ಆತ್ಮನಿರ್ಭರ ಭಾರತ ಯೋಜನೆಯಡಿ ಶನಿವಾರ ಆರಂಭವಾದ “ದಿ ಇಂಡಿಯಾ ಟಾಯ್ಸ್ ಫೇರ್ 2021′ ವರ್ಚುವಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೋದಿ, ಚನ್ನಪಟ್ಟಣವೂ ಸೇರಿದಂತೆ ದೇಶದ ಗೊಂಬೆ ತಯಾರಕರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
Advertisement
ಚನ್ನಪಟ್ಟಣದ ಗೊಂಬೆಗಳನ್ನು ಕೇವಲ ಆ ಕ್ಷೇತ್ರ, ರಾಜ್ಯ, ರಾಷ್ಟ್ರಕ್ಕೆ ಸೀಮಿತಗೊಳಿಸದೆ ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಭರವಸೆ ನೀಡಿರುವ ಮೋದಿ, ಈ ನಿಟ್ಟಿನಲ್ಲಿ ಬೆಂಗಳೂರಿನ ಐಟಿ ಉದ್ಯಮಿಗಳು ಮತ್ತು ಸ್ಟಾರ್ಟ್ ಅಪ್‌ಗ್ಳ ಜತೆ ಕರಕುಶಲಕರ್ಮಿಗಳಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ರಾಜ್ಯ ಸರಕಾರದ ಜತೆ ಚರ್ಚಿಸಿ ಮುನ್ನಡೆಯುತ್ತೇವೆ. ಕೇಂದ್ರ ಸರಕಾರ ಈ ವಿಚಾರದಲ್ಲಿ ಖುದ್ದು ನಿಗಾ ವಹಿಸಲಿದೆ ಎಂದಿದ್ದಾರೆ.
ಚನ್ನಪಟ್ಟಣದಲ್ಲಿ ಗೊಂಬೆ ಉದ್ಯಮದಲ್ಲಿ ತೊಡಗಿರುವ 2 ಸಾವಿರ ಮಂದಿಗೆ ಒಂದು ಸ್ಪರ್ಧೆ ಆಯೋಜಿಸಬೇಕು. ಯಾರು ಹೊಸ ವಿಧಾನದಲ್ಲಿ ಗೊಂಬೆ ಉತ್ಪಾದನೆ ಮಾಡುತ್ತಾರೆಯೋ ಅವರಿಗೆ ಬಹುಮಾನ ನೀಡುವ ಮೂಲಕ ಹೊಸ ಪ್ರಯತ್ನಗಳು ಮಾರುಕಟ್ಟೆಗೆ ಬರುವಂತೆ ಮಾಡಿ ಎಂದು ಮೋದಿ ಸಲಹೆ ನೀಡಿದರು. ಹೊಸ ಗೊಂಬೆಗಳ ಆವಿಷ್ಕಾರ
ಗೊಂಬೆ ಉದ್ಯಮವನ್ನು ಇ-ಮಾರುಕಟ್ಟೆ ಮುಖಾಂತರ ವಿಶ್ವಕ್ಕೆ ತಲುಪಿಸಬೇಕೆನ್ನುವ ಆಲೋಚನೆಯನ್ನು ಮಾಡಿದ್ದೀರಾ ಎಂದು ಪ್ರಧಾನಿ ಪ್ರಶ್ನಿಸಿದರು. ಹೊಸ ಮಾದರಿಯ ಗೊಂಬೆಗಳ ಆವಿಷ್ಕಾರ ಆಗಬೇಕಿದೆ ಎಂದು ಹುರಿದುಂಬಿಸಿದರು.
Related Articles
ಚನ್ನಪಟ್ಟಣದ ಗೊಂಬೆಗಳ ಬಗ್ಗೆ ಪ್ರಧಾನಿಗೆ ವಿವರ ನೀಡಿದ ಪ್ರತಿನಿಧಿ ಕೌಸರ್ ಪಾಷಾ, ಚನ್ನಪಟ್ಟಣದಲ್ಲಿ ಸುಮಾರು 2 ಸಾವಿರ ಕರಕುಶಲ ಕರ್ಮಿಗಳು 200 ವರ್ಷಗಳಿಂದ ಗೊಂಬೆ ತಯಾರಿಯಲ್ಲಿ ತೊಡಗಿದ್ದಾರೆ. ಈ ಬೊಂಬೆಗಳು ರಾಸಾಯನಿಕಗಳನ್ನು ಬಳಸದೆ ತಯಾರಾಗುತ್ತವೆ. ಶೇ. 80ರಷ್ಟು ಮಂದಿ ಪುರುಷರು, ಶೇ. 20ರಷ್ಟು ಮಹಿಳೆಯರು ಈ ಉದ್ಯಮದಲ್ಲಿದ್ದಾರೆ. ಈಗ ಕೇಂದ್ರ ಸರಕಾರ ನಮ್ಮ ಬೆಂಬಲಕ್ಕೆ ನಿಂತಿರುವುದು ಹೊಸ ಭರವಸೆ ಮೂಡಿಸಿದೆ ಎಂದರು.
Advertisement