Advertisement

World cup cricket ವೈಭವ ವಿಶ್ವಕಪ್‌ ಪ್ರಶಸ್ತಿಗಳ ಹ್ಯಾಟ್ರಿಕ್‌ ಸಾಧಿಸಿದ ಆಸ್ಟ್ರೇಲಿಯ

11:52 PM Sep 30, 2023 | Team Udayavani |

ವಿಶ್ವಕಪ್‌ ಇತಿಹಾಸದ ಅತ್ಯಂತ ನೀರಸ ಹಾಗೂ ಸೂಪರ್‌ ಫ್ಲಾಪ್‌ ಪಂದ್ಯಾವಳಿ ಯಾವುದು ಎಂಬ ಪ್ರಶ್ನೆಗೆ “2007ರ ವೆಸ್ಟ್‌ ಇಂಡೀಸ್‌ ವರ್ಲ್ಡ್ ಕಪ್‌’ ಎಂಬ ಉತ್ತರ ಥಟ್ಟನೆ ಹೊರಹೊಮ್ಮುತ್ತದೆ. ಇದು 16 ತಂಡಗಳು ಭಾಗವಹಿಸಿದ ಅತೀ ದೊಡ್ಡ ವಿಶ್ವಕಪ್‌ ಆದರೂ ಇಲ್ಲಿನ ಮಾದರಿ ಅಷ್ಟೇ ಕೆಟ್ಟದ್ದಾಗಿತ್ತು. ಲೀಗ್‌ ಹಂತದಲ್ಲಿ ಮೊದಲ ಪಂದ್ಯ ಸೋತೊಡನೆಯೇ ತಂಡವೊಂದು ಹೊರಬೀಳುವುದು ಅದ್ಯಾವ ಸೀಮೆಯ ಮಾದರಿ ಎಂಬ ಟೀಕೆ ಎಲ್ಲ ದಿಕ್ಕುಗಳಿಂದಲೂ ವ್ಯಕ್ತವಾಯಿತು. ಇದಕ್ಕೆ ಬಲಿಪಶುವಾದ ತಂಡಗಳೆಂದರೆ ಭಾರತ ಮತ್ತು ಪಾಕಿಸ್ಥಾನ. ಸಾಲದ್ದಕ್ಕೆ ಫೈನಲ್‌ ಪಂದ್ಯ ಕಗ್ಗತ್ತಲಲ್ಲಿ ನಡೆದು ಅಲ್ಲಿಯೂ ಐಸಿಸಿ ಉಗಿಸಿಕೊಂಡಿತು!

Advertisement

ಇಲ್ಲಿ ಟೆಸ್ಟ್‌ ಮಾನ್ಯತೆ ಪಡೆದ 10 ತಂಡಗಳು ಎಂದಿನಂತೆ ನೇರ ಪ್ರವೇಶ ಪಡೆದವು. ಉಳಿದ 6 ತಂಡಗಳನ್ನು 2005ರ ಐಸಿಸಿ ಟ್ರೋಫಿ ಪಂದ್ಯಾವಳಿಯ ಮೂಲಕ ಆರಿಸಲಾಯಿತು. ಬರ್ಮುಡ ಮತ್ತು ಐರ್ಲೆಂಡ್‌ ಮೊದಲ ಸಲ ವಿಶ್ವಕಪ್‌ ಆಡಲಿಳಿದವು. ಉಳಿದ 4 ತಂಡಗಳೆಂದರೆ ಕೀನ್ಯಾ, ಕೆನಡಾ, ನೆದರ್ಲೆಂಡ್ಸ್‌ ಮತ್ತು ಸ್ಕಾಟ್ಲೆಂಡ್‌.

16 ತಂಡಗಳನ್ನು 4 ವಿಭಾಗಗಳಾಗಿ ವಿಂಗಡಿಸಿದ್ದೇ ದೊಡ್ಡ ಎಡವಟ್ಟಾಗಿ ಕಂಡಿತು. ಇಲ್ಲಿ ಅಗ್ರ ಸ್ಥಾನ ಪಡೆದ ತಂಡಗಳೆರಡು ಸೂಪರ್‌-8 ಹಂತಕ್ಕೆ ಪ್ರವೇಶ ಪಡೆದವು. “ಬಿ’ ವಿಭಾಗದಲ್ಲಿದ್ದ ಭಾರತವಿಲ್ಲಿ ಮರ್ಮಾಘಾತ ಅನುಭವಿಸಿತು. ರಾಹುಲ್‌ ದ್ರಾವಿಡ್‌ ಪಡೆ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕೈಯಲ್ಲಿ ಸೋತು ಲೀಗ್‌ ಹಂತದಲ್ಲೇ ಹೊರಬಿತ್ತು. ಗೆದ್ದದ್ದು ಬರ್ಮುಡ ವಿರುದ್ಧ ಮಾತ್ರ. “ಡಿ’ ವಿಭಾಗದಲ್ಲಿದ್ದ ಪಾಕಿಸ್ಥಾನ ಕೂಡ ಇಂಥದೇ ಅವಸ್ಥೆಗೆ ಸಿಲುಕಿತು. ಹೀಗೆ ಬಲಿಷ್ಠ ಹಾಗೂ ನೆಚ್ಚಿನ ತಂಡಗಳೆರಡನ್ನೂ ಬಹಳ ಬೇಗ ಕಳೆದುಕೊಂಡ ಕಾರಣ ಕೂಟವೇ ಕಳೆಗುಂದಿತು.

ಇದಕ್ಕೂ ಮಿಗಿಲಾದ ದುರಂತವೆಂದರೆ, ಈ ಸೋಲಿನ ಬಳಿಕ ಪಾಕಿಸ್ಥಾನದ ಕೋಚ್‌ ಬಾಬ್‌ ವೂಲ್ಮರ್‌ ಕಿಂಗ್‌ಸ್ಟನ್‌ನಲ್ಲಿ ನಿಗೂಢ ಸಾವನ್ನಪ್ಪಿದ್ದು. ಇದು ಕೂಡ ಕೆರಿಬಿಯನ್‌ ವಿಶ್ವಕಪ್‌ಗೆ ಕಪ್ಪುಚುಕ್ಕಿಯಾಗಿ ಪರಿಣಮಿಸಿತು.

ಆಸ್ಟ್ರೇಲಿಯಕ್ಕೆ ಹ್ಯಾಟ್ರಿಕ್‌ ಪ್ರಶಸ್ತಿ
ಸೂಪರ್‌-8 ಹಂತ ಪ್ರವೇಶಿಸಿದ ತಂಡಗಳೆಂದರೆ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಜಿಲ್ಯಾಂಡ್‌, ಇಂಗ್ಲೆಂಡ್‌, ವೆಸ್ಟ್‌ ಇಂಡೀಸ್‌ ಮತ್ತು ಐರ್ಲೆಂಡ್‌.

Advertisement

ಸೆಮಿಫೈನಲ್‌ ಅದೃಷ್ಟ ಸಂಪಾದಿಸಿದ 4 ತಂಡಗಳೆಂದರೆ ಆಸ್ಟ್ರೇಲಿಯ, ಶ್ರೀಲಂಕಾ, ನ್ಯೂಜಿಲ್ಯಾಂಡ್‌ ಮತ್ತು ದಕ್ಷಿಣ ಆಫ್ರಿಕಾ. ಇಲ್ಲಿ ಆಸ್ಟ್ರೇಲಿಯ 7 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತು. ಶ್ರೀಲಂಕಾ 81 ರನ್ನುಗಳಿಂದ ನ್ಯೂಜಿಲ್ಯಾಂಡ್‌ಗೆ ಆಘಾತವಿಕ್ಕಿತು.

ಕಳೆದೆರಡು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ ಮತ್ತು ಶ್ರೀಲಂಕಾ ಫೈನಲ್‌ನಲ್ಲಿ ಎದುರಾದವು. ಬ್ರಿಜ್‌ಟೌನ್‌ ಮಳೆಯ ನಡುವೆ ಪ್ರಶಸ್ತಿ ಸಮರ ಸಾಗಿತು. ಪಂದ್ಯವನ್ನು 38 ಓವರ್‌ಗಳಿಗೆ ಇಳಿಸಲಾಯಿತು. ಆಸ್ಟ್ರೇಲಿಯ 4ಕ್ಕೆ 281 ರನ್‌ ಪೇರಿಸಿತು. ಶ್ರೀಲಂಕಾಕ್ಕೆ 36 ಓವರ್‌ಗಳಲ್ಲಿ 269 ರನ್‌ ಟಾರ್ಗೆಟ್‌ ಲಭಿಸಿತು. ಅದು 8ಕ್ಕೆ 215 ರನ್‌ ಗಳಿಸಿ 53 ರನ್ನುಗಳ ಸೋಲುಂಡಿತು. ಆಸ್ಟ್ರೇಲಿಯ ವಿಶ್ವಕಪ್‌ ಪ್ರಶಸ್ತಿಗಳ ಹ್ಯಾಟ್ರಿಕ್‌ ಸಾಧಿಸಿದ ಪ್ರಪ್ರಥಮ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ರಿಕಿ ಪಾಂಟಿಂಗ್‌ ಅಂದಿನ ಕ್ಯಾಪ್ಟನ್‌ ಆಗಿದ್ದರು. ಅವರು ಸತತ 2 ವಿಶ್ವಕಪ್‌ ಎತ್ತಿದ 2ನೇ ನಾಯಕರೆಂಬ ಹಿರಿಮೆಗೆ ಭಾಜನರಾದರು. ಕ್ಲೈವ್‌ ಲಾಯ್ಡ ಮೊದಲಿಗರು.

50 ಓವರ್‌ಗಳ ಫೈನಲ್‌ ಪಂದ್ಯವನ್ನು ಹೇಗಾದರೂ ಮಾಡಿ ಅಂದೇ ಮುಗಿಸಬೇಕೆಂಬ ಹಠಮಾರಿತನಕ್ಕೆ ಬಲಿಪಶುವಾದದ್ದು ಶ್ರೀಲಂಕಾ. ಇದು ಡೇ ಮ್ಯಾಚ್‌ ಆದ್ದರಿಂದ ಸಂಜೆಯ ಹೊತ್ತು ಕಗ್ಗತ್ತಲು ಆವರಿಸಿತ್ತು. ಲಂಕಾ ಬ್ಯಾಟ್ಸ್‌ಮನ್‌ಗಳಿಗೆ ಆಗ ಚೆಂಡೇ ಕಾಣುತ್ತಿರಲಿಲ್ಲ!
ಒಟ್ಟಾರೆ, ಹರಕೆ ಸಂದಾಯದಂತೆ ಮುಗಿದ ಈ ವಿಶ್ವಕಪ್‌ ಪಂದ್ಯಾವಳಿಯನ್ನು ನೆನಪಿಸಿಕೊಳ್ಳಲು ಯಾವ ಕ್ರಿಕೆಟ್‌ ಪ್ರೇಮಿಯೂ ಬಯಸಲಾರ!

Advertisement

Udayavani is now on Telegram. Click here to join our channel and stay updated with the latest news.

Next