Advertisement

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

12:21 AM Dec 03, 2022 | Team Udayavani |

ದೋಹಾ ಅದೃಷ್ಟವೆಂದರೆ ಸ್ಪೇನ್‌ನದ್ದು. “ಇ’ ವಿಭಾಗದ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಜಪಾನ್‌ ವಿರುದ್ಧ 1-2 ಅಂತರದಿಂದ ಪರಾಭವಗೊಂಡರೂ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯ ನಾಕೌಟ್‌ಗೆ ಲಗ್ಗೆ ಹಾಕಿತು!

Advertisement

ಬಹುಶಃ “ಇ’ ವಿಭಾಗದಲ್ಲಿ ಸಂಭವಿಸಿ ದಷ್ಟು ನಾಟಕೀಯ ಘಟನಾವಳಿ ಬೇರೆಲ್ಲೂ ಕಂಡುಬಂದಿಲ್ಲ. ಏಷ್ಯಾದ ಸಾಮಾನ್ಯ ತಂಡವಾಗಿದ್ದ ಜಪಾನ್‌ ಇಲ್ಲಿ ಆಕಾಶದೆತ್ತರಕ್ಕೆ ಬೆಳೆಯಿತು. ಅಸಾಮಾನ್ಯ ಪ್ರದರ್ಶನ ನೀಡಿ ವಿಶ್ವದ ಎರಡು ಬಲಿಷ್ಠ ತಂಡಗಳನ್ನು ಮಣಿಸಿತು. ಮೊದಲು ಜರ್ಮನಿಗೆ ಆಘಾತವಿಕ್ಕಿದ ಜಪಾನ್‌, ಬಳಿಕ ಇದೇ “ಖಲೀಫ‌ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ನಲ್ಲಿ ಸ್ಪೇನ್‌ಗೆ ಬಲವಾದ ಹೊಡೆತ ನೀಡಿತು. ಈ ಫ‌ಲಿತಾಂಶದ ನೇರ ಪರಿಣಾಮ ಬೀರಿದ್ದು ಕೂಡ ಜರ್ಮನಿ ಮೇಲೆಯೇ. ಅದು “ಗೋಲ್‌ ಡಿಫ‌ರೆನ್ಸ್‌’ ನಲ್ಲಿ ಸ್ಪೇನ್‌ಗಿಂತ ಹಿಂದುಳಿದ ಕಾರಣ ಕೂಟದಿಂದಲೇ ನಿರ್ಗಮಿಸಬೇಕಾಯಿತು. ಈ ಮೂಲಕ ಜಪಾನ್‌ ಎರಡು ಸಲ ಜರ್ಮನಿಗೆ ಹೊಡೆತವಿಕ್ಕಿದ ಹೆಗ್ಗಳಿಕೆಗೆ ಪಾತ್ರವಾಯಿತು!

ಸ್ಪೇನ್‌ 11ನೇ ನಿಮಿಷದಲ್ಲೇ ಗೋಲು ಸಿಡಿಸಿ ಮೇಲುಗೈ ಸಾಧಿಸಿತು. ಅಲ್ವಾರೊ ಮೊರಾಟ ಅವರ ಹೆಡ್‌ಗೊಲ್‌ ಅಷ್ಟೊಂದು ಆಕರ್ಷಕವಾಗಿತ್ತು. ವಿರಾಮದ ತನಕ ಸ್ಪೇನ್‌ ಈ ಮುನ್ನಡೆ ಯನ್ನು ಕಾಯ್ದುಕೊಂಡಿತು. ಆದರೆ ದ್ವಿತೀಯಾರ್ಧದ ಆರಂಭದಲ್ಲೇ ಜಪಾನ್‌ ತಿರುಗಿ ಬಿತ್ತು. ಕೋಚ್‌ ಹಾಜಿಮೆ ಮೊರಿಯಾಸೊ ಮಾಡಿದ ಬದಲಾವಣೆ ಜಪಾನ್‌ಗೆ ಬಂಪರ್‌ ಆಗಿ ಪರಿಣಮಿಸಿತು. ಜರ್ಮನಿ ವಿರುದ್ಧ ಮಿಂಚಿದ ರಿಟ್ಸು ದೋನ್‌ ಅವರನ್ನು ಕಣಕ್ಕಿಳಿಸಿದರು. ಮೂರೇ ನಿಮಿಷದಲ್ಲಿ ದೋನ್‌ ಗೋಲು ಸಿಡಿಸಿದರು. ಅವರ ಈ ಹೆಡ್‌ ಗೋಲ್‌ ಕೇವಲ ಪಂದ್ಯದ ಚಿತ್ರಣವನ್ನಷ್ಟೇ ಅಲ್ಲ, “ಇ’ ವಿಭಾ ಗದ ಸಂಪೂರ್ಣ ದೃಶ್ಯಾವಳಿಯನ್ನೇ ಬದಲಿಸಿತು.

ಮೂರೇ ನಿಮಿಷದ ಅಂತರದಲ್ಲಿ ಅವೊ ತನಾಕ ಸ್ಪೇನ್‌ಗೆ ಮತ್ತೂಂದು ಆಘಾತವಿಕ್ಕಿದರು. ಜಪಾನ್‌ 2-1ರಿಂದ ಮುನ್ನಡೆಯಿತು. ಈ ಓಟವೀಗ ಹದಿನಾರರ ಸುತ್ತಿಗೆ ಮುಂದುವರಿದಿದೆ.

ಜಪಾನ್‌ ವರ್ಸಸ್‌ ಕ್ರೊವೇಶಿಯ
ಸ್ಪೇನ್‌ ಮತ್ತು ಪೋಲೆಂಡ್‌ ಡಿ. 4ರ ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲಿ ಎದು ರಾಗಲಿವೆ. ಡಿ. 5ರಂದು ಜಪಾನ್‌-ಕ್ರೊವೇಶಿಯ ಎದುರಾಗಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next