ಹೊಸದಿಲ್ಲಿ: ಪ್ರಸಕ್ತ ವರ್ಷ ಶೇ.3 ರಷ್ಟು ಕುಸಿತ ಕಂಡಿರುವ ವಿಶ್ವದ ಒಟ್ಟಾರೆ ಉತ್ಪನ್ನವು (ವಿಶ್ವ ಜಿಡಿಪಿ), 2024ರ ಹೊತ್ತಿಗೆ ಮತ್ತಷ್ಟು ಕುಸಿತ ಕಾಣಲಿದೆ. ಆ ಸಂದರ್ಭದಲ್ಲಿ ವಿಶ್ವ ಜಿಡಿಪಿಯನ್ನು ಮೇಲೆತ್ತುವಲ್ಲಿ ಭಾರತವು ಹೆಗಲು ಕೊಡಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ತಿಳಿಸಿದೆ. 2024ರಲ್ಲಿ ವಿಶ್ವ ಜಿಡಿಪಿ ಮೇಲೆತ್ತುವ ರಾಷ್ಟ್ರಗಳ ಪಟ್ಟಿಯನ್ನು ತಯಾರಿಸಲಾಗಿದ್ದು, ಅದರಲ್ಲಿ ಭಾರತ 2ನೇ ಸ್ಥಾನ ಪಡೆದಿದೆ.
ದ್ವಿತೀಯ ಸ್ಥಾನಕ್ಕೆ ಲಗ್ಗೆ ಹೇಗೆ?: ವಿಶ್ವ ಜಿಡಿಪಿಗೆ ದೈತ್ಯ ಕಾಣಿಕೆ ನೀಡುವ ಚೀನ 2018-19ರಲ್ಲಿ ಶೇ.32.7ರಷ್ಟು ಕೊಡುಗೆ ನೀಡಿತ್ತು. 2024ರಲ್ಲಿ ಅದು ಶೇ.28.3ಕ್ಕೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ. ಆದರೂ, ವಿಶ್ವ ಜಿಡಿಪಿಗೆ ಗಣನೀಯ ಕೊಡುಗೆ ನೀಡುವ ತನ್ನ ಅಗ್ರ ಸ್ಥಾನವನ್ನು ಕಾಪಾಡಿಕೊಳ್ಳುವಲ್ಲಿ ಅದು ಸಫಲವಾಗಲಿದೆ.
ಆದರೆ, ಈ ಪಟ್ಟಿಯಲ್ಲಿ ಸದ್ಯಕ್ಕೆ 2ನೇ ಸ್ಥಾನದಲ್ಲಿರುವ ಅಮೆರಿಕದ ಕಾಣಿಕೆಯು 2024ರಲ್ಲಿ ಶೇ.9.2ಕ್ಕೆ ಕುಸಿಯಲಿದೆ. ಇದೇ ವೇಳೆ, ಭಾರತದ ಕೊಡುಗೆ ಶೇ.15.5ರಷ್ಟು ಹೆಚ್ಚಾಗಲಿ ರುವುದರಿಂದ ಭಾರತವು 2ನೇ ಸ್ಥಾನಕ್ಕೆ ಲಗ್ಗೆಯಿಡಲಿದೆ. ಅಮೆರಿಕ ಮೂರನೇ ಸ್ಥಾನಕ್ಕೆ ತಳ್ಳಲ್ಪಡಲಿದೆ ಎಂದು ಐಎಂಎಫ್ ಹೇಳಿದೆ.
ಇತರ ರಾಷ್ಟ್ರಗಳ ಪರಿಸ್ಥಿತಿ: ಇಂಡೋ ನೇಷ್ಯಾವು ಈಗಿರುವ ನಾಲ್ಕನೇ ಸ್ಥಾನದಲ್ಲೇ ಮುಂದುವರಿಯಲಿದ್ದು 2024ರಲ್ಲಿ ಅದರ ಕೊಡುಗೆ 3.7ರಷ್ಟಿರಲಿದೆ. ಇನ್ನು, ಸದ್ಯಕ್ಕೆ ಶೇ. 2ರಷ್ಟು ಜಿಡಿಪಿ ಕೊಡುಗೆ ನೀಡುತ್ತಿರುವ ರಷ್ಯಾ, 2024ರಲ್ಲೂ ಅದೇ ದರದಲ್ಲಿ ಮುಂದುವರಿದು ಐದನೇ ಸ್ಥಾನವನ್ನು ಅಲಂಕರಿಸಲಿದೆ. ಬ್ರೆಕ್ಸಿಟ್ ಕಾರಣದಿಂದಾಗಿ ಯು.ಕೆ.ಯು ವಿಶ್ವ ಜಿಡಿಪಿ ಪಟ್ಟಿಯಲ್ಲಿನ 9ನೇ ಸ್ಥಾನದಿಂದ 13ನೇ ಸ್ಥಾನಕ್ಕೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ.