Advertisement

ಇಂದು ವಿಶ್ವ  ಫಾರ್ಮಸಿಸ್ಟ್‌  ದಿನ: ವಿಶ್ವಾಸಾರ್ಹತೆ, ನಂಬಿಕೆಯ ಪ್ರತೀಕ ಫಾರ್ಮಸಿಸ್ಟ್‌

10:38 PM Sep 24, 2021 | Team Udayavani |

ಫಾರ್ಮಸಿಸ್ಟ್‌ ಎಂದಾಕ್ಷಣ ನಾವು ಔಷಧ ಮಾರಾಟಗಾರರು ಎಂಬಲ್ಲಿಗೆ ಸೀಮಿತರಾಗಿಬಿಡುತ್ತೇವೆ. ಫಾರ್ಮಸಿ ಶೈಕ್ಷಣಿಕ ಅರ್ಹತೆಯನ್ನು ಪಡೆದು ಫಾರ್ಮಸಿಸ್ಟ್‌ ಎಂದು ನಾಮಾಂಕಿತಗೊಳ್ಳುವ ಇವರು ಔಷಧ ಸಂಶೋಧನೆ, ಉತ್ಪಾದನೆ, ಸಂಗ್ರಹಣೆ, ಔಷಧ ವಿತರಣೆ, ಮಾರಾಟ ಮತ್ತು ಬೋಧನೆ ಹೀಗೆ ವಿವಿಧ ಚಟುವಟಿಕೆ, ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇವರು ಜನರಿಗೆ ನೀಡುತ್ತಾ ಬಂದಿರುವ ವಿಶ್ವಾಸಾರ್ಹ  ಸೇವೆಯನ್ನು ಗೌರವಿಸುವ ಉದ್ದೇಶದಿಂದ ಪ್ರತೀ ವರ್ಷ ಸೆ.25ರಂದು ವಿಶ್ವ ಫಾರ್ಮಸಿಸ್ಟ್‌ ದಿನವನ್ನು ಆಚರಿಸಲಾಗುತ್ತದೆ. ಇವರ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಜತೆಯಲ್ಲಿ ಈ ವೃತ್ತಿಯ ಮಹತ್ವದ ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುತ್ತದೆ. ತಮ್ಮ ವಿಶಾಲ ಜ್ಞಾನ ಮತ್ತು ಅನನ್ಯ ಪರಿಣತಿಯಿಂದ ಮಾನವನ ಆರೋಗ್ಯ ರಕ್ಷಣೆಯಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸುತ್ತಿರುವ ಫಾರ್ಮಸಿಸ್ಟ್‌ಗಳಿಗೆ ಈ ದಿನ ಅರ್ಪಣೆಯಾಗಿದೆ.

Advertisement

ವರ್ಷದ ಧ್ಯೇಯ:

ಪ್ರತೀ ವರ್ಷ ಒಂದು ಧ್ಯೇಯವನ್ನಿರಿಸಿಕೊಂಡು ಈ ದಿನ ವನ್ನು ಆಚರಿಸುತ್ತಾ ಬರಲಾಗಿದೆ. “ಫಾರ್ಮಸಿ:  ನಿಮ್ಮ ಆರೋಗ್ಯಕ್ಕಾಗಿ ಯಾವಾಗಲೂ ವಿಶ್ವಾಸಾರ್ಹ’- ಇದು ಈ ವರ್ಷದ ಧ್ಯೇಯವಾಗಿದೆ. ಮಾನವ ಸಂಬಂಧಗಳಲ್ಲಿ  “ವಿಶ್ವಾಸ’ ಎನ್ನುವುದು ಬಹುಮುಖ್ಯ. ಆರೋಗ್ಯ ರಕ್ಷಣೆಯಲ್ಲಿ ವಿಶ್ವಾಸ, ನಂಬಿಕೆ ಅತ್ಯಗತ್ಯ. ಯಾವುದೇ ರೋಗಿ ಚಿಕಿತ್ಸೆ, ಔಷಧದ ಬಗೆಗೆ ವಿಶ್ವಾಸಾರ್ಹತೆಯನ್ನು ಬೆಳೆಸಿ

ಕೊಂಡಲ್ಲಿ  ಆತ ಬಹು ಬೇಗ ಗುಣಮುಖನಾಗಲು ಸಾಧ್ಯ.ವಿಶ್ವಾಸ ಎನ್ನುವುದು ಕೇಚಲ ಚಿಕಿತ್ಸೆ ನೀಡುವ ವೈದ್ಯರಿಗೆ ಮಾತ್ರ ಸೀಮಿತವಾಗದೇ ರೋಗಿಯ ಚಿಕಿತ್ಸೆ ಪ್ರಕ್ರಿಯೆ ಯಲ್ಲಿ  ಭಾಗಿಧಾರರಾದ ಪ್ರತಿ ಯೊಬ್ಬರ ಮೇಲೆ ಆತನಿಗೆ ವಿಶ್ವಾಸ ಇರಬೇಕು. ನಾವು ವೃತ್ತಿಪರರಲ್ಲಿ ಹೆಚ್ಚಿನ ನಂಬಿಕೆ ಇಟ್ಟಾಗ  ಆರೋಗ್ಯ ಸುಧಾರಣೆ ಸಾಧ್ಯ. ಇದೇ ಈ ವರ್ಷದ ವಿಶ್ವ ಫಾರ್ಮಸಿಸ್ಟ್‌ ದಿನದ ಧ್ಯೇಯದ ಮೂಲ ಉದ್ದೇಶವಾಗಿದೆ.

ದಿನವೇ ಯಾಕೆ?  :

Advertisement

2009ರಲ್ಲಿ ಇಸ್ತಾಂಬುಲ್‌ನಲ್ಲಿ ನಡೆದ ಇಂಟರ್‌ನ್ಯಾಶನಲ್‌ ಫಾರ್ಮಸ್ಯುಟಿಕಲ್‌ ಫೆಡರೇಶನ್‌ ಕೌನ್ಸಿಲ್‌ನಲ್ಲಿ ಟರ್ಕಿಶ್‌ ಸದಸ್ಯರ ಸಲಹೆಯಂತೆ ಪ್ರತೀ ವರ್ಷ ಸೆ. 25ರಂದು ವಿಶ್ವ ಫಾರ್ಮಸಿ ದಿನವನ್ನು ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು. ಅದರಂತೆ ಕಳೆದ 12 ವರ್ಷ ಗಳಿಂದ ಈ ದಿನವನ್ನು ಜಗತ್ತಿನಾದ್ಯಂತ ಆಚರಿಸುತ್ತಾ ಬರಲಾಗಿದೆ. 1912ರ ಸೆ. 25ರಂದು ಅಂತಾರಾಷ್ಟ್ರೀಯ ಫಾರ್ಮಸ್ಯುಟಿಕಲ್‌ ಫೆಡರೇಶನ್‌ ಸ್ಥಾಪನೆಯಾಗಿತ್ತು. ಇದೊಂದು ಜಾಗತಿಕ ಸಂಸ್ಥೆಯಾಗಿದ್ದು ಔಷಧಾಲಯ, ಔಷಧಕ್ಕೆ ಸಂಬಂಧಪಟ್ಟ ಶಿಕ್ಷಣ, ಔಷಧ ವಿಜ್ಞಾನ ಹೀಗೆ ಅನೇಕ ವಿಷಯಗಳನ್ನು ಪ್ರತಿನಿಧಿಸುತ್ತದೆ. 144 ರಾಷ್ಟ್ರೀಯ ಸಂಸ್ಥೆಗಳ ಮೂಲಕ ಪ್ರಪಂಚದಾದ್ಯಂತ ಲಕ್ಷಾಂತರ ಫಾರ್ಮಸಿಗಳನ್ನು ಪ್ರತಿನಿಧಿಸುತ್ತಿದೆ. ಇದು ಸರಕಾರೇತರ ಸಂಸ್ಥೆಯಾಗಿದ್ದು, ನೆದರ್‌ಲ್ಯಾಂಡ್‌ನ‌ಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿದೆ.

ನೈಜ ಕೊರೊನಾ ವಾರಿಯರ್  :

ಕಳೆದ ಎರಡು ವರ್ಷಗಳಿಂದ ವಿಶ್ವವನ್ನು ಎಡೆಬಿಡದೇ ಕಾಡಿದ ಕೊರೊನಾ ಸಾಂಕ್ರಾಮಿಕದ ವೇಳೆ ಫಾರ್ಮಸಿಸ್ಟ್‌ಗಳು ನೀಡಿದ ಸೇವೆಗೆ ನೈಜ ಗೌರವ ಸಂದಿಲ್ಲ. ಸಾಂಕ್ರಾಮಿಕ ಜನಜೀವನವನ್ನೇ ಸ್ಥಗಿತಗೊಳಿಸಿದರೂ ಫಾರ್ಮಾಸಿಸ್ಟ್‌ಗಳು ತಮ್ಮ ಕಾಯಕವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೊರೊನಾ ಇನ್ನಿಲ್ಲದಂತೆ ಜನರನ್ನು ಕಾಡಿದಾಗಲೂ ಫಾರ್ಮಸಿಸ್ಟ್‌ಗಳು ಜನತೆಗೆ ನೀಡಿದ ಸೇವೆ ಅತ್ಯಮೂಲ್ಯವಾದುದು. ತಮ್ಮ ಪ್ರಾಣವನ್ನೂ ಲೆಕ್ಕಿಸದೇ ನಿಜಾರ್ಥದಲ್ಲಿ “ಜೀವರಕ್ಷಕ’ರಾಗಿ ದುಡಿದ ಇವರಿಗೆ ಕೃತಜ್ಞತೆ ಸಲ್ಲಿಸಲೇಬೇಕು.

Advertisement

Udayavani is now on Telegram. Click here to join our channel and stay updated with the latest news.

Next