Advertisement
ಜೂನ್ 1 “ವಿಶ್ವ ಕ್ಷೀರ ದಿನ’ ನಿಶ್ಚಯವಾಗಿಯೂ ಇದು ಭಾರತದ ಪಾಲಿಗೆ ಅವಿಸ್ಮರಣೀಯ ದಿನ. ಅದೊಂದು ಕಾಲವಿತ್ತು ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಭಾರತ ಹಾಲು ಮತ್ತು ಹಾಲಿನ ಉತ್ಪನ್ನಗಳ ಉತ್ಪಾದನೆಯಲ್ಲಿ ವಿಶ್ವದಲ್ಲಿ 16 ನೇ ಸ್ಥಾನದಲ್ಲಿತ್ತು. ವಿಶ್ವದ ಹೈನು ರಾಸುಗಳಲ್ಲಿ ಶೇ.16 ರಷ್ಟು ಪಾಲು ಹೊಂದಿದ್ದ ಎಮ್ಮೆಗಳಲ್ಲಿ, ವಿಶ್ವದಲ್ಲಿ ಅತೀ ಹೆಚ್ಚು ಸಂಖ್ಯೆ ಹೊಂದಿದ್ದ ನಮ್ಮ ದೇಶ ಕ್ಷೀರೋತ್ಪಾದನೆಯಲ್ಲಿ 6 ಪ್ರತಿಶತ ಮಾತ್ರ ಉತ್ಪಾದಿಸುವ ಸಾಮರ್ಥ್ಯ ಪಡೆದಿತ್ತು. ಹಾಲಿನ ಸೇವನೆಯಲ್ಲಿ ಸರಾಸರಿ 90 ಗ್ರಾಂ (ತಲಾವಾರು) ಮಾತ್ರ ನಮ್ಮದಾಗಿದ್ದರೆ ವಿಶ್ವದ ಹಿರಿಯಣ್ಣ ಅಮೆರಿಕದ ತಲಾವಾರು 432 ಗ್ರಾಂಗಳಷ್ಟಾಗಿತ್ತು.
Related Articles
Advertisement
ನಮ್ಮ ನಾಡಿನ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕ ಹಾಲ ಮಹಾಮಂಡಳಿ(1984) ಈ ಮೊದಲು ಹೈನು ನಿಗಮವಾಗಿ(ಕೆ.ಡಿ.ಸಿ.ಸಿ) ಸ್ಥಾಪನೆಗೊಂಡು ಕ್ಷೀರಧಾರಾ ಯೋಜನೆಯ ಸಹಾಯದಿಂದ ರಾಜ್ಯವ್ಯಾಪಿ ತನ್ನ ಜಾಲವನ್ನು ವಿಸ್ತರಿಸಿದೆ. 1975-76ರಲ್ಲಿ ಕೇವಲ 103 ಸಂಘಗಳಿಂದ ಆರಂಭವಾದ ಸಹಕಾರಿ ಮೇರುಸಂಸ್ಥೆ ಇದೀಗ ವ್ಯಾಪಕವಾಗಿ ಬೆಳೆದು 15 ಹಾಲು ಒಕ್ಕೂಟಗಳಿಂದ 25ಲಕ್ಷಕೂÒ ಅಧಿಕ ಹಾಲು ಉತ್ಪಾದಕರನ್ನೊಳಗೊಂಡು ಪ್ರತೀದಿನ ಸರಾಸರಿ 90 ಲಕ್ಷ ಕಿಲೋ ಹಾಲನ್ನು ಸಂಗ್ರಹಿಸುತ್ತಿದೆ. ಈ ವರ್ಷದ ಮೇ 24ರಂದು ಪ್ರಥಮ ಬಾರಿಗೆ ದಿನವೊಂದರ 91.07 ಲಕ್ಷ ಕಿಲೋ ಹಾಲು ಸಂಗ್ರಹಣೆಯೊಂದಿಗೆ ಹೊಸ ದಾಖಲೆ ಬರೆದಿದೆ. ಪ್ರಸ್ತುತ ಸಾಲಿನಲ್ಲಿ ರಾಜ್ಯ ಹೈನು ಮಹಾಮಂಡಳ ದಿನವೊಂದರ ಶತಲಕ್ಷ ಲೀಟರ್ ಅಂದರೆ 1 ಕೋಟಿ ಕಿಲೋ ಹಾಲು ಸಂಗ್ರಹಣೆಯ ನಿರೀಕ್ಷೆಯಲ್ಲಿದೆ. ನೆರೆ ರಾಜ್ಯಗಳ ಪ್ರಮುಖ ನಗರಗಳಾದ ಚೆನ್ನೈ, ಗೋವಾ, ಮುಂಬಯಿ, ಹೈದರಾಬಾದ್, ಪುಣೆಗಳಿಗೆ ಪ್ರತೀದಿನ 10 ಲಕ್ಷ ಲೀಟರ್ ಹಾಲು ರವಾನಿಸುತ್ತಿದೆ. ಹೊರ ರಾಷ್ಟ್ರಗಳಾದ ಅಮೆರಿಕ, ಆಸ್ಟ್ರೇಲಿಯಾ, ಸಿಂಗಾಪುರ, ಅಫ್ಘಾನಿಸ್ಥಾನ, ಭೂತಾನ್, ಬಹ್ರೈನ್ ಮುಂತಾದ ದೇಶಗಳಿಗೆ 20 ಕೋ.ರೂ.ಗಳಿಗೂ ಅಧಿಕ ಮೌಲ್ಯದ ನಂದಿನಿ ಉತ್ಪನ್ನಗಳನ್ನು ರವಾನಿಸಿವೆ. ಮಂಡಳಿಯು 1919-20ರಲ್ಲಿ ಒಟ್ಟು ವಹಿವಾಟು 16,440 ಕೋ.ರೂ.ಗಳಿಂದ 19,735 ಕೋ.ರೂ.ಗಳಿಗೇರಿದ್ದು 2023ರಲ್ಲಿ ರಾಜ್ಯ ಹೈನು ಮಹಾಮಂಡಳಿಯ ವಹಿವಾಟು 25,000 ಕೋ. ರೂ.ಗಳಾಗಬಹುದೆಂದು ಅಂದಾಜಿಸಲಾಗಿದೆ.
ಇನ್ನು ಈ ಕ್ಷೀರ ಕ್ರಾಂತಿಯಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡಗಳನ್ನೊಳಗೊಂಡ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಸಾಧನೆಯೂ ಉಲ್ಲೇಖನೀಯವಾಗಿದೆ. 1974ರಲ್ಲಿ ಮಣಿಪಾಲದಲ್ಲಿ “ಕೆನರಾ ಮಿಲ್ಕ್ ಯೂನಿಯನ್ (ಕೆಮೂಲ್)’ ಆರಂಭವಾಯಿತು. ಮುಂದೆ 1986ರಲ್ಲಿ ಸ್ಥಾಪನೆಯಾದ ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ವಿಲೀನವಾಗಿ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಳೆದ ಜೂನ್ ಒಂದರಂದು ದಕ್ಷಿಣ ಕನ್ನಡ ಹಾಲು ಒಕ್ಕೂಟ, ಒಂದು ದಿನದ ಗರಿಷ್ಠ ಸಂಗ್ರಹಣೆಯಾದ 5.68 ಲಕ್ಷ ಕಿಲೋ ತಲುಪಿದ್ದು ಈವರೆಗಿನ ದಾಖಲೆಯಾಗಿದೆ. ಅದೇ ರೀತಿ ಕಳೆದ ವರ್ಷದ ಎಪ್ರಿಲ್ 27ರಂದು ದಿನವೊಂದರಲ್ಲಿ 4.22 ಲಕ್ಷ ಲೀಟರ್ ಹಾಲು ಮಾರಾಟ ಮಾಡಿರುವುದು ದಾಖಲೆಯ ಸಾಧನೆಯಾಗಿದೆ.
ಒಕ್ಕೂಟವು ರಾಜ್ಯದಲ್ಲಿಯೇ ರೈತರು ನೀಡುವ ಹಾಲಿಗೆ ಅತೀ ಹೆಚ್ಚಿನ ಬೆಲೆ ನೀಡುತ್ತಿದ್ದು ಸಕಾಲದಲ್ಲಿ ಹಾಲಿನ ಬಟವಾಡೆ ಒಕ್ಕೂಟದ ಪ್ರಗತಿಗೆ ಪೂರಕವಾಗಿದೆ. ಹಲವಾರು ಸವಾಲುಗಳ ಮಧ್ಯೆಯೂ ಕರಾವಳಿ ಹೈನುಗಾರರು ಹೈನೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಲು ಮತ್ತು ಹಾಲಿನ ಉತ್ಪನ್ನಗಳು ದೇಶದ ಸಾಮಾನ್ಯ ನಾಗರಿಕನಿಗೂ ದೊರೆಯುವಂತೆ ಮಾಡುವುದೇ ವಿಶ್ವ ಹಾಲು ದಿನದ ಉದ್ದೇಶವಾಗಿದ್ದು ಇದನ್ನು ಸಾಕಾರ ಗೊಳಿಸ ಬೇಕಿದೆ. ಶೇ.84.5 ಸರಾಸರಿ ಜೈವಿಕ ಮೌಲ್ಯ ಹೊಂದಿದ ಹಾಲು ಸೃಷ್ಟಿಯ “ಪ್ರೊಟೀನ್ ಕಣಜ’. ಮಾನವನ ದೇಹಕ್ಕೆ ಅವಶ್ಯವಿರುವ ಎಲ್ಲ ಪೋಷಕಾಂಶಗಳನ್ನೂ ಹೊಂದಿರುವ ಹಾಲು ಸೃಷ್ಟಿಯ ಪರಿಪೂರ್ಣಕ್ಕೆ ಹತ್ತಿರದ ನೈಸರ್ಗಿಕ ಆಹಾರ ವೆಂದು ಪರಿಗಣಿತವಾಗಿದೆ. ಶುದ್ಧ ಮತ್ತು ಗುಣ ಮಟ್ಟದ ಹಾಲು ಉತ್ಪಾದನೆ ಮತ್ತು ಪೂರೈಕೆಗೆ ಆದ್ಯತೆ ನೀಡಬೇಕಿದೆ.
(ಲೇಖಕರು: ನಿವೃತ್ತ ಜಂಟಿ ನಿರ್ದೇಶಕರು, ಕೆ.ಎಂ.ಎಫ್.)
– ಡಿ.ಎಸ್.ಹೆಗಡೆ