Advertisement

ರೇಡಿಯೋ, ನೋಡಿಯೋ!

12:30 AM Feb 12, 2019 | |

ನಾಳೆ (ಫೆ.13) ವಿಶ್ವ ರೇಡಿಯೋ ದಿನ, ನಾಡಿದ್ದು ವಿಶ್ವ ಪ್ರೇಮಿಗಳ ದಿನ… ಎಫ್.ಎಂ. ಕಾಲದಲ್ಲಿ ನಿಂತು, ಒಂದೆರಡು ದಶಕಗಳ ಕಾಲದ ರಿವೈಂಡ್‌ ತೆಗೆದುಕೊಂಡಾಗ ಕಂಡಿದ್ದು ಅಚ್ಚಳಿಯದ ಒಂದು ರೇಡಿಯೋ ಪ್ರೇಮ… ಇದೀಗ ನಿಮ್ಮ ಹೃದಯದಿಂದ ಪ್ರಸಾರ…

Advertisement

ಟೈಟಾನಿಕ್‌ನ ಉಸಿರು ನಿಲ್ಲುವ ಹೊತ್ತು. ಪುಟ್ಟ ಭೂಮಿ ಭಾರದ ಹಡಗಿನ ಶರೀರ ಮೆಲ್ಲನೆ ಮುಳುಗುತ್ತಿತ್ತು. ಎಂಜಿನ್‌ ರೂಮ್‌ ಒಳಗೆ ನೀರು ನುಗ್ಗಿದ್ದನ್ನು ಕಂಡು, ಕ್ಯಾಪ್ಟನ್‌ ಸ್ಮಿತ್‌ ಕುದಿವ ಕೋಪದಲ್ಲಿ ಹಣ್ಣು ಗಡ್ಡ ಎಳೆದುಕೊಳ್ಳುತ್ತಾ, ಅಲೆಯಷ್ಟೇ ಜೋರಾಗಿ ಬಡಿಯುತ್ತಿದ್ದ ಎದೆಯ ಸದ್ದಿಗೆ ತಣ್ಣಗೆ ಅಲುಗಾಡುತ್ತಿದ್ದ. “ದೇವ್ರೋ ಇಲ್ಲಿಗೆ ಓಡಿಬರಲಾರ’ ಎನ್ನುವ ಅಸಹಾಯಕ ದನಿಯ ಕಂಪನವನ್ನು ಗಂಟಲಲ್ಲೇ ಹಿಡಿದಿಡುವ ಹೊತ್ತಿಗೆ, ಅವನಿಗೇನೋ ಥಟ್ಟನೆ ಹೊಳೆದಿತ್ತು. ಪಕ್ಕದ ರೂಮ್‌ನತ್ತ ಅವಸರಬಿದ್ದು ಓಡಿದ್ದ. ಅಲ್ಲಿದ್ದ ಮೂವರಿಗೆ ಒಂದು ಸೂಚನೆ ಕೊಟ್ಟಿದ್ದಷ್ಟೇ… ಅದಾಗಿ ಕೆಲವೇ ಗಂಟೆಗಳಲ್ಲಿ ನೂರಾರು ಮೈಲು ದೂರವಿದ್ದ, “ಕ್ಯಾಪೇìಥಿಯಾ’ ಎನ್ನುವ ಹಡಗು, ಟೈಟಾನಿಕ್‌ ಮುಳುಗಿದ ಜಾಗದಲ್ಲೇ ಬಂದು ನಿಂತುಬಿಟ್ಟಿತು! ಅಷ್ಟೊತ್ತಿಗಾಗಲೇ ಸ್ಮಿತ್‌ ಸೇರಿ, 1300 ಜನರನ್ನು ಅಟ್ಲಾಂಟಿಕ್‌ ಸಾಗರ ನುಂಗಿ ನೀರು ಕುಡಿದಿತ್ತಾದರೂ, ಮಿಕ್ಕ 700ಕ್ಕೂ ಅಧಿಕ ಮಂದಿಯನ್ನು “ಕ್ಯಾಪೇìಥಿಯಾ’ ಹಡಗಿನ ಸಿಬ್ಬಂದಿ ದೇವರಂತೆ ಬಂದು ರಕ್ಷಿಸಿಬಿಟ್ಟರು!

ಹಾಗೆ ಜೀವ ಉಳಿಸಿಕೊಂಡವರಲ್ಲಿ ಸೌಥೆಂಪ್ಟನ್‌ನ ಮಿ. ಹಡ್ಸನ್‌ ಜೋಶುವಾ ಎಂಬಾತನೂ ಒಬ್ಬ. ಇಂಗ್ಲೆಂಡಿನ ಯುವ ಉದ್ಯಮಿ. ಆತ ತನ್ನ ಜೀವಿತದ ಕೊನೆಯ ವರೆಗೂ ಮಾರ್ಕೋನಿಯ ಫೋಟೋವನ್ನು, ರೇಡಿಯೊವನ್ನೂ ಇಟ್ಟುಕೊಂಡಿದ್ದ. ಅವನ ಈ ಆರಾಧನೆಗೆ ಕಾರಣವೂ ಇಲ್ಲದಿಲ್ಲ. ಮಾರ್ಕೋನಿ, ಟೈಟಾನಿಕ್‌ ಹಡಗಿಗೆ ಪ್ರಾಯೋಗಿಕ ತಂತುರಹಿತ ರೇಡಿಯೋ ಸಿಗ್ನಲ್‌ ಅಳವಡಿಸಿ, ವಾರವೂ ಕಳೆದಿರಲಿಲ್ಲ. ಮುಳುಗಿ ಹೋದ ಟೈಟಾನಿಕ್‌ನಲ್ಲಿ ಮಾರ್ಕೋನಿಯ ಹುಡುಗರೂ ಇದ್ದರು. ಕ್ಯಾಪ್ಟನ್‌ ಸ್ಮಿತ್‌ ಸೂಚನೆ ಕೊಟ್ಟ ಕೂಡಲೇ ಅವರು, ನ್ಯೂಯಾರ್ಕಿನ ಸ್ಟೇಷನ್ನಿಗೆ ರೇಡಿಯೋ ಸಂದೇಶ ರವಾನಿಸಿದ್ದರು. ಅದನ್ನು ಆಧರಿಸಿಯೇ ನೂರಾರು ಕಿ.ಮೀ. ದೂರವಿದ್ದ “ಕ್ಯಾಪೇìಥಿಯಾ’ ಹಡಗು, ನೀರ್ಗಲ್ಲುಗಳ ನಡುವೆ ದಾರಿ ಮಾಡಿಕೊಂಡು, ಭಗವಂತನಂತೆ ಬಂದು ನಿಂತಿತ್ತು.

ನಮ್ಮ ಗಣಿತ ಮೇಷ್ಟ್ರ ಮುಖದಲ್ಲಿ ಅಂದೇಕೋ ಖುಷಿಯ ಲೆಕ್ಕ ತಪ್ಪಿದಂತಿತ್ತು. ಟೈಟಾನಿಕ್‌ನಲ್ಲಿ ಕುಳಿತವರಾರೂ ಇವರ ನೆಂಟರೋ, ಪಕ್ಕದ ಮನೆಯವರೋ ಆಗಿರಲಿಲ್ಲ. ಆ ಮೇಷ್ಟ್ರು ತಮ್ಮ ಬಗಲಲ್ಲಿ ಫಿಲಿಪ್ಸ್‌ ರೇಡಿಯೊ ಇಟ್ಕೊಂಡು ಬಂದರು ಅಂದ್ರೆ, ಅವತ್ತು ಭಾರತ ಕ್ರಿಕೆಟ್‌ ಆಡುತ್ತೆ ಅನ್ನೋದು ಸರ್ವವಿಧಿತ. ಹುಡುಗರಿಗೆ ಲೆಕ್ಕ ಹಚ್ಚಿ, ಪುಸಕ್ಕನೆ ಜಾರಿಕೊಂಡು, ಆಚೆ ರೂಮಿನಲ್ಲಿಟ್ಟ ರೇಡಿಯೊಗೆ ಕಿವಿಗೊಟ್ಟು ಬರೋದಂದ್ರೆ ಅವರಿಗೆ, ತೆಂಡೂಲ್ಕರ್‌ ಕ್ವಿಕ್‌ ಸಿಂಗಲ್ಸ್‌ ಕದ್ದಷ್ಟೇ ಸಲೀಸು. ಅವರು ನಮ್ಮ ಕಿವಿ ಹಿಂಡುತ್ತಿದ್ದ ರೀತಿಗೂ, ರೇಡಿಯೊದ ಕಿವಿ (ಟ್ಯೂನರ್‌) ತಿರುಗಿಸುವ ಶೈಲಿಗೂ ಬಹಳ ಹತ್ತಿರದ ಅಂತರ. ಅವತ್ತೂಂದು ದಿನ ತರಗತಿಯ ನಡುವೆ, ಕಾಮೆಂಟರಿ ಕೇಳಲು ಎದ್ದು ಹೊರಟರು; ಇಟ್ಟ ಜಾಗದಿಂದ ರೇಡಿಯೊವೇ ಕಣ್ಮರೆ. ಟೇಬಲ್ಲಿನ ಡ್ರಾಯರ್‌ ಒಳಗೆ, ಬೆಂಚುಗಳ ಕೆಳಗೆ, ದಪ್ಪನೆ ಉಬ್ಬಿದ ಬ್ಯಾಗುಗಳ ಹೊಟ್ಟೆಯೊಳಗೂ ಜಪ್ತಿ ನಡೆಯಿತು. ಟಾಯ್ಲೆಟ್ಟಿನ ಗೋಡೆ ಮೇಲೂ ಹತ್ತಿಸಿ, ಚೋಟುಗಳಿಂದ ಸಂಶೋಧನೆ ನಡೆಸಿದ್ದಾಯಿತು. ಊಹೂnಂ, ರೇಡಿಯೋ ಸಿಗಲೇ ಇಲ್ಲ. ಸಚಿನ್‌ ಸೆಂಚುರಿ ಸಿಡಿಸಿದ ಸುದ್ದಿ ಕೇಳಿದ್ದಾಗ್ಯೂ, ಅವರ ಮೋರೆಯಲ್ಲಿ ಡಕ್‌ಔಟ್‌ ಆದ ಭಾವ. ಪಾಪ, ರಾತ್ರಿಯ ನಿದ್ದೆಯಲ್ಲೂ ರೇಡಿಯೊವನ್ನೇ ಕನವರಿಸುತ್ತಿದ್ದರಂತೆ. ಆಕಾಶ ಎಂದಾಗ ಸುಮ್ಮನಿದ್ದ ಹೆಂಡತಿ, ವಾಣಿ ಎಂದಾಗ “ಏನಾಯಿತು?’ ಎಂದು ತಿವಿದು, ಎಬ್ಬಿಸಿದ್ದರಂತೆ.

ಮೇಷ್ಟ್ರ ಇಷ್ಟೆಲ್ಲ ಚಡಪಡಿಕೆಗೆ ಕಾರಣ, ಆ ರೇಡಿಯೊ ವರದಕ್ಷಿಣೆಯ ರೂಪದಲ್ಲಿ ಬಂದಿದ್ದೆಂಬುದೇ ಆಗಿತ್ತು. ಬಾಂಬೆಯಿಂದ ಕೊಂಡು ತಂದಿದ್ದ ರೇಡಿಯೊ ಟೈಟಾನಿಕ್‌ನಂತೆಯೇ ನಿಗೂಢವಾಗಿ ಕಣ್ಮರೆಯಾಗಿತ್ತು.  

Advertisement

“ಎಯಂ ಆಕಾಶವಾಣಿ, ಸಂಪ್ರತಿ ವಾರ್ತಾಹ ಶೂಯನ್ತಾಂ… ಪ್ರವಾಚಕಃ ಬಲದೇವಾನಂದ ಸಾಗರಃ….’, ನಿತ್ಯ ಬೆಳಗ್ಗೆ 6.55ಕ್ಕೆ ಆಕಳಿಸುತ್ತಿರುವ ಹೊತ್ತಿನಲ್ಲೇ, ಇದೊಂದು ಧ್ವನಿಗೆ ಕಿವಿಗಳು ನಿಮಿರುತ್ತಿದ್ದವು. ರೇಡಿಯೋದೊಳಗೆ ಕುಳಿತು ಹೀಗೆ ಗೊತ್ತಿಲ್ಲದ ಭಾಷೆ ಮಾತಾಡುವ ಮನುಷ್ಯನ ಬಗ್ಗೆ ಸಿಟ್ಟಿಲ್ಲದೇ ಇದ್ದರೂ, ಒಂದು ಕುತೂಹಲವಂತೂ ಇತ್ತು. ಅರ್ಚಕರ ಮಂತ್ರದಂತೆ ಉಲಿಯುತ್ತಿದ್ದ ಬಲದೇವಾನಂದರು, ಪಂಚೆ ಉಟ್ಕೊಂಡು, ಉದ್ದುದ್ದ ಜುಟ್ಟು ಬಿಟ್ಕೊಂಡೇ ಇರ್ತಾರೇನೋ ಎನ್ನುವ ಬಹುಕಾಲದ ಶಂಕೆ, ಮೊನ್ನೆ ಯೂಟ್ಯೂಬ್‌ನ ಸಂದರ್ಶನ ನೋಡಿ ಅಭಿಪ್ರಾಯ ಬದಲಿಸಿಕೊಂಡೆ. ಆದರೂ, ಆ ದಿನಗಳಲ್ಲಿ ಅವರು ರೇಡಿಯೊದೊಳಗೆ ಎಲ್ಲಿ ಕುಳಿತಿರಬಹುದು? ಓದುಗರ ಪತ್ರಕ್ಕೆ ಉತ್ತರಿಸುತ್ತಿದ್ದ ಆಕಾಶವಾಣಿ ಈರಣ್ಣನ ಮನೆಯ ಪಕ್ಕವೇ ಇವರೂ ಇರೋದಾ? ಅಚ್ಚ ಕನ್ನಡದ ಈರಣ್ಣ, ಆ ಭಟ್ಟರಿಗೆ ಕನ್ನಡ ಹೇಳಿಕೊಡಬಾರದೇನು? ಅಂತೆಲ್ಲ ಯೋಚಿಸುತ್ತಿದ್ದೆ. ರೇಡಿಯೊ ಭಾಗಗಳನ್ನು ಬಿಡಿಸಿ, ಬಲದೇವಾನಂದರನ್ನು ನೋಡಿಯೇ ಬಿಡೋಣ ಎನ್ನುವ ಕುತೂಹಲ ಇತ್ತಾದರೂ, ಎಲ್ಲಾದರೂ ದೂರ್ವಾಸರಂತೆ ಶಾಪ ಕೊಟ್ಟುಬಿಟ್ಟರೆ ಎನ್ನುವ ಭಯ ಕಾಡಿ ಮತ್ತೆ ಮತ್ತೆ ತೆಪ್ಪಗಾಗುತ್ತಿದ್ದೆ.

ರೇಡಿಯೊ, ಆ ಕಾಲದ ಪುಟ್ಟ ಕೂಸು. ಎತ್ತಿ ಎತ್ತಿ ಮುದ್ದಾಡುತ್ತಾ, ಸಿಗ್ನಲ್‌ ಸರಿ ಇಲ್ಲದಿದ್ದಾಗ ಗೊಗ್ಗರು ದನಿಯನ್ನೂ, ಲತಾ ಮಂಗೇಶ್ಕರ್‌ ಹಾಡು ಕೇಳುವಾಗ ನಗುವನ್ನೂ ಹೊಮ್ಮಿಸುವ ಅದರ ರೂಪಾಂತರಗಳೇ ಒಂದು ಸಂಗೀತ ಮತ್ತು ನಮ್ಮಗಳ ಎದೆಬಡಿತ. ಕಿವಿಗೆ ಹೆಡ್‌ಫೋನ್‌ ಸಿಕ್ಕಿಸಿಕೊಂಡು, ಪ್ಯಾಂಟಿನ ಜೇಬಿನಲ್ಲಿಟ್ಟ ಸ್ಮಾರ್ಟ್‌ಫೋನ್‌ನಿಂದ ತೆಳ್ಳನೆ ವಯರಿನಲ್ಲಿ ನುಗ್ಗಿಬರುವ ಹಾಡು ಕೇಳುವ ಈ ಕಾಲಕ್ಕೆ “ರೇಡಿಯೋ ಪ್ರೇಮ’ ಅಷ್ಟಾಗಿ ಕಣ್ಣಿಗೆ ಕಟ್ಟುವುದಿಲ್ಲ. ಆಗೆಲ್ಲ ಸೂರ್ಯ ಬೆಳಕು ಹರಿಸುತ್ತಿದ್ದ ಬಿಟ್ಟರೆ, ಮಿಕ್ಕೆಲ್ಲ ಕೆಲಸವನ್ನೂ ರೇಡಿಯೊವೇ ನೋಡಿಕೊಳ್ಳುತ್ತಿತ್ತು. ಎಷ್ಟೋ ಮನೆಗಳಿಗೆ ಆಗ ರೇಡಿಯೊವೇ ಗಡಿಯಾರ. ಬೆಳಗ್ಗೆ ಆರಕ್ಕೆ ರೇಡಿಯೊದ ಜಿಂಗಲ್‌ ರಾಗ ಶುರುವಾದಾಗ, ಮಕ್ಕಳನ್ನು ಎಬ್ಬಿಸುವ ಪರಿಪಾಠವಿತ್ತು. ಸಂಸ್ಕೃತವಾರ್ತೆ ಮುಗಿಯುವುದೊರಳಗೆ, ಬೆಚ್ಚಗಿನ ಚಹಾ ಗಂಟಲಿನಿಂದ ಇಳಿದಾಗಿರುತ್ತಿತ್ತು. 7.05ಕ್ಕೆ ಪ್ರದೇಶ ಸಮಾಚಾರ ಹೊತ್ತು ತರುತ್ತಿದ್ದ ನಾಗೇಶ್‌ ಶಾನುಭಾಗ್‌, ಕ್ರಿಕೆಟ್‌ ನ್ಯೂಸ್‌ ಹೇಳ್ಳೋದಿಲ್ಲ ಏಕೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿರಲಿಲ್ಲ. 7.35ಕ್ಕೆ “ವಾರ್ತೆಗಳು: ಓದುತ್ತಿರುವವರು, ಎಂ. ರಂಗರಾವ್‌…’ ಎನ್ನುವಾಗ, ಪ್ರಪಂಚ ಸುತ್ತಾಡಿದ ಒಂದು ಖುಷಿ. ಕೊನೆಗೆ ಚಿತ್ರಗೀತೆ ಕೇಳುತ್ತಲೇ, ಬೆಳಗಿನ ಉಪಾಹಾರ ಮುಗಿದಾಗಿರುತ್ತಿತ್ತು. 8ಕ್ಕೆ ಇಂಗ್ಲಿಷ್‌ ವಾರ್ತೆ ಶುರುವಾಗುವ ಮನೆಯಲ್ಲಿ ರೇಡಿಯೋ ಕೇಳುವಂತಿರಲಿಲ್ಲ. ಇಂಗ್ಲಿಷ್‌ ಮೇಲೇನೂ ಕೋಪವಲ್ಲ… ಶೆಲ್‌ ಬರಿದಾಗುತ್ತದೆಂಬ ಕಾರಣವಷ್ಟೇ. ಅದೆಷ್ಟೋ ಸಲ, ಟಾರ್ಚ್‌ಗೆ ಬಳಸಿ, ಬಹುಪಾಲು ಬರಿದಾಗಿ ಹೋದ ನಿಪ್ಪೋ ಶೆಲ್ಲುಗಳನ್ನು ಹಾಕಿದರೂ, ರೇಡಿಯೊ ನಮ್ಮ ಬಡತನದ ದಯೆ ತೋರಿ, ಧ್ವನಿ ಹೊಮ್ಮಿಸುತ್ತಿತ್ತು.

ಮಿಡಲ್‌ ಸ್ಕೂಲಿನ ದಿನಗಳಲ್ಲಿ ನನ್ನೊಬ್ಬ ಮಿತ್ರ ರೇಡಿಯೊಗೆ ಕೈ ಮುಗಿದೇ ಬರುತ್ತಿದ್ದ. ನಿತ್ಯವೂ ಒಂದಲ್ಲಾ ಒಂದು ಚೇಷ್ಟೆ ಮಾಡಿ, ಮೇಷ್ಟ್ರಿಂದ ಪೆಟ್ಟು ತಿನ್ನುತ್ತಿದ್ದ ಆತ ಅದೊಂದು ದಿನ ಶಾಲೆಗೆ ಸ್ಟಾರ್‌ ಆಗಿಹೋಗಿದ್ದ. ಅದಕ್ಕೆ ಕಾರಣ, ಆಕಾಶದಲ್ಲಿ ಪುಷ್ಪಕ ವಿಮಾನದಂತೆ ತೇಲಿಬಂದ ಅವನ ಹೆಸರು! ಯಾವುದೋ ಚಿತ್ರಗೀತೆಯನ್ನು ಕೋರಿ, ಭದ್ರಾವತಿ ಆಕಾಶವಾಣಿಗೆ ಪತ್ರ ಬರೆದಿದ್ದ. ಉದ್ಘೋಷಕಿ ಈತನ ಹೆಸರು ಹೇಳಿ, “ಪ್ರೇಮಲೋಕ’ ಚಿತ್ರದ ಹಾಡೊಂದನ್ನು ಹಾಕಿದ್ದಳಷ್ಟೇ. ಅದು ಇಡೀ ಊರಿನಲ್ಲಿ ಸುದ್ದಿಯಾಗಿ, ಮೇಷ್ಟ್ರ ಕಿವಿಯನ್ನೂ ಮುಟ್ಟಿ, ರೋಮಾಂಚಿತರಾಗಿದ್ದರು. ಶಾಲೆಗೇನೋ ಹೆಸರು ತಂದನೇನೋ ಎಂಬಂತೆ ಅವನನ್ನು ಅಟ್ಟಕ್ಕೇರಿಸಿಬಿಟ್ಟರು. ಅವನಿಗೆ ನಿತ್ಯವೂ ಸಲ್ಲುತ್ತಿದ್ದ ಬೆತ್ತದ ಪೂಜೆ ಶಾಶ್ವತವಾಗಿ ನಿಂತೇಬಿಟ್ಟಿತು. ಕೊನೆಗೊಂದು ದಿನ ಅವನೇ ಬಾಯಿಬಿಟ್ಟ; ಮರುವಾರ ಆತ ಶಾಲೆಯ ಐವರೂ ಶಿಕ್ಷಕರ ಹೆಸರನ್ನು ಬರೆದು ಕಳುಹಿಸಿದ್ದನಂತೆ. ದುರ್ದೈವ ಅದು ಬಂದೇ ಇರಲಿಲ್ಲ.

ಇದನ್ನು ನೆನೆದಾಗಲೆಲ್ಲ ಹಿರಿಯ ಮಿತ್ರರೊಬ್ಬರು ಹೇಳಿದ ಪ್ರಸಂಗ ಕಣ್ಣೆದುರು ಬರುತ್ತೆ. ಅವರೂರಿನಲ್ಲಿ ಒಬ್ಬ ತನ್ನ ಪ್ರೇಯಸಿಗಾಗಿ ಹಾಡನ್ನು ಕೋರಿ, ಒಂದು ಪತ್ರ ಬರೆದಿದ್ದನಂತೆ. ಅದು ಬಾನುಲಿಯಲ್ಲಿ ಬಿತ್ತರವಾಗಿ, ಕೊನೆಗೆ ಊರಿನವರಿಗೂ ಗೊತ್ತಾಗಿ, ಬ್ರಾಡ್‌ಕಾಸ್ಟ್‌ ಕೃಪೆಯಿಂದ ಇಂಟರ್‌ಕ್ಯಾಸ್ಟ್‌ ಮ್ಯಾರೇಜೂ ಆಯಿತು. ಈಗ ಅವರಿಗೆ ಇಬ್ಬರು ಮಕ್ಕಳು… ಒಂದು ಗಂಡು, “ಆಕಾಶ’; ಅವನಿಗೊಬ್ಬಳು ತಂಗಿ, “ವಾಣಿ’!

ನಾಳೆ (ಫೆ.13) ವಿಶ್ವ ರೇಡಿಯೋ ದಿನ. ಗತದ ಅಲೆಯೊಂದು ಮತ್ತೆ ಮತ್ತೆ ಎದೆಗೆ ಬಡಿದ ಸದ್ದಾಗುತ್ತಿದೆ. ಚರ್ಮದ ಜಾಕೆಟ್‌ ತೊಟ್ಟು, ಪುಟಾಣಿಯಂತೆ ಬೆಚ್ಚಗಿನ ಧ್ವನಿ ಹೊಮ್ಮಿಸುತ್ತಿದ್ದ ಫಿಲಿಪ್ಸ್‌ ರೇಡಿಯೋ; ಮಿನಿ ಸೂಟ್‌ಕೇಸ್‌ನ ರೂಪದ, ಉದ್ದುದ್ದ ಆ್ಯಂಟೆನಾ ಬಿಟ್ಟುಕೊಂಡಿರುತ್ತಿದ್ದ ಮರ್ಫಿ ರೇಡಿಯೋಗಳೆಲ್ಲ ನಮ್ಮೊಳಗಿನ ಅಟ್ಲಾಂಟಿಕ್‌ ಸಾಗರದಲ್ಲಿ ಮೆಲ್ಲನೆ ಮುಳುಗುತ್ತಿವೆ. ಈ ನೆನಪುಗಳನ್ನು ಹೊತ್ತ ನಾವೆಲ್ಲ, ಕ್ಯಾಪ್ಟನ್‌ ಸ್ಮಿತ್‌ನಂತೆ ವಿಷಣ್ಣರಾಗಿದ್ದೇವೆ. ಓಡೋಡಿ ಬರಲು, ದೂರದಲ್ಲೆಲ್ಲೂ “ಕ್ಯಾಪೇìಥಿಯಾ’ ಹಡಗು ಕಾಣಿಸುತ್ತಿಲ್ಲ. ಹಿನ್ನೆಲೆಯಲ್ಲೋ ಒಂದು ರಾಗ… ಅದೇ ಆ ಯಹೂದಿ ಕೊಟ್ಟನಲ್ಲ ಆಕಾಶವಾಣಿಯ ಜಿಂಗಲ್‌ ಜೀವದನಿ!

ಗಣೇಶ ಕೇಳಿದ ರೇಡಿಯೊ
“8.20ಕ್ಕೆ ಕುಮಾರಿ ಶ್ರುತಿ ಅವರಿಂದ ಭಾವಗೀತೆಗಳು’ ಉದ್ಘೋಷಕಿಯ ಮಾತು ಕೇಳಿ, 6.20ರ ಗಡಿಯಾರವನ್ನು 2 ಗಂಟೆ ಮುಂದೆ ಓಡಿಸುವ “ಗಣೇಶನ ಮದುವೆ’ಯ ಅನಂತನಾಗ್‌ ಈ ರೇಡಿಯೊ ಜತೆಗೇ ನೆನಪಾಗ್ತಾರೆ. ಎಸ್ಪಿಬಿಯ “ಇದೇ ನಾಡು ಇದೇ ಭಾಷೆ…’ ಎಂಬ ಹಾಡೇ ಕನ್ನಡಚಿತ್ರರಂಗದ ಎವರ್‌ಗ್ರೀನ್‌ ಕ್ಲೈಮ್ಯಾಕ್ಸ್‌. “ದಿಲ್‌ ಸೇ’ಯ ಶಾರುಖ್‌ ಖಾನ್‌, ದೆಹಲಿಯ ಆಕಾಶವಾಣಿಯನ್ನು ತೋರಿಸಿ, “ಇದೀಗ ದೆಹಲಿಯಿಂದ ಪ್ರಸಾರ…’ ಎನ್ನುವ ನಮ್ಮೊಳಗಿನ ಕುತೂಹಲಕ್ಕೆ ಪೂರ್ಣವಿರಾಮವಿಟ್ಟಿದ್ದು ಇನ್ನೂ ಕಣ್ಣೆದುರು ಕಟ್ಟಿದೆ.

ಶಂಕರನ ಆ ಕೊನೆಯ ಸಂದರ್ಶನ…
ರೇಡಿಯೋದ ನೆನಪಿನೊಂದಿಗೆ, ಬಿಚ್ಚಿಕೊಳ್ಳುವುದು ಶಂಕರ್‌ನಾಗ್‌ರ ಮಧುರ ಧ್ವನಿ. ಅವರು ಮಡಿಯುವ ಮುನ್ನ, ಕೊಟ್ಟ ರೇಡಿಯೋ ಸಂದರ್ಶನ, ಬದುಕಿನ ನಾನಾ ಬಣ್ಣಗಳನ್ನು ದರ್ಶಿಸುತ್ತದೆ. “ಕೆಲ್ಸ ಕೆಲ್ಸ ಕೆಲ್ಸ ಅಂತ ಊರೂರು ಅಲೆಯೋದೇ ಆಯ್ತು ವಿನಾಃ ಆಕಾಶವಾಣಿ ಕಡೆಗೆ ಬರೋಕ್ಕೇ ಆಗಲಿಲ್ಲ…’ ಎಂದು ಶುರುಮಾಡುವ ಮಾತಿನಲ್ಲಿ ಬರುವ ತಮ್ಮ ನಟನೆಯ ಸಾಹಸ, ನಟಿ ಮಂಜುಳಾರ ನೆನಪುಗಳನ್ನು ಎಂದಿಗೂ ಮರೆಯುವಂತಿಲ್ಲ. ಆ ಸಂದರ್ಶನದ ಲಿಂಕ್‌: https://goo.gl/v62SzP

ಯಹೂದಿ ಕಟ್ಟಿದ ಜೀವದನಿ
ಸಿಗ್ನೇಚರ್‌ನಂತಿರುವ ಆಕಾಶವಾಣಿ ಜಿಂಗಲ್‌ ರಾಗವನ್ನು ಟ್ಯೂನ್‌ ಮಾಡಿದ್ದು, ಒಬ್ಬ ಯಹೂದಿ. ಹೆಸರು, ವಾಲ್ಟರ್‌ ಕಾಫ್ಮನ್‌. ಭಾರತಕ್ಕೆ ನಿರಾಶ್ರಿತರಾಗಿ ಬಂದ ಪ್ರಜೆ. ಜೆಕ್‌ ಗಣರಾಜ್ಯದಲ್ಲಿ ಹುಟ್ಟಿದ ಇವರು, ಮ್ಯೂಸಿಕಾಲಜಿಯಲ್ಲಿ ಪಿಎಚ್‌ಡಿ ಮಾಡಲು ಪ್ರೇಗ್‌ನ ಜರ್ಮನ್‌ ವಿವಿಗೆ ಬರುತ್ತಾರೆ. ಆದರೆ, ಅಲ್ಲಿ ಅಧ್ಯಾಪಕರಾಗಿದ್ದ ಗುಸ್ತಾವ್‌ ಬೆಕಿಂಗ್‌, ಹಿಟ್ಲರ್‌ನ ನಾಜಿ ಪಡೆಯ ಯುವ ನೇತಾರ. ತಿರಸ್ಕಾರಕ್ಕೆ ಗುರಿಯಾಗುವ ವಾಲ್ಟರ್‌, 1934ರಲ್ಲಿ ಭಾರತಕ್ಕೆ ವಲಸೆ ಬಂದು, ಆಲ್‌ ಇಂಡಿಯಾ ರೇಡಿಯೋಕ್ಕೆ ಸೇರುತ್ತಾರೆ. ಶಿವರಂಜಿನಿ ರಾಗದಲ್ಲಿ ಮೆಲೋಡಿಯ ಜಿಂಗಲ್‌ ಅನ್ನು ಆಕಾಶವಾಣಿಗಾಗಿ ಕಂಪೋಸ್‌ ಮಾಡಿದರು. ಅದು ಕ್ರಮೇಣ ಭಾರತದ ಜೀವರಾಗವೇ ಆಗಿಹೋಗುತ್ತೆ!

ರೇಡಿಯೋ ಅಂದ್ರೆ…
ಎಯಂ ಆಕಾಶವಾಣಿ ಸಂಪ್ರತಿ ವಾರ್ತಾಹ ಶೂಯನ್ತಾಂ…
ಆಕಾಶವಾಣಿ, ವಾರ್ತೆಗಳು; ಓದುತ್ತಿರುವವರು ಎಂ. ರಂಗರಾವ್‌…
ಇದೀಗ ದೆಹಲಿ ಕೇಂದ್ರದಿಂದ ಇಂಗ್ಲಿಷ್‌ ವಾರ್ತೆ ಕೇಳುವಿರಿ…
ಇದೀಗ ನಿಮ್ಮ ನೆಚ್ಚಿನ ಚಿತ್ರಗೀತೆಗಳ ಪ್ರಸಾರ…
ಯುವವಾಣಿ ಕೇಳುವಿರಿ…
ಈಗ ಕೃಷಿರಂಗ ಪ್ರಸಾರವಾಗಲಿದೆ..

ಕೀರ್ತಿ ಕೋಲ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next