ಲಡಾಖ್‌ನ ಅಕ್ಸಾಯ್ ಚಿನ್ ಪ್ರದೇಶವನ್ನು ಡಬ್ಲ್ಯುಎಚ್‌ಒ ಚೀನಕ್ಕೆ ಸೇರಿದ ಪ್ರದೇಶ ಎಂದು ತಪ್ಪಾಗಿ ಗುರುತಿಸಿ ಎಡವಟ್ಟು ಮಾಡಿಕೊಂಡಿದೆ.
ಸಂಸ್ಥೆಯ ಆನ್‌ಲೈನ್‌ನಲ್ಲಿ ಇರುವ ಮ್ಯಾಪ್‌ನಲ್ಲಿ ಈ ದೋಷ ಕಂಡು ಬಂದಿದೆ. ಆ ಭಾಗಗಳನ್ನು ಚುಕ್ಕೆ ರೇಖೆ ಮತ್ತು ಬಣ್ಣಗಳ ಸಂಕೇತದೊಂದಿಗೆ ಚೀನದ ಭೂ ಪ್ರದೇಶದ ಭಾಗವಾಗಿ ತೋರಿಸಲಾಗಿದೆ.
ಇಷ್ಟು ಮಾತ್ರವಲ್ಲದೆ, ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ಉಳಿದ ಭಾಗಗಳನ್ನು ಇರುವುದಕ್ಕಿಂತ ವಿಭಿನ್ನವಾಗಿ ನಕ್ಷೆಯಲ್ಲಿ ಚಿತ್ರಿಸಲಾಗಿದೆ. ಮಾತ್ರವಲ್ಲ ಅದನ್ನು ವಿವಾದಿತ ಪ್ರದೇಶ ಎಂದು ಬಿಂಬಿಸಲಾಗಿದೆ.
ಕೋವಿಡ್ ವೈರಸ್ ಅನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂಬ ಆರೋಪಗಳ ನಡುವೆಯೇ ಅದು ಈ ಮುಜುಗರ ತಂದುಕೊಂಡಿದೆ. ಈ ಬಗ್ಗೆ ‘ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
ಮೂಲಗಳ ಪ್ರಕಾರ ಇದೇ ಮೊದಲ ಬಾರಿಗೆ ವೆಬ್‌ಸೈಟ್‌ನಲ್ಲಿ ಇಂತಹದೊಂದು ವಿಚಿತ್ರ ದೋಷ ಕಂಡು ಬಂದಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಆಡಳಿತ ವ್ಯವಸ್ಥೆ ವ್ಯಾಪ್ತಿಗೆ ಒಳಪಟ್ಟಿದ್ದರೂ ಅದು ಯಾರ ಅಧೀನದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ನಕ್ಷೆಯಲ್ಲಿ ಸ್ಪಷ್ಟಪಡಿಸಿಲ್ಲ ಎಂದಿದ್ದಾರೆ ಚೀನದಲ್ಲಿ ಭಾರತದ ಮಾಜಿ ರಾಯಭಾರಿ ಗೌತಮ್ ಬಂಬವಾಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಇದೊಂದು ಖಂಡನೀಯ ಎಂದು ಹೇಳಿದ್ದಾರೆ.