ನವದೆಹಲಿ: ಪ್ರತಿಷ್ಠಿತ ಕ್ವಾಕೆರಾಲಿ ಸೈಮಂಡ್ಸ್ (ಕ್ಯೂಎಸ್) ವಿಶ್ವ ವಿದ್ಯಾಲಯಗಳ ರ್‍ಯಾಂಕಿಂಗ್‌ನಲ್ಲಿ ಪ್ರಮುಖ 200 ವಿವಿಗಳ ಪೈಕಿ ಐಐಎಸ್‌ಸಿ ಬೆಂಗಳೂರು, ಐಐಟಿ ಬಾಂಬೆ ಹಾಗೂ ಐಐಟಿ ದೆಹಲಿ ಸ್ಥಾನ ಪಡೆದಿವೆ. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರೀಯಾಲ್, ಮೂರು ವಿವಿಗಳು ಕ್ಯೂಎಸ್ ರ್‍ಯಾಂಕಿಂಗ್‌ನಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಇತರ ಸಂಸ್ಥೆಗಳನ್ನೂ ಉನ್ನತ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ನಾವು ಬದ್ಧ ಎಂದು ಟ್ವೀಟ್ ಮಾಡಿದ್ದಾರೆ.
ಘಿಲಂಡನ್‌ನಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ 1000 ರ್‍ಯಾಂಕಿಂಗ್‌ನಲ್ಲಿ ಭಾರತದ ಒಪಿ ಜಿಂದಾಲ್ ಜಾಗತಿಕ ವಿವಿ ಕೂಡ ಸ್ಥಾನ ಪಡೆದಿದ್ದು, ಇದು ಅತ್ಯಂತ ನೂತನ ವಿವಿಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ. ಪ್ರಮುಖ 400 ವಿವಿಗಳ ಪಟ್ಟಿಯಲ್ಲಿ ಐಐಟಿ ಮದ್ರಾಸ್, ಐಐಟಿ ಖರಗ್‌ಪುರ, ಐಐಟಿ ಕಾನ್‌ಪುರ ಮತ್ತು ಐಐಟಿ ರೂರ್ಕೀ ಕೂಡ ಇವೆ. ಐಐಟಿ ಗುವಾಹಟಿ ಕಳೆದ ವರ್ಷ 472ನೇ ಸ್ಥಾನದಲ್ಲಿತ್ತಾದರೂ, ಈ ಬಾರಿ 491ಕ್ಕೆ ಕುಸಿದಿದೆ. ದೆಹಲಿ ವಿವಿ ತನ್ನ ರ್‍ಯಾಂಕಿಂಗ್ ಸುಧಾರಿಸಿಕೊಂಡಿದ್ದು, 487 ರಿಂದ 474 ಕ್ಕೆ ತಲುಪಿದೆ. ಐಐಟಿ ಖರಗ್‌ಪುರವು ಅತಿ ವೇಗವಾಗಿ ಬೆಳೆಯುತ್ತಿರುವ ವಿವಿಗಳ ಪೈಕಿ ಒಂದಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 14 ಸ್ಥಾನ ಏರಿಕೆ ಕಂಡಿದೆ.
Advertisement