ಬಳ್ಳಾರಿ: ಕಂದಾಯ ಇಲಾಖೆ ಸಿಬ್ಬಂದಿಯು ಅಧಿಕ ಕೆಲಸದ ಕಾರಣದಿಂದ ಸಮಯದ ಪರಿವೆಯೇ ಇಲ್ಲದೇ ಅತ್ಯಂತ ಒತ್ತಡದಿಂದ ಕೆಲಸ ಮಾಡುತ್ತಿದ್ದು, ಜೀವನಶೈಲಿ ಮೇಲೆ ಪ್ರಭಾವ ಬಿರುತ್ತಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ದೈಹಿಕ ಅಭ್ಯಾಸಕ್ಕೆ ಒತ್ತು ನೀಡಬೇಕು ಮತ್ತು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಬಳ್ಳಾರಿ ಘಟಕದ ಅಧ್ಯಕ್ಷರು, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ವಿಶ್ವ ಹೃದಯ ದಿನಾಚರಣೆ ನಿಮಿತ್ತ ಕಂದಾಯ ಇಲಾಖೆಯ ಸಿಬ್ಬಂದಿಗಾಗಿ ಆಯೋಜಿಸಿದ್ದ ಉಚಿತ ಹೃದಯ ತಪಾಸಣೆ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಿಬ್ಬಂದಿಗೆ ಸತತ ಒತ್ತಡದಿಂದ ನಾನಾ ಕಾಯಿಲೆಗಳು ಬರುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ನಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಳ್ಳಬೇಕಿದೆ. ಕೆಲಸದ ಒತ್ತಡದ ಮಧ್ಯೆಯೂ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಅಗತ್ಯ ಎಂದು ಅವರು ಸಲಹೆ ನೀಡಿದರು. ಬಳ್ಳಾರಿ ಡಿಸಿ ಕಚೇರಿಯ 28 ಜನರು ಕೋವಿಡ್ ಸೋಂಕಿತರಾಗಿ ಗುಣಮುಖರಾಗಿ ಬಂದಿದ್ದಾರೆ ಎಂದ ಡಿಸಿ ನಕುಲ್ ಅವರು ಎಲ್ಲರೂ ಕಡ್ಡಾಯವಾಗಿ ಮಧುಮೇಹ, ರಕ್ತದೊತ್ತಡ, ಇಸಿಜಿ ಚೆಕ್ ಮಾಡಿಸಿಕೊಳ್ಳಬೇಕು ಎಂದರು.
ರೆಡ್‌ಕ್ರಾಸ್ ಭವನ ನಿರ್ಮಾಣ: ಭಾರತೀಯ ರೆಡ್ ಕ್ರಾಸ್ ಸೇವೆ ಜಿಲ್ಲೆಯಲ್ಲಿ ಅಮೋಘ ಸೇವೆ ಸಲ್ಲಿಸುತ್ತಿದೆ. ಇತ್ತೀಚಿನ ಕೋವಿಡ್ ಸಂದರ್ಭದಲ್ಲಂತೂ ರೆಡ್ ಕ್ರಾಸ್ ಸ್ವಯಂ ಸೇವಕರು ಸಲ್ಲಿಸಿದ ಸೇವೆ ಅದ್ಭುತ ಎಂಬುದನ್ನು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದ ಡಿಸಿ ನಕುಲ್ ಅವರು, ಜಿಲ್ಲಾ ಖನಿಜ ನಿಧಿ ಅಡಿ 2 ಕೋಟಿ ರೂ. ವೆಚ್ಚದಲ್ಲಿ ಅಲ್ಲೀಪುರ ಬಳಿ ಭಾರತೀಯ ರೆಡ್ ಕ್ರಾಸ್ ಭವನ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದರು.
ಭವನ ನಿರ್ಮಾಣ ಮಾಡುವುದರಿಂದ ರೆಡ್ ಕ್ರಾಸ್‌ನ ಆರೋಗ್ಯ ಶಿಬಿರ ಸೇರಿದಂತೆ ಇನ್ನಿತರೆ ಶಿಬಿರಗಳು ಹಾಗೂ ಕಾರ್ಯಕ್ರಮಗಳು ನಡೆಸಲು ಅನುಕೂಲವಾಗುತ್ತದೆ ಎಂದರು. ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ, ವಿಮ್ಸ್ ನಿರ್ದೇಶಕ ಡಾ| ದೇವಾನಂದ, ರೆಡ್ ಕ್ರಾಸ್ ಉಪಸಭಾಪತಿ ಡಾ| ಎಸ್.ಜೆ.ವಿ. ಮಹಿಪಾಲ್ ಮಾತನಾಡಿದರು. ಬಳ್ಳಾರಿ ಹೃದಯಾಲಯದ ಮುಖ್ಯಸ್ಥರು ಹಾಗೂ ಖ್ಯಾತಹೃದಯತಜ್ಞ ಡಾ| ನರೇಂದ್ರಗೌಡ ಅವರು ವಿಶೇಷ ಉಪನ್ಯಾಸ ನೀಡಿದರು. ಭಾರತೀಯ ರೆಡ್ ಕ್ರಾಸ್‌ನ ಕಾರ್ಯದರ್ಶಿ ಎಂ.ಎ. ಶಕೀಬ್ ನಿರೂಪಿಸಿದರು.
ನಂತರ ತಜ್ಞ ವೈದ್ಯರುಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹೃದಯ ತಪಾಸಣೆ ಹಾಗೂ ಇನ್ನಿತರೆ ಆರೋಗ್ಯ ತಪಾಸಣೆ ಮಾಡಿದರು.