Advertisement
ಕುಂದಗೋಳ ತಾಲೂಕಿನ ಬೆಟದೂರು ಗ್ರಾಮ ಎಂದಾಕ್ಷಣ ಹುತಾತ್ಮ ವೀರಯೋಧ ಹನುಮಂತಪ್ಪ ಅವರ ನೆನಪಾಗುತ್ತದೆ. ಇದೀಗ ಈ ಗ್ರಾಮದ ಯುವತಿ ಕವಿತಾ ಮೇದಾರ ಎಂಬಾಕೆ ಜಗ್ಲಿಂಗ್ ಆ್ಯಂಡ್ ಫ್ಲೈರ್ರ್ ಕ್ರೀಡೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾಳೆ. ಮನೆಯಲ್ಲಿ ಬಡತನ, ಮಹಿಳೆಯರು ಈ ಕ್ರೀಡೆಯನ್ನು ಒಪ್ಪುವುದಿಲ್ಲ ಎನ್ನುವ ಸಂದರ್ಭದಲ್ಲೂ ಕವಿತಾ ಇದನ್ನು ಕರಗತ ಮಾಡಿಕೊಂಡಿದ್ದಾರೆ. ಜೀವನಕ್ಕಾಗಿ ಆಯ್ಕೆ ಮಾಡಿಕೊಂಡ ಕ್ರೀಡೆ ವಿಶ್ವ ದಾಖಲೆಯತ್ತ ಕೊಂಡೊಯ್ದಿದೆ. ಗ್ರಾಮದ ಒಂದಿಷ್ಟು ಸಂಬಂಧಿಕರ ಮನೆಗಳನ್ನು ಬಿಟ್ಟರೆ ಮತ್ತೂಂದು ಪ್ರದೇಶ ತಿಳಿಯದ ಯುವತಿ ಇಂದು ದೇಶದ ವಿವಿಧ ರಾಜ್ಯಗಳಿಗೆ ತೆರಳಿಪ್ರದರ್ಶನ ನೀಡುತ್ತಿದ್ದಾರೆ.
ಈ ಕಲೆಯಲ್ಲಿ ಜೀವನ ಕಂಡುಕೊಂಡಿರುವ ಕವಿತಾ ಅವರ ಸೋದರ ಮಾವ ಮಾರುತಿ ಮೇದಾರ ಪುಣೆಯಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಪದವಿ ಮುಗಿದ ನಂತರ ನೌಕರಿಗಾಗಿ ಅಲೆದಾಡುವ ಬದಲು ಉತ್ತಮ ಜೀವನ ಕಲ್ಪಿಸುವ ಜಗ್ಲಿಂಗ್ ಕಲೆಯಲ್ಲಿ ತೊಡಗಿಕೊಳ್ಳುವಂತೆ ನೀಡಿದ ಸಲಹೆ, ಮಾರ್ಗದರ್ಶನ ವಿಶ್ವ ದಾಖಲೆವರೆಗೆ ಕೊಂಡೊಯ್ದಿದೆ. ಕವಿತಾ ಪುಣೆಯಲ್ಲಿರುವ ಅವರ ಸೋದರ ಮಾವನ ಮನೆಯಲ್ಲಿ ಉಳಿದು ತರಬೇತಿ ಪಡೆದಿದ್ದಾರೆ. ಅವರ ಇನ್‌ಸ್ಟಿಟ್ಯೂಟ್‌ನಲ್ಲಿ
ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ಜಗ್ಲಿಂಗ್ ಕಲೆ ತರಬೇತುದಾರಾಗಿಯೂ ಕವಿತಾ ಕೆಲಸ ಮಾಡುತ್ತಿದ್ದಾರೆ.
Related Articles
ಒಂದು ನಿಮಿಷದಲ್ಲಿ 122 ಫ್ಲಿಪ್ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆ ನಿರ್ಮಿಸಿದ ಮೊದಲ ಮಹಿಳೆ ಎನ್ನುವ ಖ್ಯಾತಿಯನ್ನು ಕವಿತಾ ಹೊಂದಿದ್ದಾರೆ. ಈ ದಾಖಲೆಯ ಹಿಂದೆ ನಾಲ್ಕು ವರ್ಷಗಳ ಕಠಿಣ ಪರಿಶ್ರಮವಿದೆ. ಈ ಕಲೆ ಬಾಲಿವುಡ್‌ನ ಕೆಲ ನಟ ನಟಿಯರ ಮನಸ್ಸು ಗೆದ್ದಿದೆ. ವಿಶ್ವದಾಖಲೆಗೂ ಮೊದಲು ಗೋಲ್ಡನ್ ಗ್ಲೋರಿ, ಮೇಕ್ ಇನ್ ಇಂಡಿಯಾ ಎಂಬಾರಿಂಗ್ ಲೀಡರ್, ಇಂಡಿಯಾ ಸಿಗ್ನೇಚರ್ ಬ್ರಾಂಡ್ ಅವಾರ್ಡ್, ಸಾವಿತ್ರಿಬಾಯಿ ಫುಲೆ ಪುರಸ್ಕಾರ ಸೇರಿದಂತೆ ಹಲವು ಪುರಸ್ಕಾರಗಳು ಒಲಿದು ಬಂದಿವೆ.
Advertisement
ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಗರಿಜೀವನಕ್ಕಾಗಿ ಈ ಕಲೆಯನ್ನು ರೂಡಿಸಿಕೊಂಡು ಒಂದಿಷ್ಟು ಸಂಪಾದನೆಯಾಗುತ್ತಿದ್ದು, ಒಂದಿಷ್ಟು ಪ್ರದರ್ಶನಗಳು ಕೈಗೆ ಬಂದಿವೆ ಎನ್ನುವಾಗಲೇ ಕೋವಿಡ್ ಲಾಕ್‌ಡೌನ್ ಇದಕ್ಕೆ ಕೊಳ್ಳಿಯಿಟ್ಟಿತು. ಆದರೆ ದೃತಿಗೆಡದೆ ಗ್ರಾಮದ ಮನೆಯಲ್ಲಿ ಉಳಿದಾಗ ಜಗ್ಲಿಂಗ್ ಗೆ ಕಠಿಣ ಪರಿಶ್ರಮ ಹಾಕಿದರು. ಈ ಕಲೆಯಲ್ಲಿ ಮಹಿಳೆಯರಿಲ್ಲ. ವಿಶ್ವ ದಾಖಲೆಗೆ ಯಾಕೆ ಪ್ರಯತ್ನಿಸಬಾರದು ಎನ್ನುವ ದೃಢ ನಿರ್ಧಾರದಿಂದ ಹಗಲು ರಾತ್ರಿ ಶ್ರಮ ಹಾಕಿದರು. ಆದರೆ ದಾಖಲೆಗಾಗಿ ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗಬೇಕಾದ ಅನಿವಾರ್ಯತೆ ಎದುರಾದಾಗ ಆರ್ಥಿಕ ಸಮಸ್ಯೆ ಅಡ್ಡಿಯಾಯಿತು. ಒಂದಿಷ್ಟು ದಾನಿಗಳು ನೆರವಿನ ಭರವಸೆ ನೀಡಿದರು. ಆದರೆ ಫಲ ನೀಡಲಿಲ್ಲ. ಸ್ಥಳೀಯ ಶಾಸಕರು ಒಂದಿಷ್ಟು ನೆರವು ನೀಡಿದರಾದರೂ ಅದು ಪೂರ್ಣವೆಚ್ಚ ಭರಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಇದನ್ನು
ಕೈಬಿಟ್ಟಿದ್ದ ಕವಿತಾಗೆ ಗೋವಾಕ್ಕೆ ಆಗಮಿಸಿದ ತಂಡ ಇವರ ಪ್ರತಿಭೆ ಗುರುತಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನೀಡಿ ಗೌರವಿಸಿತು. ಜೀವನಕ್ಕಾಗಿ ರೂಢಿಸಿಕೊಂಡ ಕಲೆ ಇಷ್ಟೊಂದು ಎತ್ತರಕ್ಕೆ ಕೊಂಡೊಯುತ್ತದೆ ಎನ್ನುವ ಕನಸು ಕಂಡಿರಲಿಲ್ಲ. ಜೀವನ ಹಾಗೂ ಹೆಸರು ಗಳಿಸಿಕೊಡುತ್ತಿದೆ. ಬಾರ್, ಕ್ಲಬ್ ಎಂದಾಗ ಆರಂಭದಲ್ಲಿ ಸಾಕಷ್ಟು ಮುಜುಗರವಾಯ್ತು. ಆದರೆ ಈ ಕಲೆಯಲ್ಲಿರುವ ತಾಕತ್ತು, ಬೇಡಿಕೆ ಹಾಗೂ ಅನಿವಾರ್ಯತೆ ಎಲ್ಲವನ್ನೂ ಸಣ್ಣದಾಗಿ ಕಾಣಿಸಿತು. ಇದರಲ್ಲಿ ಏನಾದರೂ ಯಶಸ್ಸು ಕಾಣಬೇಕು ಎನ್ನುವ ಪರಿಶ್ರಮದಿಂದ ಮುನ್ನುಗ್ಗಿದ ಫಲವಾಗಿ ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಪ್ರದರ್ಶನ ನೀಡುತ್ತಿದ್ದೇನೆ.
ಕವಿತಾ ಮೇದಾರ,
ಜಗ್ಲಿಂಗ್ ಪ್ರತಿಭೆ ಈ ಕಲೆಯಲ್ಲಿ ಜೀವನ ಕಂಡುಕೊಂಡಿದ್ದರಿಂದ ಕವಿತಾಳಿಗೆ ಸಲಹೆ ನೀಡಿದ್ದೆ. ಕಠಿಣ ಪರಿಶ್ರಮ ವಹಿಸಿ ತರಬೇತಿ ಪಡೆದ ಫಲವಾಗಿ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ನಮ್ಮ ಕುಟುಂಬದಲ್ಲಿ ಇಷ್ಟೊಂದು ಎತ್ತರಕ್ಕೆ ಯಾರೂ ಹೋಗಿರಲಿಲ್ಲ. ಅವಳ ಸಾಧನೆ ದೊಡ್ಡ ಖುಷಿ ತಂದಿದೆ. ಇಂತಹ ಪ್ರತಿಭೆಗಳನ್ನು ಸೃಷ್ಟಿಸುವ ಕಾರ್ಯದಲ್ಲಿ ಇಬ್ಬರೂ ತೊಡಗಿದ್ದೇವೆ.
ಮಾರುತಿ ಮೇದಾರ,
ಕವಿತಾರ ಸೋದರ ಮಾವ ಹೇಮರಡ್ಡಿ ಸೈದಾಪುರ