ಮಹಾನಗರ: ವ್ಯಕ್ತಿಯ ಮನಸ್ಸಿನಲ್ಲಿ ಹುದುಗಿದ ಭಾವನೆಯನ್ನು ತೋರಿಸುವ ಶಕ್ತಿ ಚಿತ್ರಕಲೆಗಿದೆ ಎಂದು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಹೇಳಿದರು.
ಕರಾವಳಿ ಚಿತ್ರಕಲಾ ಚಾವಡಿ, ರಾಮಕೃಷ್ಣ ಮಠದ ಆಶ್ರಯದಲ್ಲಿ ನಗರದ ರಾಮಕೃಷ್ಣ ಮಠದಲ್ಲಿ ರವಿವಾರ ಆಯೋಜಿಸಿದ ವಿಶ್ವಕಲಾದಿನ, ಕಲಾವಿದ ದಿ| ಪಿ. ಪುರುಷೋತ್ತಮ ಕಾರಂತ ಸಂಸ್ಮರಣೆ ಹಾಗೂ ಅವರು ರಚಿಸಿದ ಚಿತ್ರಕಲಾ ಕೃತಿಗಳ ಬಗ್ಗೆ ಚಿತ್ತಾರ-ಸೂತ್ರ ಮತ್ತು ಚಾವಡಿಯ ಸದಸ್ಯರ ಚಿತ್ರಕಲಾಕೃತಿ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ವಿಶ್ವದಲ್ಲಿ ಪ್ರತಿಯೊಂದು ದಿನಕ್ಕೂ ಅದರದ್ದೇ ಆದಂತಹ ಮಹತ್ವವಿದೆ. ಪಿ. ಪುರುಷೋತ್ತಮ ಕಾರಂತ ಅವರಿಗೂ ರಾಮಕೃಷ್ಣ ಮಠಕ್ಕೂ ಅನ್ಯೋನ್ಯ ನಂಟಿದೆ. ಅವರು ರಚಿಸಿದಂತಹ ಚಿತ್ರದಲ್ಲಿ ಆಧ್ಯಾತ್ಮಿಕ ನಂಟು ಇದೆ. ಸಂಸ್ಕೃತಿ, ಪುರಾಣ, ವೇದ, ಉಪನಿಷತ್ತುಗಳ ಪರಿಚಯ ಕೂಡ ಅವರ ಚಿತ್ರಗಳಲ್ಲಿ ಕಾಣಬಹುದು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಅರೆಹೊಳೆ ಪ್ರತಿಷ್ಠಾನ ಮಂಗಳೂರಿನ ಅರೆಹೊಳೆ ಸದಾಶಿವ ರಾವ್ ಮಾತನಾಡಿ, ಕಲೆ ಎಂಬುದು ದೇವರು ಕೊಟ್ಟ ವರವಾಗಿದೆ. ಚಿತ್ರಕಲೆಯನ್ನು ಮುಂದಿನ ಪೀಳಿಗೆಗೆ ಬೆಳೆಸಬೇಕಾದ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ರಾಮಕೃಷ್ಣ ಮಠ ಕಲಾ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ ಎಂದರು.ಲಿತಾ ಕಲ್ಕೂರ ಪುರುಷೋತ್ತಮ ಕಾರಂತರ ಸಂಸ್ಮರಣೆ ಮಾಡಿದರು. ಚಿತ್ರ ಕಲಾಚಾವಡಿ ಗೌರವಾಧ್ಯಕ್ಷ ಬಿ.ಗಣೇಶ್ ಸೋಮಯಾಜಿ, ಅಧ್ಯಕ್ಷ ಕೋಟಿ ಪ್ರಸಾದ್ ಆಳ್ವ, ಕಾರ್ಯದರ್ಶಿ ಪ್ರೊ| ಅನಂತ ಪದ್ಮನಾಭ ರಾವ್ ಉಪಸ್ಥಿತರಿದ್ದರು. ದಿನೇಶ್‌ಹೊಳ್ಳ ಅವರು ಕಾರ್ಯಕ್ರಮ ನಿರೂಪಿಸಿದರು.
ಮುಕ್ತ ಅವಕಾಶ
ವಿಶ್ವಕಲಾದಿನದ ಪ್ರಯುಕ್ತ ಚಿತ್ರಕಲಾ ಚಾವಡಿ ಸದಸ್ಯರ ಜಲವರ್ಣ, ತೈಲವರ್ಣ, ಅಕ್ರಿಲಿಕ್ ಸೇರಿದಂದೆ ನಾನಾ ವಿದಧ 24 ಕಲಾಕೃತಿಗಳಿವೆ. ರಾಮಕೃಷ್ಣ ಮಠದ ಸಂಗ್ರಹದ ಪುರುಷೋತ್ತಮ ಕಾರಂತರ ಚಿತ್ರಪ್ರದರ್ಶನ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ಚಿತ್ರ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ.