ಜಿನೇವಾ: ಮಾರಕ ಕೊರೊನಾ ವೈರಸ್ ವಿಶ್ವವ್ಯಾಪಿಯಾಗಿ 7000 ಮಂದಿಯನ್ನು ಬಲಿತೆಗೆದುಕೊಂಡಿರುವಂತೆಯೇ, ಈ ವೈರಸ್ ನ ಹರಡುವಿಕೆಯನ್ನು ನಿಯಂತ್ರಿಸಲು ವಿಶ್ವಸಂಸ್ಥೆ ಸಹಿತ ಹಲವಾರು ದೇಶಗಳು ವಿವಿಧ ಮಾರ್ಗಸೂಚಿಗಳನ್ನು ಪ್ರಕಟಿಸುತ್ತಲೇ ಇದೆ. ಮತ್ತ ಈ ವೈರಸ್ ಹರಡುವಿಕೆ ಕುರಿತಾದ ಅರಿವನ್ನು ಜನಸಾಮಾನ್ಯರಲ್ಲಿ ಮೂಡಿಸುವ ಪ್ರಯತ್ನಗಳೂ ಜಾರಿಯಲ್ಲಿದೆ.
ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವ ವಿಚಾರಕ್ಕೆ ಒತ್ತು ನೀಡಿದ್ದು ಇದನ್ನು ಪ್ರಚುರಪಡಿಸಲು ‘ಸೇಫ್ ಹ್ಯಾಂಡ್ ಚಾಲೆಂಜ್’ (ಸುರಕ್ಷಿತ ಕೈಗಳ ಸವಾಲು) ಎಂಬ ಹೊಸ ಪರಿಕಲ್ಪನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರಾಗಿರುವ ಡಾ. ಟೆಡ್ರೋಸ್ ಅಧನಾಮ್ ಗೇಬ್ರಿಯಸಸ್ ಅವರು ತಮ್ಮ ಕೈಗಳನ್ನು ತೊಳೆದುಕೊಳ್ಳುತ್ತಿರುವ ವಿಧಾನಗಳನ್ನು ಈ ವಿಡಿಯೋದಲ್ಲಿ ಹಂತಹಂತವಾಗಿ ವಿವರಿಸಿದ್ದಾರೆ. ಹಾಗೂ ಮಾರಕ ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ಸರಳ ವಿಧಾನವನ್ನು ಅನುಸರಿಸುವಂತೆ ಅವರು ಜಗತ್ತಿನ ದೇಶಗಳಲ್ಲಿರುವ ಜನರಿಗೆ ಚಾಲೆಂಜ್ ರೂಪದಲ್ಲಿ ಮುಂದುವರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.