ನಮ್ಮದು ಚಿಕ್ಕ ಕೂಡು ಕುಟುಂಬ. ನಾನು ನಮ್ಮ ಮನೆಯಲ್ಲಿ ಪ್ರೀತಿಯ ಮುದ್ದು ಮಗ. ನನಗೆ ಸ್ವಲ್ಪ ಸೈಕಲ್ ಬಿಡಲು ಗೊತ್ತಿದ್ದರೂ ಪೂರ್ತಿ ತಿಳಿದಿರಲಿಲ್ಲ. ಸೈಕಲ್ ಬಿಡಲು ಭಯ ಪಡುತ್ತಿದ್ದೆ.
ಹೀಗೆ ಒಂದು ದಿನ ತಂದೆಯ ಬಳಿ ಸೈಕಲ್ ಬಿಡಲು ಕೊಡಬೇಕೆಂದು ಕೇಳಿದೆ. ಅವರು “ಒಂದು ವಾರ ಬಿಟ್ಟು ನೋಡೊಣ” ಎಂದು ಹೇಳಿ ಸುಮ್ಮನಾದರು. ನನಗೆ ಎಲ್ಲಿಲ್ಲದ ಕುತೂಹಲ. ನಮ್ಮ ಮನೆ ಹತ್ತಿರವಿರುವ ನನ್ನ ಎಲ್ಲಾ ಗೆಳೆಯರಿಗೂ ಈ ವಿಷಯ ತಿಳಿಸಿದೆ. ಅವರು ಕೂಡಾ ಆನಂದಪಟ್ಟರು. ನನಗೂ ಒಂದು ರೌಂಡ್ ಕೊಡಬೇಕು ಎಂದು ಖುಷಿಯಿಂದ ಹೇಳಿದರು. ನಾನು ಅದಕ್ಕೆ ಹ್ಞು ಎಂದೆ. ಆದರೆ ತಂದೆಯ ಕೈಯಿಂದ ಬೇಗ ಸೈಕಲ್ ಸಿಗಲಿಲ್ಲ.
ಮತ್ತೆ ಒಂದು ವಾರದೊಳಗೆ ನಾನು ಸೈಕಲ್ ಕಲಿಯಲೇಬೇಕು ಎಂದುಕೊಂಡೆ. ಡಂಬಳ ನಾಕಾದಲ್ಲಿ ಸೈಕಲ್ ಬಾಡಿಗೆಗೆ ಸಿಗುತ್ತಿತ್ತು. ನಾನು ಮನೆಯಲ್ಲಿ ನಮ್ಮ ತಾಯಿಯ ಹತ್ತಿರ ಹೋಗಿ 2 ರೂಪಾಯಿ ಪಡೆದುಕೊಂಡೆ. ಚಿಕ್ಕ ಸೈಕಲ್ ಬಾಡಿಗೆ ಪಡೆದುಕೊಂಡು ಎದ್ದು ಬಿದ್ದು ಶತಪ್ರಯತ್ನ ಪಡುತ್ತಾ ಸರಿಯಾಗಿ ಸೈಕಲ್ ಬಿಡಲು ಕಲಿಯಲು ಹೊರಟೆ.
ಆ ಸಮಯದಲ್ಲಿ ನಮ್ಮ ಓಣಿಯಲ್ಲಿ ಲಕ್ಷ್ಮೇಶ್ವರದಿಂದ ದೈತ್ಯಾಕಾರದ ಆನೆ ಬಂದಿದ್ದನ್ನು ನನ್ನ ಗೆಳೆಯ ನನಗೆ ತಿಳಿಸಿದ. ಭಾರಿ ಖುಷಿಯಿಂದ ಬಾಡಿಗೆ ಸೈಕಲ್ ಏರಿಕೊಂಡು, ಆನೆ ಕಡೆ ಎರಡು ಕಾಲುಗಳಿಂದ ಸೈಕಲ್ ಸವರಿಕೊಂಡು ಹೊರಟುಬಿಟ್ಟೆ. ಈ ಆನೆಯು ನನಗೆ ಸಂಪೂರ್ಣ ಕಲಿಯಲಿಕ್ಕೆ ಸಾಧ್ಯ ಮಾಡಿಕೊಟ್ಟಿತು!
ಅಂದು ಅಲ್ಪ ಸ್ವಲ್ಪ ಸೈಕಲ್ ಕಲಿತಿದ್ದ ನಾನು, ಆ ಆನೆಯನ್ನು ನೋಡಲು ಕೈಯಲ್ಲಿ ಸೈಕಲ್ ಹಿಡಿದು ಹೋದೆ. ನಾನು ಆನೆಯ ಮುಂದೆ ಇದ್ದೆ. ಅದು ಮೇಲೆ ಕುಳಿತ ಮಾವುತನ ಅಪ್ಪಣೆಯಂತೆ ಮುಂದೆ ಮುಂದೆ ಬರತೊಡಗಿತು. ಆನೆ ಸೊಂಡಿಲನ್ನು ನೋಡಿದ ತಕ್ಷಣ ನಾನು ಸೈಕಲ್ ತಿರುಗಿಸಿ ಏರಿ ಕುಳಿತು, ಎದ್ದೂ ಬಿದ್ದು ಪೆಡ್ಲ್ ಮೇಲೆ ಕಾಲಿಟ್ಟು ತುಳಿದೆ. ಹೀಗೆ ನನಗೆ ಗೊತ್ತಿಲ್ಲದೆ ಅರ್ಧ ಕಿಲೋಮೀಟರ್ ಸರಿಯಾಗಿ ತುಳಿದು ಬಿಟ್ಟಿದ್ದೆ.
ಆಗ ನನಗೆ ಆಶ್ಚರ್ಯ. ಆನೆ ಬಂದು ಸೈಕಲ್ ಕಲಿಸಿಕೊಟ್ಟಿತು! ಆ ನೆನಪು ಇನ್ನೂ ನೆನಪಿನ ಅಂಗಳದಲ್ಲಿದೆ. ಸೈಕಲ್ ಕಲಿತದ್ದು ದೈತ್ಯಾಕಾರದ ಆನೆಯಿಂದ ಅಂದರೆ, ನನ್ನ ಅನುಭವ ಅತ್ಯಂತ ಭಿನ್ನ ಎಂದು ಭಾಸವಾಗುತ್ತದೆ.
ರಾಘವೇಂದ್ರ ಶಾಂತಗಿರಿ, ಗದಗ