ಗುರ್ಗಾಂವ್: ಮುಂದಿನ ವರ್ಷದ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ನೆಚ್ಚಿನ ತಂಡಗಳಾಗಿವೆ ಎಂಬುದಾಗಿ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.
“ವಿಶ್ವಕಪ್ ಟ್ರೋಫಿ ಸಂಚಾರ’ ಗುರ್ಗಾಂವ್‌ಗೆ ಆಗಮಿಸಿದ ವೇಳೆ ಹಾಜರಿದ್ದ ಲಕ್ಷ್ಮಣ್ ಮಾಧ್ಯಮಗಳೊಂದಿಗೆ ಮಾತಾಡುತ್ತಿದ್ದರು.
“ಭಾರತ ಮತ್ತು ಇಂಗ್ಲೆಂಡ್ ಕಪ್ ಗೆಲ್ಲುವ ಫೇವರಿಟ್ ತಂಡಗಳು. ಆದರೆ ಭಾರತೀಯನಾದ ನಾನು ಸಹಜವಾಗಿ ಭಾರತವೇ ಗೆಲ್ಲಬೇಕೆಂದು ಆಶಿಸುತ್ತೇನೆ. ಲಾರ್ಡ್ಸ್‌ನಲ್ಲಿ ಶರ್ಟ್ ಬಿಚ್ಚಿ ಹಾರಾಡಿಸುವ ಕೆಲಸ ಸೌರವ್ ಗಂಗೂಲಿ ಅವರಿಂದ ವಿರಾಟ್ ಕೊಹ್ಲಿಗೆ ವರ್ಗಾವಣೆ ಆಗುವುದನ್ನು ಕಾಯುತ್ತಿದ್ದೇನೆ. ಇದು ಕೊಹ್ಲಿಗೆ ಗಂಗೂಲಿ ನೀಡಿರುವ ಸವಾಲು ಎಂದು ಭಾವಿಸಬೇಕಿದೆ’ ಎಂದು ಲಕ್ಷ್ಮಣ್ ಹೇಳಿದರು.
ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಇಂಗ್ಲೆಂಡ್ ಏಕದಿನದಲ್ಲಿ ಸ್ಥಿರ ಹಾಗೂ ಗಮನಾರ್ಹ ನಿರ್ವಹಣೆ ತೋರುತ್ತ ಬಂದಿವೆ ಎಂದ ಲಕ್ಷ್ಮಣ್, ಪ್ರಸ್ತುತ ಟೀಮ್ ಇಂಡಿಯಾ ಏಕದಿನದ ನಂಬರ್ ವನ್ ತಂಡ ಎಂಬುದನ್ನು ಮರೆಯುವಂತಿಲ್ಲ. ಇನ್ನೊಂದೆಡೆ ಇಂಗ್ಲೆಂಡ್ ತನ್ನ ಏಕದಿನ ಶೈಲಿಯನ್ನೇ ಬದಲಿಸಿಕೊಂಡ ರೀತಿಯಲ್ಲಿ ಆಡುತ್ತಿದೆ ಎಂದರು.
ಕ್ರಿಕೆಟ್ ಜನಕರೆಂಬ ಖ್ಯಾತಿಯ ಇಂಗ್ಲೆಂಡ್ ಈವರೆಗೆ ಏಕದಿನ ವಿಶ್ವಕಪ್ ಗೆದ್ದಿಲ್ಲ ಎಂಬುದೊಂದು ದುರಂತ. ತವರಿನಲ್ಲೇ 4 ವಿಶ್ವಕಪ್ ನಡೆದರೂ ಆಂಗ್ಲರಿಗೆ ಟ್ರೋಫಿ ಮರೀಚಿಕೆಯೇ ಆಗಿ ಉಳಿದಿದೆ. ಇನ್ನೊಂದೆಡೆ ಭಾರತ 2 ಸಲ ವಿಶ್ವಕಪ್ ಮೇಲೆ ಹಕ್ಕು ಚಲಾಯಿಸಿದೆ. ಮುಂದಿನ ವರ್ಷ ಇದು ಮೂರಕ್ಕೇರಲಿ ಎಂದು ಲಕ್ಷ್ಮಣ್ ಆಶಿಸಿದರು.