Advertisement

World Kundapura Kannada Day: ಬೆಂಗಳೂರಿನಲ್ಲಿ ಕುಂದಾಪ್ರ ಹಬ್ಬದ ಸಂಭ್ರಮ

10:46 AM Aug 05, 2024 | Team Udayavani |

ಬೆಂಗಳೂರು: ಕಬ್ಬರ, ಉರಿಯ, ಕಡ್ಲಾ, ಬಂಟಾ (ವಿವಿಧ ತಳಿಯ ಅಂಕದ ಕೋಳಿಗಳು )ನಡುವಿನ ರಣರೋಚಕ ಕಾದಾಟ ಬಸವೇಶ್ವರ ನಗರದ ನೇತಾಜಿ ಮೈದಾನದ ಧೂಳೆಬ್ಬಿಸಿದೆ. ಸಹಸ್ರ ಕಣ್ಣುಗಳು ರೋಚಕವಾದ ಗಮ್ಮತ್ತಿನ ಅಣಕು ಕೋಳಿಪಡಿಯನ್ನು ನೋಡಿ ಸಂಭ್ರಮಿಸುತ್ತಿರುವ ಅಪರೂಪದ ದೃಶ್ಯ ಕಂಡು ಬಂದಿದ್ದು ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮದಲ್ಲಿ.

Advertisement

ಭಾನುವಾರ ಟೀಂ ಕುಂದಾಪುರಿಯನ್ಸ್‌ ಹಮ್ಮಿಕೊಂಡಿದ್ದ ವಿಶ್ವಕುಂದಾಪ್ರ ಕನ್ನಡ ದಿನಾಚರಣೆಯಲ್ಲಿ ಕುಂದ ಗನ್ನಡಿಗರ ಸಂಪೂರ್ಣ ಸಂಸ್ಕೃತಿ ಅನಾವರಣವಾಯಿತು. ಅನೇಕ ದಶಕಗಳ ಹಿಂದೆ ಬದುಕು ಕಟ್ಟಿಕೊಳ್ಳಲು ಬೆಂಗಳೂರು ಬಂದವರು, ತಮ್ಮೂರಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆ ತಲುಪಿಸಬೇಕು ಎನ್ನುವ ಹಂಬಲದಲ್ಲಿರುವ ಅಪರೂಪದ “ಬೆಂಗಳೂರು- ಕುಂದಾಪುರಿಯನ್ಸ್‌’ ಮಿಲನಕ್ಕೆ ಭಾನುವಾರ ನಗರ ನೇತಾಜಿ ಮೈದಾನ ಸಾಕ್ಷಿಯಾಯಿತು.

ಗ್ರಾಮೀಣ ಕ್ರೀಡೆ ಸೊಬಗು: ಗ್ರಾಮೀಣ ಕ್ರೀಡೆ ನೋಡುಗರಿಗೆ ಮನೋರಂಜನೆಯನ್ನು ನೀಡಿತ್ತು. 6 ವರ್ಷದ ಮಕ್ಕಳಿಂದ ಹಿಡಿದು 70 ವರ್ಷದ ಹಿರಿಯರು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಮಕ್ಕಳಿಗಾಗಿ ಆಯೋಜಿಸಿದ್ದ ಛದ್ಮವೇಷ, ಕಪ್ಪೆ ಓಟ, ರಗೋಲಿ, ಸ್ಪರ್ಧೆಯಲ್ಲಿ 6 ವರ್ಷದ ಮಕ್ಕಳಿಂದ ಹಿಡಿದು 14 ವರ್ಷದೊಳಗಿನ ಮಕ್ಕಳ ಸಂಭ್ರಮದಿಂದ ಭಾಗವಹಿಸಿದ್ದರು. ಹೂವು ನೆಯ್ಯುವುದು, ಮಹಿಳೆಯರಿಗಾಗಿ ಹಲಸಿನ ಕೊಟ್ಟೆ ಕೊಟ್ಟುವುದು, ಮಡ್ಲ್ ನೆಯ್ಯುವ ಸ್ಪರ್ಧೆ, ಇನ್ನೂ ದಂಪತಿಗಳಿಗಾಗಿ ದಂಪತಿಗಳಿಗೆ ಅಡಿಕೆ ಹಾಳೆ ಓಟ ಹಾಗೂ ಹಣೆಬೊಂಡ ಓಟ, ಗಿರ್ಗಿಟ್ಲೆ ಸೇರಿದಂತೆ ಇತರೆ ಸ್ಪರ್ಧೆಗಳು ನಡೆಯಿತು. ಎಲ್ಲರೂ ವಯಸ್ಸಿನ ಅಂತರವನ್ನು ಮರೆತು ಭಾಗವಹಿಸಿದ್ದರು.

ಬಸ್‌ಗಳಲ್ಲಿ ಕುಂದಕನ್ನಡ: ಸಾಮಾನ್ಯವಾಗಿ ಬೆಂಗಳೂರು ಬಸ್‌ಗಳಲ್ಲಿ ಹೆಚ್ಚಾಗಿ ಕನ್ನಡ ಬಿಟ್ಟು ಬೇರೆ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಹೆಚ್ಚಾಗಿ ಕಾಣಸಿಗುತ್ತದೆ. ಆದರೆ, ಭಾನುವಾರ ಬಸವೇಶ್ವರ ನಗರದ ಸಾರ್ವಜನಿಕ ಸಾರಿಗೆಯಲ್ಲಿ ಕುಂದಕನ್ನಡ ಮಾತುಗಳು ಕೇಳಿ ಬಂತು. ಪರಿಚಯವಿಲ್ಲದ ಮುಖ ಗಳು ಒಬ್ಬರನೊಬ್ಬರು ನೋಡಿ ಮುಗುಳು ನಗೆ ಬೀರಿ ನಾವ್‌ ಕುಂದಾಪ್ರದವರು, ವಿಶ್ವ ಕುಂದಾಪ್ರ ಹಬ್ಬಕ್ಕೆ ಬಂದಿದ್ದ ನೀವ್‌ ಎನ್ನುವ ಮಾತುಗಳು ಕೇಳಿ ಬಂತು.

ಹಳ್ಳಿ ಊಟ ಸ್ವಾದ: ಕುಂದಕನ್ನಡಿಗರು ಮಾತ್ರವಲ್ಲದೇ ಬೇರೆ ಬೇರೆ ಜಿಲ್ಲೆಗಳ ರಾಜ್ಯಗಳ ಜನರು ಕುಂದಾಪ್ರ ದಿನಾಚರಣೆಗೆ ಬಂದಿರುವುದು ವಿಶೇಷ ಮೆರಗು ನೀಡಿತ್ತು. ಊಟಕ್ಕೆ ಕೊಚ್ಚಿಗೆ ಗಂಜಿ, ಉಪ್ಪಿನಕಾಯಿ, ಉಪ್ಪಿನಹೊಡಿ ನೀಡಲಾಗಿದೆ.

Advertisement

ನಾನು ಮೂಲತಃ ಬ್ರಹ್ಮಾವರ ತಾಲೂಕಿನವಳು. ಬೆಂಗಳೂರಿಗೆ ಬಂದು 9 ವರ್ಷಗಳು ಸಮೀಪಿಸಿದೆ. ಇಂದಿಗೂ ಕುಂದಗನ್ನಡವೆಂದರೆ ಸೆಳೆತ. ವಿಶ್ವ ಕುಂದಾಪ್ರ ಹಬ್ಬ ನಮ್ಮೂರಿನ ನೆನಪು ಮರುಕಳಿಸುವಂತೆ ಮಾಡಿದೆ. ನಾವು ಬಾಲ್ಯದಲ್ಲಿ ಆಡುತ್ತಿದ್ದ ಗ್ರಾಮೀಣ ಕ್ರೀಡೆಗಳು ಇಂದು ನಮ್ಮ ಮಕ್ಕಳು ಆಡುವಂತಾಗಿದೆ. – ಸೌಜನ್ಯ ಪಾವನ್‌, ಬೆಂಗಳೂರು ನಿವಾಸಿ

ನಾವು ಮೂಲತಃ ಬೆಂಗಳೂರಿ ನವರು. ಪಕ್ಕದ ಮನೆಯವರ ಕುಂದಕನ್ನಡದವರು. ಅವರೊಂದಿಗೆ ಇವತ್ತು ಬಂದಿದ್ದು. ಎಲ್ಲಿಯೂ ಭಾಷೆಯ ಬಗ್ಗೆ ಕಾಣದ ಸಂಭ್ರಮ ಮನೆ ಮಾಡಿದೆ. ಇಲ್ಲಿನ ಗ್ರಾಮೀಣ ಕ್ರೀಡೆ ನೋಡವುದೇ ಒಂದು ತರಹದ ಮಜಾ ನೀಡಿದೆ. - ಉಷಾ ಶಂಕರ್‌, ಬೆಂಗಳೂರಿನ ನಿವಾಸಿ

ಕುಂದಾಪುರ ಕನ್ನಡ ಬದುಕಿನ ಭಾಷೆ: ನಟ ರಮೇಶ್‌ ಭಟ್‌: 

ಬೆಂಗಳೂರು: ಕುಂದಾಪುರ ಕನ್ನಡ ಬದುಕಿನೊಂದಿಗೆ ಬೆಸೆದ ಭಾಷೆಯಾಗಿದೆ. ಅವರು ತಮ್ಮ ತಾಯಿಗೆ ನೀಡುವಷ್ಟೇ ಗೌರವವನ್ನು ತಮ್ಮ ಭಾಷೆ ನೀಡುತ್ತಾರೆ ಎಂದು ಚಿತ್ರನಟ ರಮೇಶ್‌ ಭಟ್‌ ತಿಳಿಸಿದರು.

ಬಸವೇಶ್ವರ ನಗರದ ನೇತಾಜಿ ಮೈದಾನದಲ್ಲಿ ಟೀಂ ಕುಂದಾಪುರಿಯನ್ಸ್‌ ಭಾನುವಾರ ಹಮ್ಮಿ ಕೊಂಡಿದ್ದ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ಇದು ಬದುಕಿನ ಭಾಷೆಯೇ ಹೊರತು ಉದ್ಯಮದ ಭಾಷೆಯಲ್ಲ. ಹಾಗಾಗಿ ಇಂದಿಗೂ ಕುಂದಾಪುರ ಭಾಷೆ ಜೀವಂತವಾಗಿದೆ. ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಮಾತೃ ಭಾಷೆ ಹಾಗೂ ಮನೆಯ ಮೂಲ ಭಾಷೆ ಮರೆಯಬಾರದು. ನಮ್ಮ ಭಾಷೆಯ ಮಹತ್ವ ತಿಳಿದುಕೊಂಡು ಪ್ರತಿಯೊಬ್ಬರೂ ವ್ಯವಹರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕುಂದಾಪುರ ರತ್ನ ಪ್ರಶಸ್ತಿ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಸಾಧನೆ ಮಾಡಿದ ಅರೆಹೊಳೆ ಸದಾಶಿವ ರಾವ್‌, ಚಿತ್ರ ನಿರ್ದೇಶಕ ಯಾಕುಬ್‌ ಖಾದರ್‌ ಅವರನ್ನು ಸನ್ಮಾನಿಸಲಾಯಿತು. “ಕುಂದಾಪುರ ಸಮ್ಮಾನ’ ಗೌರವವನ್ನು ಯಕ್ಷಗಾನ ಕಲಾವಿದ ಶ್ರೀನಿವಾಸ ಸಾಸ್ತಾನ, ಗೌರಿ ಕೆ., ಮುಳುಗುತಜ್ಞ ಮಂಜುನಾಥ ಕೊಡ್ಲಾಡಿ, ಅಂತಾರಾಷ್ಟ್ರೀಯ ಕ್ರೀಡಾಪಟು ವಿಠ್ಠಲ್‌, ಸಮಾಜ ಸೇವೆ ದಿನೇಶ್‌ ಬಾಂದವ್ಯ, ಶಿಕ್ಷಣ ಸುಜಾತ, ಪ್ರಗತಿ ಪರ ಕೃಷಿಕ ಕೃಷ್ಣ ಕುಲಾಲ್‌ ಆವರ್ಸೆ ಅವರಿಗೆ ನೀಡಿಲಾಯಿತು.

ಶಾಸಕ ಗುರುರಾಜ್‌ ಗಂಟಿಹೊಳೆ, ಮಹಾಲಕ್ಷ್ಮೀ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ, ನಟಿ ಅಮೃತಾ ರಾಮಮೂರ್ತಿ, ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next