ಭಾರತದಲ್ಲಿ ವಿಶ್ವಕಪ್ ಜನಪ್ರಿಯತೆ ಕಡಿಮೆಯಾಗಿಲ್ಲದಿದ್ದರೂ ಹಿಂದಿನ ದಿನಗಳ ಕಾತರ, ಕಾಯ್ದು ಕುಳಿತುಕೊಳ್ಳುವ ಗುಣಲಕ್ಷಣಗಳು ತುಸು ಹಿಂದೆ ಸರಿದಂತೆ ಭಾಸವಾಗುತ್ತಿದೆ.
ಮೊನ್ನೆ ತಾನೇ ಇಂಗ್ಲೆಂಡಿನಲ್ಲಿ ಆರಂಭವಾದ ವಿಶ್ವಕಪ್ ಪಂದ್ಯಾವಳಿ ಇನ್ನೂ ಆರಂಭದ ಕಾಲಘಟ್ಟದಲ್ಲೇ ಇದೆ. ಉಪ ಖಂಡದಲ್ಲಿ ಈ ವಿಶ್ವಕಪ್ ಪಂದ್ಯಾವಳಿಗಳಿಗೆ ಬಹಳ ವಿಶಿಷ್ಟ ಸ್ಥಾನಮಾನವಿದೆ. 1975ರಲ್ಲಿ ಪ್ರಾರಂಭವಾದ ಈ ಪಂದ್ಯಾವಳಿ ತನ್ನ ಆರಂಭದ ದಿನಗಳಿಂದಲೇ ವಿಶ್ವದ ಕ್ರಿಕೆಟ್‌ಪ್ರಿಯರ ಮನದಲ್ಲಿ ಆಳವಾಗಿ ಬೇರೂರಿತ್ತು. ತಮ್ಮ ಸರ್ವಸ್ವವನ್ನು ಪಣಕ್ಕಿಟ್ಟು ಕಪ್ ಎತ್ತಲು ಹೋರಾಡುವ ಆಟಗಾರರು ಹಾಗೂ ಅದರೊಂದಿಗೆ ಉಕ್ಕುವ ರಾಷ್ಟ್ರಪ್ರೇಮ ಈ ಪಂದ್ಯಾವಳಿಗಳಿಗೆ ಒಂದು ವಿಶಿಷ್ಟ ಆಯಾಮವನ್ನು ನೀಡಿದೆ. ವಿಶ್ವಕಪ್ ಎಂದರೆ ಅದೊಂದು ಕೋರೈಸುವ ರಮಣೀಯವಾದ ಮಿಂಚು. ನಾಲ್ಕು ವರ್ಷಕ್ಕೊಮ್ಮೆ ನಡೆಸಲಾಗುವ ಈ ಪಂದ್ಯಾವಳಿಗಳ ಇತಿಹಾಸ ಕೂಡ ಸ್ಮರಣೀಯವೆ.
ಆದರೆ, ದಿನಬೆಳಗಾದರೆ ಒಂದಲ್ಲ ಒಂದು ಕಡೆ ಸತತವಾಗಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಗಳಿಂದ ಇತ್ತೀಚಿನ ದಿನಗಳಲ್ಲಿ ವಿಶ್ವಕಪ್ ಬಗ್ಗೆ ಹಿಂದಿನ ರೀತಿಯ ರೋಚಕತೆ ಉಳಿದಿದೆಯೆ ಎಂಬ ಪ್ರಶ್ನೆ ಕೂಡ ಸಕಾಲಿಕವೆ. ಉಪಖಂಡದಲ್ಲಂತೂ ಕ್ರಿಕೆಟ್ ಬಗೆಗಿನ ಆಸಕ್ತಿ ಎಂದಿಗೂ ಕುಂದುವುದಿಲ್ಲ ಎಂಬುದು ನಿಜ. ಆದರೆ ಹಿಂದಿನಂತೆ ಬಹಳ ನಿರೀಕ್ಷೆಯಿಂದ ಜನರೇನೂ ಕಾದು ಕುಳಿತು ಪಂದ್ಯಗಳನ್ನು ವೀಕ್ಷಿಸಲು ಸಜ್ಜಾಗುವುದಿಲ್ಲ. ಕ್ರಿಕೆಟ್ ತೀರಾ ವ್ಯಾಪಾರೀಕರಣವಾಗುವ ಮುಂಚಿನ ದಿನಗಳಲ್ಲಿ ತಿಂಗಳುಗಳ ಮೊದಲೇ ಎಲ್ಲೆಲ್ಲೂ ವಿಶ್ವಕಪ್ ಜ್ವರ ಏರುತ್ತಿತ್ತು. ಹೋದಲ್ಲಿ ಬಂದಲ್ಲಿ ಜನ ಹಳತರ ನೆನಪು ಹಾಗೂ ಹೊಸತರ ನಿರೀಕ್ಷೆಯಲ್ಲಿ ಪಟ್ಟಾಂಗ ಹೊಡೆಯತೊಡಗುತ್ತಿದ್ದರು. ಗತಕಾಲದ ನೆನಪುಗಳು ವರ್ತಮಾನದಲ್ಲಿ ಜೀವಂತವಾಗಿ ಹೊರಹೊಮ್ಮುತ್ತಿತ್ತು. ಈಗಲೂ ಈ ಬಗೆಯ ಮಾತುಗಳು ಇಲ್ಲವೆಂದಲ್ಲ. ಆದರೆ, ಕೆಲಸದ ಒತ್ತಡ ಹಾಗೂ ನಿರಂತರ ಕ್ರಿಕೆಟ್ ವೀಕ್ಷಣೆಯ ಕಾರಣದಿಂದ ಗತದ ಬಗೆಗೆ ಒಂದು ಬಗೆಯ ವಿಸ್ಮತಿ ಜನರಲ್ಲಿ ಮೂಡಿದಂತೆ ಕಾಣುತ್ತದೆ.
ಭಾರತೀಯರಿಗಂತೂ 1983ರ ವಿಶ್ವಕಪ್ ನೆನಪು ಯಾವಾಗಲೂ ಹಸಿರು. ಇದರ ನಂತರದ ಮೂರು-ನಾಲ್ಕು ಪಂದ್ಯಾವಳಿಗಳ ನೆನಪೂ ಹೊಸತಂತೆ ಕಾಣುತ್ತದೆ. ಆದರೆ ಕಳೆದ ಮೂರು-ನಾಲ್ಕು ವಿಶ್ವಕಪ್ ಪಂದ್ಯಾವಳಿಗಳ ನೆನಪು ತೀರಾ ಮರೆಯಾದಂತೆ ತೋರುತ್ತಿದೆ. ಏಕೆಂದರೆ, ಈಗ ಎಲ್ಲೆಲ್ಲೂ ಇರುವ ಟಿ-20 ಪಂದ್ಯಾವಳಿ ಮತ್ತು ಅದರ ನೇರ ಪ್ರಸಾರ ಜನರಿಗೆ ಒಂದು ಬಗೆಯ ವಿಸ್ಮತಿಯನ್ನು ಮೂಡಿಸಿದೆ. ಉದಾಹರಣೆಗೆ ಕಳೆದ ಬಾರಿಯ ವಿಶ್ವಕಪ್‌ನ ನೆನಪು ಬಹುತೇಕವಾಗಿ ಜನರ ಮನಸ್ಸಿನಿಂದ ಮರೆಯಾಗುತ್ತಿದೆ ಎಂಬಂತೆ ಭಾಸವಾಗುತ್ತಿದೆ. ಐ.ಸಿ.ಸಿ. ಕ್ರಿಕೆಟನ್ನು ಜನಪ್ರಿಯಗೊಳಿಸಲು ಎಷ್ಟೇ ಪ್ರಯತ್ನಪಟ್ಟರೂ ಕ್ರಿಕೆಟಿನ ವ್ಯಾಪಾರೀಕರಣದಿಂದಾಗಿ ಅನೇಕರು ವಿಶ್ವಕಪ್ ನೇರಪ್ರಸಾರದಿಂದ ವಂಚಿತರಾಗಿದ್ದಾರೆ. ಮುಖ್ಯವಾಗಿ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ದೇಶಗಳಲ್ಲಿ ದುಬಾರಿ ಕೇಬಲ್ ಶುಲ್ಕ ಪಾವತಿಸಿ ಆಟದ ನೇರ ಪ್ರಸಾರವನ್ನು ನೋಡಬೇಕಾದ ಸ್ಥಿತಿ ಇದೆ.
ಭಾರತದಲ್ಲಿ ವಿಶ್ವಕಪ್ ಜನಪ್ರಿಯತೆ ಕಡಿಮೆಯಾಗಿಲ್ಲದಿದ್ದರೂ ಹಿಂದಿನ ದಿನಗಳ ಕಾತರ, ಕಾಯ್ದು ಕುಳಿತುಕೊಳ್ಳುವ ಗುಣಲಕ್ಷಣಗಳು ತುಸು ಹಿಂದೆ ಸರಿದಂತೆ ಭಾಸವಾಗುತ್ತಿದೆ.
ಟಿ. ಅವಿನಾಶ್