ಬೆಳ್ತಂಗಡಿ: ಸರಕಾರವು ಸಾಮಾ ಜಿಕ ಭದ್ರತೆ ಹೆಸರಿನಲ್ಲಿ ಸಾರ್ವಜನಿಕ ಉದ್ದಿಮೆ ಗಳನ್ನು ಖಾಸಗೀಕರಣ ಮಾಡಿ, ಕಾರ್ಪೊ ರೇಟ್ ಕಂಪೆನಿಗಳಿಗೆ ಲಾಭ ಮಾಡುತ್ತಿದೆ. ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದರೂ ಉದ್ಯೋಗ ಇಲ್ಲದಾಗಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಹೇಳಿದರು.
ಅವರು ಬುಧವಾರ ಬೆಳ್ತಂಗಡಿಯಲ್ಲಿ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ, ಶ್ರಮಶಕ್ತಿ ಸ್ವ ಸಹಾಯ ಸಂಘ ಹಾಗೂ ಸೆಂಟರ್ ಆಫ್ ಇಂಡಿಯಮ್ ಟ್ರೇಡ್ ಯೂನಿಯನ್ಸ್ (ಸಿಐಟಿಯು)ನ ಸಹಯೋಗದಲ್ಲಿ ನಡೆದ ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಾಜಿ ಶಾಸಕ ಕೆ. ವಸಂತ ಬಂಗೇರ ಮಾತನಾಡಿದರು. ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಎಸ್.ಎಂ. ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬೀಡಿ ಲೇಬಲ್ ಹಾಕಿ ಶಾಲೆ ಕಲಿತು ಪಿಯುಸಿಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆದ ಉಪ್ಪಿನಂಗಡಿಯ ಸ್ನೇಹಾ ಅವರನ್ನು ಗೌರವಿಸಲಾಯಿತು.
ಸಿಐಟಿಯು ಬೆಳ್ತಂಗಡಿ ತಾ| ಸಮಿತಿಯ ಪ್ರಧಾನ ಕಾರ್ಯದರ್ಶಿ ವಸಂತ ನಡ, ಕಾರ್ಯದರ್ಶಿ ರೋಹಿಣಿ ಪೆರಾಡಿ, ಶ್ರಮಶಕ್ತಿ ಸ್ವಸಹಾಯ ಸಂಘದ ಸಂಚಾಲಕರಾದ ಸುಕನ್ಯಾ, ಸಂಜೀವ ಆರ್, ರೈತ ಮುಂದಾಳು ಶಿವಾನಂದ, ಕಾರ್ಮಿಕ ಮುಂದಾಳುಗಳಾದ ಜಯಂತಿ, ರಮಣಿ, ಮಮತಾ, ಪುಷ್ಪಾ ಉಪಸ್ಥಿತರಿದ್ದರು.
ಸಹಾಯಕ ತೋಟಗಾರಿಕಾ ನಿರ್ದೇಶಕ ಮಹಾವೀರ್ ಅವರು ತಮ್ಮ ಇಲಾಖೆಯ ಸೌಲಭ್ಯಗಳ ಕುರಿತು ವಿವರಿಸಿದರು. ಸಿಐಟಿಯು ಬೆಳ್ತಂಗಡಿ ತಾ| ಸಮಿತಿ ಅಧ್ಯಕ್ಷ ಶಿವಕುಮಾರ್ ಎಸ್.ಎಂ. ನಿರೂಪಿಸಿದರು.
ಸರಕಾರ ಮಾಲಕರ ಪರ
ವಿವಿಧ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಎಪಿಎಸ್‌ನಂತಹ ಯೋಜನೆಗಳನ್ನು ತಂದು ಮಾಲಕರಿಗೆ ಲಾಭ ಮಾಡಿಕೊಡುವ ಕಾರ್ಯವನ್ನು ಸರಕಾರ ಮಾಡಿಕೊಡುತ್ತಿದೆ. ಕಳೆದ 5 ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದ ಕೇಂದ್ರ ಸರಕಾರಕ್ಕೆ 50 ಲಕ್ಷ ಉದ್ಯೋಗ ಸೃಷ್ಟಿಯೂ ಸಾಧ್ಯವಾಗಿಲ್ಲ. ಈ ಸಮಯದಲ್ಲಿ ಶ್ರೀಮಂತರ ಆದಾಯ ಶೇ. 73 ಹೆಚ್ಚಾಗಿದ್ದು, ಸಾಮಾನ್ಯ ಜನರ ಆದಾಯ ಶೇ. ಒಂದೂ ಹೆಚ್ಚಳವಾಗಿಲ್ಲ.
– ವಸಂತ ಆಚಾರಿ
ಸಿಐಟಿಯು ರಾಜ್ಯ ಉಪಾಧ್ಯಕ್ಷರು