ಮಾನವ ಜನಾಂಗಕ್ಕೆ ಅನೇಕ ಹಬ್ಬಗಳು ಪ್ರತೀ ವರ್ಷ ಬಂದು ಹೋಗುವುದು. ಆದರೆ ಹಬ್ಬ ಬಂದಾಗ ಇದ್ದ ಸಂಭ್ರಮ ಮುಗಿಯುತ್ತಲೇ ಬೇಸರ ತರಿಸಲಿದೆ. ಅದೇ ರೀತಿ ಪ್ರಾಕೃತಿಕ ಸಂಪನ್ಮೂಲಗಳ ಸದ್ಬಳಕೆ ಮಾಡುವ ಜತೆಗೆ ಮುಂದಿನ ಜನಾಂಗಕ್ಕೂ ಪ್ರಕೃತಿಯನ್ನು ಕೊಡುಗೆಯಾಗಿ ನೀಡುವುದು ನಮ್ಮೆಲ್ಲರ ಹೊಣೆ. ಈ ನಿಟ್ಟಿನಲ್ಲಿ ಜೂನ್ 5 ರಂದು ಪರಿಸರ ದಿನಾಚರಣೆ ಪ್ರತಿ ವರ್ಷದಂತೆ ಈ ಬಾರಿ ಕೂಡ ಮಹತ್ವದ ಸಂದೇಶ ಸಾರುತ್ತಿದ್ದು ಅಂದಿನ ದಿನ ಗಿಡ ನೆಟ್ಟು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಉಳಿದ ದಿನ ಪರಿಸರದ ಬಗ್ಗೆ ಕಾಳಜಿ ಇರೋದನ್ನು ಕಾಣುವುದು ಬಹಳ ಅಪರೂಪ ಎನ್ನಬಹುದು.
ಅದೆಲ್ಲಾ ವರ್ಷಕ್ಕೆ ಒಂದು ಸಲ ಅಷ್ಟೇ ಮತ್ತೆ ಪ್ರಕೃತಿ ನೆನಪೇ ಆಗಲ್ಲ. ನಿಜ ಹೇಳಬೇಕು ಅಂದರೆ ಮನುಷ್ಯರು ಪರಾವಲಂಬಿಗಳು. ಪ್ರಕೃತಿಯಿಂದ ಎಲ್ಲವನ್ನು ಪಡೆದುಕೊಳ್ಳುತ್ತಾ ಬದುಕುತ್ತಿರುತ್ತಾರೆ. ಪ್ರಕೃತಿ ಸ್ವಾತಂತ್ರ್ಯವಾಗಿ ಇರುತ್ತೆ ಯಾರನ್ನು ಅದು ಅವಲಂಬಿಸಿಲ್ಲ ಅದನ್ನು ಅದರ ಪಾಡಿಗೆ ಬಿಟ್ಟರೆ ಅದು ತನ್ನನ್ನು ತಾನು ಸರಿಮಾಡಿಕೊಳ್ಳುತ್ತೆ ಮನುಷ್ಯರಿಗೆ ತನ್ನನ್ನು ತಾನು ಸರಿಮಾಡಿಕೊಳ್ಳೋಕೆ ಆಗಲ್ಲ.
ಇನ್ನೊಬ್ಬರ ಸಹಾಯದ ಅವಶ್ಯಕತೆ ಇರುತ್ತೆ ಹುಟ್ಟಿದಾಗಿನಿಂದ ಸಾಯುವವರೆಗೆ ಮನುಷ್ಯ ಬೇರೆಯವರನ್ನು ಅವಲಂಬಿಸಿ ಇರ್ತಾನೆ. ಅದು ಮನುಷ್ಯರಿಗೆ ಅರ್ಥ ಆಗುತ್ತಿಲ್ಲ. ಅರ್ಥಮಾಡಿಕೊಳ್ಳುವ ಗೋಜಿಗೂ ಹೋಗಲ್ಲ. ಸಂಬಳ ತೆಗೆದುಕೊಳ್ಳುವವನು ಸ್ವಾವಲಂಬಿ ತೆಗೆದುಕೊಳ್ಳುತ್ತಿಲ್ಲ ಅಂದರೆ ಪರಾವಲಂಬಿ ಇಷ್ಟೇ ಇವತ್ತಿನ ಪ್ರಪಂಚ ಅರ್ಥ ಮಾಡಿಕೊಂಡಿರುವುದು ಅನಾದಿಕಾಲದಿಂದಲೂ ಈ ಪ್ರಕೃತಿ ನಮ್ಮನ್ನೆಲ್ಲಾ ಸಲಹುತ್ತಾ ಬಂದಿದೆ.
ಯಾವುದೇ ನಿರೀಕ್ಷೆ ಇಲ್ಲದೆ ಹಿಂದೆ ಯಾರೋ ಮಾಡಿದ ಶಾಸನಗಳನ್ನು ಇವತ್ತು ಇತಿಹಾಸ, ಪುರಾತತ್ವ ಅಂತ ಓದುತ್ತಾ ಸಂಶೋಧನೆ ಮಾಡುವವರು ಇದ್ದಾರೆ ಅಪ್ಪನ ವ್ಯಾಪಾರ ವ್ಯವಹಾರ ಮುಂದುವರಿಸಿಕೊಂಡು ಹೋಗುವವರು ಇದ್ದಾರೆ. ತಲಾತಲಾಂತರದಿಂದ ಬಂದಿರೋ ವ್ಯವಸಾಯ, ಹೈನುಗಾರಿಕೆ ನಂಬಿ ಬದುಕುವವರು ಈಗಲೂ ಇದ್ದಾರೆ. ಹೀಗಿರಬೇಕಾದರೆ ಸ್ವಾವಲಂಬನೆ ಎಲ್ಲಿಂದ ಬಂತು ?, ಯಾವುದು? ಅನ್ನೋದು ವೈಯಕ್ತಿಕವಾಗಿ ನನಗೆ ಅರ್ಥ ಆಗಿಲ್ಲ. ಇದರ ನಡುವೆ ಕುಟುಂಬದ ಹಿನ್ನೆಲೆ ಬಿಟ್ಟು ಸ್ವಾತಂತ್ರ್ಯವಾಗಿ ಸಾಧಿಸುವವರು ಇದ್ದಾರೆ.
ಅದು ಸಾಹಿತ್ಯದಿಂದ ಹಿಡಿದು, ಸಿನೆಮಾದವರೆಗೂ ಕಾರ್ಪೊರೇಟ್‌ನಿಂದ ಹಿಡಿದು ವ್ಯಾಪಾರ -ವ್ಯವಹಾರದವರೆಗೂ ಸಾಧಿಸುವವರು ಸಾಧಿಸುತ್ತಾ ಇರುವವರು ಇದ್ದಾರೆ. ಇವರೆಲ್ಲರೂ ಒಬ್ಬರೇ ನಿಂತು ಮಾಡಿರುವುದಿಲ್ಲ ಒಂದು ಟೀಮ್ ಅಂತ ಇರುತ್ತೆ ಅನ್ನೋದು ನನ್ನ ಅನಿಸಿಕೆ. ಒಬ್ಬರೇ ಸಾಧಿಸಿರಬಹುದು. ಅದು ದೇವರ ಆಶೀರ್ವಾದ ಆಗಿರುತ್ತೆ. ಒಟ್ಟಿನಲ್ಲಿ ಪ್ರಕೃತಿ ಇಲ್ಲದೆ ಅದರ ಸವಲತ್ತುಗಳು ಇಲ್ಲದೆ ಮನುಷ್ಯ ಒಂದು ಹೆಜ್ಜೆ ಮುಂದೆ ಇಡಲಾರ.
ಅದನ್ನು ಅರ್ಥಮಾಡಿಕೊಳ್ಳಬೇಕಾದ್ದು ಮಾನವ ಕೋಟಿಯ ಕರ್ತವ್ಯ ಜತೆಗೆ ಅನುಭಾವವೂ ಹೌದು. ಹಾಗಾಗಿ ಈಗ ಇದ್ದ ಪ್ರಕೃತಿಯ ಅಳಿವು ಉಳಿವು ಎಲ್ಲಕ್ಕೂ ನಾವೇ ಜವಾಬ್ದಾರರಾಗಿದ್ದು ಈ ಬಗ್ಗೆ ನಿರ್ಲಕ್ಷ್ಯ ತೋರದೆ ಪ್ರಾಕೃತಿಕ ಸಂಪನ್ಮೂಲದ ಉಳಿವಿಗಾಗಿ ಸತತವಾಗಿ ಪರಿಶ್ರಮಿಸೋಣ.
- ಭೂಮಿಕಾ
ಮೈಸೂರು