ನವದೆಹಲಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಬಹಳ ಮಹತ್ವದ ಸಂದೇಶವನ್ನು ನೀಡಿದ್ದಾರೆ. ಅವರು ಹಿಂದೆಯೇ ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ಪರಿಸರ ದಿನಾಚರಣೆ ನಿಮಿತ್ತ ಮಾಡಿದ ವಿಡಿಯೊದಲ್ಲಿ ಪುನರುಚ್ಚಿಸಿದ್ದಾರೆ. ಬೃಹತ್ತಾದ, ಅಭಿವೃದ್ಧಿ ಹೊಂದಿದ ಕೆಲ ದೇಶಗಳು ತಮ್ಮ ಅಭಿವೃದ್ಧಿಗಾಗಿ ಪರಿಸರವನ್ನು ಮರೆತರು. ಅದರ ಪರಿಣಾಮವನ್ನೇ ಇವತ್ತು ಬಡರಾಷ್ಟ್ರಗಳು ಅನುಭವಿಸುತ್ತಿರುವುದು ಎನ್ನುವುದು ಮೋದಿ ಮಾತಿನ ಸಾರಾಂಶ.
“ದೀರ್ಘಾವಧಿಯಿಂದ ಬೃಹತ್ ಮತ್ತು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅಭಿವೃದ್ಧಿಯ ಮಾದರಿ ವೈರುಧ್ಯಮಯವಾಗಿದೆ. ಆ ದೇಶಗಳಲ್ಲಿ ಮೊದಲು ತಮ್ಮ ದೇಶವನ್ನು ಅಭಿವೃದ್ಧಿ ಮಾಡೋಣ, ಆಮೇಲೆ ಪ್ರಕೃತಿಯ ಬಗ್ಗೆ ಚಿಂತಿಸೋಣ ಎನ್ನುವ ಮನೋಭಾವ ಇದೆ. ಇದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ಅದಕ್ಕಾಗಿ ಜಾಗತಿಕ ಪರಿಸರ ಬೆಲೆ ತೆರಬೇಕಾಗಿದೆ. ಈಗಲೂ ಅಭಿವೃದ್ಧಿ ಹೊಂದುತ್ತಿರುವ, ಬಡ ದೇಶಗಳು ಮುಂದುವರಿದ ರಾಷ್ಟ್ರಗಳ ಈ ತಪ್ಪು ನೀತಿಗಳಿಗೆ ಬೆಲೆ ತೆರುತ್ತಿವೆ’ ಎಂದು ಮೋದಿ ಹೇಳಿದ್ದಾರೆ.
“ದಶಕಗಳಿಂದ ಈ ಬಗ್ಗೆ ಯಾರೂ ದನಿಯೆತ್ತಿರಲಿಲ್ಲ. ಭಾರತ ಅದರ ಬಗ್ಗೆ ದನಿಯೆತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ. ಅಭಿವೃದ್ಧಿ ಹೊಂದಿದ ಎಲ್ಲ ದೇಶಗಳ ಬಳಿ ನಾನು ಪರಿಸರ ನ್ಯಾಯದ ಪ್ರಶ್ನೆ ಕೇಳಿದ್ದೇನೆ. ಭಾರತ ಇತರೆಲ್ಲ ಅಭಿವೃದ್ಧಿಯ ವಿಚಾರಗಳಂತೆ ಪರಿಸರವನ್ನು ಗಂಭೀರವಾಗಿ ಪರಿಗಣಿಸಿದೆ. ಈ ವರ್ಷದ ಗುರಿಯೇ ಏಕಬಳಕೆಯ ಪ್ಲಾಸ್ಟಿಕ್‌ನಿಂದ ಮುಕ್ತವಾಗುವುದು. ಭಾರತ 4ಜಿ, 5ಜಿಯನ್ನು ವಿಸ್ತರಿಸುತ್ತಾದರೆ ಅರಣ್ಯವನ್ನೂ ಬೆಳೆಸುತ್ತದೆ’ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.
ಮೋದಿಯ ಮೊದಲ ಆಹ್ವಾನಿತ ಭೇಟಿ: ಭಾರತೀಯರಿಗೆ ಸಂಭ್ರಮ
-ಜೂ.21ರಿಂದ 24ರ ಅಮೆರಿಕ ಪ್ರವಾಸದ ಹಿನ್ನೆಲೆಯಲ್ಲಿ ಗರಿಗೆದರಿದೆ ಕುತೂಹಲ
ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಿಂದಲೇ ಆಹ್ವಾನಿತರಾಗಿ ಆ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಮೋದಿ ಇದುವರೆಗೆ ಹಲವು ಬಾರಿ ಅಮೆರಿಕಕ್ಕೆ ಹೋಗಿದ್ದರೂ, ಇದು ಅತ್ಯಂತ ಮಹತ್ವದ್ದಾಗಿದೆ. ಕಾರಣ ಅಮೆರಿಕ ಸರ್ಕಾರದ ಆಹ್ವಾನದ ಮೇರೆಗೆ ಹೋಗುತ್ತಿರುವುದು ಇದೇ ಮೊದಲು.
ಈ ಕಾರಣದಿಂದ ಅಮೆರಿಕದಲ್ಲಿನ ಭಾರತೀಯ ಸಮುದಾಯ ಬಹಳ ಸಂತಸದಲ್ಲಿದೆ, ಜೊತೆಗೆ ಮೋದಿ ಬರುವಿಕೆಯನ್ನೇ ಕುತೂಹಲದಿಂದ ಕಾಯುತ್ತಿದೆ. ಜೂ.21ರಿಂದ 24ರವರೆಗಿನ ಈ ಭೇಟಿ ವೇಳೆ ವೈಟ್‌ಹೌಸ್‌ನಲ್ಲಿ ದೊಡ್ಡ ಕಾರ್ಯಕ್ರಮವೇ ನಡೆಯಲಿದೆ. ಈ ವೇಳೆ 5000 ಆಯ್ದ ಭಾರತೀಯ ಸಮುದಾಯದವರಿಗೆ ಆಹ್ವಾನ ನೀಡಲಾಗಿದೆ. ಅವರೆಲ್ಲರೂ ಈಗಾಗಲೇ ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಿ ವಾಷಿಂಗ್ಟನ್ ತೆರಳಲು ಕಾಯುತ್ತಿದ್ದಾರೆ!