Advertisement
ಗೆಲುವಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಅಭಿಮಾನಿಗಳು ನಿರಾಶೆಗೊಂಡರು. ಎಲ್‌ಇಡಿ ಪರದೆಗಳ ಮುಂಭಾಗದಿಂದ ಅಭಿಮಾನಿಗಳು ನಿರಾಸೆಯಿಂದ ಮನೆಯತ್ತ ತೆರಳುತ್ತಿರುವುದು ಕಂಡುಬಂತು. ಉಭಯ ನಗರಗಳ ಅಲ್ಲಲ್ಲಿ ಅಳವಡಿಸಲಾಗಿದ್ದ ಎಲ್ ಇಡಿ ಮುಂಭಾಗ ಕೊನೆಯ ರನ್ ತನಕವೂ ಭರವಸೆಯನ್ನು ಉಳಿಸಿಕೊಂಡಿದ್ದ ಅಭಿಮಾನಿಗಳು ಕಣ್ಣೀರು ಹಾಕುತ್ತ ಮನೆಯತ್ತ ಹೆಜ್ಜೆ ಹಾಕಿದ್ದು ಕಂಡುಬಂತು. ಅನೇಕರು ಸೋಲು ಗೆಲುವಿನ ಬಗ್ಗೆ ಚರ್ಚೆಯಲ್ಲಿ ಮಗ್ನರಾಗಿದ್ದರು.
ಭಾರತ ಮತ್ತು ಆಸ್ಟ್ರೇಲಿಯ ನಡುವೆ ಅಹ್ಮದಾಬಾದ್‌ನಲ್ಲಿ ರವಿವಾರ ನಡೆದ ವಿಶ್ವಕಪ್ ಫೈನಲ್ ಪಂದ್ಯದ ನೇರಪ್ರಸಾರ ವೀಕ್ಷಣೆಗೆ ಮಂಗಳೂರು, ಉಡುಪಿಯ ಹಲವು ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮನಪಾ ವತಿಯಿಂದ ಲಾಲ್‌ಬಾಗ್ ಬಸ್ ತಂಗುದಾಣ ಮುಂಭಾಗ ದೊಡ್ಡ ಎಲ್‌ಇಡಿ ಪರದೆ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮುಂದಾಳತ್ವದಲ್ಲಿ ಸ್ವತಃ ಮೇಯರ್ ಸಹಿತ ಕಾರ್ಪೋರೇಟರ್‌ಗಳು, ಅಧಿಕಾರಿಗಳು ಮಧ್ಯಾಹ್ನದಿಂದಲೇ ಸ್ಥಳದಲ್ಲಿ ಉಪಸ್ಥಿತರಿದ್ದು ಪಂದ್ಯ ವೀಕ್ಷಿಸಿದರು. ಪೆಂಡಾಲ್, ಕುರ್ಚಿಗಳ ವ್ಯವಸ್ಥೆಯೊಂದಿಗೆ ಸಾರ್ವಜನಿಕರಿಗೆ ಪಂದ್ಯ ವೀಕ್ಷಣೆಗೆ ಅನುವು ಮಾಡಲಾಗಿತ್ತು. ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರು, ಪಾದಚಾರಿಗಳು, ಆಟೋ ಚಾಲಕರು, ಸಾರ್ವಜನಿಕರು ಪಂದ್ಯ ವೀಕ್ಷಿಸಿದರು. ಭಾರತೀಯ ಆಟಗಾರರು ಬೌಂಡರಿ, ಸಿಕ್ಸರ್ ಸಿಡಿಸುತ್ತಿದ್ದಾಗ, ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯದ ವಿಕೆಟ್ ಕಿತ್ತಾಗ ಅಭಿಮಾನಿಗಳು ಚಪ್ಪಾಳೆ, ಶಿಳ್ಳೆಯೊಂದಿಗೆ ಸಂಭ್ರಮಿಸುತ್ತಿದ್ದರು. ಭಾರತೀಯರು ವಿಕೆಟ್ ಒಪ್ಪಿಸುತ್ತಿದ್ದಂತೆ ಅಭಿಮಾನಿಗಳು ನಿರಾಸೆಗೊಳ್ಳುತ್ತಿದ್ದ ದೃಶ್ಯವೂ ಕಂಡುಬಂತು. ಮತ್ತೂಂದೆಡೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರೂ ಕೂಡ ಪಂದ್ಯದತ್ತ ದೃಷ್ಟಿ ಹಾಯಿಸುತ್ತಿರುವುದು ಕಂಡುಬಂತು.
Related Articles
ಫೈನಲ್ ಪಂದ್ಯ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಮನೆಯಲ್ಲಿದ್ದೇ ಪಂದ್ಯ ವೀಕ್ಷಿಸಿದರು. ಮಧ್ಯಾಹ್ನ ಪಂದ್ಯ ಆರಂಭಗೊಂಡ ಸಂದರ್ಭದಲ್ಲಿ ನಗರದಲ್ಲಿ ಜನರ ಓಡಾಟ, ವಾಹನ ಸಂಚಾರ ವಿರಳವಾಗಿತ್ತು. ನಿತ್ಯ ಸಂಚಾರ ದಟ್ಟನೆಯಿಂದ ಕೂಡಿರುತ್ತಿದ್ದ ನಂತೂರು, ಕಂಕನಾಡಿ, ಬಿಜೈಯಲ್ಲಿ ಜನರ ಓಡಾಟ ಅಷ್ಟೊಂದು ಇರಲಿಲ್ಲ.
Advertisement
ಸೋಷಿಯಲ್ ಮೀಡಿಯಾದಲ್ಲಿ ಮ್ಯಾಚ್‌ನದ್ದೇ ಚರ್ಚೆಸಾಮಾಜಿಕ ಜಾಲತಾಣಗಳಲ್ಲಿ ರವಿವಾರ ದಿನ ಪೂರ್ತಿ ಫೈನಲ್ ಮ್ಯಾಚ್‌ನದ್ದೇ ಚರ್ಚೆ ಇತ್ತು. ಅನೇಕ ಮಂದಿ ಪೋಸ್ಟ್ ಹಾಕುವ ಮೂಲಕ ಭಾರತ ಗೆಲ್ಲಲಿ ಎಂದು ಆಶಿಸಿದ್ದರು. ರವಿವಾರವಾಗಿದ್ದರಿಂದ ಮದುವೆ ಸೇರಿದಂತೆ ಶುಭ ಕಾರ್ಯಗಳು ಹೆಚ್ಚಾಗಿತ್ತು. ಸಮಾರಂಭಕ್ಕೆ ತೆರಳಿದ್ದ ಜನರ ಬಾಯಲ್ಲಿ ಫೈನಲ್ ಪಂದ್ಯದ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು. ಬಸ್, ರೈಲು ಪ್ರಯಾಣಿಕರು ಸೇರಿದಂತೆ ಹಲವು ಮಂದಿ ಮೊಬೈಲ್‌ನಲ್ಲೇ ಪಂದ್ಯ ವೀಕ್ಷಿಸುತ್ತಿದ್ದ ದೃಶ್ಯ ಕಂಡು ಬಂತು. ಇನ್ನು ಕೆಲವರು ಪಕ್ಕದವರ ಮೊಬೈಲ್‌ನಲ್ಲಿ ಪಂದ್ಯದ ಮಾಹಿತಿ ಪಡೆಯುತ್ತಿದ್ದರು. ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರನ್ನು ಸೆಳೆಯಲು ಎಲ್‌ಇಡಿ ಪರದೆಗಳನ್ನು ಅಳವಡಿಸಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಉಡುಪಿಯ ಎಲ್ಲೆಡೆ ವೀಕ್ಷಣೆಗೆ ವ್ಯವಸ್ಥೆ
ಉಡುಪಿ: ನಗರದಲ್ಲಿ ರವಿವಾರ ಎಲ್ಲೆಡೆ ಭಾರತ-ಆಸ್ಟ್ರೇಲಿಯ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾಟದ ವೀಕ್ಷಣೆ ನಡೆಯಿತು. ಬಹುತೇಕ ಕಡೆಗಳಲ್ಲಿ ಸಾರ್ವಜನಿಕವಾಗಿ ಬೃಹತ್ ಎಲ್‌ಸಿಡಿ ಪರದೆ ಅಳವಡಿಸಿ ವಿಶ್ವಕಪ್ ವೀಕ್ಷಣೆ ಮಾಡಿದರು. ಮಣಿಪಾಲ ಕೆನರಾ ಬ್ಯಾಂಕ್ ಪಾರ್ಕಿಂಗ್ ಸ್ಥಳದಲ್ಲಿ ಎಲ್‌ಸಿಡಿ ಪರದೆಯಲ್ಲಿ ಬ್ಯಾಂಕ್ ಸಿಬಂದಿ ಪಂದ್ಯ ವೀಕ್ಷಿಸಿದರು. ದ್ವಿತೀಯ ಇನ್ನಿಂಗ್ಸ್ ಕ್ರೇಝ್ ಮತ್ತಷ್ಟು ಹೆಚ್ಚಿದ್ದು, ಸಂಜೆ ಅನಂತರ ಹೊಟೇಲ್, ಸಭಾಂಗಣ, ಮನೆಗಳಲ್ಲಿ ಮೋಜು ಕೂಟದೊಂದಿಗೆ ಕ್ರಿಕೆಟ್ ಪಂದ್ಯ ವೀಕ್ಷಿಸಿದರು. ವಿಶ್ವಕಪ್ ಹಿನ್ನೆಲೆಯಲ್ಲಿ ನಗರದಲ್ಲಿ ಟ್ರಾಫಿಕ್ ದಟ್ಟಣೆ ಕಡಿಮೆಯಾಗಿತ್ತು. ಮಧ್ಯಾಹ್ನ ಅನಂತರ ಕೆಲವು ಅಂಗಡಿ-ಮುಂಗಟ್ಟು ಬಂದ್ ಆಗಿದ್ದವು.