ಬೀದರ: ಜನಪದ ಸಾಹಿತ್ಯದಲ್ಲಿ ಮಾನವೀಯ ಮೌಲ್ಯ ಅಡಗಿವೆ. ಜನಪದ ಸತ್ಯ ಸಂಗತಿಗಳನ್ನೇ ಒಳಗೊಂಡಿದ್ದು, ಅಲ್ಲಿ ಕಾಲ್ಪನಿಕತೆಗೆ ಅವಕಾಶವಿಲ್ಲ. ಹಾಗಾಗಿ ಈ ಸಾಹಿತ್ಯ ಅಷ್ಟೊಂದು ವಿಶೇಷತೆ ಪಡೆದುಕೊಂಡಿದೆ ಎಂದು ಗುಲ್ಬರ್ಗಾ ವಿವಿ ನೂತನ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ ಹೇಳಿದರು.
ಜಾನಪದ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕದಿಂದ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆಗೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಮನಸ್ಸಿನ ಭಾವನೆಗಳನ್ನು ಹೊರಹಾಕಲು, ದೇಶಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಜನಪದವೇ ಸೂಕ್ತ ಎಂದರು.
ಇಡೀ ಪ್ರಪಂಚವೇ ಇಂದು ಜನಪದ ಸಂಸ್ಕೃತಿಯತ್ತ ವಾಲುತ್ತಿದೆ. ನಮಸ್ಕಾರ ಮಾಡುವ ಪದ್ಧತಿ, ಮನೆಯೂಟ, ಮನೆಮದ್ದು, ಸ್ವಚ್ಛತೆ, ಶಿಸ್ತು ಅನೇಕ ವಿಷಯಗಳಲ್ಲಿ ಜನರು ಆಧುನಿಕತೆ ಮರೆತು ಜನಪದ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಜನಪದಕ್ಕೆ ಹಲಸಂಗಿ ಗೆಳೆಯರ ಬಳಗ ಹಾಗೂ ವಿದೇಶಿಗರ ಕೊಡುಗೆಯೂ ಅಪಾರವಾಗಿದೆ. ಜನಪದ ಸೊಗಡಿನ ಪ್ರೇರಣೆ ಪಡೆದು ಗರತಿಯರು ಕೂಡ ಆಧುನಿಕರಣ, ಯಾಂತ್ರೀಕರಣಕ್ಕೆ ಅತಿಯಾಗಿ ಮಾರು ಹೋಗದೆ ಜನಪದ ಸಂಸ್ಕೃತಿಯನ್ನು ಅಪ್ಪಿಕೊಂಡು ಉಳಿಸಿ ಬೆಳೆಸಬೇಕಿದೆ ಎಂದರು.
ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಟಾಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಕೋವಿಡ್ ವೈರಸ್ ಪ್ರಭಾವ ಕಡಿಮೆಯಾದ ನಂತರ ಬೀದರನಲ್ಲಿ ಅಂತಾರಾಷ್ಟ್ರೀಯ ಜಾನಪದ ಸಮ್ಮೇಳನ ಆಯೋಜಿಸುವ ಆಶಯ ಹೊಂದಿದ್ದು, ಈ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.
ಹಿರಿಯ ಕಲಾವಿದರಾದ ಎಸ್.ಬಿ ಕುಚಬಾಳ, ಲಕ್ಷ್ಮಣರಾವ ಕಾಂಚೆ ಜನಪದ ಗಾಯನ ನಡೆಸಿಕೊಟ್ಟರು. ಯೋಗೇಂದ್ರ ಯದಲಾಪುರೆ, ಶಿವಶರಣಪ್ಪ ಗಣೇಪುರ, ಪ್ರಕಾಶ ಕನ್ನಾಳೆ, ಕಾಂತ ಪಾಟೀಲ, ಮಲ್ಲಮ್ಮ ಸಂತಾಜಿ, ಡಾ. ಸುನಿತಾ ಕೂಡ್ಲಿಕರ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರೆ, ರಾಷ್ಟ್ರೀಯ ಯುವ ಫೆಲೋಶಿಪ್ ಪ್ರಶಸ್ತಿ ಪುರಸ್ಕೃತ ಮಹಾರುದ್ರ ಡಾಕುಳಗಿ ನಿರೂಪಿಸಿದರು. ಡಾ| ಮಹಾನಂದ ಮಡಕಿ ವಂದಿಸಿದರು.