Advertisement

World Dog Day: ನಾನು, ನನ್ನ ಕಾಳ..!

07:20 PM Aug 25, 2024 | Team Udayavani |

ಮನುಷ್ಯನ ಅತ್ಯಂತ ನೆಚ್ಚಿನ ಪ್ರಾಣಿಯೆಂದರೆ ನಾಯಿ. ಮನುಷ್ಯ ಮತ್ತು ನಾಯಿಯ ಬಾಂಧವ್ಯವನ್ನು ವಿವರಿಸಲು ಪದಗಳಿಲ್ಲ. ಮಕ್ಕಳನ್ನು ಸಾಕುವಷ್ಟೇ ಮುದ್ದಿನಿಂದ ನಾಯಿಗಳನ್ನೂ ಸಾಕುವ ಜನ, ಅವುಗಳ ಅಗಲಿಕೆಯಿಂದ ತತ್ತರಿಸಿಹೋದ ಪ್ರಸಂಗಗಳಿಗೆ ಲೆಕ್ಕವಿಲ್ಲ. ಅಂಥ ಬಾಂಧವ್ಯದ ಮಧುರ ನೆನಪಿನ ಅನಾವರಣ ಇಲ್ಲಿದೆ..

Advertisement

Dogs lives are too short. Their only fault, really ನಮ್ಮ ಮನೆ- ಮನಸ್ಸುಗಳನ್ನು ಇಷ್ಟು ತೀವ್ರವಾಗಿ ಆವರಿಸಿಬಿಡಬಲ್ಲನೆಂಬ ಸಣ್ಣ ಊಹೆಯೂ ಇಲ್ಲದೆ, 2015 ಜನವರಿ 12ರಂದು, 33 ದಿನಗಳ ಲ್ಯಾಬ್ರಡಾರ್‌ ತಳಿಯ ಪುಟ್ಟ, ಕಪ್ಪು ಬಣ್ಣದ ನಾಯಿಮರಿಯನ್ನು ಮನೆಗೆ ತಂದುಬಿಟ್ಟೆ. ಅದಕ್ಕೆ ಕಾಳ ಎಂದು ಹೆಸರಿಟ್ಟಿದ್ದೂ ಆಯಿತು! ಬಂದ ದಿನವೇ ಪುಟ್ಟ ಪುಟ್ಟ ಕಾಲುಗಳಲ್ಲಿ ಬುಡು ಬುಡು ಓಡಾಡಿ ಮಹಡಿಯ ಮೆಟ್ಟಿಲು ಹತ್ತಲು ಹೋದವನನ್ನು ಕಂಡು “ಹೀ ಬಿಲಾಂಗ್ಸ್‌ ಹಿಯರ್‌’ (He belongs here) ಅನಿಸಿತ್ತು. ಚಿಕ್ಕಂದಿನಿಂದಲೂ ನಾಯಿಗಳೆಂದರೆ ಎಲ್ಲಿಲ್ಲದ ಪ್ರೀತಿ ಹೊಂದಿದ್ದ ನನಗೆ ಒಂದಾದ ಮೇಲೊಂದರಂತೆ ಬೀದಿ ನಾಯಿಗಳನ್ನೆಲ್ಲ ಮನೆಯ ಕಾಂಪೌಂಡ್‌ ಒಳಗೆ ತಂದು ಸಾಕುವ ಹುಚ್ಚಿತ್ತು.

ಎಷ್ಟೋ ನಾಯಿಗಳು ನಮ್ಮ ಮನೆಯ ಕಾಂಪೌಂಡ್‌ನ‌ಲ್ಲಿ ಮರಿ ಹಾಕಿ ಬಾಣಂತನ ಮಾಡಿಸಿಕೊಂಡಿವೆ. ಆ ಮರಿಗಳರೆಲ್ಲ ತೀರಾ ಹಚ್ಚಿಕೊಂಡಿದ್ದು “ಬಿಳಿಯ’ ಮತ್ತು “ದೈನ್ಯ’ ಎಂಬ ಎರಡು ನಾಯಿಗಳನ್ನು. ಅವೆರಡು ಪೂರ್ಣ ಜೀವನ ನಡೆಸಿ ತೀರಿಕೊಂಡಾಗ ಆದಂಥ ನೋವಿನಿಂದ, ಇನ್ನು ಮೇಲೆ ಯಾವ ನಾಯಿಯೂ ಬೇಡವೆಂದು ಅಮ್ಮ ನಿಯಮ ಹೇರಿದ್ದಳು. ಅದನ್ನು ಮುರಿಯುವಂತೆ ಮಾಡಿದ್ದು ನಮ್ಮ ಕೃಷ್ಣ ಸುಂದರ ಪಿಳಿ ಪಿಳಿ ಕಣ್ಣುಗಳನ್ನು ಬಿಟ್ಟು ಮೊದಲು ನನ್ನನ್ನು ನೋಡಿದಾಗ… ತೀರಾ ಮುಗಟಛಿ, ಕೊಂಚ ತುಂಟನಂತೆ ಕಂಡಿದ್ದ ಅವನನ್ನು ಮೊದಲ ಸಲ ಎತ್ತಿಕೊಂಡಾಗ, ಬೆಚ್ಚಗೆ ನನ್ನನ್ನು ಅಪ್ಪಿಕೊಂಡನೇನೋ ಅನ್ನಿಸಿಬಿಟ್ಟಿತ್ತು. ಅವನನ್ನು ಮನೆಗೆ ತಂದ ದಿನದಿಂದಲೇ ನಮ್ಮೆಲ್ಲರ ಜೀವನ ಎಷ್ಟೊಂದು ಬದಲಾಗಿ ಹೋಯ್ತು!

ಅವನು ಮಗುವಿನಂತೆ

“ಪೆಟ್‌ ಓನರ್ಸ್‌’ ಎಂದು ಮುಂಚೆ ಬಳಸುತ್ತಿದ್ದ ಪದ ಈಗ “ಪೆಟ್‌ ಪೇರೆಂಟ್ಸ್‌’ ಎಂದು ಯಾಕಾಗಿದೆ ಎಂದು ಚೆನ್ನಾಗಿ ಅರ್ಥವಾಯಿತು. ನಾಯಿಗಳನ್ನು ಸಾಕುವುದೆಂದರೆ ಮಕ್ಕಳನ್ನು ಸಾಕಿದಂತೆಯೇ! ಒಂದು ವ್ಯತ್ಯಾಸವೆಂದರೆ ನಾಯಿಗಳು ಎಷ್ಟೇ ದೊಡ್ಡವಾದರೂ ಸದಾ ಮಕ್ಕಳಾಗಿಯೇ ಉಳಿಯುತ್ತವೆ. ಕಾಳ 7 ವರ್ಷಗಳ ಕಾಲ ಮನೆಯ ಮಗುವಿನಂತೆ ಇದ್ದವನು 2022ರಲ್ಲಿ ನಮ್ಮೆಲ್ಲರನ್ನೂ ಅಗಲಿದ. ಅವನೊಂದಿಗೆ ಕಳೆದ ಪ್ರತಿಕ್ಷಣವೂ ಒಂದು ಅಚ್ಚರಿಯೇ. ವಾಕಿಂಗ್‌ ಹೋದಾಗಲೆಲ್ಲ ಆಚೀಚೆ ಬೀದಿಯ ಮಕ್ಕಳು, ಹಿರಿಯರೆಲ್ಲ ಕಾಳನನ್ನು ಮುದ್ದು ಮಾಡುವವರೇ. ಮನೆಯ ಜನರಂತೆ ನಾಯಿಯ ಸ್ವಭಾವವೂ ಇರುತ್ತದೆಂದು ಎಲ್ಲೋ ಓದಿದ ನೆನಪು. ಒಂದು ಮಗುವನ್ನು ಬೆಳೆಸುವಾಗ ತಂದೆ ತಾಯಿಯರಿಗೆ “ನಿಮ್ಮ ಮಗುವನ್ನ ಎಷ್ಟು ಚೆನ್ನಾಗಿ ಬೆಳೆಸಿದ್ದೀರಾ’ ಎಂದಾಗ ಆಗುವ ಖುಷಿಯೇ “ಎಷ್ಟು ಮೃದು ಸ್ವಭಾವದ ಒಳ್ಳೆಯ ನಾಯಿ’ ಎಂದು ಪ್ರತಿಯೊಬ್ಬರೂ ಹೇಳುವಾಗ ಆಗುತಿತ್ತು.

Advertisement

ಕುಣಿದು ಕುಪ್ಪಳಿಸುತ್ತಿದ್ದ…

ನನ್ನ ಮತ್ತು ಕಾಳನ ಪ್ರೀತಿ ಬಹು ವಿಶೇಷವಾದದ್ದು. ನಾನು ಮನೆಗೆ ಮರಳಿದಾಗ ಕುಣಿದು ಕುಪ್ಪಳಿಸುವಷ್ಟು ಮತ್ಯಾರು ಬಂದಾಗಲೂ ಮಾಡುತ್ತಿರಲಿಲ್ಲ. ನಾನೆಂದರೆ ಕಾಳನಿಗೆ ಪಂಚಪ್ರಾಣ. “ನಿನಗೆ ಊಟ ಉಪಚಾರ, ವಾಕಿಂಗ್‌ ಮಾಡಿಸುವುದು ಯಾರೋ? ನೀನು ತಕ ಪಕ ಕುಣಿಯುವುದು ಯಾರಿಗೋ?’ ಎಂದು ಅಮ್ಮ ಯಾವಾಗಲೂ ಕಾಳನಿಗೆ ಬೈಯುತ್ತಿದ್ದಳು. ತೀರಾ ಬೇಸರವಾದಾಗ, ಜ್ವರ ಬಂದು ಮಲಗಿದಾಗ, ಮನಸ್ಸಿಗೆ ಏನೋ ಕಿರಿಕಿರಿಯಾದಾಗ ಕಾಳ ನಮ್ಮನ್ನು ನೋಡಿದರೂ ಬೇಸರಿಸಿಕೊಂಡು ಮೂಲೆ ಸೇರಿಬಿಡುತ್ತಿದ್ದ. ನನ್ನ ಅಣ್ಣನಿಗೆ ಮಗುವಾದ ಮೇಲೆ ಕೊಂಚ ಹೊಟ್ಟೆಕಿಚ್ಚಾಗುತ್ತಿತ್ತೇನೋ, ತನ್ನನ್ನು ಸರಿಯಾಗಿ ಮಾತನಾಡಿಸದಿದ್ದರೆ ಸಿಟ್ಟು ಮಾಡಿಕೊಳ್ಳುತ್ತಿದ್ದ. ಅವನೆಲ್ಲಿ ನೊಂದುಕೊಳ್ಳುತ್ತಾನೋ ಎಂದು ನಾನು ನನ್ನ ಅಳಿಯನನ್ನು ಇವನಿಲ್ಲದ ಸಮಯದಲ್ಲಿ ಕದ್ದು ಮಾತಾಡಿಸಿ ಬರುತ್ತಿದ್ದೆ.

ಕಾಳನಿಗೆ ಜಾರುಬಂಡೆಯೆಂದರೆ ಬಹು ಪ್ರೀತಿ. ಮನೆಗೆ ಹೊಸಬರು ಬಂದರೆ ಕಡ್ಡಾಯವಾಗಿ ಅವನನ್ನು ಮಾತನಾಡಿಸಲೇಬೇಕಿತ್ತು. ಅವರು ಮುಟ್ಟಿ ಮುದ್ದು ಮಾಡುವ ತನಕ, ತನ್ನ ಗೊಂಬೆಗಳನ್ನು ಬಾಯಲ್ಲಿ ಕಚ್ಚಿಕೊಂಡು ಅವರ ಹಿಂದೆಯೇ ಸುತ್ತಿ, ಕೊನೆಗೂ ತನ್ನ ಪ್ರೀತಿಗೆ ಮಣಿಯುವ ಹಾಗೆ ಮಾಡುತ್ತಿದ್ದ. ಜನಾನುರಾಗಿಯಾಗಿದ್ದ ಕಾಳನಿಗೆ, ಟಬ್ಬಿ ,ಕೆಂಚಿ,ಝೋರ್ರೊ, ಪ್ರಸಾರಿ ಹೀಗೆ ಸಾಕಷ್ಟು ಶ್ವಾನ ಗೆಳೆಯ- ಗೆಳತಿಯರೂ ಇದ್ದರು. ಅವನಿಗಾಗಿ ಅಮ್ಮ ಎರಡು ಪುಸ್ತಕಗಳನ್ನೇ ಹೊರ ತಂದಳು, ಅದರ ಬಿಡುಗಡೆಯನ್ನು ನಮ್ಮ ಮನೆಯ ಬಾಲ್ಕನಿಯಲ್ಲೇ ನೆರವೇರಿಸಲಾಯ್ತು. ಅಮ್ಮ (ಎಂ.ಆರ್‌. ಕಮಲ) ಬರೆದ “ಕಾಳನಾಮ ಚರಿತೆ’ ಇಂದಿಗೂ ಬಹು ಜನಪ್ರಿಯ ಪುಸ್ತಕ. ಕಾಳ ನಮ್ಮೊಂದಿಗೆ ಈಗಿಲ್ಲದಿದ್ದರೂ ಈ ಎಲ್ಲ ನೆನಪುಗಳು ಅವನನ್ನು ಸಾಹಿತ್ಯ ಲೋಕದಲ್ಲೂ, ನೆರೆಹೊರೆಯವರಲ್ಲೂ, ನಮ್ಮ ಮನಸುಗಳಲ್ಲೂ ಅಚ್ಚಳಿಯದಂತೆ ಉಳಿಸಿವೆ.

ಪಾರಿಜಾತನಾದ ಕಾಳ…

ಅವನಿಗೇನಾದರೂ ಚೂರು ಆರೋಗ್ಯದಲ್ಲಿ ವ್ಯತ್ಯಾಸವಾದರೂ ಸಹಿಸಲಾಗದೆ ಮನೆ ಮಂದಿಯೆಲ್ಲ ನಿದ್ದೆಗೆಡುತ್ತಿದ್ದೆವು. ಕಾಳನೊಂದಿಗೆ ಸಾವಿರಾರು ಖುಷಿ ನೆನಪುಗಳಿದ್ದರೂ ಯಾರನ್ನೂ ದುಃಖದಿಂದಿರಲು ಬಿಡದ ನಮ್ಮ ಕಾಳಣ್ಣನಿಗೆ ಒಮ್ಮೆ ಬಾಯಲ್ಲಿ ಗಡ್ಡೆಯೊಂದು ಕಾಣಿಸಿಕೊಂಡು, ಅದು ಕ್ಯಾನ್ಸರ್‌ ಇರಬಹುದೆಂಬ ಗುಮಾನಿಯೊಂದಿಗೆ ನಾಲ್ಕಾರು ಆಸ್ಪತ್ರೆಗಳನ್ನು ಸುತ್ತಿ ಕೊನೆಗೆ ದೊಡ್ಡ ಆಸ್ಪತ್ರೆಯೊಂದರಲ್ಲಿ ಶಸOಉಚಿಕಿತ್ಸೆ ಮಾಡಿಸಿದೆವು. ಅದಾದ ನಂತರ ಅವನ ಆರೋಗ್ಯ ಕ್ಷೀಣಿಸುತ್ತಾ ಹೋಗಿ ವರ್ಷದಲ್ಲೇ ಅವನನ್ನು ಕಳೆದುಕೊಂಡೆವು. ಈಗಲೂ ಮನಸ್ಸು ಆ ಆಸ್ಪತ್ರೆಗೆ ಕರೆದುಕೊಂಡು ಹೋಗಬಾರದಿತ್ತು, ಅವನಿಗೆ ಸರ್ಜರಿ ಮಾಡಿಸಬಾರದಿತ್ತು ಎಂದು ಒದ್ದಾಡುತ್ತಿರುತ್ತದೆ. ಆದರೆ ಇದ್ದಷ್ಟು ಕಾಲ ಅವನೊಂದಿಗೆ ಕಳೆದ ಪ್ರತಿ ನೆನಪೂ ಹಸಿರಾಗಿದೆ. ನಮ್ಮಲ್ಲಿ ತೀರಿಕೊಂಡ ನಾಯಿಗಳನ್ನು ಮಣ್ಣು ಮಾಡಿ ಅದರ ಮೇಲೆ ಗಿಡ ನೆಡುವ ವಾಡಿಕೆಯಿದೆ. ಹೀಗೆ ಈಗಲೂ ಕಾಳ ನಮ್ಮ ಮನೆಯ ಎದುರು ಪಾರಿಜಾತವಾಗಿ ಬೆಳೆಯುತ್ತಿದ್ದಾನೆ. ಅದೂ ಅಲ್ಲದೆ ಅವನ ನೆನಪಿನಲ್ಲಿ ಇಡೀ ಜಗತ್ತಿನ ಬೇರೆ ಬೇರೆ ನಾಯಿಗಳ ಇನ್ಸ್ಟಾಗ್ರಾಮ್‌ ಅಕೌಂಟ್‌ ಫಾಲೋ ಮಾಡುವ ನಾನು, ದಿನದ ಹಲವಾರು ಘಂಟೆಗಳನ್ನು ಅವುಗಳ ಚಟುವಟಿಕೆಗಳನ್ನು ನೋಡುವುದರಲ್ಲೇ ಕಳೆದುಬಿಡುತ್ತೇನೆ. ಎಷ್ಟೋ ಸಲ ಇನ್ನೊಂದು ನಾಯಿ ತಂದುಬಿಡಬೇಕೆಂದು ಮನಸ್ಸು ಹಂಬಲಿಸುತ್ತಿರುತ್ತದೆ. ಆದರೆ ಅವುಗಳ ಅಗಲಿಕೆಯ ನೋವನ್ನು ನೆನೆಸಿಕೊಂಡಾಗಲೆಲ್ಲ ಮತ್ತೆ ಇಷ್ಟು ನೋವು ಅನುಭವಿಸಲು ನನ್ನಲ್ಲಿ ಶಕ್ತಿಯಿಲ್ಲವೆಂದೆನಿಸಿ, ಬೇರೆ ನಾಯಿಗಳನ್ನು ನೋಡುತ್ತಾ ಖುಷಿಪಡುವುದರಲ್ಲಿ ಮಗ್ನಳಾಗಿಬಿಡುತ್ತೇನೆ. ಕಾಳನ ಅಗಲಿಕೆಯ ನಂತರ ದೊಡ್ಡ ಖಾಲಿತನ ಮನಸ್ಸನ್ನು ಆವರಿಸಿಕೊಂಡುಬಿಟ್ಟಿದೆ. ಅದನ್ನು ತುಂಬಲು ಮತ್ತೂಬ್ಬ ಕಾಳ ಬರಬೇಕೇನೋ!

ಸ್ಪರ್ಶ ಆರ್‌.ಕೆ.ಹಿನ್ನೆಲೆ ಗಾಯಕಿ

Advertisement

Udayavani is now on Telegram. Click here to join our channel and stay updated with the latest news.

Next