Advertisement

ವಿಶ್ವ ಅಮ್ಮಂದಿರ ದಿನ

06:00 AM May 13, 2018 | |

ನಾವೆಲ್ಲ ಸ್ವಾನುಭವದಿಂದ ಕಂಡುಕೊಂಡಂತೆ ಅಮ್ಮನೆಂದರೆ-ವಾತ್ಸಲ್ಯದ ಸಾಕಾರಮೂರ್ತಿ, ಕರುಣಾಮಯಿ, ತನ್ನ ಮಕ್ಕಳಿಗಾಗಿ ಎಂತಹ ಕಷ್ಟನಷ್ಟಗಳನ್ನೂ ತಾಳಿಕೊಳ್ಳುವ ಸಹನಾಶೀಲತೆಯ ಪ್ರತಿಮೂರ್ತಿ; “ಮಕ್ಕಳೇ ತನಗೆಲ್ಲ, ಬೇರೇನೂ ಬೇಕಿಲ್ಲ’ ಎಂದು ತಾಯ್ತನದಲ್ಲಿಯೇ ಕೃತಾರ್ಥತೆಯನ್ನು ಅನುಭವಿಸುತ್ತ ಮಕ್ಕಳ ಸುಖ-ಸಂತೋಷಗಳಲ್ಲಿಯೇ ಸಕಲ ಸೌಭಾಗ್ಯವನ್ನು ಕಂಡುಕೊಳ್ಳುವ ತ್ಯಾಗಮಯಿ.

Advertisement

ಈ “ಅಮ್ಮ’ ಇನ್ನೂ ಹಾಗೆಯೇ ಇದ್ದಾಳೆಯೆ? ಸುತ್ತಮುತ್ತಲಿನ ಕುಟುಂಬಗಳತ್ತ ದೃಷ್ಟಿ ಹರಿಸಿದಾಗ ಇತ್ತೀಚೆಗಿನ ಕೆಲವು ದಶಕಗಳಲ್ಲಿ “ಅಮ್ಮ’ ಬದಲಾಗಿದ್ದಾಳೆ ಎಂದೆನಿಸುತ್ತದೆ. ಈ ಬದಲಾವಣೆ, ಮುಖ್ಯವಾಗಿ ಜಾಗತೀಕರಣದ ಹಿನ್ನೆಲೆಯಲ್ಲಿ ಬದಲಾಗಿರುವ ಕೌಟುಂಬಿಕ-ಸಾಮಾಜಿಕ-ಆರ್ಥಿಕ ಬದಲಾವಣೆಗಳನ್ನನುಸರಿಸಿ ಆಗಿರಬಹುದೆನ್ನಿಸುತ್ತದೆ. ಆದುದರಿಂದ ಈ ಬದಲಾವಣೆ ಪಟ್ಟಣ ಮತ್ತು ಮಹಾನಗರಗಳಲ್ಲಿ ಕಾಣಿಸುವಷ್ಟು ಹಳ್ಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾಣಿಸುತ್ತಿಲ್ಲ. ನವನಾಗರಿಕತೆಯ ಗಾಳಿ ಬೀಸಿರದ ಪ್ರದೇಶಗಳಲ್ಲಿ ಇನ್ನೂ ತಾಯಂದಿರು ಹಿಂದಿನ “ಅಮ್ಮ’ನಂತೆಯೇ ಇದ್ದಾರೆ. ಆದರೆ, ಇಂದಿನ ಗ್ರಾಮೀಣ ಪ್ರದೇಶಗಳ ನಗರೀಕರಣವಾಗುತ್ತಲಿರುವ ತ್ವರಿತಗತಿಯನ್ನು ಗಮನಿಸಿದರೆ ಈ ಅಮ್ಮಂದಿರೂ ಬದಲಾವಣೆಯ ಅಂಚಿನಲ್ಲಿದ್ದಾರೆ ಎನ್ನಬಹುದು.

ಅಮ್ಮನ ಬದಲಾವಣೆಯ ಬಗೆಗಿನ ಜಿಜ್ಞಾಸೆ ಏಕೆ ಪ್ರಸ್ತುತ?
ಅಮ್ಮನ ಪಾತ್ರ ಕೇವಲ ತನ್ನ ಮಕ್ಕಳನ್ನು ಸಾಕಿ, ಸಲಹುವುದಕ್ಕಷ್ಟೇ ಸೀಮಿತವಾಗಿಲ್ಲ. ಆಕೆ ಇಡೀ ಕುಟುಂಬದ ಶಾಂತಿ-ಸೌಹಾರ್ದತೆಯನ್ನು ಕಾಪಾಡುವ ಕೇಂದ್ರಬಿಂದುವೂ ಆಗಿದ್ದಾಳೆ. ಆಕೆ ಮಗುವಿನ ಮೊದಲ ಗುರುವೂ ಹೌದು. ಅವಳ ನಡೆ-ನುಡಿ, ಗುಣ-ಧರ್ಮ, ಆಚಾರ-ವಿಚಾರಗಳನ್ನು ಅನುಸರಿಸಿಯೇ ಮಕ್ಕಳು ಬೆಳೆಯುತ್ತಾರೆ. ಮಕ್ಕಳ ಮುಗ್ಧ ಮನಸ್ಸುಗಳ ಮೇಲೆ ಬೀರಲ್ಪಡುವ ಆಕೆಯ ವ್ಯಕ್ತಿತ್ವದ ಪ್ರಭಾವವು ಗಾಢವಾಗಿದ್ದು, ಅದು ಅವರ ಜೀವನದುದ್ದಕ್ಕೂ ಉಳಿಯುವಂಥದ್ದಾಗಿರುತ್ತದೆ. ಆದುದರಿಂದ ಅಮ್ಮನ ವ್ಯಕ್ತಿತ್ವದಲ್ಲಿ ಆಗುವ ಯಾವುದೇ ಬದಲಾವಣೆಯು ಆಕೆಯ ಮಕ್ಕಳ, ಕುಟುಂಬದ ಮತ್ತು ಇಡೀ ಸಮಾಜದ ಭವಿಷ್ಯದ ಮೇಲೆ ಅಗಾಧವಾದ ಪರಿಣಾಮವನ್ನು ಬೀರಬಲ್ಲದು. ಈ ಕಾರಣಕ್ಕಾಗಿ ಅಮ್ಮ ಬದಲಾಗುತ್ತಿದ್ದಾಳೆಯೇ ಮತ್ತು ಈ ಬದಲಾವಣೆ ಅಪೇಕ್ಷಣೀಯವೇ ಎನ್ನುವ ಚಿಂತನೆ ಪ್ರಸ್ತುತವೆನಿಸುತ್ತದೆ.

ಈ ಹಿಂದಿನ ದಿನಗಳ ಅಮ್ಮಂದಿರು
ಹಿಂದೆಲ್ಲ ಅಮ್ಮಂದಿರಿಗೆ ತಮ್ಮ ಮಕ್ಕಳೇ ಸರ್ವಸ್ವವಾಗಿದ್ದು, ಅವರನ್ನು  ಹೊರತುಪಡಿಸಿದ ಬೇರೊಂದು ಬದುಕು ಎಂಬುದಿರಲಿಲ್ಲ. ಸ್ತ್ರೀಗೆ ಮಕ್ಕಳನ್ನು ಪಡೆಯುವುದೇ ಜೀವನದ ಅತ್ಯಂತ ದೊಡ್ಡ ಸೌಭಾಗ್ಯವಾಗಿದ್ದು, ಮದುವೆ ಎನ್ನುವುದು ಮುಖ್ಯವಾಗಿ ಮಕ್ಕಳನ್ನು ಪಡೆಯುವುದಕ್ಕೋಸ್ಕರವೇ ಅಗತ್ಯವೆನಿಸಿದ ಸಂಸ್ಕಾರವಾಗಿತ್ತು.  ಹೀಗಾಗಿ, ವಯಸ್ಸು ಮೀರುವ ಮೊದಲೇ ಮದುವೆಯಾಗಿಬಿಡಬೇಕೆಂಬ ಹಂಬಲದಿಂದ ತನ್ನ ಜೀವನ ಸಂಗಾತಿಯ ವಿಷಯದಲ್ಲಿ ಆಕೆ ಯಾವುದೇ ರಾಜಿಗೂ ಸಿದ್ಧಳಿರುತ್ತಿದ್ದಳು. ಕೆಲವೊಮ್ಮೆ ಹುಡುಗ ತನಗೆ ತಕ್ಕವನಾಗಿರದೆ ವಯಸ್ಸಿನಲ್ಲಿ ತುಂಬ ದೊಡ್ಡವನಾಗಿದ್ದರೂ, ಅವನಿಗೆ ಅದು ಎರಡನೆಯ ಅಥವಾ ಮೂರನೇ ಸಂಬಂಧವಾಗಿದ್ದರೂ, ಸವತಿಯ ಮಕ್ಕಳನ್ನು ಸಾಕಿ, ಸಲಹಬೇಕಾಗಿದ್ದರೂ ಎಲ್ಲದಕ್ಕೂ ಆಕೆ ಹೂಂಗುಡುತ್ತಿದ್ದಳು. ಇದಕ್ಕೆ ಅವಳ ಅನಕ್ಷರತೆ, ಆರ್ಥಿಕ ದುಃಸ್ಥಿತಿ ಮತ್ತು ಪರಾವಲಂಬನೆಯೂ ಕಾರಣವಾಗುತ್ತಿದ್ದವು. ಮದುವೆಯಾಗುವ ಮೊದಲು ಹೊರಗೆ ದುಡಿಯಲು ಹೋಗುತ್ತಿದ್ದವಳಾದರೆ ವಿವಾಹದ ನಂತರ ಮನೆ-ಮಕ್ಕಳನ್ನು ನೋಡಿಕೊಳ್ಳಲೆಂದು ತನ್ನ ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದಳು. ಗಂಡ ಎಷ್ಟೇ ಕೆಟ್ಟವನಿದ್ದರೂ, ಅವನ ಮನೆಯವರು ಎಂತಹ ಕಿರುಕುಳ ನೀಡಿದರೂ, ಮಕ್ಕಳಿಗಾಗಿ ಎಲ್ಲವನ್ನೂ, ಎಲ್ಲರನ್ನೂ ಸಹಿಸಿಕೊಂಡು ಜೀವನ ಬಂಡಿಯ ನೊಗಕ್ಕೆ ಹೆಗಲೊಡ್ಡಿ ಅದನ್ನೆಳೆಯುತ್ತ ತನ್ನ ಜೀವನವನ್ನು ಸವೆಸುತ್ತಿದ್ದಳು. ವಿವಾಹವಿಚ್ಛೇದನ ಎನ್ನುವುದು ಅವಳಿಗೆ ಕಲ್ಪನಾತೀತವಾಗಿತ್ತು. ಎಳೆಯ ವಯಸ್ಸಿನಲ್ಲಿಯೇ ವಿಧವೆಯಾದರೂ, ಸೊಂಟಕ್ಕೆ ಸೆರಗು ಬಿಗಿದು ತನ್ನೆಲ್ಲ ಶಕ್ತಿ-ಸಾಮರ್ಥ್ಯಗಳನ್ನು ಒಗ್ಗೂಡಿಸಿ, ಒಬ್ಬಳೇ ಕಷ್ಟಪಟ್ಟು ಮಕ್ಕಳನ್ನು ಸಾಕಿ, ಸಲಹಿ ಬೆಳೆಸುತ್ತಿದ್ದಳೇ ವಿನಾ ಮರುಮದುವೆಯಾಗುವ ಯೋಚನೆ ಅವಳ ಮನಸ್ಸಿನಲ್ಲೆಂದೂ ಸುಳಿಯುತ್ತಿರಲಿಲ್ಲ.

ಬದಲಾವಣೆಗೆ ಕಾರಣ
“ಮದುವೆ’, “ಮಾತೃತ್ವ’ ಮತ್ತು “ಮಕ್ಕಳ’ ಬಗ್ಗೆ ಇಂದಿನ ನಗರ ಪ್ರದೇಶಗಳ ಯುವತಿಯರ, ಅದರಲ್ಲಿಯೂ ಸುಶಿಕ್ಷಿತರೂ, ಆರ್ಥಿಕವಾಗಿ ಸ್ವತಂತ್ರರೂ ಆಗಿರುವವರ ನಿಲುವುಗಳನ್ನು ಅರಿತುಕೊಂಡಾಗ ಇಂದಿನ ಅಮ್ಮನಲ್ಲಾದ ಬದಲಾವಣೆಯ ಮೂಲ ಎಲ್ಲಿದೆ ಎಂದು ತಿಳಿಯುತ್ತದೆ. ಸ್ತ್ರೀಯರನ್ನು ವಿದ್ಯಾವಂತರನ್ನಾಗಿಸುವ ಆವಶ್ಯಕತೆಯ ಕುರಿತು ಉಂಟಾಗಿರುವ ಜನಜಾಗೃತಿ, ಅವರ ಮನೋಭಾವ ಬದಲಾಗುತ್ತಿ ರುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂದು ಹೆಣ್ಮಕ್ಕಳ ಶಿಕ್ಷಣಕ್ಕೆ ಸಿಗುತ್ತಿರುವ ಅವಕಾಶ ಮತ್ತು ಪ್ರೋತ್ಸಾಹಗಳು ಗಣನೀಯವಾಗಿ ವೃದ್ಧಿಸಿವೆ. ಹಾಗೆಯೇ ಶಿಕ್ಷಿತ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಸ್ಥರಾಗಿ ಆರ್ಥಿಕವಾಗಿ ಸ್ವತಂತ್ರರೂ ಆಗುತ್ತಿದ್ದಾರೆ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇಂದಿನ ಸ್ತ್ರೀಯರು ಜೀವನದಲ್ಲಿ ಮುನ್ನಡೆಯನ್ನು ಸಾಧಿಸಲು ತಮಗೆ ಸಿಗುತ್ತಿರುವ ಎಲ್ಲ ಅವಕಾಶಗಳ ಸದುಪಯೋಗವನ್ನು ಮಾಡುತ್ತಿದ್ದಾರೆ.

Advertisement

ಇದರಿಂದಾಗಿ ಇಂದಿನ ಮಹಿಳೆ ತಾನು ಶಾರೀರಿಕವಾಗಿಯೂ, ಮಾನಸಿಕವಾಗಿಯೂ, ಬೌದ್ಧಿಕವಾಗಿಯೂ ಪುರುಷನಿಗೆ ಸರಿಸಮಾನಳು ಎನ್ನುವುದನ್ನು ಸಾಧಿಸಿ ತೋರಿಸಿದ್ದಾಳೆ. ಎಲ್ಲ ಕಾರ್ಯಕ್ಷೇತ್ರಗಳಲ್ಲಿ-ಕೊನೆಗೆ ಕೇವಲ ಪುರುಷರಿಗೇ ಮೀಸಲು ಎಂದು ಪರಿಗಣಿತವಾದ ಕಷ್ಟಕರ, ಕ್ಲಿಷ್ಟಕರ ಕಾರ್ಯಕ್ಷೇತ್ರಗಳಲ್ಲಿಯೂ ಯಶಸ್ಸನ್ನು ಮೆರೆದು ತಾನು ಪುರುಷನ ಸಮಬಲಳು ಮಾತ್ರವಲ್ಲ, ಸೂಕ್ತವಾದ ಅವಕಾಶ, ಪ್ರೋತ್ಸಾಹಗಳು ದೊರೆತರೆ ಅವನನ್ನೂ ಹಿಂದಿಕ್ಕಬಲ್ಲ ಸಾಮರ್ಥ್ಯವುಳ್ಳವಳು ಎನ್ನುವುದನ್ನು ಸಾಬೀತುಪಡಿಸಿದ್ದಾಳೆ.

ಹೀಗೆ ಶತಮಾನಗಳಿಂದ ಅನಕ್ಷರಸ್ಥಳಾಗಿ, ಆರ್ಥಿಕವಾಗಿ ಪರಾವಲಂಬಿಯಾಗಿ, ಅಬಲೆಯಾಗಿ, ಸಮಾಜದಲ್ಲಿ ಪುರುಷನ ದಬ್ಟಾಳಿಕೆ, ಅವಹೇಳನ, ಶೋಷಣೆಗೆ ಸುಲಭವಾಗಿ ತುತ್ತಾಗುತ್ತಿದ್ದ ಸ್ತ್ರೀ, ಇಂದು ವಿದ್ಯಾವಂತಳಾಗಿ, ಆರ್ಥಿಕವಾಗಿ ಸ್ವಾವಲಂಬಿಯಾಗಿ, ಸಬಲೆಯಾಗಿ, ಪುರುಷನನ್ನು ದಿಟ್ಟತನದಿಂದ ಎದುರಿಸಿ, ಅವನ ಅಹಂಕಾರ, ಅನ್ಯಾಯ, ಅತ್ಯಾಚಾರಗಳಿಗೆ ಕಡಿವಾಣ ಹಾಕುವುದಕ್ಕೆ ಶಕ್ತಳಾಗಿದ್ದಾಳೆ. ಇವೆಲ್ಲವೂ ನಿಜಕ್ಕೂ ಅತ್ಯಂತ ಸ್ತುತ್ಯರ್ಹ, ಸ್ವಾಗತಾರ್ಹ ಬೆಳವಣಿಗೆಗಳು. ಇನ್ನು ಇದರ ಇನ್ನೊಂದು ಮಗ್ಗುಲನ್ನು ತುಸು ಅವಲೋಕಿಸಿದರೆ- ಇಂದು ಆರ್ಥಿಕವಾಗಿ ಸ್ವತಂತ್ರಳಾಗಿರುವ ಮಹಿಳೆಗೆ ಪುರುಷನ ಆಶ್ರಯದ ಅನಿವಾರ್ಯತೆ ಇಲ್ಲವಾಗಿದೆ. ಅವನ ನೆರಳಿಗಾಗಿ ಸ್ವಂತದ ವ್ಯಕ್ತಿತ್ವವನ್ನು, ಆಸೆ-ಆಕಾಂಕ್ಷೆಗಳನ್ನು, ಬಲಿಗೊಡಬೇಕಾದ ಆವಶ್ಯಕತೆಯೂ ಆಕೆಗಿಲ್ಲವಾಗಿದೆ. ಅಲ್ಲದೆ ಆಧುನಿಕ ಶಿಕ್ಷಣ ಪಡೆದ ಯುವತಿಯರಿಗೆ ಪಾಶ್ಚಾತ್ಯ ದೇಶಗಳ ಸಾಮಾಜಿಕ ಹಾಗೂ ಕೌಟುಂಬಿಕ ವ್ಯವಸ್ಥೆ ಸುಪರಿಚಿತವಾಗಿದೆಯಲ್ಲದೆ, ಅದು ತಕ್ಕಮಟ್ಟಿಗೆ ಸ್ವೀಕಾರಾರ್ಹವೂ ಆಗಿದೆ.

ಇಂದಿನ ಮಹಿಳೆ ಮತ್ತು ಅಮ್ಮ
ಇಂದಿನ ವಿದ್ಯಾವಂತ, ಉದ್ಯೋಗಸ್ಥೆ ಅಮ್ಮನಿಗೂ ತನ್ನ ಮಕ್ಕಳ ಬಗ್ಗೆ ಮಮತೆ ಇದೆ. ಆದರೆ ಅವರ ಅಸ್ತಿತ್ವದಾಚೆಗೂ ತನಗೆ ಬೇರೊಂದು ಬದುಕು ಇದೆ ಎನ್ನುವುದನ್ನು ಆಕೆ ಕಂಡುಕೊಂಡಿದ್ದಾಳೆ. ಈ ಅಮ್ಮನೂ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದಕ್ಕೆ, ಅವರ ಭವಿಷ್ಯವನ್ನು ಉಜ್ವಲಗೊಳಿಸುವುದಕ್ಕೆ ಶ್ರಮಿಸುತ್ತಾಳೆ. ಆದರೆ, ಅದರೊಂದಿಗೆ ತನ್ನ ವೈಯಕ್ತಿಕ ಬಯಕೆ, ಮಹತ್ವಾಕಾಂಕ್ಷೆಗಳಿಗೆ ಆಕೆ ಅಷ್ಟೇ ಮಹತ್ವ ನೀಡುತ್ತಾಳೆ. ಹೀಗಾಗಿ, ಇಂದಿನ ಹೆಣ್ಮಕ್ಕಳಿಗೆ ವಿವಾಹವೆನ್ನುವುದು ಕೇವಲ ಮಕ್ಕಳನ್ನು ಪಡೆಯಲು ಬೇಕಾದ ಸಂಸ್ಕಾರವಾಗಿಲ್ಲ . ಅದು ಸುಖಮಯ ದಾಂಪತ್ಯ ಜೀವನವನ್ನು ನೀಡಬೇಕಾದ ಸಂಸ್ಕಾರವೆನಿಸಿದೆ.

ಸಹಜವಾಗಿಯೇ ಕೈ ತುಂಬ ಹಣ ತರುವ ಉದ್ಯೋಗ ಅವಳ ಆದ್ಯತೆಯಾಗಿದೆ. ಈಗ ಆಕೆ ಕೇವಲ ಉದ್ಯೋಗನಿರತಳಾಗುವುದರಲ್ಲಿ ತೃಪ್ತಿಪಡದೆ ತನ್ನ ವೃತ್ತಿಯಲ್ಲಿ ಪದೋನ್ನತಿಯನ್ನು ಬಯಸುವ ಮಹತ್ವಾಕಾಂಕ್ಷಿಯೂ ಆಗಿದ್ದಾಳೆ. ತನ್ನ ಉದ್ಯೋಗ ನಿರ್ವಹಣೆಗೆ, ಅದರಲ್ಲಿ ಮುನ್ನಡೆ ಸಾಧಿಸುವುದಕ್ಕೆ, ಮದುವೆ-ಮಕ್ಕಳು ಅಡ್ಡಿಯಾಗಬಲ್ಲರು ಎಂದು ಅನೇಕ ಯುವತಿಯರು ಭಾವಿಸತೊಡಗಿದ್ದಾರೆ. ಇದರಿಂದ ಮದುವೆ ಆಗದೇ ಇರಲು ಬಯಸುವ ಮತ್ತು ಮದುವೆಯಾದರೂ ಮಕ್ಕಳು ಬೇಡ ಎನ್ನುವ ಹೆಣ್ಮಕ್ಕಳ ಸಂಖ್ಯೆ ಹೆಚ್ಚುತ್ತಲಿದೆ.
ಹೀಗಾಗಿ ಮದುವೆಯಾಗಬೇಕಾದರೆ ಎಲ್ಲ ವಿಷಯಗಳಲ್ಲಿಯೂ ತನಗೆ ಅನುರೂಪನಾದ ಹುಡುಗ ಸಿಗಬೇಕೆಂದು ಇಂದಿನ ಯುವತಿ ಬಯಸುತ್ತಾಳೆ. ಅಂತಹ ಹುಡುಗ ಸಿಗುವವರೆಗೆ ವಯಸ್ಸಿನ ಹಂಗಿಲ್ಲದೆ ಆಕೆ ಎಷ್ಟೇ ದೀರ್ಘ‌ಕಾಲ ಕಾಯಲು ಸಿದ್ಧಳಿದ್ದಾಳೆ. ಏಕೆಂದರೆ “ಮಾತೃತ್ವ’ ಎನ್ನುವುದು “ಪರಮ ಸೌಭಾಗ್ಯ’ ಎಂದು ಆಕೆಗೆ ಅನಿಸುವುದಿಲ್ಲ. ಯಾವನನ್ನಾದರೂ ಸರಿಯೆ, ಕಟ್ಟಿಕೊಂಡು ತಾನು “ಹೆರುವ ಯಂತ್ರ’ವಾಗಲು ಆಕೆ ತಯಾರಿಲ್ಲ. ತನಗೆ ಒಪ್ಪಿಗೆಯಾಗುವ ಜೀವನ ಸಂಗಾತಿ ಸಿಗದೇ ಹೋದರೆ ಜೀವನ ಪರ್ಯಂತ ಒಂಟಿಯಾಗಿರಲು ಆಕೆ ಹೆದರುವುದಿಲ್ಲ.

ವಿವಾಹಾನಂತರವೂ ಗಂಡನೊಡನೆ ಹೊಂದಾಣಿಕೆ ಇಲ್ಲವೆಂದು ಆಕೆಗೆ ಅನಿಸಿದರೆ ಮಕ್ಕಳಿರಲಿ, ಇಲ್ಲದಿರಲಿ ಆ ದಾಂಪತ್ಯದಲ್ಲಿ “ಕೊಳೆಯಲು’ ಆಕೆ ಬಯಸುವುದಿಲ್ಲ. ತನ್ನ ಯೌವನ, ಜೀವನದ ಆಸೆ-ಆಕಾಂಕ್ಷೆಗಳನ್ನು ವ್ಯರ್ಥವಾಗಿಸಲು ಆಕೆ ಇಚ್ಛಿಸುವುದಿಲ್ಲ. ವಿವಾಹ ವಿಚ್ಛೇದನವನ್ನೂ , ಮರುಮದುವೆಯ ಆಯ್ಕೆಯನ್ನೂ ಅವಳು ಮುಕ್ತವಾಗಿರಿಸುತ್ತಾಳೆ. ವೈವಾಹಿಕ ಜೀವನದ ಜಂಜಾಟ, ಮಕ್ಕಳನ್ನು ಹೊರುವ-ಹೆರುವ-ಬೆಳೆಸುವ ಜವಾಬ್ದಾರಿಗಳಿಲ್ಲದೆ ಸ್ವತಂತ್ರವಾಗಿ ಪುರುಷನೊಡನೆ ಆಪ್ತವಾದ ಒಡನಾಟವನ್ನು ಹೊಂದಲು ಅವಕಾಶ ನೀಡುವ ಸಹ-ಸಾಂಗತ್ಯದ ಜೀವನ (ಲಿವ್‌-ಇನ್‌-ರಿಲೇಶನ್‌ಶಿಪ್‌)ದ ಪರಿಕಲ್ಪನೆ ಇಂದಿನ ಆಧುನಿಕ ಮಹಿಳೆಗೆ ಅಪರಿಚಿತವೂ ಅಲ್ಲ, ಅಸ್ಪೃಶ್ಯವೂ ಅಲ್ಲ.

ಒಟ್ಟಿನಲ್ಲಿ ಈ ತಂತ್ರಜ್ಞಾನ ಯುಗದ ಒಳ್ಳೆಯ ಸಂಪಾದನೆ ಇರುವ ಇಂದಿನ ಮಹಿಳೆಗೆ “ತಾಯ್ತನ’ ಎನ್ನುವುದು ಪ್ರಕೃತಿ ತನಗೆ ದಯಪಾಲಿಸಿರುವ ವಿಶಿಷ್ಟ ವರ ಎನ್ನುವ ಅಭಿಮಾನವಾಗಲಿ, ಆ ಸೌಭಾಗ್ಯವನ್ನು ಸಾಕಾರಗೊಳಿಸುವುದರಲ್ಲಿ ಅನನ್ಯವಾದ ಅನಿರ್ವಚನೀಯ ಆನಂದವಿದೆ ಎನ್ನುವುದಾಗಲಿ, ಅನ್ನಿಸುವುದು ಕಡಿಮೆಯಾಗಿದೆ. ಮಾತ್ರವಲ್ಲ, ಇಂತಹ ಭಾವನೆಗಳಿಗೆ ವ್ಯತಿರಿಕ್ತವಾಗಿ ಮದುವೆ-ಮಕ್ಕಳು ಎಂಬುದು ತನ್ನ ಸುಖ-ಸ್ವಾತಂತ್ರ್ಯಗಳನ್ನು ಕಸಿದುಕೊಳ್ಳುವ ಅನಗತ್ಯವಾದ ಜವಾಬ್ದಾರಿಗಳು ಎಂದೆನಿಸತೊಡಗಿದೆ. ಹೀಗಾಗಿ, ಮಕ್ಕಳು ಆಕೆಯ ಜೀವನದಲ್ಲಿ ಪ್ರಪ್ರಥಮ ಆದ್ಯತೆಯ ಸ್ಥಾನವನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಅದಕ್ಕನುಗುಣವಾಗಿ ಅಮ್ಮನ ವ್ಯಕ್ತಿತ್ವದಲ್ಲಿಯೂ ಬದಲಾವಣೆಗಳಾಗುತ್ತಿವೆ.

ಚಿಂತನೆಗೊಂದಿಷ್ಟು ಗ್ರಾಸ
ಮಕ್ಕಳ ಪಾಲಿಗೆ ಅಮ್ಮ ಮತ್ತು ಅಪ್ಪ ಇಬ್ಬರೂ ಕಣ್ಣಿಗೆ ಕಾಣುವ ದೇವರಾಗಿದ್ದರೂ, ಅಮ್ಮ ಅಪ್ಪನಿಗಿಂತ ಹೆಚ್ಚಿನ ತೂಕವನ್ನು ಪಡೆದುಕೊಂಡು, ಹೆಚ್ಚಿನ ಪ್ರೀತ್ಯಾದರಗಳಿಗೆ ಪಾತ್ರಳಾಗಿ, ಮಕ್ಕಳ “ಇಷ್ಟದೇವತೆ’ಯಾಗಿ, ಅವರ ಹೃನ್ಮನಗಳಲ್ಲಿ  ಅನನ್ಯವಾದ, ಅತ್ಯಾಪ್ತವಾದ ಸ್ಥಾನವನ್ನು ಪಡೆದುಕೊಂಡದ್ದು ಯಾವುದರಿಂದಾಗಿ? ಮಾತೃತ್ವ ಸ್ತ್ರೀಗೆ ಸಹಜವಾಗಿ ಕೊಡಮಾಡುವ ವಾತ್ಸಲ್ಯ, ಕರುಣೆ, ಸಹನೆ, ಕ್ಷಮೆ, ತ್ಯಾಗವೇ ಮೊದಲಾದ ಗುಣಗಳಿಂದಲೆ? ಬದುಕಿನಲ್ಲಿ ತನ್ನ ವೈಯಕ್ತಿಕ ಆಸೆ, ಆಕಾಂಕ್ಷೆ , ಹಕ್ಕು, ಯಶಸ್ಸುಗಳಿಗಿಂತ ತನ್ನ ಮಕ್ಕಳ ಹಿತ, ಸಂರಕ್ಷಣೆ, ಶ್ರೇಯಸ್ಸನ್ನೇ ಪ್ರಥಮ ಆದ್ಯತೆಯೆಂದು ಆಕೆ ಪರಿಗಣಿಸಿರುವುದರಿಂದಲೆ?

ನಂದಿನಿ ಡಿ. ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next