Advertisement
ಈಗಾಗಲೇ ವಿಪರೀತ ಕ್ರಿಕೆಟ್ ಕಾರಣಕ್ಕೆ ಅಭಿಮಾನಿಗಳು ಕ್ರಿಕೆಟ್ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ಈಗ ಮೊದಲಿನ ಜನಪ್ರಿಯತೆ ಹೊಂದಿಲ್ಲ, ಏಕದಿನವೂ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಟಿ20 ಒಂದೇ ಜನರನ್ನು ಸೆಳೆಯುತ್ತಿದೆ. ಹೀಗಿರುವಾಗ ಐಸಿಸಿ, 8 ವರ್ಷಗಳಲ್ಲಿ ವಿಶ್ವಕಪ್ ಹೋಲುವ 8 ಕೂಟಗಳನ್ನು ನಡೆಸುವ ಯೋಜನೆ ಹಾಕಿಕೊಂಡಿದೆ. ಅಭಿಮಾನಿಗಳಿಂದ ಇದು ಸ್ವೀಕಾರಾರ್ಹವೇ, ಆಗ ವಿಶ್ವಕಪ್ ಮಹತ್ವ ಎಂದಿನಂತೆ ಉಳಿದುಕೊಳ್ಳುವುದೇ ಎಂಬೆಲ್ಲ ಪ್ರಶ್ನೆಗಳ ಮಹತ್ವ ಗೊತ್ತಿದ್ದರೂ, ಐಸಿಸಿ ಬರೀ ಹಣಕ್ಕಾಗಿ ಕೂಟಗಳನ್ನು ನಡೆಸಲು ಮುಂದಾಗಿದೆ ಎನ್ನುವುದು ಸ್ಪಷ್ಟ.
ಇದರಿಂದ ಸದಸ್ಯ ರಾಷ್ಟ್ರಗಳು ಸಿಟ್ಟಾಗಿವೆ. ಈ ರಾಷ್ಟ್ರಗಳ ಆದಾಯ ಕಡಿಮೆಯಾಗಲಿದೆ ಎನ್ನುವುದು ಒಂದು ಕಡೆಯಾದರೆ, ಎಲ್ಲಿ ಜನ ಕ್ರಿಕೆಟ್‌ನಿಂದ ದೂರ ಸರಿಯುತ್ತಾರೋ ಎನ್ನುವ ಆತಂಕ ಇನ್ನೊಂದು ಕಡೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ಐಸಿಸಿಗೆ ಸವಾಲು ಒಡ್ಡುವ ಮಾತನ್ನಾಡಿದ್ದಾರೆ. “ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್‌ನಂತಹ ಕ್ರಿಕೆಟ್ ಮಂಡಳಿಗಳು ಐಸಿಸಿಯ ಈ ಕೂಟಗಳನ್ನು ಆಯೋಜಿಸಲು ಮುಂದಾಗದಿದ್ದರೆ ಏನಾಗುತ್ತದೆ, ಈ ಕೂಟಗಳನ್ನು ಐಸಿಸಿ ಎಲ್ಲಿ ನಡೆಸುತ್ತದೆ… ಎಂದು ಪ್ರಶ್ನಿಸಿದ್ದಾರೆ. ಪರೋಕ್ಷವಾಗಿ ಈ ಕೂಟಗಳಿಂದ ಅಂತರ ಕಾಯ್ದುಕೊಳ್ಳುವ ಸುಳಿವು ನೀಡಿದ್ದಾರೆ.
Related Articles
ಸದ್ಯದಲ್ಲೇ ಈ ಕೂಟಗಳ ಮಾಧ್ಯಮ ಹಕ್ಕನ್ನು ಐಸಿಸಿ ಮಾರುವುದರಿಂದ, ಅದಕ್ಕೂ ಮುನ್ನ ಕೂಟ ನಡೆಸುವ ಸ್ಥಳ ನಿಗದಿ ಮಾಡಬೇಕಾಗುತ್ತದೆ. ಒಂದು ವೇಳೆ ಈ ಕೂಟಗಳ ಬಗ್ಗೆ ಪ್ರಮುಖ ರಾಷ್ಟ್ರಗಳು ನಿರಾಸಕ್ತಿ ತೋರಿದರೆ ನೇರಪ್ರಸಾರ ಮಾಡುವ ವಾಹಿನಿಗಳು ಬಹಳ ಹಣ ನೀಡಲಾರವು. ಜತೆಗೆ ಜಾಹೀರಾತುದಾರರೂ ಹಿಂದೇಟು ಹಾಕುತ್ತಾರೆ. ಅಷ್ಟೇ ಅಲ್ಲ, ಪ್ರೇಕ್ಷಕರಿಂದ ಬರಬೇಕಾದ ಆದಾಯಕ್ಕೂ ಕತ್ತರಿ ಬೀಳುತ್ತದೆ!
Advertisement