Advertisement
ಓದುವ, ಬರೆಯುವ ಮತ್ತದನ್ನು ಗ್ರಹಿಸಿ, ಪರಿಣಾಮಕಾರಿಯಾಗಿ ಸಂವಹನ ನಡೆಸುವ ಸಾಮರ್ಥ್ಯವನ್ನು ಸಾಕ್ಷರತೆ ಎಂದು ಪರಿಗಣಿಸಲಾಗುತ್ತದೆ. ಸಾಮಾಜಿಕ ಮತ್ತು ಮಾನವನ ಅಭಿವೃದ್ಧಿಗೆ ಅದೊಂದು ಇಂಧನ. ಸಾಕ್ಷರತೆ ಶಿಕ್ಷಣದ ಪಂಚಾಂಗ ಮಾತ್ರವಲ್ಲದೆ ಅಭಿವೃದ್ಧಿ ಶೀಲ ರಾಷ್ಟ್ರದ ಬೆನ್ನೆಲುಬು. ಭಾರತದಲ್ಲಿ ವಯಸ್ಕ ಸಾಕ್ಷರ ತೆಯು 15 ವರ್ಷ ಮೇಲ್ಪಟ್ಟವರಿಂದ ಮತ್ತು ಯುವ ಸಾಕ್ಷರತೆಯನ್ನು 15 ರಿಂದ 24 ವರ್ಷದೊಳಗಿನವರಿಂದ ಅಳೆಯಲ್ಪಡುತ್ತದೆ.
Related Articles
Advertisement
2011 ರ ಜನಗಣತಿಯಂತೆ ಭಾರತ ಶೇ. 74 (ಇತ್ತೀಚೆಗಿನ ಸರ್ವೇಯಂತೆ ಶೇ.77) ಸಾಕ್ಷರತಾ ಪ್ರಮಾಣ ಸಾಧಿಸಿದೆ. ಇದರಲ್ಲಿ ಪುರುಷ ಸಾಕ್ಷರತಾ ದರ ಶೇ.82. ಸ್ತ್ರೀ ಸಾಕ್ಷರತಾ ಪ್ರಮಾಣ 2011 ರಲ್ಲಿ ಶೇ. 65ರಷ್ಟಿತ್ತು. ಕೆಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಕ್ಷರತಾ ದರ ಶೇ. 85. ಕೇರಳ ಶೇ. 94ರಷ್ಟು ಸಾಕ್ಷರತೆ ಸಾಧಿಸು ವುದರ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ ಲಕ್ಷದ್ವೀಪ ಮತ್ತು ಮಿಜೋರಾಂ ದ್ವಿತೀಯ, ತೃತೀಯ ಸ್ಥಾನದಲ್ಲಿದೆ. ಆಂಧ್ರಪ್ರದೇಶದ ಸಾಕ್ಷರತಾ ಪ್ರಮಾಣ ಶೇ.66 ಆಗಿದ್ದು ಕೊನೆಯ ಸ್ಥಾನದಲ್ಲಿದೆ. 1947ರ ಸಮಯದಲ್ಲಿ ಭಾರತದ ಸಾಕ್ಷರತಾ ದರ ಶೇ. 12ರಷ್ಟಾಗಿತ್ತು.
ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಯ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳುತ್ತದೆ. ಅದಕ್ಕಾಗಿ ಅದರಲ್ಲಿ ಹಲವು ಅಂಶಗಳನ್ನು ಸೇರಿಸಲಾಗಿದೆ. ಸಂವಿಧಾನದ ಪರಿವಿಡಿ 30ರಂತೆ, ಅಲ್ಪ ಸಂಖ್ಯಾಕರ ಶಿಕ್ಷಣ, ನಿರ್ದೇ ಶಕ ತಣ್ತೀಗಳಡಿ ಎಲ್ಲ ಭಾರತೀಯರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ, ಪರಿವಿಡಿ 21 (ಎ) ಅನ್ವಯ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನ ಅವಕಾಶ, ಪರಿಚ್ಛೇದ 15, 17 ಮತ್ತು 46 ರಂತೆ ದುರ್ಬಲ ವರ್ಗದವರಿಗೆ ಶಿಕ್ಷಣ ಇವುಗಳಲ್ಲಿ ಕೆಲವು.
ಸರಕಾರಗಳಿಂದ ಉತ್ತೇಜನ :
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗಿನಿಂದಲೂ ಎಲ್ಲ ಸರಕಾರಗಳೂ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಲೇ ಬಂದಿವೆ. ಸ್ವಾತಂತ್ರ್ಯಪೂರ್ವಕ್ಕೆ ಹೋಲಿಸಿದಲ್ಲಿ ದೇಶ ಶೈಕ್ಷಣಿಕವಾಗಿ ಗಮನಾರ್ಹ ಸಾಧನೆಗೈದಿದೆಯಾದರೂ ಶತಪ್ರತಿಶತ ಸಾಕ್ಷರತೆಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳು, ಬಡವರು, ಪರಿಶಿಷ್ಟ ಜಾತಿ, ಪಂಗಡ, ಬುಡಕಟ್ಟು ಜನಾಂಗದವರು ಇನ್ನೂ ಶಾಲೆಗಳ ಮೆಟ್ಟಲೇರದಿರುವುದು ದೇಶ ಸಾಕ್ಷರತೆಯಲ್ಲಿ ಹಿಂದುಳಿಯಲು ಪ್ರಮುಖ ಕಾರಣಗಳಾಗಿವೆ. ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿದ್ಯಾರ್ಥಿ ವೇತನ, ವಸತಿ ಸಹಿತ ಶಾಲೆಗಳು, ಉಚಿತ ವಿದ್ಯಾರ್ಥಿ ನಿಲಯ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಲೇಖನ ಸಾಮಗ್ರಿಗಳು, ಸೈಕಲ್ ಆದಿಯಾಗಿ ಹತ್ತು ಹಲವು ಯೋಜನೆ ಗಳನ್ನು ಅನುಷ್ಠಾನಗೊಳಿಸಿವೆ. 1995ರಲ್ಲಿ ಜಾರಿಗೆ ಬಂದ ಮಧ್ಯಾಹ್ನದ ಬಿಸಿಯೂಟ ಯೋಜನೆ ಇವುಗಳಲ್ಲಿ ಅತ್ಯಂತ ಮಹತ್ವಾ ಕಾಂಕ್ಷಿ ಯೋಜನೆಯಾಗಿದ್ದು ಇದರಿಂದ ಮಕ್ಕಳಿಗೆ ಶಿಕ್ಷಣದ ಜತೆಜತೆಯಲ್ಲಿ ಪೌಷ್ಟಿಕ ಆಹಾರವನ್ನು ನೀಡಲು ಸಾಧ್ಯವಾಗಿದೆ.
ನಿಪುಣ್ ಭಾರತ್:
ನೂತನ ಶಿಕ್ಷಣ ನೀತಿಯಡಿಯಲ್ಲಿ “ನಿಪುಣ್ ಭಾರತ್’ ಎಂಬ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಇದಕ್ಕೆ 2021-22 ಸಾಲಿನಲ್ಲಿ 2,688 ಕೋ.ರೂ.ಗಳನ್ನು ಮೀಸಲಿಡಲಾಗಿದೆ. 3 ರಿಂದ 9 ವರ್ಷದ ಮಕ್ಕಳಲ್ಲಿ ಸಾಕ್ಷರತೆಯ ತಳಹದಿ ಮತ್ತು ಅಂಕೆ ಸಂಖ್ಯೆಗಳ ಕೌಶಲವನ್ನು ಸಾಧಿಸುವುದು (ಫೌಂಡೇಶನಲ್ ಲಿಟೆರೆಸಿ ಆಂಡ್ ನ್ಯೂಮೆರೆಸಿ- ಎಫ್ಎಲ್‌ಎನ್) ಈ ಯೋಜನೆಯ ಉದ್ದೇಶ. 2026-27 ರಲ್ಲಿ ಪ್ರತಿಯೊಂದು ವಿದ್ಯಾರ್ಥಿಯೂ ಎಫ್ಎಲ್‌ಎನ್ ಕೌಶಲವನ್ನು ಪಡೆಯುವಂತಾಗಬೇಕು. ಪ್ರಾಥಮಿಕ ಶಾಲೆಯ ಹಂತದಲ್ಲಿ ಚಟುವಟಿಕೆ – ಕಥೆ, ಕಲೆ, ಆಧಾರಿತ ಪಾಠ ನಿಪುಣ್ ಯೋಜನೆಯ ಪ್ರಮುಖ ಅಂಶಗಳಲ್ಲೊಂದಾಗಿದೆ. ಅಂಗನವಾಡಿ, ಕಿರಿಯ ಪ್ರಾಥಮಿಕ ಹಂತದ ಶಿಕ್ಷಕರಿಗೆ ಈ ನಿಟ್ಟಿನಲ್ಲಿ ವಿಶೇಷ ತರಬೇತಿಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆಯಲ್ಲದೆ ಯೋಜನೆಯ ಯಶಸ್ಸಿಗಾಗಿ ಹೆತ್ತವರು ಮತ್ತು ಸಮುದಾಯದ ಸಹಕಾರವನ್ನು ಪಡೆಯಲಾಗುವುದು.
-ಜಲಂಚಾರು ರಘುಪತಿ ತಂತ್ರಿ, ಉಡುಪಿ