Advertisement
ಹಿಂದೆ ವಿದೇಶ ಗಳಲ್ಲಷ್ಟೇ ಫಿಟ್‌ನೆಸ್, ಕ್ರೀಡಾ ಉಪಯೋಗಕ್ಕೆ ಸೈಕಲ್ ಬಳಕೆಯಾಗುತ್ತಾ ಬಂದಿದ್ದರೆ ಕಳೆದೆರಡು ದಶಕಗಳಲ್ಲಿ ಭಾರತ ದಲ್ಲೂ ಈ ಕ್ಷೇತ್ರಗಳಲ್ಲಿ ಸೈಕಲ್ ಬಹಳಷ್ಟು ಬೆಳವಣಿಗೆಸಾಧಿಸಿದೆ. ಈಗ ಭಾರತದ ನಗರ, ಪಟ್ಟಣಗಳಲ್ಲೂ ಬೆಳಗ್ಗೆ ಎದ್ದು ಆರೋಗ್ಯಕ್ಕಾಗಿ ಸೈಕಲ್ ತುಳಿದರೆ ಇನ್ನು ಕೆಲವು ಮೆಟ್ರೋ ನಗರಗಳಲ್ಲಿ ಸಪೂರ ಟಯರ್ ರೋಡ್ ಸೈಕಲ್‌ಗಳಲ್ಲಿ ರೇಸ್‌ಗಳಲ್ಲಿ ಪಾಲ್ಗೊಳ್ಳಲು ಅಭ್ಯಾಸ ನಡೆಸುವುದನ್ನೂ ಗಮನಿಸಬಹುದು.
Related Articles
Advertisement
ಸೈಕ್ಲಿಂಗ್ ಎನ್ನುವುದು ಪರಿಸರಸ್ನೇಹಿ. ಸೈಕ್ಲಿಂಗ್‌ನಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದು. ಹೊಗೆ ಸಮಸ್ಯೆ, ಶಬ್ದ ಮಾಲಿನ್ಯದ ಹಂಗಿಲ್ಲ. ಕಿಸೆಗೆ ಹೊರೆಯಲ್ಲ. ಪುಟ್ಟಮಕ್ಕಳಿಗೆ ಶಾಲೆಗೆ ಹೋಗಲು, ಆ ಮೂಲಕ ರಸ್ತೆ ಸಂಚಾರದ ಕನಿಷ್ಠ ನಿಯಮ ಅರಿತುಕೊಳ್ಳುವುದಕ್ಕೆ ಸೈಕಲ್ ಸಹಕಾರಿ.
ಏರುತಗ್ಗುಗಳಿಲ್ಲದ ಹಾದಿಯಾದರೆ ಗೇರ್‌ಲೆಸ್ ಸೈಕಲ್‌ನಲ್ಲೂ 8-10 ಕಿ.ಮೀ. ಗಳಷ್ಟು ಪೆಡಲ್ ತುಳಿದೇ ಕೆಲಸಕ್ಕೆ ಹೋಗಬಹುದು. ಇದರಿಂದ ನಗರಗಳ ಲ್ಲಿನ ಸಂಚಾರ ದಟ್ಟಣೆಯನ್ನು ತಪ್ಪಿಸ ಬಹುದು. ಕರಾವಳಿಯಂತಹ ಏರುತಗ್ಗಿನ ಪ್ರದೇಶದಲ್ಲಿ ಗೇರ್ ಲೆಸ್ ಸೈಕಲ್ ತುಸು ಕಷ್ಟ. ಇಂತಹ ಪ್ರದೇಶಗಳಲ್ಲಿ ಗೇರ್ ಸೈಕಲ್ ಪ್ರಯೋಜನಕಾರಿ.
ಇತ್ತೀಚೆಗಿನ ದಿನಗಳಲ್ಲಿ ಸೈಕಲ್‌ಗಳಲ್ಲೂ ಹಲವು ವಿಧ ಮತ್ತು ಮಾದರಿಗಳು ಲಭ್ಯ. ಚಿಕ್ಕಮಕ್ಕಳಿಂದ ತೊಡಗಿ ಹಿರಿಯ ನಾಗರಿಕರ ವರೆಗೂ ಅಗತ್ಯಕ್ಕೆ ತಕ್ಕಂತಹ ಸೈಕಲ್‌ಗಳಿವೆ. ಸೈಕಲ್‌ನ್ನು ಖರೀದಿಸುವವರು ತಮ್ಮ ಉದ್ದೇಶ ಏನು? ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಫಿಟ್‌ನೆಸ್‌ಗಾದರೆ ಅಗಲ ಟಯರ್‌ಗಳ ಎಂಟಿಬಿ ಅಥವಾ ಮೌಂಟೇನ್ ಟೆರೇನ್ ಬೈಕ್ ಉತ್ತಮ, ಇದರಲ್ಲಿ ಕೆಟ್ಟುಹೋದ ರಸ್ತೆಯಲ್ಲೂ ಸಂಚರಿಸಬಹುದು. ಇದರಲ್ಲೇ ಟಯರಿನ ಅಗಲ ಕಡಿಮೆ ಮಾಡಿರುವ ಹೈಬ್ರಿಡ್‌ಗಳು ಇಂದಿನ ನಗರ ಕೇಂದ್ರಿತ ಫಿಟ್‌ನೆಸ್ ಪ್ರಿಯರಿಗೆ ಹೆಚ್ಚು ಪ್ರಿಯ, ಇವುಗಳ ವೇಗವೂ ಹೆಚ್ಚು. ಇನ್ನು ಕ್ರೀಡಾ ಉಪಯೋಗಕ್ಕೆ ಬಾಗಿದ ಹ್ಯಾಂಡಲ್‌ನ ರೋಡ್ ಬೈಕ್ ಉತ್ತಮ.
ಸೈಕ್ಲಿಂಗ್ ಅನ್ನು ಫಿಟ್‌ನೆಸ್‌ಗಾಗಿ ಬಳಸುವ ಮುನ್ನ ಈ ಕೆಲವು ಅಂಶ ಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಸೈಕಲನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಬೇಕು. ಈಗಿನ ಗೇರ್‌ಯುತವಾದ ಸೈಕಲ್‌ಗಳ ವೇಗ ಹೆಚ್ಚಿರುವುದರಿಂದ ಹೆಲ್ಮೆಟ್ ಕಡ್ಡಾಯ. ಕತ್ತಲಲ್ಲಿ ಸೈಕಲ್ ಸವಾರರನ್ನು ಗುರುತಿಸುವುದು ಕಷ್ಟ, ಹಾಗಾಗಿ ಹಿಂಬದಿಯ ಕೆಂಪು ಬ್ಲಿಂಕರ್ ಲೈಟ್‌ಗಳು ಮುಂಭಾಗ ಶಕ್ತಿಶಾಲಿ ರಿಚಾರ್ಜಬಲ್ ಹೆಡ್‌ಲೈಟ್ ಬಳಸಬಹುದು.
ಆರೋಗ್ಯವಂತ, ಪರಿಸರ ಸ್ನೇಹಿ ಸಮಾಜಕ್ಕೆ ಸೈಕ್ಲಿಂಗ್‌ನ ಕೊಡುಗೆ ಅಪೂರ್ವ. ನಮ್ಮ ಸೈಕ್ಲಿಂಗ್ ಹವ್ಯಾಸವನ್ನು ಕೇವಲ ವಿಶ್ವ ಬೈಸಿಕಲ್ ದಿನಕ್ಕಷ್ಟೇ ಸೀಮಿತಗೊಳಿಸದೆ ನಿರಂತರ ಸೈಕಲ್ ಬಳಸುವ ಅಭ್ಯಾಸ ಬೆಳೆಸಿಕೊಂಡರೆ ಆರೋಗ್ಯವಂತ ಸಮಾಜ ಹಾಗೂ ಮಾಲಿನ್ಯ ಮುಕ್ತ ಪರಿಸರಕ್ಕೆ ನಮ್ಮದೂ ಅಳಿಲ ಸೇವೆ ಸಲ್ಲಿಸಿದ ಸಾರ್ಥಕತೆ ನಮ್ಮದಾಗಬಹುದು.
ಪ್ರಯೋಜನಗಳು ಹಲವುಬೈಸಿಕಲ್ ಬಳಕೆ ಜನರ ಆರೋಗ್ಯದ ಮೇಲೆ ಹಲವಾರು ಉತ್ತಮ ಪರಿಣಾಮಗಳನ್ನು ಬೀರುತ್ತದೆ ಎಂದು ವೈದ್ಯಕೀಯ ಅಧ್ಯಯನಗಳು ದೃಢಪಡಿಸಿವೆ. ನಿರಂತರವಾಗಿ ಸೈಕ್ಲಿಂಗ್ ಮಾಡುವುದರಿಂದ ಹೃದಯ ಬಲಗೊಳ್ಳುವುದು, ಸ್ನಾಯುಗಳ ಶಕ್ತಿವರ್ಧನೆ, ಸಂದುಗಳ ನಮ್ಯತೆ ಹೆಚ್ಚುವುದು, ಮೂಳೆ ಬಲಗೊಳ್ಳುವುದು, ಪಚನ ಕ್ರಿಯೆ ಉತ್ತಮಗೊಳ್ಳುವುದು, ಮಾನಸಿಕ ಒತ್ತಡ ಕಡಿಮೆಯಾಗಿ ಆತ್ಮ ಸಂತೋಷ ಹೀಗೆ ಹತ್ತು ಹಲವು ಆರೋಗ್ಯ ಸಂಬಂಧಿ ಪ್ರಯೋಜನಗಳಿವೆ. – ಡಾ| ರಂಗನಾಥ ಉಡುಪ, ಸುರತ್ಕಲ್