Advertisement
ದ್ವಿದಳಧಾನ್ಯಗಳಲ್ಲಿ ಪೋಷಕತ್ವ(ಪ್ರೊಟೀನ್) ಏಕದಳ ಧಾನ್ಯಗಳಿಗಿಂತ ಹೆಚ್ಚಾಗಿರುತ್ತದೆ. ಜೀವಸತ್ವ, ನಾರು, ಖನಿಜಾಂ ಶಗಳು ಅಧಿಕವಾಗಿದ್ದು ಕೊಬ್ಬು, ಲವಣಗಳು ಕಡಿಮೆ ಪ್ರಮಾ ಣದಲ್ಲಿವೆ. ಹಾಗಾಗಿ ಬೇಳೆಕಾಳುಗಳನ್ನು ಬಡವರ ಪಾಲಿನ ಮಾಂಸ ಎಂದೇ ಬಣ್ಣಿಸಲಾಗುತ್ತದೆ. ಹೆಸರು, ತೊಗರಿ, ಕಡಲೆ, ಬಟಾಣಿ, ಹುರುಳಿ, ಉದ್ದು ಇತ್ಯಾದಿಗಳನ್ನು ಇಡೀ ಕಾಳು ಅಥವಾ ಒಡೆದ ಬೇಳೆಗಳಾಗಿ ಉಪಯೋಗಿಸುತ್ತಾರೆ. ಸಿಪ್ಪೆಸಹಿತ ಉಪಯೋಗಿಸಿದರೆ ಒಳ್ಳೆಯದು. ಕಡಲೆ, ಎಳ್ಳು, ಕುಸುಮೆ, ಸಾಸಿವೆಗಳು ಜಿಡ್ಡಿನಾಂಶದ ಜತೆಗೆ ಸುಣ್ಣ ಮತ್ತು ಕಬ್ಬಿಣಾಂಶವನ್ನು ಹೊಂದಿವೆ. ಏಕದಳ ಮತ್ತು ದ್ವಿದಳ ಧಾನ್ಯಗಳನ್ನು ಸೊಪ್ಪು, ತರಕಾರಿಗಳೊಂದಿಗೆ ನೀರಿನಲ್ಲಿ ಬೇಯಿಸಿ ಉಪ್ಪು, ಬೆಲ್ಲ, ಖಾರ ಬೆರೆಸಿ ಎಣ್ಣೆ ಅಥವಾ ತುಪ್ಪದ ಒಗ್ಗರಣೆ ನೀಡಿ ಸೇವಿಸಿದರೆ ಅದು ಬ್ಯಾಲೆನ್ಸಡ್ ಡಯೆಟ್‌ಗೆ ಹತ್ತಿರವಾಗುತ್ತದೆ. ಹುಗ್ಗಿ ಅಥವಾ ಖೀಚಡಿ ಇದಕ್ಕೊಂದು ಉತ್ತಮ ಉದಾಹರಣೆ.
ಧಾನ್ಯಗಳ ಗುಣವರ್ಧನೆಗೆ ಹಾಗೂ ಪ್ರೊಟೀನ್ ಅಲರ್ಜಿ ಯಂತಹ ಅವಗುಣಗಳ ನಿವಾರಣೆಗೆ ಬೇಳೆಕಾಳುಗಳನ್ನು ವಿವಿಧ ರೀತಿಯಲ್ಲಿ ಸಂಸ್ಕರಿಸುತ್ತಾರೆ. ಜಾಗರೂಕತೆಯಿಂದ ಒಂದು ವರ್ಷಕ್ಕೂ ಅಧಿಕ ಸಮಯ ಶೇಖರಿಸಿದಾಗ ಗುಣ ಮಟ್ಟ ಹೆಚ್ಚಿ ಜೀರ್ಣಕ್ಕೆ ಸಹಕಾರಿಯಾಗುತ್ತದೆ. ಹೊಸಧಾನ್ಯ ಜೀರ್ಣವಾಗುವುದು ಕಷ್ಟ. ಬಳಸುವ ಮುಂಚೆ ನೆನೆಸಿಟ್ಟರೆ ಮೃದುವಾಗಿ ಅದರಲ್ಲಿರುವ ಸತ್ವಗಳು ಹೆಚ್ಚಾಗುತ್ತವೆ. ಪಚನಕ್ಕೂ ಒಳ್ಳೆಯದು. ಬೇಯಿಸಲು ಅಥವಾ ಮೊಳಕೆ ಬರಿಸಲು ಕೂಡ ಈ ಕ್ರಮ ಅನುಕೂಲ. ನೆನೆಸುವ ಸಮಯ ಒಂದೆರಡು ಗಂಟೆ ಅಥವಾ ಒಂದು ರಾತ್ರಿಯ ಅವಧಿ ಎನ್ನುವುದು ಬಾಣಸಿಗನ ಜಾಣ್ಮೆಯನ್ನು ಅವಲಂಬಿಸಿರುತ್ತದೆ. ಬೇಳೆಕಾಳುಗಳನ್ನು ಕುಟ್ಟಿ ತಯಾರಾದ ಹಿಟ್ಟಿನಿಂದ ಉಂಡೆ, ಕರಿದ ತಿಂಡಿಗಳನ್ನು ಮಾಡಬಹುದು. ರುಬ್ಬಿದ, ಹುದುಗು ಬರಿಸಿದ ಅಕ್ಕಿ-ಉದ್ದು ಮಿಶ್ರಣದಿಂದ ದೋಸೆ, ಇಡ್ಲಿಯಂತಹ ತಿಂಡಿಗಳು ತಯಾರಾಗುತ್ತವೆ. ಮೊಳಕೆ ಬರಿಸಿದ ಕಾಳುಗಳಲ್ಲಿ ಪೋಷಕಾಂಶವು ಅಧಿಕವಾಗಿದ್ದು ಜೀರ್ಣವಾಗುವುದು ಕಷ್ಟ. ಹೊಟ್ಟೆಉಬ್ಬರ, ಹೊಟ್ಟೆಉರಿಯ ಸಮಸ್ಯೆಯಾಗದಿರಲು ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದೊಳಿತು. ಬಾಹ್ಯಾಭ್ಯಂತರ ಪ್ರಯೋಗಕ್ಕೆ ಪೂರಕ
ಬೇಳೆಕಾಳುಗಳು ಪೌಷ್ಟಿಕ ಆಹಾರವಾಗಿಯಷ್ಟೇ ಅಲ್ಲದೇ ಬಾಹ್ಯ ಪ್ರಯೋಗದಿಂದ ಅನೇಕ ಚರ್ಮ ಕಾಯಿಲೆಗಳಿಗೂ ಔಷಧವಾಗಿ ಬಳಕೆಯಾಗುತ್ತದೆ. ಚರ್ಮವನ್ನು ಸ್ವತ್ಛವಾಗಿಸಿ ಮೃದುಪಡಿಸಿ ಕಾಂತಿಯುತವಾಗಿಸಲು ಹೆಸರು, ಕಡಲೆ ಇತ್ಯಾದಿಗಳನ್ನು ಸೇರಿಸಿ ಮಾಡಿದ ಸ್ನಾನಚೂರ್ಣವನ್ನು ಈಗಲೂ ಅನೇಕರು ಬಳಸುತ್ತಾರೆ.
Related Articles
Advertisement
ಮಲಬಂಧಕ ತೊಗರಿ ತೊಗರಿಯಲ್ಲಿ ಚೊಗರು-ಸಿಹಿ ಅಂಶವಿದ್ದು, ವಾಯು ವನ್ನು ಜಾಸ್ತಿ ಮಾಡುವ ಜತೆಯಲ್ಲಿ ಮಲಬಂಧನದ ಸಾಮ ರ್ಥಯವನ್ನು ಹೊಂದಿದೆ. ಅತಿಸಾರ ಗ್ರಹಣಿಯಲ್ಲಿ ಉಪಯೋಗಿ. ಪಿತ್ತ-ರಕ್ತ- ಕಫವಿಕಾರವನ್ನು ಶಮನಗೊಳಿಸುವುದು. ಉದರಕ್ರಿಮಿನಾಶಕ. ಹಿಟ್ಟಿನ ಲೇಪದಿಂದ ಶರೀರದ ಕಾಂತಿಯು ಹೆಚ್ಚುತ್ತದೆ. ಬಲವರ್ಧನೆಗೆ ಉದ್ದು
ಸಂಸ್ಕೃತದಲ್ಲಿ ಮಾಷ, ಧಾನ್ಯವೀರ, ಮಾಂಸಲ ಎನ್ನುತ್ತಾರೆ. ಸ್ನಿಗ್ಧ, ಬಹುಮಲಕಾರಕ, ಕಫಕಾರಕ. ಉಷ್ಣತೆಯಿಂದಾಗಿ ರಕ್ತ ಪಿತ್ತವನ್ನು ಕೆರಳಿಸುತ್ತದೆ. ಕಹಿಯಾಗಿದ್ದರೂ ಸ್ವಾದಿಷ್ಟವಾಗಿರು ತ್ತದೆ. ಶ್ರಮವನ್ನು ಕಡಿಮೆ ಮಾಡಿ ಬಲ, ವೀರ್ಯ, ಮಾಂಸಧಾತುವನ್ನು ವರ್ಧಿಸುತ್ತದೆ. ಹೃದಯಕ್ಕೆ ಹಿತ, ಸ್ತನ್ಯಜನಕ. ಉದ್ದಿನ ಹಪ್ಪಳ ಸುಟ್ಟು ತಿಂದರೆ ಪಚನಕ್ಕೆ ಸಹಕಾರಿ, ಕರಿದರೆ ರುಚಿಯಾದರೂ ನಿಧಾನವಾಗಿ ಪಚನವಾಗುವುದು. ಬಾಲಪ್ರಿಯ ಕಡಲೇಬೀಜ
ಬಿ ಜೀವಸತ್ವವಿರುವ, ಬಡವರ ಬಾದಾಮಿಯಾದ ಕಡಲೆ ಬೀಜವನ್ನು ಹಸಿಯಾಗಿಯೇ ತಿನ್ನಬಹುದು. ನೆನೆಸಿ ಅಥವಾ ಹುರಿದು ಸವಿಯಬಹುದು. ಮಕ್ಕಳಿಗೆ ಪ್ರಿಯವಾಗಿದ್ದು ಚಿಕ್ಕಿಯಂಥಾ ಮಿಠಾಯಿ ದೊಡ್ಡವರಿಗೂ ಇಷ್ಟವಾಗುವುದು. ವಾಯುಪ್ರಕೋಪದಿಂದ ಹೊಟ್ಟೆನೋವಿಗೆ ಕಾರಣವಾಗುವ ಇದನ್ನು ಅತಿಯಾಗಿ ಬಳಸಿದರೆ ಪುರುಷತ್ವ ನಾಶವಾದೀತು ಎಂದು ಆಯುರ್ವೇದ ಎಚ್ಚರಿಸುತ್ತದೆ. ಮಿತವಿದ್ದರೆ ಹಿತವಾದ ಅಲಸಂಡೆ
ಸಂಸ್ಕೃತದಲ್ಲಿ ರಾಜಮಾಷವೆಂದೆನಿಕೊಂಡಿರುವ ಇದರ ಮೂಲಸ್ಥಾನ ಮಧ್ಯಆಫ್ರಿಕಾ. ಎದೆಹಾಲನ್ನು ವೃದ್ಧಿಸುವ ಇದರ ಅತೀ ಉಪಯೋಗದಿಂದ ಮಲಬದ್ಧತೆ ಉಂಟಾ ಗುತ್ತದೆ. ನೆನಪಿನ ಶಕ್ತಿ ಕಡಿಮೆಯಾದರೆ ಹಸಿ ಅಲಸಂಡೆ ಯನ್ನು ಒಂದು ಹಿಡಿಯಷ್ಟು ಕ್ರಮವಾಗಿ ಸೇವಿಸಬೇಕು. ಕಿಡ್ನಿಸ್ಟೋನ್‌ಗೆ ಹುರುಳಿ
ಉಷ್ಣತೆಯಿಂದಾಗಿ ಕಫವಾತವನ್ನು ನಿಗ್ರಹಿಸುವ, ಕಿಡ್ನಿಕಲ್ಲುಗಳನ್ನು ಪರಿಹರಿಸುವ ಹುರುಳಿಯು ಕೆಮ್ಮು, ದಮ್ಮು, ನೆಗಡಿ, ಮಧುಮೇಹ, ಮೂಲವ್ಯಾಧಿ, ಸ್ಥೂಲತೆಯನ್ನು ಜಯಿಸಲು ಸಹಕಾರಿ. ರಕ್ತದೊತ್ತಡ ಪರಿಹಾರಿ ಅವರೆ
ಒಣಅವರೆಗಿಂತ ಹಸಿಯೇ ಶ್ರೇಷ್ಠವಾಗಿದ್ದು ಬೇಯಿಸಿ ತಿಂದರೆ ತಾಯಂದಿರಲ್ಲಿ ಎದೆಹಾಲು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ತಗ್ಗಿಸುವ ಗುಣವಿರುವ ಅವರೆಯನ್ನು ಮಧುಮೇಹದಲ್ಲಿ ಪಥ್ಯವಾಗಿ ಸೇವಿಸಬಹುದು. ಗ್ರಹಗಳಿಗೆ ಧಾನ್ಯಗಳ ನಂಟು
ನವಗ್ರಹಗಳಿಗೆ ತತ್ಸಂಬಧಿತ ಧಾನ್ಯಗಳನ್ನು ನೈವೇದ್ಯವಾಗಿ ನಿವೇದಿಸಿ ಪ್ರಸಾದವಾಗಿ ಸ್ವೀಕರಿಸುವ ಪರಿಪಾಠವಿದೆ. ಸೂರ್ಯ ಚಂದ್ರರಿಗೆ ಕ್ರಮವಾಗಿ ಗೋಧಿ ಮತ್ತು ಅಕ್ಕಿ ಎಂಬ ಏಕದಳ ಧಾನ್ಯದ ನಂಟಿದ್ದರೆ ಉಳಿದ ಗ್ರಹಗಳಿಗೆ ದ್ವಿದಳ ಧಾನ್ಯಗಳ ನಂಟಿದೆ. ಮಂಗಳಕ್ಕೆ ತೊಗರಿಬೇಳೆ, ಬುಧಕ್ಕೆ ಹೆಸರುಕಾಳು, ಗುರುವಿಗೆ ಕಡಲೆಕಾಳು, ಶುಕ್ರನಿಗೆ ಒಣಗಿದ ಅವರೆಕಾಳು, ಶನಿಗೆ ಎಳ್ಳು, ರಾಹುವಿಗೆ ಉದ್ದು ಮತ್ತು ಕೇತುವಿಗೆ ಹುರುಳಿಕಾಳು ಉಪಯೋಗಿಸುತ್ತಾರೆ. ಇವುಗಳ ಲ್ಲದೆ ಬಟಾಣಿ, ಚೆನ್ನಂಗಿ, ಸೋಯಾಬೀನ್, ಬೀನ್ಸ್ ಇತ್ಯಾದಿ ಪಟ್ಟಿ ಮಾಡಿದಷ್ಟು ಮುಗಿಯದ ದ್ವಿದಳಧಾನ್ಯಗ ಳನ್ನು ಅರಿತು ಬಳಸಿದರೆ ಆರೋಗ್ಯದಾಯಕ ಜೀವನಕ್ಕೆ ಸಹಕಾರಿ. ಕಾಲಕ್ಕೆ ತಕ್ಕಂತೆ ಉಪಯೋಗ
ವಸಂತದಲ್ಲಿ ಮಸೂರ, ಹೆಸರು, ಕಡಲೆ ಪಥ್ಯವಾಗಿದ್ದು, ಹುರುಳಿ, ಉದ್ದು ನಿಷಿದ್ಧ; ಗ್ರೀಷ್ಮದಲ್ಲಿ ಹೆಸರು, ಮಸೂರ, ಉದ್ದು ಉಪಯೋಗಿಸಬಹುದಾಗಿದ್ದು ಬಟಾಣಿ ನಿಷಿದ್ಧ. ವರ್ಷಾದಲ್ಲಿ ಹುರುಳಿ, ಹೆಸರು, ಉದ್ದು ಪಥ್ಯವಾಗಿದ್ದು ಬಟಾಣಿ, ಕಡಲೆ ನಿಷಿದ್ಧ. ಶರದ್ ಋತುವಿನಲ್ಲಿ ಹೆಸರು, ಬಟಾಣಿ, ಕಡಲೆಬೇಳೆ ತಿನ್ನಬಹುದಾಗಿದ್ದು ಹುರುಳಿ, ಉದ್ದು ನಿಷಿದ್ಧ. ಹೇಮಂತದಲ್ಲಿ ಉದ್ದು, ಹೆಸರು ಪಥ್ಯವಾಗಿದ್ದು ಬಟಾಣಿ, ಕಡಲೆ ಅಪಥ್ಯವಾಗಿದೆ. – ಡಾ| ಚೈತ್ರಾ ಹೆಬ್ಟಾರ್, ಉಡುಪಿ