Advertisement

ರೇಬಿಸ್‌ ನಿರ್ಲಕ್ಷ್ಯ  ಸಲ್ಲದು; ಸಕಾಲದಲ್ಲಿ ಚಿಕಿತ್ಸೆ ಅಗತ್ಯ

11:37 PM Sep 27, 2022 | Team Udayavani |

ಸೆ.28ರಂದು ವಿಶ್ವ ರೇಬಿಸ್‌ ದಿನ. ರೇಬಿಸ್‌ ಕಾಯಿಲೆಯ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತೀವರ್ಷ ವಿಶ್ವಾದ್ಯಂತ ಈ ದಿನವನ್ನು ಆಚರಿಸುತ್ತ ಬರಲಾಗಿದೆ. ಹೀಗಿದ್ದರೂ ಈ ಕಾಯಿಲೆಯ ಬಗೆಗೆ ಜನರಲ್ಲಿ ಇನ್ನೂ ಸಮರ್ಪಕ ಅರಿವು ಮೂಡಿಲ್ಲ. ಇನ್ನು ಬೀದಿನಾಯಿಗಳ ಹಾವಳಿ ಸಾಮಾನ್ಯವಾಗಿದ್ದು ಇದಕ್ಕೊಂದು ಶಾಶ್ವತ ಪರಿಹಾರೋಪಾಯವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ವಿಶ್ವ ರೇಬಿಸ್‌ ದಿನದ ಹಿನ್ನೆಲೆಯಲ್ಲಿ ಈ ಕಾಯಿಲೆ ಹರಡಲು ಕಾರಣ, ರೋಗದ ಲಕ್ಷಣಗಳು, ರೇಬಿಸ್‌ ನಿರೋಧಕ ಲಸಿಕೆ ಪಡೆಯುವ ಅಗತ್ಯ ಮತ್ತಿತರ ವಿಚಾರಗಳತ್ತ ಇಲ್ಲಿ ಬೆಳಕು ಚೆಲ್ಲಲಾಗಿದೆ.

Advertisement

ಇತ್ತೀಚಿನ ವರ್ಷಗಳಲ್ಲಿ ಮನೆಗಳಲ್ಲಿ ನಾಯಿ, ಬೆಕ್ಕುಗಳನ್ನು ಸಾಕುವುದು ಟ್ರೆಂಡ್‌ ಆಗಿದೆ. ಇವುಗಳ ಸಾಕಣೆ ವೇಳೆ ನಮ್ಮ ಆರೋಗ್ಯದ ಬಗೆಗೆ ನಿಷ್ಕಾಳಜಿ ತೋರುವುದು ಮಾತ್ರವಲ್ಲದೆ ಈ ಪ್ರಾಣಿಗಳ ಬಗೆಗಿನ ತೀವ್ರ ಕಾಳಜಿ ಅಥವಾ ಅವುಗಳ ನೈರ್ಮಲ್ಯದ ಕುರಿತಂತೆ ನಿರ್ಲಕ್ಷ್ಯ ವಹಿಸುವುದೂ ಮಾಮೂಲಿಯಾಗಿದೆ. ಇನ್ನು ನಗರಗಳಲ್ಲಂತೂ ಬೀದಿ ನಾಯಿಗಳ ಹಾವಳಿಯೂ ಹೆಚ್ಚಾಗುತ್ತಿದೆ. ಪ್ರತೀದಿನ ಎಂಬಂತೆ ಬೀದಿನಾಯಿಗಳು ಜನರಿಗೆ ಕಚ್ಚಿದ, ಮಕ್ಕಳ ಮೇಲೆ ದಾಳಿ ಮಾಡಿದ ಘಟನೆಗಳು ಸುತ್ತಮುತ್ತ ನಡೆಯುತ್ತಲೇ ಇರುತ್ತವೆ. ಆದರೂ ಇದನ್ನು ನಾವು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ನಾಯಿ ಕಚ್ಚಿದರೆ ರೇಬಿಸ್‌ನಂಥ ಗಂಭೀರವಾರ ಕಾಯಿಲೆ ಹರಡುವ ಸಾಧ್ಯತೆ ಇದೆ. ಆದ್ದರಿಂದ ಬೀದಿನಾಯಿಗಳು ಮತ್ತು ಸಾಕುಪ್ರಾಣಿಗಳ ಕುರಿತು ಎಚ್ಚರಿಕೆ ವಹಿಸಲೇಬೇಕಿದೆ.

ಬೀದಿನಾಯಿಗಳನ್ನು ಕೊಲ್ಲುವುದಕ್ಕೆ ಪ್ರಾಣಿ ದಯಾ ಸಂಘಟನೆಗಳು ತೀವ್ರ ಆಕ್ಷೇಪ ಎತ್ತಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯವು ಈಗಾಗಲೇ ಬೀದಿನಾಯಿ, ಹಿಂಸಾತ್ಮಕ ಪ್ರವೃತ್ತಿಯ ಹಾಗೂ ರೇಬಿಸ್‌ನಂತಹ ಅಪಾಯಕಾರಿ ಸಾಂಕ್ರಾಮಿಕ ರೋಗಗಳನ್ನು ಹರಡುವಂತಹ ನಾಯಿಗಳನ್ನು ಕೊಲ್ಲಲು ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ತೀರ್ಪಿನ ನಿರೀಕ್ಷೆಯಲ್ಲಿದೆ. ಇತರ ರಾಜ್ಯಗಳು ಕೂಡ ಈ ತೀರ್ಪಿನತ್ತ ದೃಷ್ಟಿ ಹರಿಸಿವೆ.

ರೇಬಿಸ್‌ ಎಂದರೇನು?
ರೇಬಿಸ್‌ ಒಂದು ಅಪಾಯಕಾರಿ ವೈರಸ್‌ ಆಗಿದೆ. ಇದು ರೇಬಿಸ್‌ ಹರಡಿರುವ ಪ್ರಾಣಿಯ ಲಾಲಾರಸದ ಮೂಲಕ ಮನುಷ್ಯನಿಗೆ ಹರಡುತ್ತದೆ. ರೇಬಿಸ್‌ ಹರಡಿರುವ ನಾಯಿಯು ಮನುಷ್ಯನನ್ನು ಕಚ್ಚಿದರೆ ಮಾತ್ರ ಇದು ಹರಡುತ್ತದೆ. ರೇಬಿಸ್‌ ವೈರಸ್‌ಗೆ ತುತ್ತಾಗಿರುವ ವನ್ಯಜೀವಿ ಅಥವಾ ಸಾಕುಪ್ರಾಣಿಯ ಮರಿಗಳು ತನ್ನ ತಾಯಿಯ ಹಾಲನ್ನು ಕುಡಿದಾಗ ಆ ಮರಿಗಳಿಗೂ ಈ ವೈರಸ್‌ ಹರಡುತ್ತದೆ. ಇಂತಹ ಮರಿಗಳ ಬಗೆಗೂ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ರೇಬಿಸ್‌ ಲಕ್ಷಣಗಳು
-ರೇಬಿಸ್‌ ವೈರಸ್‌ ತಗಲಿದರೆ ಹೈಡ್ರೋಫೋಬಿಯಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
-ನೀರನ್ನು ಕಂಡೊಡನೆ ದೂರ ಓಡುವುದು.
-ನೀರನ್ನು ಕಂಡೊಡನೆ ಕೋಪಗೊಳ್ಳುವುದು.
-ನೀರು ಕಂಡೊಡನೆ ಮಾನಸಿಕವಾಗಿ ಕಿರಿಕಿರಿಯ ಭಾವನೆ.
-ಕಡಿಮೆ ಪ್ರಮಾಣದಲ್ಲಿ ಅಥವಾ ನೀರನ್ನು ಕುಡಿಯದೇ ಇರುವುದು.
-ದಿಢೀರನೆ ಮತ್ತು ಅನಾವಶ್ಯಕವಾಗಿ ಕಿರುಚುವುದು
-ಅಚಾನಕ್‌ ಆಗಿ ಕೋಪಗೊಳ್ಳುವುದು.
-ಪದೇಪದೆ ಜ್ವರ ಬರುವುದು.

Advertisement

ಯಾವಾಗ ಹೆಚ್ಚು ಅಪಾಯಕಾರಿ?
ಮನುಷ್ಯನ ತಲೆ, ಮುಖದ ಭಾಗಗಳಿಗೆ ನಾಯಿ ಕಚ್ಚಿದರೆ ಅದು ನೇರವಾಗಿ ಮಿದುಳಿನ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ಸಮಯಕ್ಕೆ ರೇಬಿಸ್‌ ನಿರೋಧಕ ಔಷಧ ಪಡೆದುಕೊಳ್ಳದಿದ್ದರೆ 8-10 ದಿನಗಳಲ್ಲಿ ಮನುಷ್ಯ ಸಾಯುವ ಸಂಭವವಿರುತ್ತದೆ. ಗಾಯ ಹೆಚ್ಚು ಆಳವಾದಷ್ಟು ತೀವ್ರ ಅಪಾಯಕಾರಿ.

ಎಷ್ಟು ಡೋಸ್‌ ರೇಬಿಸ್‌ ನಿರೋಧಕ ಲಸಿಕೆ ಅಗತ್ಯ?
ರೇಬಿಸ್‌ ಚಿಕಿತ್ಸೆಗೆ ಬಳಸುವ ಔಷಧಗಳು ವಿವಿಧ ರೀತಿಯಲ್ಲಿರುತ್ತವೆ. ರೋಗಿಯ ವಯಸ್ಸು, ಕಚ್ಚಿದ ಜಾಗ, ಎಷ್ಟು ಗಾಯಗಳಾಗಿವೆ, ಆರೋಗ್ಯ ಸ್ಥಿತಿ ಮುಂತಾದವುಗಳನ್ನು ನೋಡಿ ವೈದ್ಯರು ಔಷಧ ನೀಡುತ್ತಾರೆ. ಸಾಮಾನ್ಯವಾಗಿ 6 ಇಂಜೆಕ್ಷನ್‌ಗಳನ್ನು ನೀಡುತ್ತಾರೆ.

-ನಾಯಿ ಕಚ್ಚಿದ ದಿನದಂದು
-7 ದಿನಗಳ ಬಳಿಕ
-14ನೇ ದಿನದಂದು
-28ನೇ ದಿನದಂದು
-30ನೇ ದಿನದಂದು
-ಕೊನೆಯದು 3 ತಿಂಗಳುಗಳ ಬಳಿಕ
ರೇಬಿಸ್‌ ನಿರೋಧಕ ಲಸಿಕೆ ತೆಗೆದುಕೊಳ್ಳುವುದರಿಂದ ಅಡ್ಡ ಪರಿಣಾಮಗಳು ಉಂಟಾಗುವ ಭಯ ಸಾಮಾನ್ಯ ಜನರಲ್ಲಿದೆ. ವೈದ್ಯರ ಪ್ರಕಾರ ರೇಬಿಸ್‌ ನಿರೋಧಕ ಲಸಿಕೆ ಪಡೆದುಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.

ನಾಯಿ ಕಚ್ಚಿದರೆ ಏನು ಮಾಡಬೇಕು ?
-ಯಾರಿಗಾದರೂ ನಾಯಿ ಕಚ್ಚಿದರೆ ಮೊದಲು ಅವರನ್ನು ಮನೆಗೆ ಕರೆದುಕೊಂಡು ಹೋಗಿ ಕಚ್ಚಿದ ಭಾಗವನ್ನು ನೀರಿನಿಂದ ಚೆನ್ನಾಗಿ ಶುಚಿಗೊಳಿಸಬೇಕು. ಇದರಿಂದ ರಕ್ತಸ್ರಾವ ನಿಲ್ಲುವುದಿಲ್ಲವಾದರೂ ನಾಯಿ ಕಚ್ಚಿದ ಪರಿಣಾಮ ದೇಹವನ್ನು ಪ್ರವೇಶಿಸಿದ ವೈರಸ್‌ ಹೆಚ್ಚಿನ ಪ್ರಮಾಣದಲ್ಲಿ ನೀರಿನಲ್ಲಿ ತೊಳೆದುಹೋಗಬಹುದು.
-ಗಾಯವನ್ನು ಶುಚಿಗೊಳಿಸಿದ ಅನಂತರ ಶುಭ್ರ ಬಟ್ಟೆಯಲ್ಲಿ ನೀರನ್ನು ಒರೆಸಿಕೊಳ್ಳಬೇಕು. ಆದರೆ ಯಾವುದೇ ತರಹದ ಕ್ರೀಮ್‌ನ್ನು ಹಚ್ಚಬಾರದು.
-ಬಳಿಕ ಹತ್ತಿರದ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.
-ನಾಯಿಗೆ ರೇಬಿಸ್‌ ಇದೆಯೇ ಅಥವಾ ಇಲ್ಲ ಎಂಬುದನ್ನು ತಿಳಿದುಕೊಳ್ಳಲು ಕಚ್ಚಿದ ನಾಯಿ ಹಾಗೂ ಕಚ್ಚಿಸಿಕೊಂಡವರನ್ನು ಸ್ವಲ್ಪ ದಿನಗಳವರೆಗೆ ಗಮನಿಸುತ್ತಿರಬೇಕು. ಇದರಿಂದ ಅವರಲ್ಲಿ ಯಾವುದಾದರೂ ರೇಬಿಸ್‌ನ ಗುಣಲಕ್ಷಣಗಳು ಕಂಡುಬಂದರೆ ಗುರುತಿಸಬಹುದು. ರೇಬಿಸ್‌ಗೆ ತುತ್ತಾಗಿರುವ ನಾಯಿಯು ಹೆಚ್ಚು ಆಕ್ರಮಣಕಾರಿಯಾಗಿರುತ್ತದೆ.

-ಕೇರಳದಲ್ಲಿ 1.2 ಲಕ್ಷ ಜನರಿಗೆ ನಾಯಿಗಳು ಕಚ್ಚಿವೆ.
-21 ಜನರು ರೇಬಿಸ್‌ನಿಂದ ಸಾವನ್ನಪ್ಪಿದ್ದಾರೆ.
-ಮಹಾರಾಷ್ಟ್ರದಲ್ಲಿ 2020-21ರಲ್ಲಿ 2,680 ರೇಬಿಸ್‌ಕೇಸುಗಳು ದಾಖಲಾಗಿವೆ.
– ಗೋವಾದಲ್ಲಿ ಕಳೆದ 3 ವರ್ಷಗಳಿಂದ ಒಂದೇ ಒಂದು ರೇಬಿಸ್‌ ಪ್ರಕರಣ ದಾಖಲಾಗಿಲ್ಲ. ಈ ಹಿನ್ನೆಲೆಯಲ್ಲಿ ದೇಶದ ಮೊದಲ ರೇಬಿಸ್‌ ಮುಕ್ತ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
– ಕರ್ನಾಟಕದಲ್ಲಿ 1.58 ಲಕ್ಷ ಜನರಿಗೆ ಪ್ರಸಕ್ತ ವರ್ಷ ನಾಯಿ ಕಚ್ಚಿದೆ. 2,677 ಜನರಿಗೆ ರೇಬಿಸ್‌ ಹರಡ ಬಹುದಾದ ಬೆಕ್ಕು, ಮಂಗಗಳು ಕಚ್ಚಿವೆ. ಕಳೆದ ವರ್ಷ 2.5 ಲಕ್ಷ ಜನರಿಗೆ ನಾಯಿ ಕಚ್ಚಿತ್ತು. ಈ ವರ್ಷ ಜುಲೈವರೆಗೆ ರೇಬಿಸ್‌ನಿಂದಾಗಿ 9 ಮಂದಿ ಸಾವನ್ನಪ್ಪಿದ್ದರೆ ಕಳೆದ ವರ್ಷ 13 ಮಂದಿ ಸಾವನ್ನಪ್ಪಿದ್ದರು.

-  ರಂಜಿನಿ ಮಿತ್ತಡ್ಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next