Advertisement

800 ಕೋಟಿ ಮಂದಿಗೆ ಈ ಭೂಮಿ ಆಶ್ರಯತಾಣ; ವಿಶ್ವಸಂಸ್ಥೆಯಿಂದಲೇ ಅಧಿಕೃತ ಘೋಷಣೆ

10:25 PM Nov 15, 2022 | Team Udayavani |

ವಿಶ್ವಸಂಸ್ಥೆ: ವಿಶ್ವದ ಜನಸಂಖ್ಯೆ ಬರೋಬ್ಬರಿ 800 ಕೋಟಿ! ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್‌ಎಫ್ಪಿಎ) ಮಂಗಳವಾರ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿದೆ. ಈ ಪೈಕಿ ಭಾರತದ ಜನಸಂಖ್ಯೆ ಪ್ರಮಾಣ 141 ಕೋಟಿ ಆಗಿದ್ದು, ಮುಂದಿನ ವರ್ಷ ಚೀನವನ್ನು ಮೀರಿಸಿ ಮೊದಲ ಸ್ಥಾನಕ್ಕೆ ಏರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

ಹನ್ನೆರಡು ವರ್ಷಗಳ ಅವಧಿಯಲ್ಲಿ ಪ್ರಪಂಚದಲ್ಲಿ ಜನಸಂಖ್ಯೆ 700 ಕೋಟಿ ಇದ್ದದ್ದು 800 ಕೋಟಿಗೆ ಏರಿಕೆಯಾಗಿದೆ. ವರದಿಯ ಪ್ರಕಾರ 900 ಕೋಟಿಯ ಹಂತ ತಲುಪಲು ಇನ್ನೂ 15 ವರ್ಷಗಳು ಬೇಕಾಗಬಹುದು ಎಂದು ವಿಶ್ವಸಂಸ್ಥೆ ಅಂದಾಜು ಮಾಡಿದೆ. “800 ಕೋಟಿ ಮಂದಿಯ ಕನಸು, ಆಸೆಗಳು, 800 ಕೋಟಿ ಸಾಧ್ಯತೆಗಳು, ನಮ್ಮ ಭೂಮಿ ಈಗ 800 ಕೋಟಿ ಮಂದಿಗೆ ಆಸರೆ ನೀಡಿದೆ’ ಎಂದು ಯುಎನ್‌ಎಫ್ಪಿಎ ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದೆ.

ಜಗತ್ತಿನ 800 ಕೋಟಿ ಜನಸಂಖ್ಯೆಯಲ್ಲಿ ಭಾರತ ಪಾಲು ಹೆಚ್ಚಿನದ್ದಾಗಿದ್ದರೆ, ನಂತರದ ಸ್ಥಾನ ಚೀನಾಕ್ಕೆ ಸೇರಿದೆ. 2037ರ ವೇಳೆಗೆ ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನಸಂಖ್ಯೆ ಹೆಚ್ಚಾಗಲಿದೆ. ಆದರೆ, ಐರೋಪ್ಯ ಒಕ್ಕೂಟದಲ್ಲಿ ಈ ಅವಧಿಯಲ್ಲಿ ಜನಸಂಖ್ಯೆಯ ಬೆಳವಣಿಗೆಯ ಪ್ರಮಾಣ ನಿಧಾನವಾಗಲಿದೆ.

ಜುಲೈನಲ್ಲಿ ವಿಶ್ವ ಜನಸಂಖ್ಯೆಯ ಮುನ್ನೋಟ ವರದಿ ಬಿಡುಗಡೆ ಮಾಡಿದ್ದ ವೇಳೆ ದೇಶದ ಜನಸಂಖ್ಯೆ 141 ಕೋಟಿ ಆಗಿತ್ತು. ಚೀನದಲ್ಲಿ 142 ಕೋಟಿ ಎಂದು ದಾಖಲಾಗಿತ್ತು. ಹಾಲಿ ವರ್ಷ ಮತ್ತು 2050ರ ಅವಧಿಯಲ್ಲಿ ಜಗತ್ತಿನಲ್ಲಿ 65 ವರ್ಷಕ್ಕಿಂತ ಕಡಿಮೆ ಪ್ರಮಾಣದ ವಯೋಮಿತಿಯವರ ಸಂಖ್ಯೆ ಹೆಚ್ಚಾಗಲಿದೆ. 2080ರ ವೇಳೆ 10.4 ಬಿಲಿಯನ್‌ಗೆ ಏರಿಕೆಯಾಗಿ, 2100ರ ವರೆಗೆ ಅದೇ ಪ್ರಮಾಣ ಮುಂದುವರಿಯಲಿದೆ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.

ಭಾರತದ ಮಟ್ಟಿಗೆ ಹೇಳುವಾದರೆ 2050ರ ವೇಳೆಗೆ ದೇಶದ ಜನಸಂಖ್ಯೆ 166 ಕೋಟಿಗೆ ಏರಿಕೆಯಾಗಲಿದೆ. ಪ್ರಸಕ್ತ ವರ್ಷ ದೇಶದಲ್ಲಿ 15ರಿಂದ 64 ವರ್ಷ ವಯೋಮಿತಿಯವರ ಪ್ರಮಾಣ ಶೇ.68, 65 ಮತ್ತು ಅದಕ್ಕಿಂತ ಮೇಲ್ಪಟ್ಟ ವಯೋಮಾನದವರ ಪ್ರಮಾಣ ಶೇ.7 ಆಗಿದೆ ಎಂದು ದೃಢಪಡಿಸಿದೆ.

Advertisement

ಬೆಳವಣಿಗೆ ಕುಂಠಿತ:
ವಿಶ್ವಸಂಸ್ಥೆಯ ವರದಿ ಪ್ರಕಾರ 1950ರ ಬಳಿಕ ಜಗತ್ತಿನ ಜನಸಂಖ್ಯೆಯ ಬೆಳವಣಿಗೆಯಲ್ಲಿ ನಿಧಾನಗತಿಯಲ್ಲಿ ಕಾಣುತ್ತಿದೆ. ಮುಂದಿನ ವರ್ಷಗಳಲ್ಲಿ ಜಗತ್ತಿನ ಎಂಟು ರಾಷ್ಟ್ರಗಳಲ್ಲಿ ವೇಗವಾಗಿ ಜನಸಂಖ್ಯೆ ವೃದ್ಧಿಯಾಗಲಿದೆ. 2080ರ ವರೆಗೆ ಜನಸಂಖ್ಯೆ ಏರಿಕೆಯಾಗಲಿದ್ದು ನಂತರ ಅದು ಕುಸಿತ ಕಾಣಲಿದೆ ಎಂದು ವಿಶ್ಲೇಷಿಸಲಾಗಿದೆ.

08- ಇಷ್ಟು ರಾಷ್ಟ್ರಗಳಲ್ಲಿ ಹೆಚ್ಚಳ
ರಿಪಬ್ಲಿಕ್‌ ಆಫ್ ಕಾಂಗೋ, ಈಜಿಪ್ಟ್, ಇಥಿಯೋಪಿಯಾ, ಭಾರತ, ನೈಜೀರಿಯಾ, ಪಾಕಿಸ್ತಾನ, ತಾಂಜೇನಿಯಾ, ಫಿಲ್ಪಿಪೀನ್ಸ್‌

142 ಕೋಟಿ- ದೇಶದ ಈಗಿನ ಜನಸಂಖ್ಯೆ
170 ಕೋಟಿ- 2050ಕ್ಕೆ ದೇಶದ ಜನಸಂಖ್ಯೆ
900 ಕೋಟಿ – 2037ಕ್ಕೆ ಜಗತ್ತಿನ ಜನಸಂಖ್ಯೆ
5.5 ಬಿಲಿಯನ್‌ ಜನಸಂಖ್ಯೆ -72 ವರ್ಷಗಳಲ್ಲಿ

 

Advertisement

Udayavani is now on Telegram. Click here to join our channel and stay updated with the latest news.

Next