Advertisement

ಮೇ 31 ವಿಶ್ವ ತಂಬಾಕು ವರ್ಜನ ದಿನ ; ತಂಬಾಕು ತ್ಯಜಿಸಿ; ತಂಬಾಕು ಬೇಡವೆನ್ನಿ

02:05 PM May 28, 2023 | Team Udayavani |

ತಂಬಾಕು ಮತ್ತು ಅದನ್ನು ವಿವಿಧ ರೂಪಗಳಲ್ಲಿ ಉಪಯೋಗಿಸುವುದು ಬಾಯಿಯ ಆರೋಗ್ಯಕ್ಕೆ ಅನೇಕ ರೀತಿಗಳಲ್ಲಿ ಗಮನಾರ್ಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ತಂಬಾಕನ್ನು ಹೊಗೆ ಮತ್ತು ಹೊಗೆಯೇತರ ರೂಪಗಳಲ್ಲಿ ಬಳಸುವುದು ಭಾರತದಲ್ಲಿ ಪ್ರಚಲಿತದಲ್ಲಿದ್ದು, ಇದು ಅನೇಕ ರೀತಿಯ ಕಾಯಿಲೆಗಳಿಗೆ ಅಪಾಯಾಂಶವಾಗಿ ಪರಿಗಣಿಸಲ್ಪಡುತ್ತಿದೆ. ಧೂಮಪಾನವಾಗಿ ತಂಬಾಕಿನ ಬಳಕೆಯಿಂದ ಹಲ್ಲು ಹುಳುಕಾಗುವುದರಿಂದ ತೊಡಗಿ ಲಕ್ವಾ, ಕ್ಯಾನ್ಸರ್‌ವರೆಗೆ ಅನೇಕ ಆರೋಗ್ಯ ಅಪಾಯಗಳನ್ನು ಉಂಟು ಮಾಡುತ್ತಿದ್ದು, ವ್ಯಕ್ತಿಯ ಒಟ್ಟಾರೆ ಕ್ಷೇಮ- ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತದೆ.
2021ರಲ್ಲಿ ಭಾರತದಲ್ಲಿ ನಡೆಸಲಾದ ಒಂದು ದೊಡ್ಡ ಪ್ರಮಾಣದ ಸಮೀಕ್ಷೆಯಲ್ಲಿ ಕಂಡುಬಂದಿರುವಂತೆ, 30 ಮತ್ತು 44 ವರ್ಷ ವಯೋಮಾನದ ಪ್ರೌಢರಲ್ಲಿ ಶೇ. 17ರಷ್ಟು ಮಂದಿ ಧೂಮಪಾನಿಗಳಾಗಿದ್ದಾರೆ. ಇಷ್ಟಲ್ಲದೆ, ಯುವ ವಯಸ್ಕರಲ್ಲಿ ಶೇ. 16ರಷ್ಟು ಮಂದಿ ನಿಯಮಿತವಾಗಿ ಧೂಮಪಾನ ಮಾಡುತ್ತಿದ್ದು, ತಂಬಾಕು ಹಲವು ರೂಪಗಳಲ್ಲಿ ಲಭ್ಯವಿರುವುದರಿಂದ ಈ ಸನ್ನಿವೇಶ ಇನ್ನಷ್ಟು ಸಂಕೀರ್ಣವಾಗಿದೆ ಎನ್ನಬಹುದು. ಸಿಗರೇಟು ಸೇದುವುದು ದೂಮಪಾನದ ಸಾಂಪ್ರದಾಯಿಕ ರೂಪವಾದರೂ ತಂಬಾಕು ಬಳಕೆಯ ಇತರ ವಿಧಗಳಲ್ಲಿ ಸಾಂಪ್ರದಾಯಿಕ ಧೂಮರಹಿತ ಉಪಯೋಗ ಮಾರ್ಗಗಳು, ಒತ್ತಲ್ಪಟ್ಟ ಕರಗಬಲ್ಲ ತಂಬಾಕು, ಸಿಗಾರ್‌, ತಂಬಾಕು ಪೈಪ್‌ ಮತ್ತು ವಾಟರ್‌ ಪೈಪ್‌ಗ್ಳು (ಉದಾಹರಣೆಗೆ, ಹುಕ್ಕಾ) ಮತ್ತು ಎಲೆಕ್ಟ್ರಾನಿಕ್‌ ಸಿಗರೇಟ್‌ ಕೂಡ ಸೇರಿವೆ.

Advertisement

ಹೊಗೆಯ ಸ್ವರೂಪದಲ್ಲಿ ಮತ್ತು ಹೊಗೆ ರಹಿತ ಸ್ವರೂಪದಲ್ಲಿ – ಹೀಗೆ ಎರಡು ರೀತಿಗಳಲ್ಲಿ ತಂಬಾಕಿನ ಬಳಕೆ ಭಾರತದಲ್ಲಿ ಪ್ರಚಲಿತದಲ್ಲಿದೆ. ಸಿಗರೇಟು ಸೇದುವುದರಿಂದ ವಸಡು ಹಿಂದಕ್ಕೆ ಸರಿಯುವುದು, ಹಲ್ಲು ಕಿತ್ತ ಬಳಿಕ ಗಾಯ ಗುಣವಾಗಲು ವಿಳಂಬವಾಗುವುದು, ಬಾಯಿಯ ಕ್ಯಾನ್ಸರ್‌, ಬಾಯಿಯ ಮ್ಯುಕೋಸಲ್‌ ಪದರಗ
ಳಲ್ಲಿ ಬದಲಾವಣೆ (ಉದಾಹರಣೆಗೆ, ಬಿಳಿ ಕಲೆಗಳು, ಕೆಂಪು ಕಲೆಗಳು ಅಥವಾ ಕಪ್ಪು ಬಣ್ಣಕ್ಕೆ ತಿರುಗುವುದು), ಹಲ್ಲು ಅವಧಿಪೂರ್ವ ನಷ್ಟವಾಗುವುದು ಮತ್ತು ಹಲ್ಲುಗಳ ಮೇಲೆ ಕಲೆ ಉಂಟಾಗುವುದರ ಸಹಿತ ಬಾಯಿಗೆ ಸಂಬಂಧಿಸಿದ ಅನೇಕ ಅಪಾಯಕಾರಿ ಪರಿಣಾಮಗಳು ಉಂಟಾಗುತ್ತವೆ. ತಂಬಾಕಿನ ಹೊಗೆ ರಹಿತ ಬಳಕೆಯ ವಿಧಗಳಾದ ಪಾನ್‌ ಮಸಾಲಾ ಮತ್ತು ತಂಬಾಕು ಸಹಿತ ಕವಳ ಸೇವನೆಯು ಬಾಯಿಯ ಕ್ಯಾನ್ಸರ್‌ ಮತ್ತು ಮ್ಯುಕೋಸಲ್‌ ಬದಲಾವಣೆಗಳ ಅಪಾಯ ವೃದ್ಧಿಗೆ ಕಾರಣವಾಗಬಹುದು. ಹೊಗೆರಹಿತವಾಗಿ ತಂಬಾಕಿನ ಬಳಕೆಯಿಂದ ವಸಡಿನ ಸೋಂಕುಗಳು, ಹಲ್ಲು ಬಣ್ಣ ಬದಲಾ ಗುವುದು, ಹಲಿಟೋಸಿಸ್‌, ಹಲ್ಲುಗಳ ಎನಾ ಮಲ್‌ ನಷ್ಟ, ವಸಡುಗಳು ಹಿಂದಕ್ಕೆ ಜರಿಯು ವುದು, ಎಲುಬು ಹಾನಿ, ಪರಿದಂತೀಯ ಕಾಯಿಲೆಗಳು, ಪಾನ್‌ ಮಸಾಲಾ ಉತ್ಪನ್ನಗಳಲ್ಲಿ ಸೇರಿಸಿರುವ ಸಕ್ಕರೆಯ ಅಂಶದಿಂದ ಹಲ್ಲುಗಳ ಮೇಲ್ಪದರದಿಂದ ತೊಡಗಿ ಬೇರಿನವರೆಗೆ ಹಾನಿ ಮತ್ತು ಹಲ್ಲು ಕಿತ್ತುಹೋಗುವಂತಹ ದುಷ್ಪರಿಣಾಮಗಳು ಉಂಟಾಗಬಹುದು.

ಭಾರತದಲ್ಲಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ದ್ವಿತೀಯ ಅತೀ ಸಾಮಾನ್ಯವಾಗಿರುವ ಮತ್ತು ಕ್ಯಾನ್ಸರ್‌ ಸಂಬಂಧಿ ಮರಣ ಪ್ರಕರಣಗಳಲ್ಲಿ ಆರನೇ ಸ್ಥಾನದಲ್ಲಿರುವ ಬಾಯಿಯ ಕ್ಯಾನ್ಸರ್‌ಗೆ ತಂಬಾಕು ಸೇವನೆ ಕಾರಣ ಎನ್ನಲಾಗುತ್ತದೆ. ಭಾರತದಲ್ಲಿ ತಂಬಾಕು ಬಳಕೆಯ ಚಟ ಬೆಳೆಸಿಕೊಳ್ಳುವ 15ರಿಂದ 24ರ ವಯೋಮಾನದವರಲ್ಲಿಯೇ ಬಾಯಿಯ ಕ್ಯಾನ್ಸರ್‌ ಪ್ರಕರಣಗಳು ಕೂಡ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತವೆ. ಸಿಗರೇಟು ಸೇದಿದಾಗ ರಕ್ತ ಪ್ರವಾಹದಲ್ಲಿ ನಿಕೋಟಿನ್‌ ಕ್ಷಿಪ್ರವಾಗಿ ಉಚ್ಚ ಸ್ಥಿತಿಯನ್ನು ತಲುಪುತ್ತದೆ ಮತ್ತು ಮಿದುಳನ್ನು ಪ್ರವೇಶಿಸುತ್ತದೆ; ಸಿಗರೇಟಿನ ಹೊಗೆ ನೇರವಾಗಿ ಶ್ವಾಸಕೋಶಗಳನ್ನು ಪ್ರವೇಶಿಸದೆ ಇದ್ದಲ್ಲಿ ನಿಕೋಟಿನ್‌ ಮ್ಯೂಕಸ್‌ ಮೆಂಬ್ರೇನ್‌ಗಳ ಮೂಲಕ ಹೀರಿಕೆಯಾಗಿ ರಕ್ತದಲ್ಲಿ ಉಚ್ಚ ಸ್ಥಿತಿಗೇರುತ್ತದೆ ಹಾಗೂ ಮಿದುಳನ್ನು ಹೆಚ್ಚು ನಿಧಾನವಾಗಿ ಪ್ರವೇಶಿಸುತ್ತದೆ.
ತಂಬಾಕು ಬಳಕೆ ವರ್ಜಿಸುವುದು ಈ ಹೊತ್ತಿನ ಅಗತ್ಯವಾಗಿದೆ. ಪ್ರತೀ ವರ್ಷ ಮೇ 31ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಜಗತ್ತಿನ ಎಲ್ಲೆಡೆಯ ಸಾರ್ವಜನಿಕ ಆರೋಗ್ಯ ಕಾಳಜಿದಾರರು ವಿಶ್ವ ತಂಬಾಕು ವರ್ಜನ ದಿನವನ್ನು ಆಚರಿಸಲು ಕೈಜೋಡಿಸುತ್ತಾರೆ. “ನಮಗೆ ಆಹಾರ ಬೇಕು, ತಂಬಾಕು ಅಲ್ಲ’ ಎಂಬುದು ಈ ವರ್ಷದ ವಿಶ್ವ ತಂಬಾಕು ವರ್ಜನ ದಿನದ ಘೋಷ ವಾಕ್ಯವಾಗಿದೆ.

ಆದ್ದರಿಂದ ನಾವು ತಂಬಾಕಿನ ಬದಲಾಗಿ ಪೌಷ್ಟಿಕ ಆಹಾರ ಸೇವನೆಯತ್ತ ಹೆಚ್ಚು ಗಮನ ಹರಿಸಬೇಕು. ತಂಬಾಕು ಬಳಕೆಯಿಂದ ಬಾಯಿಯ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ಮೂಡಿಸಲು ನಮ್ಮ ಆರೋಗ್ಯ ಸೇವಾ ಪೂರೈಕೆದಾರರಿಗೆ ತರಬೇತಿ ನೀಡಲಾಗಿದೆ; ತಂಬಾಕು ಬಳಕೆಯನ್ನು ಗುರುತಿಸುವುದು, ಅದರ ತಡೆ ಮತ್ತು ವರ್ಜನೆಗಾಗಿ ದಂತ ವೈದ್ಯಕೀಯ ವೃತ್ತಿಪರರು ತರಬೇತಾಗಿದ್ದಾರೆ. ದಂತ ವೈದ್ಯಕೀಯ ವೃತ್ತಿಪರರ ಸಹಿತ ಯಾವುದೇ ಆರೋಗ್ಯ ಸೇವಾ ವೃತ್ತಿಪರರು ಧೂಮಪಾನಿ ರೋಗಿಗಳನ್ನು ಗುರುತಿಸುವುದು, ಧೂಮಪಾನವನ್ನು ವರ್ಜಿಸಲು ಅವರನ್ನು ಪ್ರೇರೇಪಿಸುವುದು ಮತ್ತು ಧೂಮಪಾನ ವರ್ಜನೆ ಚಿಕಿತ್ಸೆಯ ಬಗ್ಗೆ ಅವರಿಗೆ ಮಾಹಿತಿ- ತಿಳಿವಳಿಕೆ ಒದಗಿಸುವ ಮೂಲಕ ತಂಬಾಕು ಬಳಕೆಯನ್ನು ವರ್ಜಿಸಲು ಸಹಾಯ ಮಾಡಬಲ್ಲರು.

ನಿಕೋಟಿನ್‌ ಬಳಕೆಯ ಮೇಲೆ ಅವಲಂಬಿತರಾಗಿರುವ ರೋಗಿಗಳಿಗೆ ತಂಬಾಕು ಬಳಕೆಯನ್ನು ವರ್ಜಿಸಲು ಸಹಾಯ ಮಾಡುವ ಸಂದರ್ಭದಲ್ಲಿ ಆರೋಗ್ಯ ಸೇವಾ ಪೂರೈಕೆದಾರರು ಅನುಸರಿಸುವ ಐದು ಹಂತಗಳ ಕಾರ್ಯಶೈಲಿಯೊಂದಿದೆ, ಇದನ್ನು “5 ಎಗಳು’ ಎಂದು ಕರೆಯಲಾಗುತ್ತದೆ.

Advertisement

ಈ “ಐದು ಎಗಳು’ ಈ ಕೆಳಗಿನಂತಿವೆ:
1″ಆಸ್ಕ್’- ಪ್ರಶ್ನಿಸುವುದು: ಪ್ರತೀ ರೋಗಿಯ ಪ್ರತೀ ಭೇಟಿಯ ವೇಳೆ ಸಮಸ್ಯೆಯನ್ನು ಗುರುತಿಸುವುದು ಮತ್ತು ತಂಬಾಕು ಬಳಕೆಯ ಸ್ಥಿತಿಯನ್ನು ದಾಖಲೀಕರಿಸುವುದು.

2″ಅಡ್ವೆ„ಸ್‌’ – ಸಲಹೆ ನೀಡುವುದು: ಬಲವಾದ, ಸ್ಪಷ್ಟ ಮತ್ತು ವೈಯಕ್ತಿಕ ವಿಧಾನದಲ್ಲಿ ಪ್ರತೀ ತಂಬಾಕು ಬಳಕೆದಾರರಿಗೆ ಅದನ್ನು ವರ್ಜಿಸುವಂತೆ ಸಲಹೆ ನೀಡುವುದು.

3″ಅಸೆಸ್‌’ – ವಿಶ್ಲೇಷಿಸುವುದು: ಧೂಮಪಾನಿ ಈ ಬಾರಿ ದೂಮಪಾನವನ್ನು ತ್ಯಜಿಸುವ ಪ್ರಯತ್ನಕ್ಕೆ ಮುಂದಾಗಲು ತಯಾರಾಗಿದ್ದಾನೆಯೇ? ಹೌದಾದರೆ, “5 ಆರ್‌’ ಸಿದ್ಧಾಂತವನ್ನು ಬಳಸದೆ ಇದ್ದಲ್ಲಿ ಮುಂದಿನ ಹಂತಕ್ಕೆ ತೆರಳುವುದು.

4″ಅಸಿಸ್ಟ್‌’- ನೆರವಾಗುವುದು: ತಂಬಾಕು ಬಳಕೆಯನ್ನು ತ್ಯಜಿಸುವ ಪ್ರಯತ್ನ ನಡೆಸಲು ಇಚ್ಛೆ ಹೊಂದಿರುವ ರೋಗಿಗೆ ಆಪ್ತ ಸಮಾಲೋಚನೆ ಮತ್ತು ಔಷಧ ಚಿಕಿತ್ಸೆಯ ಮೂಲಕ ನೆರವಾಗುವುದು.

5″ಅರೇಂಜ್‌ – ವ್ಯವಸ್ಥೆಗೊಳಿಸುವುದು: ಪುನರ್‌ ಭೇಟಿ ಸಂಪರ್ಕವನ್ನು ಮುಖತಃ ಅಥವಾ ದೂರವಾಣಿಯ ಮೂಲಕ, ಆದ್ಯತೆಯ ಮೇರೆಗೆ ವರ್ಜನೆಯ ದಿನಾಂಕದಿಂದ ಒಂದು ವಾರದ ಒಳಗೆ ವ್ಯವಸ್ಥೆಗೊಳಿಸುವುದು.

ಪ್ರಸ್ತುತ ಸಂದರ್ಭದಲ್ಲಿ ಧೂಮಪಾನವನ್ನು ತ್ಯಜಿಸುವ ಇಚ್ಛೆ ಹೊಂದಿಲ್ಲದ ಧೂಮಪಾನಿಗಳನ್ನು ಧೂಮಪಾನ ವರ್ಜನೆಯತ್ತ ಪ್ರೇರೇಪಿಸುವ ಗುರಿಯನ್ನು “ರೆಲವೆನ್ಸ್‌, ರಿಸ್ಕ್, ರಿವಾರ್ಡ್ಸ್‌, ರೋಡ್‌ಬ್ಲಾಕ್ಸ್‌ ಮತ್ತು ರಿಪಿಟೀಶನ್‌’ ಈ “5 ಆರ್‌ಗಳು’ ಹೊಂದಿವೆ. “ರೆಲವೆನ್ಸ್‌’ – ಪ್ರಸ್ತುತತೆ: ಧೂಮಪಾನವನ್ನು ತ್ಯಜಿಸುವುದು ಯಾಕೆ ವೈಯಕ್ತಿಕವಾಗಿ ಪ್ರಸ್ತುತ ಎಂಬುದನ್ನು ರೋಗಿ ಅರ್ಥ ಮಾಡಿಕೊಳ್ಳುವುದನ್ನು ಪ್ರೋತ್ಸಾಹಿಸಬೇಕು ಮತ್ತು ಇದು ಎಷ್ಟು ಸಾಧ್ಯವೋ ಅಷ್ಟು ನಿರ್ದಿಷ್ಟವಾಗಿರಬೇಕು. ರೋಗಿಯ ಅನಾರೋಗ್ಯ ಸ್ಥಿತಿ/ ಅಪಾಯ, ಕುಟುಂಬ ಮತ್ತು ಸಾಮಾಜಿಕ ಸನ್ನಿವೇಶ (ಉದಾಹರಣೆಗೆ, ಮನೆಯಲ್ಲಿ ಮಕ್ಕಳಿದ್ದಾರೆ), ಆರೋಗ್ಯ ಕಾಳಜಿ, ವಯಸ್ಸು, ಲಿಂಗ ಮತ್ತು ಇತರ ಪ್ರಾಮುಖ್ಯ ಗುಣಲಕ್ಷಣಗಳು (ಉದಾಹರಣೆಗೆ ಹಿಂದಿನ ವರ್ಜಿಸಿದ ಅನುಭವ, ವರ್ಜನೆಗೆ ವೈಯಕ್ತಿಕ ಅಡೆತಡೆಗಳು) ಇತ್ಯಾದಿಗಳಿಗೆ ಸಂಬಂಧಿಸಿ ಪ್ರೇರೇಪಣೆ ಒದಗಿಸುವುದರಿಂದ ಹೆಚ್ಚು ಉತ್ತಮ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ.

ಮೇ 29ರಿಂದ ಜೂ. 3ರ ವರೆಗೆ ನಡೆಯಲಿರುವ ತಂಬಾಕು ವರ್ಜನ ಸಪ್ತಾಹದ ಪ್ರಯುಕ್ತ ಮಂಗಳೂರು ಲೈಟ್‌ಹೌಸ್‌ ಹಿಲ್‌ ರಸ್ತೆಯಲ್ಲಿರುವ ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬಾಯಿಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಪ್ರಯೋಜನ ಪಡೆದುಕೊಳ್ಳಬಹುದು.

ಮುಂದಿನ ವಾರಕ್ಕೆ

-ಡಾ| ನಂದಿತಾ ಶೆಣೈ
ಅಸೋಸಿಯೇಟ್‌ ಪ್ರೊಫೆಸರ್‌
ಓರಲ್‌ ಮೆಡಿಸಿನ್‌ ಮತ್ತು ರೇಡಿಯಾಲಜಿ ವಿಭಾಗ
ಮಣಿಪಾಲ ದಂತವೈದ್ಯಕೀಯ ಮಹಾವಿದ್ಯಾಲಯ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next