ಮುಂಬೈ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡವು ಸತತ ಏಳು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈಗಾಗಲೇ ಸೆಮಿ ಫೈನಲ್ ಗೆ ಅರ್ಹತೆ ಪಡೆದಿರುವ ಭಾರತ ತಂಡಕ್ಕೆ ಮಹತ್ವದ ದಕ್ಷಿಣ ಅಫ್ರಿಕಾ ಪಂದ್ಯಕ್ಕೆ ಮುನ್ನ ಆಘಾತ ಎದುರಾಗಿದೆ. ಕಳೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಆಲ್ ರೌಂಡರ್, ಉಪನಾಯಕ ಹಾರ್ದಿಕ್ ಪಾಂಡ್ಯ ಇದೀಗ ಸಂಪೂರ್ಣ ಕೂಟದಿಂದಲೇ ಹೊರಬಿದ್ದಿದ್ದಾರೆ.
ಉಪನಾಯಕನಾಗಿದ್ದ ಹಾರ್ದಿಕ್ ಅವರ ಅನುಪಸ್ಥಿತಿಯ ಕಾರಣದಿಂದ ಇದೀಗ ತಂಡದಲ್ಲಿ ಕೆಎಲ್ ರಾಹುಲ್ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಕನ್ನಡಿಗ ರಾಹುಲ್ ಈ ಹಿಂದೆಯೂ ತಂಡದಲ್ಲಿ ಉಪ ನಾಯಕ, ನಾಯಕನ ಜವಾಬ್ದಾರಿಯನ್ನು ನಿಭಾಯಿಸಿದ ಅನುಭವಿ.
“ಕೆಎಲ್ ರಾಹುಲ್ ಅವರನ್ನು ಬಿಸಿಸಿಐ ವಿಶ್ವಕಪ್ ನ ಉಳಿದ ಪಂದ್ಯಗಳಿಗೆ ಭಾರತ ತಂಡದ ಉಪನಾಯಕರನ್ನಾಗಿ ನೇಮಿಸಿದೆ. ತಂಡದೊಂದಿಗೆ ಪ್ರಯಾಣಿಸುತ್ತಿರುವ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಶನಿವಾರ ಬೆಳಿಗ್ಗೆ ಈ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ:50 ಕಾಂಗ್ರೆಸ್ ಶಾಸಕರು ಬಿಜೆಪಿ ಹೈಕಮಾಂಡ್ ಸಂಪರ್ಕದಲ್ಲಿ: ನಿರಾಣಿ ಸ್ಪೋಟಕ ಹೇಳಿಕೆ
ಅಕ್ಟೋಬರ್ 19ರಂದು ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರು. ಅವರು ನಿರೀಕ್ಷಿತ ಮಟ್ಟದಲ್ಲಿ ಚೇತರಿಸಿಕೊಳ್ಳದ ಕಾರಣ ಇದೀಗ ಸಂಪೂರ್ಣ ಕೂಟದಿಂದಲೇ ಅವರು ಹೊರಬಿದ್ದಿದ್ದಾರೆ. ಪಾಂಡ್ಯ ಬದಲಿಗೆ ಕರ್ನಾಟಕದ ವೇಗಿ ಪ್ರಸಿಧ್ ಕೃಷ್ಣ ಅವರಿಗೆ ಕರ್ನಾಟಕ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.