಯ ಗುಣ ಮಟ್ಟದವಾಗಿದ್ದು, ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದವು.

ಪ್ರೊಫೆಸರ್‌ ಎಂಬ ಅನ್ವರ್ಥ ನಾಮದಿಂದ ಕರೆಯಲ್ಪಡುವ ಪ್ರಶಾಂತಚಂದ್ರ ಮಹಾಲನೋಬಿಸ್‌ (1893-1972) ಜಾಗತಿಕ ಸಂಖ್ಯಾಶಾಸ್ತ್ರ ಭೂಪಟದಲ್ಲಿ ಭಾರತಕ್ಕೆ ಅಗ್ರಸ್ಥಾನವನ್ನು ಕಲ್ಪಿಸಿಕೊಟ್ಟವರು.

ಉನ್ನತಿಗಾಗಿ ಸಂಖ್ಯಾಶಾಸ್ತ್ರ
ಪ್ರೊ| ಮಹಾಲನೋಬಿಸ್‌ ಶಿಕ್ಷಣ ಮತ್ತು ಸಂಶೋಧನೆಯ ಮೂಲಕ ಸಂಖ್ಯಾಶಾಸ್ತ್ರವನ್ನು ಜೀವನಮಟ್ಟವನ್ನು ಉನ್ನತಗೊಳಿಸುವ ಸಾಧನವಾಗಿ ಬಳಸಿಕೊಳ್ಳಲು ಶ್ರಮಿಸಿದರು. 1950ರ ಪೂರ್ವದಲ್ಲಿ ಸರಕಾರಿ ಆಡಳಿತದ ಮೂಲಕ ನಿರ್ದಿಷ್ಟ ಕ್ಷೇತ್ರಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತಿತ್ತು. ಅವು ಸೀಮಿತವಾಗಿ ಬಳಸಲ್ಪಡುತ್ತಿದ್ದವು. ಅವುಗಳಿಂದ ಕಂಡುಹಿಡಿದ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸೂಚ್ಯಂಕಗಳು ಕಳಪೆಯಾಗಿದ್ದವು. ಈ ಕೊರತೆಯನ್ನು ಗಮನಿಸಿದ ಅಂದಿನ ಪ್ರಧಾನಿ ನೆಹರೂ, ಪ್ರೊ| ಮಹಾಲನೋಬಿಸ್‌ರನ್ನು ಕೇಂದ್ರ ಸಾಂಖ್ಯೀಕ ಸಲಹೆಗಾರರನ್ನಾಗಿ ನೇಮಿಸಿಕೊಂಡರು. ನಿಯತಕಾಲಿಕವಾಗಿ ಸಾಮಾಜಿಕ, ಆರ್ಥಿಕ ಮತ್ತು ಜನಾಂಗಿಕ ಅಂಕಿಅಂಶಗಳ ಸಂಗ್ರಹಕ್ಕಾಗಿ, ಸಂಗ್ರಹಿಸುವ ಅಂಕಿಅಂಶಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವುದಕ್ಕಾಗಿ ಪ್ರೊ| ಮಹಾಲನೋಬಿಸ್‌ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯನ್ನು ಸ್ಥಾಪಿಸಲು ಶಿಫಾರಸು ಮಾಡಿದರು.

Advertisement

ಅವರ ಸಲಹೆಯಂತೆ 1951ರಲ್ಲಿ ಕೇಂದ್ರಿಯ ಸಾಂಖ್ಯೀಕ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಅನಂತರ ಪ್ರೊ| ಮಹಾಲನೋಬಿಸ್‌ ಅವರು ಭಾರತ ಸಾಂಖ್ಯೀಕ ಸೇವೆ (ಐಎಸ್‌ಎಸ್‌) ಮೂಲಕ ಪರಿಣಿತ ಸಂಖ್ಯಾಶಾಸ್ತ್ರಜ್ಞರನ್ನು ಸರಕಾರಿ ಸೇವೆಗೆ ನೇಮಿಸಲು ಸಲಹೆ ನೀಡಿದರು. ಅದರನುಸಾರ ಎಲ್ಲ ರಾಜ್ಯಗಳಲ್ಲಿ ಸಾಂಖ್ಯೀಕ ನಿರ್ದೇಶನಾಲಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಂಖ್ಯಾ ಸಂಗ್ರಹ ಕಚೇರಿಗಳನ್ನು ತೆರೆಯಲಾಯಿತು. ಮಹಾಲನೋಬಿಸ್‌ರ ಈ ಎಲ್ಲ ಪರಿಶ್ರಮದಿಂದಾಗಿ ಭಾರತದ ರಾಷ್ಟ್ರೀಯ ಸಾಂಖ್ಯೀಕ ಪದ್ಧತಿಯು ಮುಂದುವರಿದ ದೇಶಗಳ ಸಾಲಿನಲ್ಲಿ ನಿಲ್ಲುವಂತೆ ಮಾಡಿತು.

ಸಂಖ್ಯಾಶಾಸ್ತ್ರದ ಬೆಳವಣಿಗೆಗೆ ಕೊಡುಗೆ
ಪ್ರೊ| ಮಹಾಲನೋಬಿಸ್‌ ದೇಶದಲ್ಲಿ ಸಂಖ್ಯಾಶಾಸ್ತ್ರವನ್ನು ಉತ್ತೇಜಿಸುವ ಸಲುವಾಗಿ ಕೋಲ್ಕತಾದ ಪ್ರಸಿಡೆನ್ಸಿ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಸಾಂಖ್ಯೀಕ ಪ್ರಯೋಗಾಲಯವನ್ನು 1920ರ ದಶಕದ ಪ್ರಾರಂಭದಲ್ಲಿ ತೆರೆದರು. ಬಳಿಕ 1931ರಲ್ಲಿ ಕೋಲ್ಕತಾದಲ್ಲಿ ಭಾರತದ ಸಾಂಖ್ಯೀಕ ಸಂಸ್ಥೆಯನ್ನು ಹುಟ್ಟುಹಾಕಿದರು. ಅನಂತರದ ದಿನಗಳಲ್ಲಿ ಇದು ಸ್ವಾಯತ್ತ ಸಂಸ್ಥೆಯಾಗಿ ಸಂಖ್ಯಾಶಾಸ್ತ್ರ ಪದವಿಯನ್ನು ನೀಡುವ ಅಧಿಕಾರವನ್ನು ಪಡೆಯಿತು. 1941ರಲ್ಲಿ ಅವರ ಸಲಹೆಯ ಮೇರೆಗೆ ಕೋಲ್ಕತಾ ವಿವಿಯಲ್ಲಿ ಸಂಖ್ಯಾಶಾಸ್ತ್ರ ವಿಭಾಗವನ್ನು ತೆರೆಯಲಾಯಿತು. ಪ್ರಾಯಃ ವಿಶ್ವದಲ್ಲಿಯೇ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಆರಂಭಿಸಿದ ಪ್ರಥಮ ವಿವಿಯಿದು. ಇವುಗಳ ಪ್ರಭಾವದಿಂದಾಗಿ 1950ರ ದಶಕದಲ್ಲಿಯೇ ಗಣನೀಯ ಸಂಖ್ಯೆಯ ಪ್ರತಿಭಾವಂತ ಭಾರತೀಯ ಸಂಖ್ಯಾಶಾಸ್ತ್ರಜ್ಞರಿದ್ದರು ಮತ್ತು ಪ್ರಪಂಚದ ಅತ್ಯುತ್ತಮ ಸಂಖ್ಯಾಶಾಸ್ತ್ರಜ್ಞರಲ್ಲಿ ನಮ್ಮವರ ಸಂಖ್ಯೆ ಸರಿಸುಮಾರು ಅರ್ಧದಷ್ಟಿತ್ತು.

•ಡಾ| ಉದಯ ಶೆಟ್ಟಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next