ಪ್ರತೀ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದ ಬೆಳವಣಿಗೆ, ವೈದ್ಯರ ಮಹತ್ವ, ಹೊಣೆಗಾರಿಕೆ ಹಾಗೂ ಇಂದಿನ ವೈದ್ಯಕೀಯ ರಂಗದ ಸ್ಥಿತಿಗತಿಯ ಕುರಿತಂತೆ ಈ ವಿಶೇಷ ಲೇಖನ.
Advertisement
ಇಂದು ಯುವಜನತೆ ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿಯಲ್ಲಿ ಆಸಕ್ತಿ ವಹಿಸಿ ವಿಶ್ವದ ವೃತ್ತಿ ನಿರತ ವೈದ್ಯರೊಂದಿಗೆ ಸ್ಪರ್ಧಾತ್ಮಕವಾಗಿ ಬೆಳೆಯಬೇಕಿದೆ. ವಿಶ್ವದ ಅತೀ ಹೆಚ್ಚು ಯಶಸ್ವೀ ಸಂಶೋಧಕರು ಮತ್ತು ವೈದ್ಯರು ಅಂದರೆ ಭಾರತೀಯರು ಎಂಬುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರ.
Related Articles
ಈಗಿನ ಹಾಗೆ ರೋಗ ಪರೀಕ್ಷಾ ವಿಧಾನಗಳಿರಲಿಲ್ಲ. ನಾಡಿ ವೈದ್ಯ, ಪ್ರಯೋಗ ಪರಿಹಾರ(ರೋಗಿಯ ಲಕ್ಷಣಗಳನ್ನ ಕೇಳಿ ಯಾವ ಕಾಯಿಲೆ ಎಂಬುದನ್ನು ಪತ್ತೆಹಚ್ಚುವುದು)ದಿಂದ ಔಷಧ ನೀಡುತ್ತಿದ್ದರು. ಇಂದು ರೋಗ ಮೂಲ ಪತ್ತೆ ಹಚ್ಚುವ ವಿಧಾನ, ಲ್ಯಾಬೋರೆಟರಿಗಳು, ವೈದ್ಯಕೀಯ ಉಪಕರಣಗಳು ಬಂದಿರುವುದರಿಂದ ನಿಖರವಾಗಿ ಚಿಕಿತ್ಸೆ ನೀಡುವ ಜತೆಗೆ ಫಲಿತಾಂಶ ಕಾಣಲು ಸಾಧ್ಯವಾಗಿದೆ. ಪರಿಣಾಮ ನಾಟಿ ವೈದ್ಯರು ತೆರೆಗೆ ಸರಿದಿದ್ದಾರೆ, ಆಯುರ್ವೇದವೂ ಪ್ರಶ್ನಾರ್ಥಕವಾಗಿದೆ. ಹೀಗಾಗಿ ನಮ್ಮ ಮುಂದಿರುವ ಆಯ್ಕೆ ಎಂದರೆ ಪ್ರಕೃತಿ ಚಿಕಿತ್ಸೆ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೀವನ ವಿಧಾನ ರೂಢಿಸಿಕೊಂಡು ರೋಗವನ್ನು ದೂರವಿಡಬೇಕು.
Advertisement
ವೈದ್ಯರೂ ಎಂದರೆ ನಾಟಿ, ಆಯುರ್ವೆàದ, ಅಲೋಪತಿ, ಪ್ರಾಕೃತಿಕ ಚಿಕಿತ್ಸೆ ನೀಡುವವರೂ ವೈದ್ಯರೇ. ಆದರೆ ಈಗ ಹೆಚ್ಚು ಮಹತ್ವ, ಚರ್ಚೆಗೆ ಒಳಪಡುವವರು ಅಲೋಪತಿ ವೈದ್ಯರು. ಅವರು ತಮ್ಮ ಅಪಾರವಾದ ಜ್ಞಾನದಿಂದ ಅಂದರೆ ಯಾವ ಸಂಶೋಧನೆ ಮಾಡಿದರೂ ಅದನ್ನು ಖಾಸಗಿಯಾಗಿರಿಸದೆ ಸಮಾಜಕ್ಕೆ ಅರ್ಪಿಸುತ್ತಾರೆ. ಅದರ ಉಪಯೋಗ ವಿಶ್ವಕ್ಕೆ ದೊರಕುತ್ತದೆ. ರೋಗ ನಿರೋಧಕ ಶಕ್ತಿ ಬೆಳೆಸುವುದು, ರೋಗ ಪರಿಹಾರ ಮಾಡುವುದು ಒಂದೆಡೆಯಾದರೆ, ಶಸ್ತ್ರ ಚಿಕಿತ್ಸೆ ಮೂಲಕ ರೋಗ ಇರುವ ಭಾಗ ತೆಗೆದು ಅಂಗಾಂಗ ಕಸಿವರೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ ಕಂಡಿದ್ದೇವೆ. ಇದರಿಂದ ಅಲೋಪತಿ ಮುಖ್ಯವಾದ ಭಾಗವಾಗಿದೆ.
ಜಗತ್ತಿನ ದೊಡ್ಡ ಸವಾಲು ಎಂದರೆ ವ್ಯಕ್ತಿ ಹೇಗೆ ತನ್ನನ್ನು ತಾನು ನಿರ್ವಹಿಸಿಕೊಳ್ಳುತ್ತಾನೆ ಎಂಬುದು. ವೈದ್ಯಕೀಯ ಪದ್ಧತಿ ಇದೆ ಎಂದು ಸ್ವೇಚ್ಛೆಯಿಂದ ಬದುಕುವುದಲ್ಲ. ಆದರೆ ಇಂದು ಆಗುತ್ತಿರುವುದು ಅದೇ. ವೈಯಕ್ತಿಕವಾಗಿ ಎಲ್ಲರೂ ತಮ್ಮ ತಮ್ಮ ವ್ಯಕ್ತಿತ್ವವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕಿದೆ.
ಹಿಂದೆ ರೋಗದ ಕುರಿತು ರೋಗಿಗಳಿಗೆ ತಿಳಿಸದೆ ಗುಟ್ಟಾಗಿ ಕಾಪಾಡುತ್ತಿದ್ದರು. ಆದರೆ ಇಂದು ಹಾಗಿಲ್ಲ. ರೋಗಿಗೆ ರೋಗದ ಮಾಹಿತಿ ನೀಡಲಾಗುತ್ತದೆ. ಇದು ಸಕಾರಾತ್ಮಕ ಬೆಳವಣಿಗೆ. ನಮಗೆ ನಾವೇ ಚಿಕಿತ್ಸಕರಾಗದೆ ಸೂಕ್ತ ಕಾಲಕ್ಕೆ ಸೂಕ್ತ ವೈದ್ಯರನ್ನು ಸಂಪರ್ಕಿಸಿದರೆ ರೋಗ ಮುಕ್ತ ಜೀವನ ನಮ್ಮದಾಗಲಿದೆ.
ವೈದ್ಯರು ಯಾಕೆ ಭಗವಂತನ ಸ್ವರೂಪ ಎಂದರೆ, ದೇವರು ಕೊಟ್ಟ ದೇಹದ ಅಂಗಾಂಗಗಳನ್ನು ವೈದ್ಯರ ಮೂಲಕ ಜೋಡಿಸಬಹುದು. ಹೀಗಾಗಿ ಅಂಗಾಂಗ ದಾನ ಅತೀ ಪ್ರಾಶಸ್ತ್ಯ ಪಡೆದಿದೆ. ಅಂಗ ಪಡೆಯುವವರ ಆಯುಷ್ಯ ವೃದ್ಧಿಯಾಗುತ್ತದೆ. ಆದ್ದರಿಂದ ವೈದ್ಯರು ತಾವು ಕಲಿತ ವಿದ್ಯೆ, ಪಡೆದಂತಹ ಶಿಕ್ಷಣವನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಳ್ಳಬೇಕು. ಹೀಗೊಂದು ಮಾತಿದೆ, ಜೋತಿಷ ಶಾಸ್ತ್ರ ಕಲಿತವರು ತಪಸ್ಸು ಮಾಡಿ, ಧ್ಯಾನ ಮಾಡಿ ವಾಕ್‌ಶಕ್ತಿ ಪಡೆಯಬೇಕು…ಅದೇ ರೀತಿ ವೈದ್ಯರು ಕಾಲೇಜಿನಿಂದ ಪದವಿ ಪಡೆದ ಕೂಡಲೇ ಸರ್ವಜ್ಞರಾಗುವುದಿಲ್ಲ. ಪ್ರಾಪಂಚಿಕ ಅನುಭವವನ್ನು ಬೆಳೆಸಿಕೊಂಡು, ಸಾಕಷ್ಟು ಅಭ್ಯಾಸ ಮಾಡಿ ಪಕ್ವತೆ ಪಡೆಯಬೇಕು.
ಒಂದೆಡೆ ವೈದ್ಯಕೀಯ ಸೇವಾ ಕ್ಷೇತ್ರ ಉದ್ಯಮವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಎಲ್ಲ ರೋಗಿಗಳಿಗೆ ಒಂದೇ ರೀತಿ ವೈದ್ಯಕೀಯ ವೆಚ್ಚದ ಬಿಲ್ ಭರಿಸಲಾಗದು. ರೋಗದ ಗುಣಲಕ್ಷಣ, ಅದಕ್ಕೆ ನೀಡುವ ಔಷಧದ ವೆಚ್ಚದಲ್ಲಿ ವ್ಯತ್ಯಾಸ ಸಹಜ. ಆದರೆ ಕೆಲವೊಮ್ಮೆ ಕನಿಷ್ಠ ಔಷಧಗಳ ಮೂಲಕ ರೋಗ ವಾಸಿ ಮಾಡಲು ಸಾಧ್ಯವೇ ಎಂಬುದನ್ನು ವೈದ್ಯರು ಅರಿತು ಪಾಲಿಸಿ ವೃತ್ತಿ ಧರ್ಮ ಕಾಪಾಡಬೇಕು. ಸರಕಾರ ಈ ದಿಸೆಯಲ್ಲಿ ಮಾರ್ಗದರ್ಶನ ನೀಡಬೇಕು.
ವೈದ್ಯರು ದೇವರಂತೆ ಎಂದು ಹೇಳಿದರೂ ಅವರೂ ಮನುಷ್ಯರೇ. ಅವರಿಂದಲೂ ತಪ್ಪು ಆಗಬಹುದು, ವೈದ್ಯರಿಗೆ ತಾವು ಕೊಡುವ ಚಿಕಿತ್ಸೆ ಬಗ್ಗೆ ಭಯ ಉಂಟಾಗಿದೆ. ಯಾಕೆಂದರೆ ಎಲ್ಲಾದರೂ ಸ್ವಲ್ಪ ತಪ್ಪಿದಲ್ಲಿ ನಮ್ಮ ಮೇಲೆ ಆಘಾತವಾಗಬಹುದು, ರೋಗಿಗಳ ಕುಟುಂಬದವರು ಆಕ್ರಮಣ ಮಾಡಬಹುದೆಂಬ ಭಯ ಆವರಿಸಿದೆ. ವೈದ್ಯಕೀಯ ವೃತ್ತಿ ಅನ್ನುವುದು ವಯೋಧರ್ಮದನುಸಾರ ವಯಸ್ಸು, ಅನುಭವ ಹೆಚ್ಚಾದಂತೆ ಚಿಕಿತ್ಸಾ ಪದ್ಧತಿಯ ಆತ್ಮವಿಶ್ವಾಸ ಹೆಚ್ಚುತ್ತದೆ. ಆದ್ದರಿಂದ ನನ್ನ ಸಂದೇಶವೇನೆಂದರೆ ವೈದ್ಯರು ಭಗವಂತರಲ್ಲ ಅವರೂ ಮನುಷ್ಯರೇ.. ವೈದ್ಯರನ್ನು ಗೌರವಿಸೋಣ. ಅವರಿಂದ ತಪ್ಪುಗಳಾದಲ್ಲಿ ಸಾವಧಾನ ವಾಗಿ ವಿಮರ್ಶೆಗೆ ಆಸ್ಪದ ನೀಡೋಣ. ವೈದ್ಯರು ಮತ್ತು ಸಮಾಜದ ನಡುವಿನ ಬಾಂಧವ್ಯ ವೃದ್ಧಿಸೋಣ.
ಸಮರ್ಪಣ ಮನೋಭಾವವೈದ್ಯ ವೃತ್ತಿ ಅತ್ಯಂತ ಪವಿತ್ರವಾದುದು. ಪ್ರೀತಿ, ತ್ಯಾಗ ಮತ್ತು ಸೇವಾ ಮನೋಭಾವದಿಂದ ಚಿಕಿತ್ಸೆ ನೀಡಿ ರೋಗಿಗಳು ಆದಷ್ಟು ಶೀಘ್ರ ಗುಣಮುಖರಾಗಿ ಪೂರ್ಣ ಆರೋಗ್ಯ ಭಾಗ್ಯವನ್ನು ಹೊಂದುವಂತೆ ಮಾಡುವುದೇ ವೈದ್ಯರ ಗುರಿ. ವೈದ್ಯ ವೃತ್ತಿಯೆಂಬುದು ಸಮರ್ಪಣ ಮನೋಭಾವದ ಮಗದೊಂದು ಸ್ವರೂಪ. ಕೊರೊನಾ ಸಂಕಷ್ಟದ ದಿನಗಳಲ್ಲಂತೂ ಎಲ್ಲ ವೈದ್ಯರು ತಮ್ಮ ಮನೆ ಹಾಗೂ ಕುಟುಂಬದ ಸಂಪರ್ಕವೂ ಇಲ್ಲದೆ, ಆಹಾರ, ವಿಶ್ರಾಂತಿ ಮತ್ತು ಕಾಲದ ಮಿತಿಯನ್ನೂ ಮರೆತು ಮಾನವೀಯತೆಯಿಂದ ರೋಗಿಗಳ ಸೇವೆ ಮಾಡಿದ್ದಾರೆ. ಅಂತಹ ಎಲ್ಲ ವೈದ್ಯರಿಗೆ ಅಭಿನಂದನೆಗಳು. – ಡಾ| ಡಿ. ವೀರೇಂದ್ರ ಹೆಗ್ಗಡೆ , ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ