Advertisement

World Cup; ಬೆಂಗಳೂರಿನಲ್ಲಿಂದು ಆಸ್ಟ್ರೇಲಿಯ-ಪಾಕಿಸ್ಥಾನ ಬಿಗ್‌ ಮ್ಯಾಚ್‌

12:16 AM Oct 20, 2023 | Team Udayavani |

ಬೆಂಗಳೂರು: ಉದ್ಯಾನ ನಗರಿಯಲ್ಲಿ 13ನೇ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಹವಾ ಬೀಸಲಾ ರಂಭಿಸಿದೆ. ಶುಕ್ರವಾರ ಇಲ್ಲಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ವಿಶ್ವದ ಎರಡು ಬಲಿಷ್ಠ ತಂಡಗಳಾದ, ಆದರೆ ಈ ಕೂಟದಲ್ಲಿನ್ನೂ ನೈಜ ಸಾಮರ್ಥ್ಯವನ್ನು ತೋರ್ಪಡಿಸದ ಆಸ್ಟ್ರೇಲಿಯ ಮತ್ತು ಪಾಕಿಸ್ಥಾನ ತಂಡಗಳು ಮುಖಾಮುಖೀ ಆಗಲಿವೆ. ಎರಡೂ ತಂಡಗಳು ತೀವ್ರ ಒತ್ತಡದಲ್ಲಿ ಈ ಪಂದ್ಯವನ್ನು ಆಡಲಿಳಿಯಲಿವೆ.

Advertisement

ಬಹುಶಃ ಬೆಂಗಳೂರಿಗರ ಪಾಲಿಗೆ ಇದೇ ಬಿಗ್‌ ಮ್ಯಾಚ್‌. ಕಾರಣ, ಇಲ್ಲಿ ಭಾರತದ ಯಾವುದೇ ಮಹತ್ವದ ಪಂದ್ಯ ನಡೆಯದು. ಕಟ್ಟಕಡೆಯ ಲೀಗ್‌ ಪಂದ್ಯದಲ್ಲಿ ರೋಹಿತ್‌ ಪಡೆ ನೆದರ್ಲೆಂಡ್ಸ್‌ ವಿರುದ್ಧ ಸೆಣಸಲಿದೆ, ಅಷ್ಟೇ. ಉಳಿದಂತೆ ಇಂಗ್ಲೆಂಡ್‌-ಶ್ರೀಲಂಕಾ, ನ್ಯೂಜಿಲ್ಯಾಂಡ್‌-ಪಾಕಿ ಸ್ಥಾನ, ನ್ಯೂಜಿಲ್ಯಾಂಡ್‌-ಶ್ರೀಲಂಕಾ ನಡುವಿನ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಉಳಿದ ಈ ಮೂರೂ ಪಂದ್ಯಗಳು ಮಹತ್ವದ್ದಾಗಿವೆ.

ಹೊಳಪು ಕಳೆದುಕೊಂಡ ತಂಡ
ಆದರೆ ಆಸ್ಟ್ರೇಲಿಯ, ಪಾಕಿಸ್ಥಾನ ತಂಡಗಳೆರಡೂ ಕೂಟದ ಆರಂಭಕ್ಕೂ ಮುನ್ನ ಫೇವರಿಟ್‌ ಆಗಿದ್ದವು. ಇವುಗಳ ಮೇಲೆ ಭಾರೀ ಭರವಸೆ ಇರಿಸಲಾಗಿತ್ತು. ಆದರೆ ಸ್ಪರ್ಧೆ ಮೊದಲ್ಗೊಂಡಂತೆಯೇ ಇವೆರಡೂ ಹೊಳಪು ಕಳೆದುಕೊಂಡಿವೆ. ತಮ್ಮ ಅಭಿಮಾನಿಗಳನ್ನು ನಿರಾಸೆಯಲ್ಲಿ ಮುಳುಗಿಸಿವೆ. ಹೀಗಾಗಿ ಬೆಂಗಳೂರು ಕ್ರೀಡಾಂಗಣ ಈ ಎರಡೂ ತಂಡಗಳ ಪುನಶ್ಚೇತನಕ್ಕೊಂದು ವೇದಿಕೆ. ಈ ಪಂದ್ಯದ ಫಲಿತಾಂಶ ಇಡೀ ಕೂಟದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಇತ್ತಂಡಗಳ ಒಂದು ಹಂತದ ಭವಿಷ್ಯವನ್ನು ಈ ಬೆಂಗಳೂರು ಪಂದ್ಯ ಬರೆಯಲಿದೆ. ಈ ಕಾರಣಕ್ಕಾಗಿಯೇ ಇದೊಂದು ಬಿಗ್‌ ಮ್ಯಾಚ್‌.

ಭಾರತ ವಿರುದ್ಧ ಸೋಲು
ಆಸ್ಟ್ರೇಲಿಯ ಮತ್ತು ಪಾಕಿಸ್ಥಾನ 3 ಪಂದ್ಯಗಳನ್ನಾಡಿವೆ. ಆಸ್ಟ್ರೇಲಿಯ ಒಂದನ್ನಷ್ಟೇ ಗೆದ್ದು, ಎರಡರಲ್ಲಿ ಸೋತಿದೆ. ಪಾಕಿಸ್ಥಾನ ಎರಡನ್ನು ಗೆದ್ದು, ಒಂದು ಪಂದ್ಯವನ್ನು ಕಳೆದುಕೊಂಡಿದೆ. ಈ ಎರಡೂ ತಂಡಗಳ ಸಾಮ್ಯತೆಯೆಂದರೆ, ಆತಿಥೇಯ ಭಾರತದ ವಿರುದ್ಧ ಮುಗ್ಗರಿಸಿದ್ದು ಹಾಗೂ ಶ್ರೀಲಂಕಾವನ್ನು ಮಣಿಸಿದ್ದು! ಉಳಿದಂತೆ ಪಾಕಿಸ್ಥಾನ ತಂಡ ನೆದರ್ಲೆಂಡ್ಸ್‌ ವಿರುದ್ಧ (81 ರನ್‌) ಜಯ ಸಾಧಿಸಿದೆ. ಆಸ್ಟ್ರೇಲಿಯದ ಏಕೈಕ ಗೆಲುವು ಕೂಡ ಲಂಕಾ ವಿರುದ್ಧ ಬಂದಿದೆ. ದಕ್ಷಿಣ ಆಫ್ರಿಕಾ ಕೈಯಲ್ಲಿ 134 ರನ್ನುಗಳ ಹೊಡೆತ ಅನುಭವಿಸಿದೆ. ಹೀಗಾಗಿ ಪಾಕಿಸ್ಥಾನವನ್ನು ಮಣಿಸಲೇಬೇಕಾದ ಒತ್ತಡ ತೀವ್ರಗೊಂಡಿದೆ.

ಸ್ಫೂರ್ತಿ ತುಂಬದ ಗೆಲುವು
ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್‌ಗೆ 81 ರನ್‌ ಸೋಲುಣಿಸಿದ ಪಾಕಿ ಸ್ಥಾನ, ಅನಂತರ ಶ್ರೀಲಂಕಾ ವಿರುದ್ಧ 345 ರನ್ನುಗಳ ಅಸಾಧಾರಣ ಗುರಿಯನ್ನು ನಾಲ್ಕೇ ವಿಕೆಟ್‌ ಕಳೆದುಕೊಂಡು ಬೆನ್ನಟ್ಟಿತ್ತು. ಆದರೆ ಈ ಗೆಲುವು ಭಾರತವನ್ನು ಎದುರಿ ಸುವ ಸಂದರ್ಭದಲ್ಲಿ ಸ್ಫೂರ್ತಿ ಆಗಲೇ ಇಲ್ಲ! ಹೀಗಾಗಿ ಶುಕ್ರವಾರ ಆಸ್ಟ್ರೇಲಿಯನ್ನು ಎದುರಿಸುವಾಗ ಮತ್ತೆ ಒಂದಾಗಿ ತನ್ನ ಸಾಮರ್ಥ್ಯವನ್ನು ಕ್ರೋಢೀಕರಿಸಬೇಕಾದ ಒತ್ತಡ ಬಾಬರ್‌ ಪಡೆಯ ಮೇಲಿದೆ.

Advertisement

ಏಕದಿನ ಮತ್ತು ವಿಶ್ವಕಪ್‌ ಇತಿಹಾಸ ವನ್ನು ಗಮನಿಸುವಾಗ ಆಸ್ಟ್ರೇಲಿಯ ವಿರುದ್ಧ ಪಾಕಿಸ್ಥಾನ ಬಹಳಷ್ಟು ಹಿಂದಿದೆ. ಇದು ಕೂಡ ಒತ್ತಡಕ್ಕೆ ಕಾರಣವಾಗಬಹುದು.ಪಾಕಿಸ್ಥಾನದ ಸಮಸ್ಯೆ ಓಪನಿಂಗ್‌ನಲ್ಲೇ ಇದೆ. ಎಡಗೈ ಬ್ಯಾಟರ್‌ ಇಮಾಮ್‌ ಉಲ್‌ ಹಕ್‌ ಅವರ ಔಟ್‌ ಆಫ್‌ ಫಾರ್ಮ್ ಚಿಂತೆಯ ಸಂಗತಿಯಾಗಿದೆ. 3 ಪಂದ್ಯಗಳಿಂದ ಅವರು ಗಳಿಸಿದ್ದು 63 ರನ್‌ ಮಾತ್ರ. ಫಖಾರ್‌ ಜಮಾನ್‌ ಕೂಡ ರನ್‌ ಬರಗಾಲದಲ್ಲಿದ್ದರು. ಆದರೆ ಇವರ ಬದಲು ಅವಕಾಶ ಪಡೆದ ಅಬ್ದುಲ್ಲ ಶಫೀಕ್‌ ಭರವಸೆ ಮೂಡಿಸಿದ್ದಾರೆ.

ನಾಯಕನ ಪರದಾಟ
ಇನ್ನು ನಾಯಕನ ವಿಚಾರ. ಉತ್ತಮ ಫಾರ್ಮ್ನಲ್ಲಿದ್ದ ಬಾಬರ್‌ ಆಜಂ ವಿಶ್ವಕಪ್‌ನಲ್ಲಿ ಪರದಾಡುತ್ತಿದ್ದಾರೆ. ಭಾರತದ ವಿರುದ್ಧ ಕಷ್ಟಪಟ್ಟು ಫಿಫ್ಟಿ ಹೊಡೆದರೂ ನೆದರ್ಲೆಂಡ್ಸ್‌, ಲಂಕಾ ವಿರುದ್ಧ ಇವರದು ನಾಯಕನ ಆಟ ವಾಗಿರಲಿಲ್ಲ. ಇವರಿಗೆ ನೆದರ್ಲೆಂಡ್ಸ್‌ನ ಸ್ಕಾಟ್‌ ಎಡ್ವರ್ಡ್ಸ್‌ ಮಾದರಿಯಾಗ ಬೇಕಿದೆ. ಮೊಹಮ್ಮದ್‌ ರಿಜ್ವಾನ್‌, ಸೌದ್‌ ಶಕೀಲ್‌ ಓಕೆ. ಆದರೆ ಹಾರ್ಡ್‌ ಹಿಟ್ಟರ್‌ ಇಫ್ತಿಕಾರ್‌ ಇನ್ನೂ ಸಿಡಿದಿಲ್ಲ. ಹಾಗೆಯೇ ಉಪನಾಯಕ, ಆಲ್‌ರೌಂಡರ್‌ ಶದಾಬ್‌ ಖಾನ್‌ ಕೂಡ ಕೈಕೊಡುತ್ತಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ನಸೀಮ್‌ ಶಾ ಹೊರಬಿದ್ದುದರಿಂದ ಶಾಹೀನ್‌ ಶಾ ಅಫ್ರಿದಿ ಮೇಲೆ ಒತ್ತಡ ಬಿದ್ದದ್ದು ಸ್ಪಷ್ಟ.

ಆಸೀಸ್‌ ಕಳಪೆ ಬ್ಯಾಟಿಂಗ್‌
ಪಾಕಿಸ್ಥಾನಕ್ಕೆ ಹೋಲಿಸಿದರೆ ಆಸ್ಟ್ರೇಲಿ ಯದ ಬ್ಯಾಟಿಂಗ್‌ ಕೂಡ ಕಳಪೆ ಯಾಗಿಯೇ ಇದೆ. ಜೋಶ್‌ ಇಂಗ್ಲಿಸ್‌ ಹೊರತುಪಡಿಸಿದರೆ ಉಳಿದವರ್ಯಾರೂ ಅರ್ಧ ಶತಕ ಬಾರಿಸಿಲ್ಲ. 3 ಪಂದ್ಯಗಳಲ್ಲಿ ನೂರರ ಗಡಿ ದಾಟಿದ್ದು ಲಬುಶೇನ್‌ ಮಾತ್ರ. ಗ್ಲೆನ್‌ ಮ್ಯಾಕ್ಸ್‌ವೆಲ್‌ಗಿಂತ (49 ರನ್‌) ಹೆಚ್ಚು ರನ್‌ ಮಿಚೆಲ್‌ ಸ್ಟಾರ್ಕ್‌ ಖಾತೆಯಲ್ಲಿದೆ (55). ಸ್ಮಿತ್‌ ವಿಶ್ವಕಪ್‌ನಲ್ಲಿ ಮೊದಲ ಸೊನ್ನೆ ಸುತ್ತಿ ದ್ದಾರೆ. ಒಟ್ಟಾರೆ ಪಾಕಿಸ್ಥಾನವನ್ನು ಎದುರಿಸು ವಾಗ ಆಸ್ಟ್ರೇಲಿಯದ ಬ್ಯಾಟಿಂಗ್‌ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಬೇಕಿದೆ.

ತ್ರಿವಳಿ ವೇಗಿಗಳಾದ ಸ್ಟಾರ್ಕ್‌, ಕಮಿನ್ಸ್‌, ಹೇಝಲ್‌ವುಡ್‌ ಎಸೆತಗಳು ಇನ್ನಷ್ಟು ಹರಿತಗೊಳ್ಳಬೇಕಿದೆ. ಸ್ಪಿನ್ನರ್‌ಗಳನ್ನು ಚೆನ್ನಾಗಿ ನಿಭಾಯಿಸುವ ಪಾಕಿಸ್ಥಾನಕ್ಕೆ ಆ್ಯಡಂ ಝಂಪ ಎಷ್ಟರ ಮಟ್ಟಿಗೆ ಆಘಾತ ಒಡ್ಡಬಲ್ಲರು ಎಂಬುದೂ ಒಂದು ಪ್ರಶ್ನೆ.

ವಿಪರೀತ ಒತ್ತಡದಲ್ಲಿ ಪಾಕ್‌
ಪಾಕಿಸ್ಥಾನ ನಿರ್ಭೀತ ಆಟಕ್ಕೆ ಯಾವತ್ತೂ ಹೆಸರುವಾಸಿ. ಆದರೆ ಭಾರತದ ವಿರುದ್ಧದ ಪಂದ್ಯ ಮಾತ್ರ ಇದಕ್ಕೆ ಸದಾ ಅಪವಾದ. ಇದಕ್ಕೆ ಪ್ರಸಕ್ತ ವಿಶ್ವಕಪ್‌ ಕೂಡ ಹೊರತಾಗಲಿಲ್ಲ. ಅದರಲ್ಲೂ ಈ ಸಲವಂತೂ ಅದು ವಿಪರೀತ ಒತ್ತಡಕ್ಕೆ ಸಿಲುಕಿ ದಂತಿತ್ತು. ಅಹ್ಮದಾಬಾದ್‌ನಲ್ಲಿ ಟೀಮ್‌ ಇಂಡಿಯಾ ಮತ್ತು ಲಕ್ಷಗಟ್ಟಲೆ ವೀಕ್ಷಕರನ್ನು ನಿಭಾಯಿಸುವುದೇ ಬಾಬರ್‌ ಆಜಂ ಪಡೆಗೆ ಭಾರೀ ಸವಾಲಾಗಿ ಪರಿಣಮಿಸಿತು. ಅದು ಒತ್ತಡಕ್ಕೆ ಸಿಲುಕಿಯೇ ಅರ್ಧ ಪಂದ್ಯ ವನ್ನು ಕಳೆದುಕೊಂಡಿತು. ಉಳಿದರ್ಧ ಪಂದ್ಯವನ್ನು ಹೋರಾಟ ನೀಡದೆ ಸೋತಿತು. ಈ ಪಂದ್ಯ ಮುಗಿದು 4 ದಿನಗಳಾಗಿವೆ. ಅಷ್ಟರಲ್ಲಿ ತನ್ನ ಶಕ್ತಿ ಯನ್ನು ಒಗ್ಗೂಡಿಸಿ ಆಸೀಸ್‌ ಪಡೆ ಯನ್ನು ಎದುರಿಸಿ ನಿಲ್ಲಲು ಶಕ್ತವಾದೀತೇ ಎಂಬುದು ದೊಡ್ಡ ಪ್ರಶ್ನೆ.

ಜಮಾನ್‌, ಅಘಾ ಇಲ್ಲ

ಗಾಯ ಮತ್ತು ಜ್ವರದಿಂದ ಬಳಲುತ್ತಿರುವ ಆರಂಭಿಕ ಆಟಗಾರ ಫ‌ಖಾರ್‌ ಜಮಾನ್‌ ಮತ್ತು ಸಲ್ಮಾನ್‌ ಅಲಿ ಅಘಾ ಅವರು ಪಂದ್ಯದಲ್ಲಿ ಆಡುವುದಿಲ್ಲ. ಜಮಾನ್‌ ಪಾದದ ಗಾಯದಿಂದ ಬಳಲುತ್ತಿದ್ದರೆ ಅಘಾ ಜ್ವರದಿಂದ ಬಳಲುತ್ತಿದ್ದಾರೆ.

ಪಾದದ ಗಾಯಕ್ಕೆ ಚಿಕಿತ್ಸೆ ಪಡೆದಿರುವ ಜಮಾನ್‌ ಅವರು ಮುಂದಿನ ವಾರ ಆಯ್ಕೆಗೆ ಲಭ್ಯರಿರುತ್ತಾರೆ. ಅಘಾ ಜ್ವರದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ತಂಡದ ಉಳಿದ ಆಟಗಾರರು ಆರಾಮ ವಾಗಿದ್ದಾರೆ ಎಂದು ಪಾಕಿಸ್ಥಾನದ ಮಾಧ್ಯಮ ಮ್ಯಾನೇಜರ್‌ ಹೇಳಿದ್ದಾರೆ. ಜಮಾನ್‌ ಇಷ್ಟರವರೆಗೆ ಈ ಕೂಟದಲ್ಲಿ ಒಂದು ಪಂದ್ಯದಲ್ಲಿ ಆಡಿದ್ದರು. ನೆದರ್ಲೆಂಡ್ಸ್‌ ವಿರುದ್ಧ ಆಡಿದ್ದ ಅವರು 12 ರನ್‌ ಗಳಿಸಿದ್ದರು.

ಆಸ್ಟ್ರೇಲಿಯ:
ಡೇವಿಡ್‌ ವಾರ್ನರ್‌, ಮಿಚೆಲ್‌ ಮಾರ್ಷ್‌, ಸ್ಟೀವನ್‌ ಸ್ಮಿತ್‌, ಮಾರ್ನಸ್‌ ಲಬುಶೇನ್‌, ಜೋಶ್‌ ಇಂಗ್ಲಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌ (ನಾಯಕ), ಆ್ಯಡಂ ಝಂಪ, ಜೋಶ್‌ ಹೇಝಲ್‌ವುಡ್‌.

ಪಾಕಿಸ್ಥಾನ:
ಫಖಾರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ಬಾಬರ್‌ ಆಜಂ (ನಾಯಕ), ಮೊಹಮ್ಮದ್‌ ರಿಜ್ವಾನ್‌, ಸೌದ್‌ ಶಕೀಲ್‌, ಇಫ್ತಿಕಾರ್‌ ಅಹ್ಮದ್‌, ಉಸಾಮ ಮಿರ್‌, ಹ್ಯಾರಿಸ್‌ ರವೂಫ್‌, ಶಾಹೀನ್‌ ಶಾ ಅಫ್ರಿದಿ, ಹಸನ್‌ ಅಲಿ, ಮೊಹಮ್ಮದ್‌ ನವಾಜ್‌.

 ಆರಂಭ: ಅ. 2.00
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ವಿಶ್ವಕಪ್‌ ಮುಖಾಮುಖಿ
 ಪಂದ್ಯ: 10
 ಆಸ್ಟ್ರೇಲಿಯ ಜಯ: 06
 ಪಾಕಿಸ್ಥಾನ ಜಯ: 04
2019ರ ವಿಶ್ವಕಪ್‌ ಫಲಿತಾಂಶ-ಆಸ್ಟ್ರೇಲಿಯಕ್ಕೆ 41 ರನ್‌ ಜಯ

Advertisement

Udayavani is now on Telegram. Click here to join our channel and stay updated with the latest news.

Next