ಬೀದರ: ಧರ್ಮದಿಂದಲೇ ವಿಶ್ವ ಶಾಂತಿ ಸಾಧ್ಯವಿದೆ ಎಂದು ಶಿವಣಿ-ಹಲಬರ್ಗಾ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ಹೇಳಿದರು.
ಭಾಲ್ಕಿ ತಾಲೂಕಿನ ಶಿವಣಿ ಗ್ರಾಮದ ಹಾವಗಿಲಿಂಗೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಹಾವಗಿ ಸ್ವಾಮಿ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಧರ್ಮದ ಮಾರ್ಗದಲ್ಲಿ ನಡೆದರೆ ಸರ್ವ ಸಮಸ್ಯೆಗಳು ತಾನಾಗಿಯೇ ಬಗೆಹರಿಯುತ್ತವೆ ಎಂದರು.
ಲೋಕ ಕಲ್ಯಾಣಕ್ಕಾಗಿ ಆಂಧ್ರಪ್ರದೇಶದ ಕೋಲನ್‌ಪಾಕ್‌ನ ಸೋಮೇಶ್ವರ ಲಿಂಗದಲ್ಲಿ ಉದ್ಭವಿಸಿದ್ದ ರೇಣುಕಾಚಾರ್ಯರು ಜನರಲ್ಲಿನ ಅಜ್ಞಾನ, ಅಂಧಕಾರ ತೊಡೆದು ಹಾಕಿದ್ದರು. ಇಷ್ಟಲಿಂಗ ದೀಕ್ಷೆ ಕೊಟ್ಟು ಧರ್ಮದ ಮಾರ್ಗ ತೋರಿದ್ದರು. ಪಂಚ ಪೀಠಗಳು ಅಂದಿನಿಂದ ಈವರೆಗೂ ನಿರಂತರ ಧರ್ಮ ಬೋಧನೆ ಕಾರ್ಯದಲ್ಲಿ ತೊಡಗಿಸಿಕೊಂಡಿವೆ ಎಂದರು.
ಹುಡಗಿ ಮಠದ ವಿರೂಪಾಕ್ಷ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದಿದ್ದರು. ಇಷ್ಟಲಿಂಗ ಪೂಜೆ, ವಿಭೂತಿ, ರುದ್ರಾಕ್ಷಿಯ ಮಹಿಮೆ ಸಾರಿದ್ದರು ಎಂದರು.
ಇದಕ್ಕೂ ಮುನ್ನ ಗ್ರಾಮದಲ್ಲಿ ಅಲಂಕೃತ ರಥದಲ್ಲಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ, ಹಾವಗಿ ಸ್ವಾಮಿ ಪಲ್ಲಕ್ಕಿ, ವಿರೂಪಾಕ್ಷ ಶಿವಾಚಾರ್ಯ ಹಾಗೂ ಹಾವಗಿಲಿಂಗೇಶ್ವರ ಶಿವಾಚಾರ್ಯರ ಭವ್ಯ ಮೆರವಣಿಗೆ ನಡೆಯಿತು.
ಕಳಶ ಹೊತ್ತ ಮಹಿಳೆಯರು, ಪುರವಂತರ ಕುಣಿತ, ಕೋಲಾಟ, ಭಜನೆ ಮೊದಲಾದವು ಮೆರವಣಿಗೆ ಮೆರಗು ಹೆಚ್ಚಿಸಿದವು. ಗ್ರಾಪಂ ಅಧ್ಯಕ್ಷ ಅರವಿಂದ ನೀಲ ಕಾರ್ಯಕ್ರಮ ಉದ್ಘಾಟಿಸಿದರು.
ಈ ವೇಳೆ ಪ್ರಮುಖರಾದ ಮತಿವಂತ ಪಾಟೀಲ, ಸಂಜು ಪಾಟೀಲ, ರೇವಣಪ್ಪ ಮೂಲಗೆ, ರಮೇಶ ಪ್ರಭಾ, ಧನರಾಜ ಪಾಟೀಲ, ವಿಜಯಕುಮಾರ ಪಾಂಚಾಳ, ರಾಜಕುಮಾರ ಇದ್ದರು.