ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಪ್ರತಿಷ್ಠಿತ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಉಳಿದಿರುವುದು 15 ದಿನ ಮಾತ್ರ. ಅಕ್ಟೋಬರ್ ಐದರಂದು ಈ ಮುಖಾಮುಖಿ ಮೊದಲ್ಗೊಳ್ಳಲಿದೆ. ಇದಕ್ಕೂ ಮುನ್ನ ಅಭ್ಯಾಸ ಪಂದ್ಯಗಳನ್ನು ಆಡಲಾಗುವುದು. ಸೆ. 29ರಂದು ಹೈದರಾಬಾದ್‌ನ “ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ’ನಲ್ಲಿ ಪಾಕಿಸ್ಥಾನ- ನ್ಯೂಜಿಲ್ಯಾಂಡ್ ಮುಖಾಮುಖಿ ಆಗಲಿವೆ. ಈ ಪಂದ್ಯವನ್ನು ಖಾಲಿ ಸ್ಟೇಡಿಯಂನಲ್ಲಿ ಆಡುವ ಸಾಧ್ಯತೆಯೊಂದು ದಟ್ಟವಾಗಿದೆ.
ಅದೇ ದಿನ ಹೈದರಾಬಾದ್‌ನಲ್ಲಿ ಗಣೇಶ ವಿಸರ್ಜನೆ ನಡೆಯಲಿದೆ. ಜತೆಗೆ ಮಿಲಾದುನ್ನಭಿ ಮೆರವಣಿಗೆ ಕೂಡ ಸಾಗಲಿದೆ. ಇವೆರಡಕ್ಕೂ ಹೆಚ್ಚಿನ ಭದ್ರತೆ ಒದಗಿಸಬೇಕಾದ ಕಾರಣ ಕ್ರಿಕೆಟ್ ಪಂದ್ಯಕ್ಕೆ ಸೂಕ್ತ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹೈದರಾಬಾದ್ ಪೊಲೀಸ್ ಇಲಾಖೆ ತನ್ನ ಅಸಹಾಯಕತೆ ವ್ಯಕ್ತಪಡಿಸಿದೆ.
ಹೀಗಾಗಿ ಪಾಕಿಸ್ಥಾನ- ನ್ಯೂಜಿಲ್ಯಾಂಡ್ ನಡುವಿನ ಅಭ್ಯಾಸ ಪಂದ್ಯ ವನ್ನು ಖಾಲಿ ಸ್ಟೇಡಿಯಂನಲ್ಲಿ ಆಯೋಜಿಸುವುದೊಂದೇ ಮಾರ್ಗೋಪಾಯ ಎಂಬುದಾಗಿ ವರದಿಯಾಗಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಕಾದಿರಿಸಿದವರಿಗೆ ಇದರ ಹಣವನ್ನು ಮರಳಿಸಲು, ವಿಶ್ವಕಪ್ ಟಿಕೆಟ್ ಪಾಲುದಾರನಾಗಿರುವ “ಬುಕ್ ಮೈ ಶೋ’ಗೆ ಬಿಸಿಸಿಐ ಸೂಚಿಸಿದೆ ಎನ್ನಲಾಗಿದೆ.
ಈ ಪಂದ್ಯವನ್ನು ಮುಂದೂಡುವಂತೆ ಹೈದರಾ ಬಾದ್ ಪೊಲೀಸ್ ಇಲಾಖೆ ಸ್ಥಳೀಯ ಕ್ರಿಕೆಟ್ ಮಂಡಳಿ ಮನವಿ ಮಾಡಿತ್ತು. ಆದರೆ ಈಗಾ ಗಲೇ ಸಾಕಷ್ಟು ಪಂದ್ಯಗಳ ದಿನಾಂಕವನ್ನು ಬದಲಿ ಸಿರುವ ಕಾರಣ, ಮತ್ತು ಇದೊಂದು ಅಭ್ಯಾಸ ಪಂದ್ಯವಾಗಿರುವುದರಿಂದ ಪುನಃ ಇಲ್ಲಿ ಪರಿವರ್ತನೆ ಅಸಾಧ್ಯ ಎಂದು ಕೂಟದ ಸಂಘಟಕರು ಹೈದರಾ ಬಾದ್ ಕ್ರಿಕೆಟ್ ಮಂಡಳಿಯ ಮನವಿಯನ್ನು ತಿರಸ್ಕರಿಸಿದ್ದರು. ಹೀಗಾಗಿ ಉಳಿದಿರುವ ಒಂದೇ ಉಪಾಯವೆಂದರೆ, ಅಂದಿನ ಪಂದ್ಯಕ್ಕೆ ಪ್ರೇಕ್ಷಕರನ್ನು ನಿಷೇಧಿಸುವುದು.
ಸತತ 2 ದಿನವೂ ಪಂದ್ಯ
ಅ. 9 ಮತ್ತು 10ರಂದು ಸತತ 2 ದಿನ ಹೈದರಾಬಾದ್‌ನಲ್ಲಿ ಲೀಗ್ ಪಂದ್ಯಗಳನ್ನು ಆಯೋಜಿಸುವುದಕ್ಕೂ ಭದ್ರತಾ ಸಂಸ್ಥೆಗಳು ಆಕ್ಷೇಪವೆತ್ತಿದ್ದವು. ಅ. 9ರಂದು ನ್ಯೂಜಿಲ್ಯಾಂಡ್-ನೆದರ್ಲೆಂಡ್ಸ್, ಅ. 10ರಂದು ಪಾಕಿಸ್ಥಾನ-ಶ್ರೀಲಂಕಾ ನಡುವಿನ ಪಂದ್ಯಗಳನ್ನು ಇಲ್ಲಿ ಆಡಲಾಗುವುದು. ಆದರೆ ಇಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.