Advertisement
ಸೋಮವಾರ ಇದೇ ಮೊದಲ ಬಾರಿಗೆ ಅಲಿಪ್ತ ಚಳವಳಿ (ನಾಮ್) ಶೃಂಗದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಪಾಕಿಸ್ಥಾನದ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ್ದು ಹೀಗೆ. ಕೋವಿಡ್-19ದಂಥ ವೈರಸ್‌ನಿಂದಾಗಿ ಮಾನವತೆಯೇ ಅತಿದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದರೆ ಕೆಲವು ದೇಶಗಳು ಸುಳ್ಳು ಸುದ್ದಿ ಹಬ್ಬಿಸುತ್ತ, ಉಗ್ರ ಕೃತ್ಯಗಳನ್ನು ಎಸಗುತ್ತ ಸಮುದಾಯಗಳು ಮತ್ತು ದೇಶ-ದೇಶಗಳ ನಡುವೆ ವೈರತ್ವ ಉಂಟುಮಾಡುವ ಹೀನ ಕೃತ್ಯದಲ್ಲಿ ತೊಡಗಿವೆ ಎಂದು ಮೋದಿ ಕಿಡಿಕಾರಿದ್ದಾರೆ.
ಪ್ರಸ್ತುತ ಭಾರತವು ಜಗತ್ತಿನ ಫಾರ್ಮಸಿ ಎಂದು ಪರಿಗಣಿಸಲ್ಪಟ್ಟಿದೆ. ಕೋವಿಡ್-19ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಾವು ನೆರೆರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸಿದ್ದೇವೆ. ಅಲಿಪ್ತ ಚಳವಳಿಯ 59 ಸದಸ್ಯ ರಾಷ್ಟ್ರಗಳು ಸೇರಿದಂತೆ ಸುಮಾರು 123 ಪಾಲುದಾರ ದೇಶಗಳಿಗೆ ವೈದ್ಯಕೀಯ ಸಾಮಗ್ರಿ ಪೂರೈಸಿದ್ದೇವೆ. ಅಭಿವೃದ್ಧಿಶೀಲ ದೇಶಗಳಲ್ಲಿ ವೈದ್ಯಕೀಯ ಸಾಮರ್ಥ್ಯ ವೃದ್ಧಿಗಾಗಿ ಹೆಜ್ಜೆಯಿಡುವಂತೆ ನಾಮ್ ನೋಡಿಕೊಳ್ಳಬೇಕು ಎಂದೂ ಮೋದಿ ಹೇಳಿದ್ದಾರೆ.
Related Articles
ಕೋವಿಡ್-19 ಮಹಾಮಾರಿ ಹಾಲಿ ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿನ ಕೊರತೆಗಳನ್ನು ತೋರಿಸಿಕೊಟ್ಟಿದೆ. ಹೀಗಾಗಿ ಕೋವಿಡ್-19 ಬಿಕ್ಕಟ್ಟು ಶಮನವಾದ ಬಳಿಕ ನಮಗೆ ನ್ಯಾಯಯುತ, ಸಮಾನ ಮತ್ತು ಮಾನವೀಯತೆಯ ಆಧಾರದ ಹೊಸ ಜಾಗತೀಕರಣದ ಮಾದರಿ ಅಗತ್ಯ ಎಂದೂ ಮೋದಿ ಹೇಳಿದ್ದಾರೆ. ಕೋವಿಡ್-19ದಿಂದಾಗಿ ಪ್ರೀತಿಪಾತ್ರರನ್ನು ಕಳೆದುಕೊಂಡ ಜನರಿಗೆ ಅವರು ಸಾಂತ್ವನ ಹೇಳಿದ್ದಾರೆ. ಅಲಿಪ್ತ ಚಳವಳಿಯು ಜಗತ್ತಿನ ನೈತಿಕ ಧ್ವನಿ ಯಾಗಿದ್ದು, ಎಲ್ಲರನ್ನೂ ಒಳಗೊಂಡ ಜಾಗತಿಕ ಒಗ್ಗಟ್ಟನ್ನು ಉತ್ತೇಜಿಸಬೇಕು ಎಂದಿದ್ದಾರೆ.
Advertisement