Advertisement

ಸಹಬಾಳ್ವೆಯೇ ಕುಟುಂಬ ವ್ಯವಸ್ಥೆಯ ಮೂಲಮಂತ್ರ

10:49 PM May 14, 2019 | mahesh |

ಸಮಾಜ ವ್ಯವಸ್ಥೆಯ ಬಹುಮುಖ್ಯ ಅಂಗ ಕುಟುಂಬ. ಉತ್ತಮ ಕುಟುಂಬದಿಂದಲೇ ಅತ್ಯತ್ತಮ ಸಮಾಜದ ನಿರ್ಮಾಣ ಸಾಧ್ಯ. ಭಾರತೀಯ ಪರಂಪರೆಯಲ್ಲಿ ಕುಟುಂಬಕ್ಕೆ ಅದರದ್ದೇ ಆದ ಪ್ರಾಮುಖ್ಯವಿದೆ. ಅವಿಭಕ್ತ ಕುಟುಂಬಗಳನ್ನು ಹೊಂದಿದ್ದ ಭಾರತೀಯ ಸಂಸ್ಕೃತಿಯೂ ಕೂಡಿ ಬಾಳುವುದನ್ನು ಕಲಿಸಿಕೊಡುತ್ತದೆ. ಇಲ್ಲಿ ಪ್ರೀತಿ, ಒಗ್ಗಟ್ಟುಗಳೇ ಮೂಲಮಂತ್ರ.

Advertisement

ಒಂದು ಮಗು ಸಮಾಜದ ಉತ್ತಮ ಪ್ರಜೆಯಾಗಿ ರೂಪುಗೊಂಡರೆ ಅದರಲ್ಲಿ ಆ ಮಗುವಿನ ಶಕ್ತಿಗಿಂತ ಆತನನ್ನು ಆ ರೀತಿ ರೂಪಿಸಿದ ಕುಟುಂಬದ ಸಂಸ್ಕೃತಿಯನ್ನು ಹೊಗಳುವ ಒಂದು ಕಾಲಘಟ್ಟವಿತ್ತು. ಆದರೆ ಇಂದು ಕಾಲ ಬದಲಾಗಿದೆ. ಜತೆಗೆ ಜಗತ್ತಿನಾದ್ಯಂತ ಕುಟುಂಬ ರೂಪೀಕರಣದ ಪದ್ಧತಿಯೂ ಬದಲಾಗಿದೆ. ಅವಿಭಕ್ತ ಕುಟುಂಬಗಳು ಅನುಕುಟುಂಬಗಳಾಗಿ ಬದಲಾಗಿವೆ. ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ಮಾವ, ಅತ್ತೆ ಅಪ್ಪ, ಅಮ್ಮ ಮಕ್ಕಳು ಮೊಮ್ಮಕ್ಕಳು ತುಂಬಿತುಳುಕುತ್ತಿದ್ದ ಮನೆಗಳಲ್ಲಿ ಈಗ ಕೇವಲ ಗಂಡ, ಹೆಂಡತಿ, ಮಕ್ಕಳು ಮಾತ್ರ ಕಾಣಸಿಗುತ್ತಾರೆ.

ಕುಟುಂಬದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಾ ಹೋದಂತೆ ಅಲ್ಲಿ ಭಾವನೆಗಳೂ ಬೆಲೆ ಕಳೆದುಕೊಳ್ಳಲಾರಂಭಿಸುತ್ತವೆ. ಹೆತ್ತವರ, ಮಕ್ಕಳ ತರಾತುರಿಯ ಜೀವನದ ನಡುವೆ ಮುಖಕ್ಕೆ ಮುಖ ಕೊಟ್ಟು ಮಾತನಾಡುವಷ್ಟು ಸಮಯವಿಲ್ಲದೆ ಕೇವಲ ಯಂತ್ರಗಳಂತೆ ಬದುಕುವ ಇಂದಿನ ವಿಭಕ್ತ ಕುಟುಂಬಕ್ಕೆ ಕುಟುಂಬದ ಮಹತ್ವವನ್ನು ತಿಳಿಸುವ ಸಲು ವಾಗಿ ಕುಟುಂಬ ದಿನವನ್ನು ಮೇ 15ರಂದು ಆಚರಿಸಲಾಗುತ್ತದೆ.

ಇತಿಹಾಸ, ಆಚರಣೆಯ ಉದ್ದೇಶ
1993/ 94ರಲ್ಲಿ ನಡೆದ ಯುನೈಟೆಡ್‌ ನೇಷನ್‌ ಅಸೆಂಬ್ಲಿಯಲ್ಲಿ ಪ್ರತಿ ವರ್ಷ ಮೇ 15ರಂದು ಕುಟುಂಬ ದಿನವನ್ನಾಗಿ ಆಚರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಅಂತಾರಾಷ್ಟ್ರೀಯ ಸಮುದಾಯಗಳನ್ನು ಕುಟುಂಬದೊಂದಿಗೆ ಜೋಡಿಸುವ ಮತ್ತು ಕುಟುಂಬ ವ್ಯವಸ್ಥೆಯ ಉದ್ದೇಶ ಹಾಗೂ ಮಹತ್ವವನ್ನು ಜಗತ್ತಿನೆಲ್ಲೆಡೆ ಆಚರಿಸುವ ಸಲುವಾಗಿ ಈ ದಿನದ ಆಚರಣೆಗೆ ಮಹತ್ವ ನೀಡಲು ನಿರ್ಧರಿಸಲಾಯಿತು.

ಕುಟುಂಬಗಳು ಮತ್ತು ಹವಾಮಾನ ಬದಲಾವಣೆಯ ನಿಯಂತ್ರಣ ಕುಟುಂಬಗಳು ಮತ್ತು ಹವಾಮಾನ ಬದಲಾವಣೆಯ ನಿಯಂತ್ರಣ ಎಂಬ ಮಹತ್ವದ ಉದ್ದೇಶವನ್ನರಿಸಿಕೊಂಡು ಯು ಎನ್‌ ಈ ವರ್ಷ ಕುಟುಂಬ ದಿನವನ್ನು ಆಚರಿಸುತ್ತಿದೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಕುಟುಂಬ ತುಂಬಾ ಪ್ರಧಾನವಾದ ಭಾಗ. ನೋವು ನಲಿವುಗಳೆರೆಡನ್ನೂ ಹಂಚಿಕೊಂಡು ಸೋಲು ಗೆಲುವುಗಳಿಗೆ ಜತೆಯಾಗುವ ಕುಟುಂಬ ಇದ್ದಾಗ ಮಾತ್ರ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಇದ್ದ ಕುಟುಂಬವನ್ನು ದೂರ ಮಾಡಿಕೊಳ್ಳದೆ ದೂರ ಇರುವ ಕುಟುಂಬವನ್ನು ಮತ್ತೆ ಜೋಡಿಸಿಕೊಂಡು ಈ ಸಲದ ಕುಟುಂಬ ದಿನವನ್ನು ಸಂಭ್ರಮದಿಂದ ಆಚರಿಸಬೇಕಿದೆ.

Advertisement

ಆಧುನೀಕ ಜೀವನಕ್ಕೆ ಹೊಂದಿಕೊಂಡಂತೆ ಕುಟುಂಬಗಳು ಸಣ್ಣದಾಗ ತೊಡಗಿವೆ. ಬಾಲ್ಯದಲ್ಲಿ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ತಂದೆ ತಾಯಿಯನ್ನು ವೃದ್ಧಾಪ್ಯದಲ್ಲಿ ಆಶ್ರಮಕ್ಕೆ ದೂಡುವ ಮಕ್ಕಳಿಗೆ ಕುಟುಂಬದ ಮಹತ್ವವನ್ನು ತಿಳಿಸಿಕೊಡುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮೇ 15ರಂದು ಕುಟುಂಬ ದಿನವನ್ನು ಆಚರಿಸಲಾಗುತ್ತಿದೆ.

ಕುಟುಂಬ ದಿನದ ಚಿಹ್ನೆಯ ವಿಶೇಷತೆ
ಅಂತಾರಾಷ್ಟ್ರೀಯ ಕುಟುಂಬ ದಿನದ ಚಿಹ್ನೆ ಬಹಳ ವೈಶಿಷ್ಟéವನ್ನು ಒಳಗೊಂಡಿದೆ. ಚಿಹ್ನೆಯು ಹಸುರು ಬಣ್ಣದ ವೃತ್ತ ಹಾಗೂ ಅದರಲ್ಲಿ ಕೆಂಪು ಬಣ್ಣದಲ್ಲಿ ಚಿತ್ರಗಳನ್ನು ಒಳಗೊಂಡಿದೆ. ಒಂದು ಮನೆ ಹಾಗೂ ಹೃದಯದ ಸರಳವಾದ ಚಿತ್ರವನ್ನೊಳಗೊಂಡ ಈ ಚಿಹ್ನೆ ಕುಟುಂಬ ಸಮಾಜದ ಮೂಲ ಕೇಂದ್ರ ಹಾಗೂ ಕುಟುಂಬದಲ್ಲಿ ಎಲ್ಲ ವಯಸ್ಸಿನವರಿಗೂ ರಕ್ಷಣೆ ದೊರೆಯುತ್ತದೆ ಎಂಬ ಸಂದೇಶವನ್ನು ನೀಡುತ್ತದೆ.

ಸುಶ್ಮಿತಾ ಶೆಟ್ಟಿ, ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next