ಟೆಲ್ ಅವಿವ್: ಗಾಜಾ ಪಟ್ಟಿಯಲ್ಲಿ ಪ್ರತೀ ಹತ್ತು ನಿಮಿಷಕ್ಕೆ ಒಂದು ಮಗು ಸಾಯುತ್ತಿದೆ. ಹೀಗೆಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಉತ್ತರ ಗಾಜಾದ ಹಲವು ಆಸ್ಪತ್ರೆಗಳ ಸಮೀಪ ಇಸ್ರೇಲ್ ಮತ್ತು ಹಮಾಸ್ ಉಗ್ರ ಸಂಘಟನೆ ನಡುವೆ ಸಂಘರ್ಷ ಮುಂದುವರಿದಿರುವಂತೆಯೇ ಈ ಕಳವಳ ವ್ಯಕ್ತವಾಗಿದೆ.
ಹೀಗಾಗಿ ಗಾಜಾ ಪಟ್ಟಿಯಲ್ಲಿ ಇರುವ ಯಾರೂ ಕೂಡ ಸುರಕ್ಷಿತರಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡೋಸ್ ಅಧೆನೊಂ ಗೇಬ್ರಿಯಾಸಿಸ್ ಹೇಳಿದ್ದಾರೆ. ಗಾಜಾ ಪಟ್ಟಿಯಲ್ಲಿರುವ 36 ಆಸ್ಪತ್ರೆಗಳ ಪೈಕಿ ಅರ್ಧದಷ್ಟು ಆಸ್ಪತ್ರೆಗಳಲ್ಲಿ ಪ್ರಾಥಮಿಕ ಆರೋಗ್ಯ ವ್ಯವಸ್ಥೆ ನೀಡಲು ಕೂಡ ಸೌಲಭ್ಯ ಇಲ್ಲದಂತಾಗಿದೆ ಎಂದು ಅವರು ಹೇಳಿದ್ದಾರೆ. ಆಸ್ಪತ್ರೆಯ ನೆಲದಲ್ಲಿಯೇ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಇಸ್ರೇಲ್ ಯುದ್ಧ ನಿಲ್ಲಿಸಬೇಕು: “ಗಾಜಾದ ಮೇಲೆ ಬಾಂಬ್‌ಗಳನ್ನು ಹಾಕುವುದನ್ನು ಹಾಗೂ ನಾಗರಿಕರನ್ನು ಹತ್ಯೆ ಮಾಡುವುದನ್ನು ಇಸ್ರೇಲ್ ನಿಲ್ಲಿಸಬೇಕು’ ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರಾನ್ ಆಗ್ರಹಿಸಿದ್ದಾರೆ. “ದಾಳಿಯಿಂದ ಚಿಕ್ಕ ಮಕ್ಕಳು, ಮಹಿಳೆಯರು, ವೃದ್ಧರು ಮೃತಪಡುತ್ತಿದ್ದಾರೆ. ಇದಕ್ಕೆ ಯಾವುದೇ ಅರ್ಥವಿಲ್ಲ. ಇಸ್ರೇಲ್ ಕೂಡಲೇ ಕದನ ವಿರಾಮ ಘೋಷಿಸಬೇಕು. ಇದರಲ್ಲಿ ಇಸ್ರೇಲ್‌ಗೆ ಹೆಚ್ಚಿನ ಲಾಭವಿದೆ’ ಎಂದು ಹೇಳಿದ್ದಾರೆ.
ಉಗ್ರರ ಹತ್ತಿಕ್ಕಲು: ಉತ್ತರ ಗಾಜಾದಲ್ಲಿ ಹೆಚ್ಚು ಆಸ್ಪತ್ರೆಗಳಿವೆ. ಆಸ್ಪತ್ರೆಗಳ ಸುತ್ತಲೇ ಹಮಾಸ್ ಉಗ್ರರು ಬೀಡು ಬಿಟ್ಟಿದ್ದಾರೆ. ಇವರನ್ನು ಹತ್ತಿಕ್ಕಲು ಇಸ್ರೇಲ್ ಸೇನೆಯು ಎಲ್ಲೆಡೆಯಿಂದ ಸುತ್ತುವರಿಯುವ ತಂತ್ರವನ್ನು ಅನುಸರಿಸುತ್ತಿದೆ. ಆದರೆ ಇದು ಆಸ್ಪತ್ರೆಯ ರೋಗಿಗಳು ಮತ್ತು ಸಿಬಂದಿಯ ಸುರಕ್ಷತೆಯನ್ನು ಅಪಾಯಕ್ಕೆ ತಳ್ಳಿದೆ ಎಂದು ವರದಿಗಳು ತಿಳಿಸಿವೆ.