ಸಿಂಗಾಪುರ: ವಿಶ್ವದ ನಂ.1 ಆಟಗಾರ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮಂಗಳವಾರ ನಡೆದ ಆರಂಭಿಕ ಸುತ್ತಿನಲ್ಲೇ ಡೆನ್ಮಾರ್ಕ್‌ನ ವಿಶ್ವದ 34ನೇ ಶ್ರೇಯಾಂಕದ ಡೇನಿಯಲ್ ಲುಂಡ್‌ಗಾರ್ಡ್ ಮತ್ತು ಮ್ಯಾಡ್ಸ್ ವೆಸ್ಟರ್‌ಗಾರ್ಡ್ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿ ಸಿಂಗಾಪುರ ಓಪನ್‌ನಿಂದ ಹೊರಬಿದ್ದರು.
ಪ್ಯಾರಿಸ್ ಒಲಿಂಪಿಕ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೆಚ್ಚಿನ ಜೋಡಿಗಳಲ್ಲಿ ಒಂದಾದ ಸಾತ್ವಿಕ್ ಮತ್ತು ಚಿರಾಗ್ ಅವರು ಈ ತಿಂಗಳ ಆರಂಭದಲ್ಲಿ ಥೈಲ್ಯಾಂಡ್ ಓಪನ್ ಸೂಪರ್ 500 ಅನ್ನು ಮುಡಿಗೇರಿಸಿಕೊಂಡಿದ್ದರು, ಸೂಪರ್ 750 ರ 47 ನಿಮಿಷಗಳ ಹೋರಾಟದಲ್ಲಿ ಡೇನಿಯಲ್ ಮತ್ತು ಮ್ಯಾಡ್ಸ್ ವಿರುದ್ಧ 20-22 18-21 ರಿಂದ ಆಘಾತಕಾರಿ ಸೋಲು ಅನುಭವಿಸಿದರು.
ಸಿಂಗಲ್ಸ್ ಸ್ಪರ್ಧೆಯಲ್ಲಿ ಆಕರ್ಷು ಕಶ್ಯಪ್ ಮತ್ತು ಪ್ರಿಯಾಂಶು ರಾಜಾವತ್ ಕೂಡ ಆರಂಭಿಕ ಸುತ್ತು ದಾಟಲು ವಿಫಲವಾಗಿದ್ದು ಭಾರತಕ್ಕೆ ನಿರಾಶಾದಾಯಕ ದಿನವಾಯಿತು.
ಮಹಿಳೆಯರ ಡಬಲ್ಸ್ ಜೋಡಿ ರುತುಪರ್ಣ ಪಾಂಡಾ ಮತ್ತು ಶ್ವೇತಪರ್ಣ ಪಾಂಡಾ ಅವರು ಚೈನೀಸ್ ತೈಪೆಯ ಚಾಂಗ್ ಚಿಂಗ್ ಹುಯಿ ಮತ್ತು ಯಾಂಗ್ ಚಿಂಗ್ ತುನ್ ವಿರುದ್ಧ 12-21 21-12 13-21 ಅಂತರದಲ್ಲಿ ಸೋತರು. ಮಿಶ್ರ ಡಬಲ್ಸ್‌ನಲ್ಲಿ ಆಶಿತ್ ಸೂರ್ಯ ಮತ್ತು ಅಮೃತಾ ಪ್ರಮುತೇಶ್ ಅವರು ಹಾಂಕಾಂಗ್‌ನ ಲೀ ಚುನ್ ಹೇ ರೆಜಿನಾಲ್ಡ್ ಮತ್ತು ಎನ್‌ಜಿ ತ್ಸ್ ಯೌ ವಿರುದ್ಧ 8-21 17-21 ರಿಂದ ಸೋತರು.
ಭಾರತದ ಅಗ್ರಮಾನ್ಯ ಶಟ್ಲರ್‌ಗಳಾದ ಪಿವಿ ಸಿಂಧು, ಲಕ್ಷ್ಯ ಸೇನ್ ಮತ್ತು ಎಚ್‌ಎಸ್ ಪ್ರಣಯ್ ಬುಧವಾರ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.