Advertisement
ಈ ಪರಿಸ್ಥಿತಿ ಬದಲಾಗಬೇಕಾದುದು ಅತ್ಯಗತ್ಯ.ಸಮರ್ಪಕವಾದ ತರಬೇತಿ ಮತ್ತು ಸಹಾಯ ಮಾಡುವ ಮನಸ್ಸಿದ್ದರೆ ನಾವೆಲ್ಲರೂ ಸಿಪಿಆರ್ ಕಲಿತುಕೊಂಡು ಜೀವಗಳನ್ನು ಉಳಿಸಲು ನೆರವಾಗಬಹುದು. ಸಿಪಿಆರ್ ಕಲಿಯುವುದು ಬಹಳ ಸುಲಭ. ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಅದು ಮತ್ತೆ ರಕ್ತವನ್ನು ಪಂಪ್ ಮಾಡುವಂತೆ ಮಾಡುವುದು ಹಾಗೂ ಶ್ವಾಸಕೋಶಗಳು ಕೆಲಸ ಸ್ಥಗಿತಗೊಳಿಸಿದಾಗ ಉಸಿರುಗಳ ಮೂಲಕ ದೇಹಕ್ಕೆ ಆಮ್ಲಜನಕವನ್ನು ಒದಗಿಸುವ ತಂತ್ರವೇ ಸಿಪಿಆರ್ ಅಥವಾ ಕಾರ್ಡಿಯೋಪಲ್ಮನರಿ ರಿಸಸಿಟೇಶನ್ ಅಥವಾ ಹೃದಯ ಪುನರುಜ್ಜೀವನ. ವ್ಯಕ್ತಿ ಸಾವಿಗೆ ಸನಿಹದಲ್ಲಿರುತ್ತಾನೆ ಮತ್ತು ಬದುಕಿರುವ ಲಕ್ಷಣಗಳು ಇರುವುದಿಲ್ಲ. ಇದು ಜೀವ ಉಳಿಸು ವುದಕ್ಕಾಗಿ ಸಿಪಿಆರ್ ಆರಂಭಿಸಬೇಕಾದ ಕ್ಷಣ.
Related Articles
Advertisement
ವ್ಯಕ್ತಿಯ ಆರೈಕೆ ನಿಮ್ಮಿಂದ ವೈದ್ಯಕೀಯ ಸೇವೆಗೆ ಹಸ್ತಾಂತರವಾಗುವ ತನಕ ಅಥವಾ ನೀವು ಸಿಪಿಆರ್ ನೀಡುತ್ತಿರುವ ವ್ಯಕ್ತಿ ಸಜೀವಗೊಂಡು ಬದುಕುಳಿದಿರುವ ಲಕ್ಷಣಗಳನ್ನು ತೋರ್ಪಡಿಸುವ ತನಕ ಸಿಪಿಆರ್ ಅನ್ನು ಅವಿಶ್ರಾಂತವಾಗಿ ಮುಂದುವರಿಸಬೇಕು. ಸಿಪಿಆರ್ ನೀಡುವಾಗ ನೀವು ವ್ಯಕ್ತಿಯ ಬದಿಯಲ್ಲಿ ಮೊಣಕಾಲೂರಿ ವ್ಯಕ್ತಿಯ ಮೇಲೆ ಬಾಗಿರಬೇಕು, ಮೊಣಕೈಗಳನ್ನು ಬಾಗಿಸದೆ ಎರಡೂ ಕೈಗಳ ಮೇಲೆ ನಿಮ್ಮ ದೇಹದ ಭಾರವನ್ನು ಹಾಕುವ ಮೂಲಕ ನೀವು ಬೇಗನೆ ದಣಿಯದಂತೆ ಅದುಮುವಿಕೆಗಳನ್ನು ಒದಗಿಸಬೇಕು.
ಸಿಪಿಆರ್ ಎಂದರೆ ಜೀವವನ್ನು ಉಳಿಸುವ ಒಂದು ಪ್ರಯತ್ನ. ಎದೆ ಅದುಮುವ ಮೂಲಕ (ಸಿಪಿಆರ್‌ನ ಒಂದು ಭಾಗ) ವೈದ್ಯಕೀಯ ನೆರವು ಆಗಮಿಸುವ ತನಕ ಹೃದಯಾಘಾತಕ್ಕೆ ಈಡಾದ ವ್ಯಕ್ತಿಯ ಜೀವಧಾರಕ ಅಂಗಾಂಗಗಳಿಗೆ ರಕ್ತ ಸರಬರಾಜು ನಡೆಯುವುದನ್ನು ಮುಂದುವರಿಸಬಹುದು. ವ್ಯಕ್ತಿಯ ಮಿದುಳಿಗೆ ಹಾನಿಯಾಗದೆ ಆತನಿಗೆ ಬದುಕುವ ಇನ್ನೊಂದು ಅವಕಾಶ ಒದಗಿಸಬಹುದು.
ಸಿಪಿಆರ್ ಕಲಿಯಬಹುದು. ಬದುಕು ಮತ್ತು ಸಾವಿನ ನಡುವಣ ಕೊಂಡಿಯಾಗಿ. ಅಗತ್ಯ ದಲ್ಲಿದ್ದವರಿಗೆ ಬದುಕಿನ ಕೊಡುಗೆಯನ್ನು ನೀಡಿ.
ಸಿಪಿಆರ್ ಜೀವ ಉಳಿಸಿದ ಮೂರು ಪ್ರಕರಣಗಳುನನ್ನ ಅಜ್ಜ ಒಂದು ತಿಂಗಳಿನಿಂದ ಬೆನ್ನುನೋವು ಮತ್ತು ಭುಜ ನೋವು ಎನ್ನುತ್ತಿದ್ದರು. ಎರಡು ದಿನಗಳಿಂದ ಅದು ಹೆಚ್ಚಾಗಿತ್ತು. ನಾವು ಆಸ್ಪತ್ರೆಗೆ ಹೋದೆವು ಮತ್ತು ಆರಂಭಿಕ ತಪಾಸಣೆಗಳು ನಡೆಯುತ್ತಿದ್ದವು. ಅಷ್ಟರಲ್ಲಿ ಅಜ್ಜ ಹಠಾತ್ತನೆ ಮಾತುಕತೆ ಮತ್ತು ಪ್ರತಿಸ್ಪಂದನೆ ನಿಲ್ಲಿಸಿಬಿಟ್ಟರು. ತತ್‌ಕ್ಷಣ ನಾನು ಸಿಪಿಆರ್ ಆರಂಭಿಸಿದೆ. ತುರ್ತು ನಿಗಾ ಘಟಕದಲ್ಲಿ ಹತ್ತು ನಿಮಿಷಗಳ ಸಿಪಿಆರ್ ಬಳಿಕ ಅಜ್ಜನ ಹೃದಯ ಮತ್ತೆ ರಕ್ತ ಪಂಪ್ ಮಾಡುವುದನ್ನು ಆರಂಭಿಸಿತು. ಅಜ್ಜನಿಗೆ ಆ್ಯಂಜಿಯೊಗ್ರಾಮ್ ನಡೆಸಿದಾಗ ಬ್ಲಾಕ್‌ಗಳು ಇರುವುದು ಗೊತ್ತಾಯಿತು. ಬಳಿಕ ಅವರಿಗೆ ಸ್ಟೆಂಟ್ ಅಳವಡಿಸಲಾಯಿತು. ನಾಲ್ಕು ತಾಸುಗಳ ಬಳಿಕ ಅಜ್ಜ ಪ್ರತಿಸ್ಪಂದನೆ ಆರಂಭಿಸಿದರು. ಮೂರು ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದ ಬಳಿಕ ಮನೆಗೆ ಮರಳಿದರು. ಈಗ ಅಜ್ಜ ಎಲ್ಲರಂತಿದ್ದು, ನಮ್ಮೊಂದಿಗೆ ನಗುನಗುತ್ತಾ ಬದುಕುತ್ತಿದ್ದಾರೆ. ಸಿಪಿಆರ್ ಅವರನ್ನು ಉಳಿಸಿದೆ. ಎಲ್ಲರೂ ಸಿಪಿಆರ್ ತರಬೇತಿಯನ್ನು ಪಡೆಯಬೇಕು. ಆ ಮೂಲಕ ನಾನು ತತ್‌ಕ್ಷಣ ಪ್ರತಿಕ್ರಿಯಿಸಿ ನನ್ನ ಅಜ್ಜನನ್ನು ಉಳಿಸಿದಂತೆ ಎಲ್ಲರಿಗೂ ಜೀವ ಉಳಿಸುವ ಅವಕಾಶ ಒದಗಬೇಕು.
– ಅಮಿತಾ ನಾಯಕ್,
ನರ್ಸ್, ಮಣಿಪಾಲ ಮದುವೆ ಸಮಾರಂಭಕ್ಕಾಗಿ ನಮ್ಮ ಮನೆ ಸಡಗರದಿಂದ ಸಜ್ಜಾಗುತ್ತಿತ್ತು. ಮನೆಯನ್ನೆಲ್ಲ ಶೃಂಗರಿಸಲಾಗಿತ್ತು. ಸಂಭ್ರಮದ ನಡುವೆ ಆ ದಿನ ಬೆಳಗ್ಗೆ ನನ್ನ ಅಜ್ಜ ಎಲ್ಲರಿಗಿಂತ ಮುಂಚೆ ಎದ್ದು ಎಲ್ಲರಿಗೂ ಸಲಹೆ – ಸೂಚನೆಗಳನ್ನು ಕೊಡುತ್ತಿದ್ದರು. ಅವರು ಗಿಡಗಳಿಗೆ ನೀರುಣಿಸುತ್ತಿದ್ದಂತೆಯೇ ಧಡ್ಡನೆ ಬಿದ್ದುಬಿಟ್ಟ ಸದ್ದು ಕೇಳಿಸಿತು. ಅಜ್ಜಿ ಸಹಿತ ನಾವೆಲ್ಲರೂ ಹೊರಕ್ಕೆ ಧಾವಿಸಿ ನೋಡಿದಾಗ ಅಜ್ಜ ನೆಲದಲ್ಲಿ ಬಿದ್ದಿದ್ದರು. ಆರಂಭದಲ್ಲಿ ಅವರಲ್ಲಿ ಪ್ರತಿಸ್ಪಂದನೆ ಇತ್ತು. ಆಸ್ಪತ್ರೆಗೆ ಧಾವಿಸಿದೆವು. ಅಷ್ಟರಲ್ಲಿ ಅವರಲ್ಲಿದ್ದ ಅಲ್ಪಸ್ವಲ್ಪ ಪ್ರತಿಸ್ಪಂದನೆಯೂ ಇಲ್ಲವಾಗಿತ್ತು. ಅಜ್ಜನಿಗೆ ಹೃದಯಾಘಾತವಾಗಿರುವುದು ಆಸ್ಪತ್ರೆಯಲ್ಲಿ ತಿಳಿಯಿತು. ಎಮರ್ಜೆನ್ಸಿ ರೂಮ್‌ನಲ್ಲಿ ಬೀಪ್‌ಗ್ಳು, ಇನ್ನಿತರ ಸದ್ದುಗಳೇ ಕೇಳಿಬರುತ್ತಿದ್ದವು. ಅರ್ಧ ತಾಸಿನ ಕಾತರದ ಕಾಯುವಿಕೆಯ ಬಳಿಕ, ವೈದ್ಯರು ಸಿಪಿಆರ್ ನೀಡಿದ್ದರಿಂದ ಅಜ್ಜನ ಹೃದಯ ಮತ್ತೆ ರಕ್ತ ಪರಿಚಲನೆ ನಡೆಸಲಾರಂಭಿಸಿದೆ ಎಂಬುದು ತಿಳಿಯಿತು. ಅವರನ್ನು ಐಸಿಯುಗೆ ವರ್ಗಾಯಿಸಲಾಯಿತು. ಕೆಲವು ತಾಸುಗಳ ಬಳಿಕ ಅಜ್ಜ ಮಾತನಾಡಲಾರಂಭಿಸಿದರು. ಒಂದೆರಡು ದಿನಗಳ ಬಳಿಕ ಹಿಂದಿನಂತೆಯೇ ಅಜ್ಜ ತಮಾಷೆಯಾಗಿ ಮಾತುಕತೆ ಆರಂಭಿಸಿದರು. ನಿಧಾನವಾಗಿ ಸಹಜ ಸ್ಥಿತಿಗೆ ಮರಳಿದರು. ಈಗ ನಮ್ಮ ಹೊಟೇಲ್ ನೋಡಿಕೊಳ್ಳುವ ತಮ್ಮ ಮಾಮೂಲಿ ದಿನಚರಿಯನ್ನು ಆರಂಭಿಸಿದ್ದಾರೆ. ಸಿಪಿಆರ್ ನನ್ನ ಅಜ್ಜನನ್ನು ಉಳಿಸಿದೆ. ಬಹುತೇಕ ಹೃದಯಾಘಾತ ಪ್ರಕರಣಗಳು ಮನೆಯಲ್ಲಿ ಸಂಭವಿಸುವುದರಿಂದ ಎಲ್ಲರಿಗೂ ಸಿಪಿಆರ್ ತಿಳಿದಿರಬೇಕು ಎನ್ನುವುದು ನನ್ನ ಅಭಿಪ್ರಾಯ. ವೈದ್ಯಕೀಯ ನೆರವು ದೊರೆಯುವವರೆಗೆ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎನ್ನುವುದು ತಿಳಿದಿದ್ದರೆ ನಾವು ನಿಶ್ಚಿತವಾಗಿಯೂ ಪ್ರಾಣ ಉಳಿಸಬಹುದು.
– ಅಭಯ್, ಹೊಟೇಲ್ ಲಾ ಶಾಂಗ್ರಿಲಾ, ಮಣಿಪಾಲ ಅದೊಂದು ಚುಮುಚುಮು ಚಳಿಯ ಮುಂಜಾನೆ, 2012ರ ಜೂನ್ 14ನೇ ತಾರೀಕು. ನಾನು ಅಮೆರಿಕದಲ್ಲಿದ್ದ ನನ್ನ ಮಗನನ್ನು ಕಾಣುವ ಸಲುವಾಗಿ ಅಲ್ಲಿಗೆ ಹೋಗಿದ್ದೆ. ಆ ದಿನ ಅಪ್ಪಂದಿರ ದಿನದ ಕೊಡುಗೆಯಾಗಿ ನನ್ನ ಮಗ ನನಗೆ ಒಂದು ಪ್ರತಿಷ್ಠಿತ ಗಾಲ್ಫ್ ಪಂದ್ಯ ವೀಕ್ಷಣೆಯ ಟಿಕೆಟ್ ತಂದಿದ್ದ. ಆ ಖುಷಿಯಲ್ಲಿ ಮಕ್ಕಳಂತೆ ಓಡಾಡುತ್ತಿದ್ದೆ. ಹಠಾತ್ತಾಗಿ ನನ್ನ ಎದೆಯಲ್ಲಿ ತೀಕ್ಷ್ಣ ನೋವು ಕಾಣಿಸಿಕೊಂಡಿತು. ಏನು ಮಾಡಲೂ ಸಾಧ್ಯವಾಗದೆ ನೆಲಕ್ಕೆ ಕುಸಿದೆ. ಇದಷ್ಟೇ ನನಗೆ ನೆನಪಿರುವುದು. ಎಚ್ಚರವಾಗಿ ಕಣ್ತೆರೆದಾಗ ಆ್ಯಂಬುಲೆನ್ಸ್ ಸದ್ದು ಕೇಳಿಸಿತು, ಅರೆವೈದ್ಯಕೀಯ ಸಿಬಂದಿಯೊಬ್ಬರು, “ಅರೇ ಇವರಲ್ಲಿ ಪ್ರತಿಸ್ಪಂದನೆ ಆರಂಭವಾಗಿದೆ, ವೆಲ್‌ಕಮ್ ಬ್ಯಾಕ್ ಡಾಕ್ಟರ್’ ಅನ್ನುವುದು ಕೇಳಿಸಿತು. ನಾನು ಹಠಾತ್ ಹೃದಯಾಘಾತಕ್ಕೊಳಗಾಗಿ ಗಾಲ್ಫ್ ಕೋರ್ಸ್‌ನಲ್ಲಿಯೇ ನೆಲಕ್ಕೆ ಕುಸಿದದ್ದು ಆಗ ತಿಳಿಯಿತು. ತತ್‌ಕ್ಷಣ ಸುತ್ತಲಿದ್ದವರು ವೈದ್ಯಕೀಯ ನೆರವು ಯಾಚಿಸಿದ್ದರು ಮತ್ತು ಸಿಪಿಆರ್ ಆರಂಭಿಸಿದ್ದರು. ಎಇಡಿಯನ್ನು ನನಗೆ ಸಂಪರ್ಕಿಸಿ ಮೂರು ಶಾಕ್ ನೀಡಿದ ಬಳಿಕ ನನ್ನ ಹೃದಯ ಮತ್ತೆ ಕೆಲಸ ಆರಂಭಿಸಿತ್ತು. ನನ್ನನ್ನು ತುರ್ತು ನಿಗಾ ವಿಭಾಗಕ್ಕೆ ಕರೆದೊಯ್ದು ತಪಾಸಿಸಿದಾಗ ಹೃದಯದಲ್ಲಿ ಮೂರು ಕಡೆ ಬ್ಲಾಕ್ ಇದ್ದುದು ತಿಳಿಯಿತು ಹಾಗೂ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಸರಿಪಡಿಸಲಾಯಿತು. ಆ ಬಳಿಕ ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಭಾರತಕ್ಕೆ ಮರಳಿದೆ. ದೇವರು ಕೊಟ್ಟ ಮರುಜೀವಕ್ಕಾಗಿ ನಾನು ಕೃತಜ್ಞ. ಅಮೆರಿಕದಲ್ಲಿ ಜೀವ ಉಳಿಸುವ ತರಬೇತಿ ಎಷ್ಟು ಉತ್ತಮ ವಾಗಿದೆ ಮತ್ತು ದಕ್ಷವಾಗಿದೆ ಎಂಬುದನ್ನು ತಿಳಿದು ಅಚ್ಚರಿಗೊಂಡಿದ್ದೇನೆ. ಇದು ಭಾರತದಲ್ಲೂ ಆಗಬೇಕು ಎಂಬುದು ನನ್ನ ಕನಸು. ಸರಿಯಾದ ಸಮಯದಲ್ಲಿ ಒದಗಿಸುವ ಸಿಪಿಆರ್ ಜೀವ ಉಳಿಸುತ್ತದೆ, ಎಲ್ಲರೂ ಇದರ ತರಬೇತಿ ಪಡೆಯಬೇಕು ಎಂಬುದು ನನ್ನ ಆಶೆ.
– ಡಾ| ಕೆ. ಎಸ್. ಘೋರಿ
ಡೆಪ್ಯುಟಿ ಮೆಡಿಕಲ್ ಸುಪರಿಂಟೆಂಡೆಂಟ್, ಜೆಎಸ್‌ಎಸ್ ಆಸ್ಪತ್ರೆ, ಮೈಸೂರು ಪ್ರಾಥಮಿಕ ಆರೋಗ್ಯ
ನೆರವಿನ ಸರಳ ಹೆಜ್ಜೆಗಳು
– ವ್ಯಕ್ತಿಗೆ ಪ್ರಜ್ಞೆ ಇದೆಯೇ, ಎಚ್ಚರವಿದೆಯೇ, ಉಸಿರಾಟ ನಡೆಯುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಇಲ್ಲವಾದರೆ ವೈದ್ಯಕೀಯ ಸಹಾಯಕ್ಕೆ ಕರೆ ಮಾಡಿ ಮತ್ತು ಎದೆ ಅದುಮುವುದನ್ನು ಆರಂಭಿಸಿ. – ಸಿಪಿಆರ್ ನಡೆಸುವಾಗ ನೀವು ಸುರಕ್ಷಿತವಾಗಿ ಇರುವುದನ್ನು ಖಾತರಿ ಪಡಿಸಿಕೊಳ್ಳಿ. ವೈದ್ಯಕೀಯ ಸಹಾಯಕ್ಕೆ ಕರೆ ಮಾಡಲು ಮೊಬೈಲ್ ಫೋನ್ ಉಪಯೋಗಿಸಿ ಅಥವಾ ಹತ್ತಿರ ಇರುವ ಯಾರದ್ದಾದರೂ ನೆರವು ಪಡೆಯಿರಿ. – ಉತ್ತಮ ಗುಣಮಟ್ಟದ ಅವಿಶ್ರಾಂತ ಎದೆ ಅದುಮುವಿಕೆಗಳು. ಗಟ್ಟಿಯಾಗಿ ಅದುಮಿ, ವೇಗವಾಗಿ ಅದುಮಿ. ವೈದ್ಯಕೀಯ ಸೇವೆ ಒದಗಿ ಬಂದು ವ್ಯಕ್ತಿಯ ಆರೈಕೆಯನ್ನು ಕೈಗೆತ್ತಿಕೊಂಡ ಬಳಿಕ ಅಥವಾ ವ್ಯಕ್ತಿಯು ಉಸಿರಾಟದಂತಹ ಬದುಕಿನ ಚಿಹ್ನೆಗಳನ್ನು ತೋರ್ಪಡಿ ಸಿದಾಗ ಸಿಪಿಆರ್ ನಿಲ್ಲಿಸಿ. ವಿಶ್ವ ಹೃದಯ ದಿನಾಚರಣೆ ಮತ್ತು ದಾನ್ ಉತ್ಸವ 2018 ಆರಂಭ
ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಕೆಎಂಸಿ ಆಸ್ಪತ್ರೆ, ಮಾಹೆಯ ವಾಲಂಟಿಯರ್ ಸರ್ವೀಸಸ್ ಆರ್ಗನೈಸೇಶನ್ ಮತ್ತು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ವಿಶ್ವ ಹೃದಯ ದಿನ ಮತ್ತು ದಾನ್ ಉತ್ಸವ-2018ರ ಆರಂಭ ಕಾರ್ಯಕ್ರಮ ಸೆ.30, 2018ರಂದು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಲಿದೆ. ಬೆಳಗ್ಗೆ 7.00ಕ್ಕೆ ಕಾರ್ಯಕ್ರಮದ ಆರಂಭ. “ನಿಮ್ಮ ಹೃದಯ, ನನ್ನ ಹೃದಯ’ ಎಂಬ ಧ್ಯೇಯದ ಅಡಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 2ರಂದು ಬೆಳಗ್ಗೆ 6.30ರಿಂದ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಸಾಮೂಹಿಕ ಯೋಗಾಭ್ಯಾಸ ಮತ್ತು ಹೃದಯ ಪುನಶ್ಚೇತನಕ್ಕೆ ಪ್ರಥಮ ಚಿಕಿತ್ಸೆಯ ತರಬೇತಿ ಕಾರ್ಯಕ್ರಮ ಜರಗಲಿದೆ. ಹೆಚ್ಚಿನ ಮಾಹಿತಿಗಾಗಿ : 9035296971, 9599460465, 8746877721 ಸಂಪರ್ಕಿಸಬಹುದು. – ಡಾ| ಕೃಷ್ಣ ಎಚ್. ಎಂ.,
ಪ್ರಾಧ್ಯಾಪಕರು, ಅರಿವಳಿಕೆ ಶಾಸ್ತ್ರ ವಿಭಾಗ
ಕೆಎಂಸಿ ಆಸ್ಪತ್ರೆ, ಮಣಿಪಾಲ.