ಹೊಸದಿಲ್ಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಈಗಾಗಲೇ ಹೊರಬಿದ್ದ ಬಾಂಗ್ಲಾದೇಶದೆದುರು ಸೋಲು ಕಂಡ ಶ್ರೀಲಂಕಾ ವಿಶ್ವಕಪ್ ಕೂಟದಿಂದ ಹೊರ ಬಿದ್ದಿದೆ.
ಬಾಂಗ್ಲಾದೇಶ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.ಲಂಕಾ ಚರಿತ್ ಅಸಲಂಕಾ ಅವರ ಅಮೋಘ ಶತಕ ಮತ್ತು ಇತರ ಬ್ಯಾಟ್ಸ್ ಮ್ಯಾನ್ ಗಳ ಆಟದ ನೆರವಿನಿಂದ 49.3 ಓವರ್ ಗಳಲ್ಲಿ 279 ರನ್ ಗಳಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಬಾಂಗ್ಲಾ41.1 ಓವರ್ ಗಳಲ್ಲೇ 7 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿ ಜಯ ಸಾಧಿಸಿತು. ಶ್ರೀಲಂಕಾ ಕೊನೆಯ ಪಂದ್ಯವನ್ನು ದೊಡ್ಡ ಗೆಲುವಿಗಾಗಿ ಕಾಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ. ಬಾಂಗ್ಲಾ ಕೊನೆಯ ಪಂದ್ಯ ಆಸ್ಟ್ರೇಲಿಯ ವಿರುದ್ಧ ಆಡಲಿದೆ.
ಲಂಕಾ ಆರಂಭಿಕ ಆಟಗಾರ ಕುಸಲ್ ಪೆರೆರಾ 4 ರನ್ ಗಳಿಸಿ ಬೇಗನೆ ಔಟಾದರು. ಪಾತುಮ್ ನಿಸ್ಸಾಂಕ 41, ನಾಯಕ ಕುಸಲ್ ಮೆಂಡಿಸ್ 19, ಸಮರವಿಕ್ರಮ 41, ಧನಂಜಯ ಡಿ ಸಿಲ್ವಾ 34, ತೀಕ್ಷಣ 22 ರನ್ ಗಳಿಸಿ ಔಟಾದರು. ತಂಜಿಮ್ ಹಸನ್ ಸಾಕಿಬ್ 3, ಶೋರಿಫುಲ್ ಇಸ್ಲಾಂ ಮತ್ತು ನಾಯಕ ಶಕಿಬ್2 ವಿಕೆಟ್ ಕಿತ್ತರು. ಮೆಹಿದಿ ಹಸನ್ ಮಿರಾಜ್ 1 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಜಿದ್ ಹಸನ್ (9) ಅವರ ವಿಕೆಟ್ ಬೇಗನೆ ಕಳೆದುಕೊಂಡಿತು. ಆಬಳಿಕ ಚೇತರಿಕೆಯ ಹಾದಿ ಹಿಡಿಯಿತು. ಲಿಟ್ಟನ್ ದಾಸ್ 23 ರನ್ ಗಳಿಸಿ ಔಟಾದರು. ಅಮೋಘ ಜತೆಯಾಟವಾಡಿದ ನಜ್ಮುಲ್ ಹೊಸೈನ್ ಶಾಂತೋ(90) ಮತ್ತು ಶಕೀಬ್ ಅಲ್ ಹಸನ್ (82) ಗೆಲುವಿನ ಸಾಧ್ಯತೆಯನ್ನು ಹತ್ತಿರಕ್ಕೆ ತಂದರು . ಆ ಬಳಿಕ ಮಹಮ್ಮದುಲ್ಲಾ22, ಮುಶ್ಫಿಕರ್ ರಹೀಮ್ 10, ಮೆಹಿದಿ ಹಸನ್ 3, ಕೊನೆಯಲ್ಲಿ ತಂಜಿಮ್ ಹಸನ್ ಸಾಕಿಬ್ 9 , ತೌಹಿದ್ ಹೃದಯ್ 15 ರನ್ ಗಳಿಸಿ 3 ವಿಕೆಟ್ ಗಳ ಜಯವನ್ನು ಸಂಭ್ರಮಿಸಿದರು.
82 ರನ್ ಗಳಿಸಿದ್ದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಅವರ ವಿಕೆಟ್ ಪಡೆದು ಮ್ಯಾಥ್ಯೂಸ್ ಸಂಭ್ರಮಿಸಿದರು. ಮ್ಯಾಥ್ಯೂಸ್ ಎಸೆದ ಚೆಂಡನ್ನು ಅಸಲಂಕಾ ಕೈಗಿತ್ತು ಶಕೀಬ್ ನಿರ್ಗಮಿಸಿದರು. ದಿಲ್ಶನ್ ಮಧುಶಂಕ 3, ಮಹೇಶ್ ತೀಕ್ಷಣ ಮತ್ತು ಮ್ಯಾಥ್ಯೂಸ್ 2ವಿಕೆಟ್ ಪಡೆದರು.
ಟೈಮ್ ! ; ಶಕೀಬ್ ಔಟ್ ಮಾಡಿ ಸಂಭ್ರಮ
ಬಾಂಗ್ಲಾ ನಾಯಕ ಶಕೀಬ್ ಅವರನ್ನು ಔಟ್ ಮಾಡಿ ಮ್ಯಾಥ್ಯೂಸ್ ಅವರು ಗಮನ ಸೆಳೆದರು. ಔಟಾದ ಬಳಿಕ ತನ್ನ ಮಣಿಕಟ್ಟಿನ ಮೇಲೆ ಕೈ ಬಡಿದು ಸೂಚನೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಮ್ಯಾಥ್ಯೂಸ್ ಅವರ ಈ ಸಂಭ್ರಮಾಚರಣೆ ಭಾರೀ ಸುದ್ದಿಯಾಗಿದೆ. ಇದಕ್ಕೆ ಕಾರಣವಾಗಿದ್ದು ಏಂಜಲೋ ಮ್ಯಾಥ್ಯೂಸ್ ಅವರನ್ನು ಶಕೀಬ್ ಟೈಮ್ಡ್ ಔಟ್ ಗೆ ಸಿಲುಕಿಸಿ ನಿರ್ಗಮಿಸುವಂತೆ ಮಾಡಿದ್ದು. ಟೈಮ್ಡ್ ಔಟ್ ಗೆ ಬಲಿಯಾದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಮ್ಯಾಥ್ಯೂಸ್ ಪಾತ್ರರಾದರು.
ಇದನ್ನು ಓದಿ:ದಿಲ್ಲಿ ಮೈದಾನದಲ್ಲಿ ಹಿಂದೆಂದೂ ಕಂಡಿರದ ದೃಶ್ಯ; ವಿಚಿತ್ರ ರೀತಿಯಲ್ಲಿ ಔಟಾದ ಮ್ಯಾಥ್ಯೂಸ್