Advertisement
ಒಂದೆಡೆ ಪರಿಸರ ಕಾಳಜಿ ತೋರಿಸಲು ಹಾಗೂ ಪ್ರಚಾರಕ್ಕಾಗಿ ಸಸಿಗಳನ್ನು ನೆಡಲಾಗುತ್ತದೆ. ಆದರೆ ಇನ್ನೊಂದೆಡೆ ಗಿಡಗಳ ಮಾರಣಹೋಮ ನಿರಂತರ ನಡೆಯುತ್ತಿದೆ. ನಗರಗಳಲ್ಲಿ ಬಡಾವಣೆಗಳನ್ನು ರೂಪಿಸುವಾಗ ರಸ್ತೆ ಬದಿ ಗಿಡಗಳನ್ನು ಬೆಳೆಸಲಾಗುತ್ತದೆ. ವಸತಿ ಬಡಾವಣೆ ಅಭಿವೃದ್ಧಿಯಾಗುತ್ತಿದ್ದಂತೆಯೇ ಅನಗತ್ಯವಾಗಿ ಗಿಡ-ಮರಗಳನ್ನು ಕಡಿಯಲಾಗುತ್ತದೆ. ವಿದ್ಯುತ್ ಲೈನ್‌ಗೆ ತೊಂದರೆಯಾದರೆ ಗಿಡ ಮರಗಳ ರೆಂಬೆ-ಕೊಂಬೆಗಳನ್ನು ಕಡಿಯಲು ಹೆಸ್ಕಾಂನವರಿಗೆ ಅವಕಾಶ ನೀಡಲಾಗಿದೆ. ಆದರೆ ಹೆಸ್ಕಾಂನವರಿಗಿಂತ ನಿವಾಸಿಗಳೇ ಹೆಚ್ಚು ಮರ-ಗಿಡ ಕಡಿಯುತ್ತಿದ್ದಾರೆ. ಹೆಚ್ಚಿನವರು ಮಹಾನಗರ ಪಾಲಿಕೆ, ಅರಣ್ಯ ಇಲಾಖೆ ಗಮನಕ್ಕೂ ತಾರದೇ ಕಟ್ಟಿಗೆಯನ್ನು ಮಾರಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಗಿಡ-ಮರಗಳನ್ನು ಕಡಿಯುವ ಪ್ರಮಾಣ ಹೆಚ್ಚಾಗುತ್ತದೆ.
Related Articles
Advertisement
ಗ್ರಾಮೀಣದಲ್ಲೂ ಗಿಡ ಮಾಯ : ಕೇವಲ ನಗರಗಳಲ್ಲಿ ಮಾತ್ರವಲ್ಲ, ಗ್ರಾಮೀಣ ಭಾಗಗಳಲ್ಲಿ ಕೂಡ ಗಿಡಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೊಲಗಳ ಬದುಗಳಲ್ಲಿನ ಗಿಡಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನೆರೆ-ಹೊರೆ ಹೊಲದವರ ಜಗಳ ಹಾಗೂ ಕಟ್ಟಿಗೆ, ಹಣದಾಸೆಗಾಗಿ ಗಿಡಗಳನ್ನು ಕಡಿಯಲಾಗುತ್ತದೆ. ಆದರೆ ಈ ಕಾರ್ಯವು ಹೊಲದ ಬದುಗಳನ್ನು ದುರ್ಬಲಗೊಳಿಸುತ್ತದೆ ಎಂಬುದನ್ನು ರೈತರು ಕಡೆಗಣಿಸಿದ್ದಾರೆ. ಬದಲಾದ ಕೃಷಿ ಪದ್ಧತಿ, ಅತಿಯಾದ ವಾಣಿಜ್ಯ ಬೆಳೆಗಳ ಮೋಹ, ಮಿತಿಯಾದ ಬೆಳೆಗಳ ವೈವಿಧ್ಯತೆ ಇವು ಕೂಡ ಹೊಲ-ಗದ್ದೆಗಳಲ್ಲಿ ಗಿಡ-ಮರಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿವೆ.
ನಗರಗಳಲ್ಲಿ ರಸ್ತೆ ಅಗಲೀಕರಣ ಹಾಗೂ ಔದ್ಯಮೀಕರಣ ಸೇರಿದಂತೆ ವಿವಿಧ ಯೋಜನೆಗಳಿಗೆ ಮರಗಳು ಸಹಜವಾಗಿ ತುತ್ತಾಗುತ್ತವೆ. ಮರಗಳನ್ನು ಕಡಿದವರು ಮತ್ತೆ ಸಸಿಗಳನ್ನು ನೆಡಲು ಮುಂದಾಗುವುದಿಲ್ಲ. ಕಾಟಾಚಾರಕ್ಕೆಂಬಂತೆ ಕೆಲ ಸಸಿ ನೆಡುವುದೇ ಹೆಚ್ಚು. ಅವುಗಳ ನಿರ್ವಹಣೆಯನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ. ದಾಖಲೆಗಳಲ್ಲಿ ಮಾತ್ರ ಗಿಡಗಳ ಸಂಖ್ಯೆ ನಮೂದಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. -ಲಿಂಗರಾಜ ನಿಡವಣಿ, ಪರಿಸರ ಕಾರ್ಯಕರ್ತ
-ವಿಶ್ವನಾಥ ಕೋಟಿ