Advertisement

ನ್ಯುಮೋನಿಯಾ ತಡೆಗೆ ಕೈಜೋಡಿಸಿ

09:49 AM Nov 13, 2019 | Sriram |

ಜಾಗತಿಕವಾಗಿ ಹಲವರ ಸಾವಿಗೆ ಕಾರಣವಾಗಬಲ್ಲ ರೋಗಗಳ ಪೈಕಿ ನ್ಯುಮೋನಿಯಾ ಕೂಡಾ ಒಂದು. ಅದರಲ್ಲೂ 5 ವರ್ಷದೊಳಗಿನ ಮಕ್ಕಳ ಪಾಲಿಗಂತೂ ಇದು ಮಾರಣಾಂತಿಕ. ಹೀಗಾಗಿ ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ನವೆಂಬರ್‌ 12ರಂದು ಜಾಗತಿಕವಾಗಿ ನ್ಯುಮೋನಿಯ ದಿನವಾಗಿ ಆಚರಿಸಲಾಗುತ್ತದೆ. ಅಂದು ವಿವಿಧ ವೈದ್ಯಕೀಯ ಅಕಾಡೆಮಿಗಳು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ತಿಳಿವಳಿಕೆ ನೀಡುತ್ತವೆ.

Advertisement

ಹೆಚ್ಚುತ್ತಿರುವ ಪರಿಸರ ಮಾಲಿನ್ಯ ಹಲವು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಇತ್ತೀಚೆಗೆ ಹೆಚ್ಚುತ್ತಿರುವ ರೋಗಗಳು, ಹೊಸ ನಮೂನೆಯ ಕಾಯಿಲೆಗಳು ಇದಕ್ಕೆ ಉದಾಹರಣೆ. ಮಾಲಿನ್ಯದಿಂದ ಉಂಟಾಗುತ್ತಿರುವ ರೋಗಗಳ ಪೈಕಿ ನ್ಯುಮೋನಿಯಾವೂ ಒಂದು. ಶ್ಯಾಸಕೋಶಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತವೇ ನ್ಯುಮೋನಿಯಾ. ಇದು ಆಮ್ಲಜನಕ ಸೇವಿಸುವ ಪ್ರಮಾಣಕ್ಕೆ ತಡೆಯೊಡ್ಡುತ್ತದೆ. ಇದರಿಂದ ಉಸಿರಾಟ ಕಷ್ಟವಾಗುತ್ತದೆ, ಉಸಿರಾಡುವಾಗ ನೋವುಂಟಾಗುತ್ತದೆ. ಕೆಮ್ಮು ಹಾಗೂ ಸೀನುಗಳಿಂದ ಇದು ಪ್ರಸಾರವಾಗುತ್ತದೆ. ನೆನಪಿಡಿ: ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದಿದ್ದರೆ ನ್ಯುಮೋನಿಯಾ ಮಾರಾಣಾಂತಿಕವಾಗಬಹುದು.

ಯಾವುದರಿಂದ?
ವೈರಸ್‌, ಬ್ಯಾಕ್ಟೀರಿಯಾ, ಶಿಲೀಂದ್ರ ಸಹಿತ ಕೆಲವು ಸೋಂಕು ಕಾರಕಗಳಿಂದ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಈ ಪೈಕಿ ಸ್ಪ್ರೆಪ್ಪೊಕಾಕಸ್‌ ನ್ಯುಮೋನಿಯಾ ಎಂಬ ಬ್ಯಾಕ್ಟೀರಿಯಾ ಸಾಮಾನ್ಯವಾಗಿ ಮಕ್ಕಳಲ್ಲಿ ರೋಗಕ್ಕೆ ಕಾರಣವಾಗುತ್ತವೆ.

ಭೀಕರತೆಯ ಚಿತ್ರಣ
ಭಾರತದಲ್ಲಿ 2015ರಲ್ಲಿ ಸುಮಾರು 9.20 ಲಕ್ಷ ಮಕ್ಕಳು ನ್ಯುಮೋನಿಯಾಕ್ಕೆ ತುತ್ತಾಗಿದ್ದು, ಆ ವರ್ಷ ಸಂಭವಿಸಿದ 5 ವರ್ಷದೊಳಗಿನ ಮಕ್ಕಳ ಒಟ್ಟಾರೆ ಸಾವಿನ ಶೇ. 16ರಷ್ಟು ಇದರಿಂದಲೇ ಆಗಿದೆ. 2017ರ ಅಂಕಿಅಂಶಗಳ ಪ್ರಕಾರ ನ್ಯುಮೋನಿಯಾದಿಂದ ಮಕ್ಕಳ ಸಾವಿನ ಸಂಖ್ಯೆ ಶೇ. 15ಕ್ಕೆ (8,08,694) ಏರಿಕೆ ಕಂಡಿದೆ. ಈ ಅಂಶಗಳು ಸಮಸ್ಯೆಯ ಭೀಕರತೆಗೆ ಹಿಡಿದ ಕನ್ನಡಿ. ಈ ಕುರಿತು ಜಾನ್ಸ್‌ ಹೋಪ್‌ಕಿನ್ಸ್‌ ವಿಶ್ವ ವಿದ್ಯಾನಿಲಯ ನಡೆಸಿದ ಸಂಸೋಧನೆ ಗಮನಾರ್ಹವಾದುದು. ಅದರ ಪ್ರಕಾರ, ನ್ಯುಮೋನಿಯಾ ಕಾಡುವುದು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಹೆಚ್ಚು. 2030ರ ಹೊತ್ತಿಗೆ ಒಂದು ಅಂದಾಜಿನ ಪ್ರಕಾರ ನ್ಯುಮೋನಿಯಾದಿಂದ ಸಾಯುವ ಮಕ್ಕಳ ಸಂಖ್ಯೆ 1.1 ಕೋಟಿಗೆ ಏರಿಕೆ ಕಾಣಲಿದೆ. ಇದು ಎಚ್ಚರಿಕೆಯ ಗಂಟೆಯೇ ಸರಿ.

ಎಲ್ಲಿ ಹೆಚ್ಚು?
ಭಾರತ, ನೈಜೇರಿಯಾ, ಚೀನ, ಪಾಕಿಸ್ಥಾನ, ಇಥಿಯೋಪಿಯ ಮೊದಲಾದ ದೇಶಗಳು ಈ ಸಮಸ್ಯೆಯನ್ನು ಅತೀ ಹೆಚ್ಚು ಎದುರಿಸುತ್ತಿವೆ.

Advertisement

2019ರ ಘೋಷ ವಾಕ್ಯ
ಹೆಲ್ತಿ ಲಂಗ್ಸ್‌ ಫಾರ್‌ ಆಲ್‌ (ಎಲ್ಲರಿಗೂ ಆರೋಗ್ಯಪೂರ್ಣ ಶ್ವಾಸಕೋಶ) – ಜಾಗತಿಕವಾಗಿ ಶ್ವಾಸಕೋಶದ ಆರೋಗ್ಯ ವೃದ್ಧಿಸುವ ದೃಷ್ಟಿಯಿಂದ ಈ ಬಾರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.

ಬೆಚ್ಚಿ ಬೀಳಿಸುವ ಸಂಖ್ಯೆ
ಜಾಗತಿಕವಾಗಿ ವಯಸ್ಕರಿಗಿಂತ
5 ವರ್ಷದ ಒಳಗಿನ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಬಹುದು. ವಿಶ್ವಾದ್ಯಂತ ದಿನಕ್ಕೆ ಸುಮಾರು 2,000 ಮಕ್ಕಳ ಸಾವು ಇದರಿಂದ ಸಂಭವಿಸುತ್ತದೆ. ಇನ್ನು ಲಕ್ಷ ಮಕ್ಕಳಲ್ಲಿ 1,400 ಮಕ್ಕಳು ಈ ಸಮಸ್ಯೆಗೆ ಒಳಗಾಗುತ್ತಾರೆ ಅಥವಾ ಪ್ರತಿ 1,000ದಲ್ಲಿ 71 ಮಕ್ಕಳಲ್ಲಿ ಈ ರೋಗ ಲಕ್ಷಣ ಕಾಣಿಸಿಕೊಳ್ಳುತ್ತಿದೆ ಎನ್ನುತ್ತದೆ ಅಧ್ಯಯನ.

ವಿವಿಧೆಡೆಗಳಲ್ಲಿನ ರೋಗದ ಚಿತ್ರಣ
·  ದಕ್ಷಿಣ ಏಷ್ಯಾ (1ಲಕ್ಷ ಪೈಕಿ 2,500 ಮಕ್ಕಳಿಗೆ )
·  ಪಶ್ಚಿಮ ಮತ್ತು ಮಧ್ಯ ಆಫ್ರಿಕಾ (1 ಲಕ್ಷ ಪೈಕಿ 1,620 ಮಕ್ಕಳಿಗೆ)

ಪತ್ತೆ ಹೇಗೆ?
·  ಎದೆಯ ಎಕ್ಸ್‌ರೇ ತೆಗೆಯುವುದರಿಂದ
·  ರಕ್ತ, ಕಫ‌ ಪರೀಕ್ಷೆಯಿಂದ

ಸಾಮಾನ್ಯ ಲಕ್ಷಣಗಳು
·  ಚಳಿಯಿಂದ ಕೂಡಿದ ಜ್ವರ
·  ವಿಪರೀತ ಕೆಮ್ಮು, ಕಫ‌
·  ಶೀಘ್ರ ಸುಸ್ತಾಗುವುದು
·  ಸ್ವಲ್ಪ ನಡೆದರೆ ಉಸಿರಾಡಲು ಕಷ್ಟವಾಗುವುದು
·  ಮಾನಸಿಕ ಗೊಂದಲ
·  ತೀವ್ರ ಬೆವರುವಿಕೆ, ಕಳೆಗುಂದಿದ ಚರ್ಮ
·  ತಲೆನೋವು, ಹಸಿವಿಲ್ಲದಿರುವಿಕೆ
·  ಮಕ್ಕಳು, ವೃದ್ಧರು, ಮಧುಮೇಹಿಗಳು ಮತ್ತು ರೋಗ ನಿರೋಧಕ ಕಡಿಮೆ ಇರುವವರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಅಧಿಕ

ನ್ಯುಮೋನಿಯಾ ದಿನಾಚರಣೆಯ ಉದ್ದೇಶ
· ವಿಶ್ವಾದ್ಯಂತ 5 ವರ್ಷದೊಳಗಿನ ಮಕ್ಕಳ ಸಾವಿಗೆ ಅತೀ ಹೆಚ್ಚು ಕಾರಣವಾಗುವ ನ್ಯುಮೋನಿಯಾ ವಿರುದ್ಧ ಜಾಗೃತಿ ಮೂಡಿಸುವುದು.
· ನ್ಯುಮೇನಿಯಾ ತಡೆಗಟ್ಟಲು, ಚಿಕಿತ್ಸಾ ಪದ್ಧತಿಗೆ ಉತ್ತೇಜನ ನೀಡುವುದು.
· ನ್ಯುಮೇನಿಯಾ ಎದುರಿಸುವ ಕ್ರಮ ರಚಿಸುವುದು.

ದಿನಾಚರಣೆ ಆರಂಭ ಯಾವಾಗ?
2009ರ ನವೆಂಬರ್‌ 2ರಂದು ಮೊದಲ ಬಾರಿ ನ್ಯುಮೋನಿಯಾ ದಿನ ಆಚರಿಸಲಾಯಿತು. 2010ರ ಬಳಿಕ ನವೆಂಬರ್‌ 12ರಂದು ಈ ದಿನ ಆಚರಿಸಲಾಗುತ್ತದೆ.

ಹೀಗೆ ಮಾಡಿ
·ಕೈಯನ್ನು ಶುಚಿಗೊಳಿಸಿ,ಅದರಲ್ಲೂ ಆಹಾರ ಸೇವಿಸುವ ಮುನ್ನ ಕಡ್ಡಾಯವಾಗಿ ಕೈ ತೊಳೆಯಿರಿ.
·  ಧಾರಾಳ ಹಸಿ, ಸೊಪ್ಪು ತರಕಾರಿ, ಹಣ್ಣು ಸೇವಿಸಿ.
·  ನಿಯಮಿತವಾಗಿ ವ್ಯಾಯಾಮ ಮಾಡಿ.
·  ಧೂಮಪಾನ ತ್ಯಜಿಸಿ.
·  ಸಾಕಷ್ಟು ನಿದ್ದೆ ಮಾಡಿ.
·  ರೋಗಿಗಳಿಂದ ಸಾಧ್ಯವಾದಷ್ಟು ದೂರವಿರಿ.

ಕಾರಣ ಏನು?
ಮುಖ್ಯವಾಗಿ ಮಾಲಿನ್ಯದಿಂದಾಗಿ ನ್ಯಮೋನಿಯಾ ಕಾಣಿಸಿಕೊಳ್ಳುತ್ತದೆ. ಆದರಲ್ಲೂ ಅಶುದ್ಧ ನೀರು, ಕಲುಷಿತ ಆಹಾರ ಸೇವನೆ, ಬೀಡಿ, ಸಿಗರೇಟ್‌, ಕಾರ್ಖಾನೆ ಹಾಗೂ ತ್ಯಾಜ್ಯ ಸುಡುವ ಹೊಗೆ ಮತ್ತು ಕಟ್ಟಿಗೆ ಒಲೆಯಿಂದ ಉತ್ಪತ್ತಿಯಾಗುವ ಹೊಗೆಯಿಂದಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ.

ಚಿಕಿತ್ಸೆ ಹೇಗೆ?
ಸಾಮಾನ್ಯ ನ್ಯುಮೋನಿಯಾ ಒಂದು ವಾರದ ಅವಧಿಯಲ್ಲಿ ಗುಣವಾಗುತ್ತದೆ. ಆದರೆ, ತೀವ್ರವಾಗಿದ್ದರೆ ಚಿಕಿತ್ಸೆಯ ಅಗತ್ಯವಿದೆ. ನ್ಯುಮೋನಿಯಾ ಬ್ಯಾಕ್ಟೀರಿಯಾದಿಂದ ಬಂದಿದ್ದರೆ ವೈದ್ಯರು ಆ್ಯಂಟಿಬಯಾಟಿಕ್‌ ಔಷಧಗಳನ್ನು ನೀಡುತ್ತಾರೆ. ಆ ಕೋರ್ಸ್‌ ಪೂರ್ಣಗೊಳಿಸಬೇಕಾಗುತ್ತದೆ. ಕೆಮ್ಮುವುದು ಶ್ವಾಸಕೋಶದಲ್ಲಿ ತುಂಬಿರುವ ಕಫ‌ವನ್ನು ಹೊರಹಾಕಿ ನಿರಾಳವಾಗುವ ಶಾರೀರಿಕ ಪ್ರಕ್ರಿಯೆ. ಆದರೆ, ನಿರಂತರ ಕೆಮ್ಮಿನಿಂದಾಗಿ ನಿದ್ದೆ ಬರುತ್ತಿಲ್ಲ, ವಿಶ್ರಾಂತಿ ಸಿಗುತ್ತಿಲ್ಲ ಎನ್ನುವ ಸ್ಥಿತಿಯಿದ್ದರೆ ವೈದ್ಯರನ್ನು ಕಾಣುವುದು ಸೂಕ್ತ. ವೈದ್ಯರ ಸಲಹೆಯಿಲ್ಲದೆ ಕೆಮ್ಮು ಅಥವಾ ಕಫ‌ಕ್ಕೆ ಔಷಧ ಸೇವಿಸುವುದು ಸೂಕ್ತವಲ್ಲ. ವೈದ್ಯರ ಸಲಹೆಯಂತೆ ಔಷಧ ಸೇವಿಸುತ್ತ, ಆಹಾರ ಕ್ರಮ ಅನುಸರಿಸುತ್ತ ವಿಶ್ರಾಂತಿ ಪಡೆಯಿರಿ.

ಆಹಾರ, ಉಪಚಾರ
ಹೇರಳವಾಗಿ ದ್ರವಾಹಾರಗಳನ್ನು ಸೇವಿಸಬೇಕು. ಬಿಸಿ ನೀರು, ಬಿಸಿಯಾದ ಪಾನೀಯಗಳನ್ನು ಸೇವಿಸಿದರೆ ಒಳ್ಳೆಯದು. ಹಬೆಯನ್ನು ಉಸಿರಾಡುವುದೂ ಉತ್ತಮ ಪರಿಣಾಮ ನೀಡುತ್ತದೆ. ಹೊಗೆಯಿಂದ ದೂರವಿರಿ. ಧೂಮಪಾನ ತ್ಯಜಿಸಿ.

ನಿರ್ಲಕ್ಷ್ಯ ಸಲ್ಲ
ನ್ಯುಮೋನಿಯಾ ರೋಗ ಲಕ್ಷಣ ಕಂಡು ಬಂದ ಕೂಡಲೇ ಚಿಕಿತ್ಸೆ ಆರಂಭಿಸಬೇಕು. ಕೆಮ್ಮು, ಕಫ‌ ಮುಂತಾದವುಗಳು ಕಂಡು ಬಂದರೆ ನಿರ್ಲಕ್ಷಿಸದೆ ಕೂಡಲೇ ಪರೀಕ್ಷಿಸಬೇಕು. ಸೂಕ್ತ ಚಿಕಿತ್ಸೆಯಿಂದ ನ್ಯುಮೋನಿಯಾದಿಂದ ಪಾರಾಗಬಹುದು.
– ಡಾ| ಶಿಲ್ಪಾ ಬೋರ್ಕರ್‌,
ವೈದ್ಯೆ, ಪುತ್ತೂರು

-ರಮೇಶ್‌ ಬಳ್ಳಮೂಲೆ,ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next