ಧರ್ಮಶಾಲಾ: ನಾಲ್ಕು ಪಂದ್ಯಗಳ ಕಾಯುವಿಕೆಯ ನಂತರ ವೇಗಿ ಮೊಹಮ್ಮದ್ ಶಮಿ ಅವರಿಗೆ ಈ ಏಕದಿನ ವಿಶ್ವಕಪ್ ನಲ್ಲಿ ಆಡುವ ಅವಕಾಶ ಲಭಿಸಿದೆ. ನ್ಯೂಜಿಲ್ಯಾಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶಮಿ ಅವರು ಶಾರ್ದೂಲ್ ಠಾಕೂರ್ ಬದಲು ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಈ ಬಾರಿಯ ಕೂಟದಲ್ಲಿ ತನ್ನ ಮೊದಲ ಪಂದ್ಯದಲ್ಲಿಯೇ ಶಮಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಎಸೆದ ಮೊದಲ ಪಂದ್ಯದಲ್ಲಿಯೇ ವಿಕೆಟ್ ಕಿತ್ತ ಶಮಿ ತನ್ನ ಸಾಮರ್ಥ್ಯ ಏನೆಂದು ಸಾಬೀತು ಪಡಿಸಿದ್ದಾರೆ. ಪಂದ್ಯದ ಒಂಬತ್ತನೇ ಓವರ್ ಎಸೆಯಲು ಬಂದ ಶಮಿ ಮೊದಲ ಎಸೆತದಲ್ಲಿಯೇ ಕಿವೀಸ್ ಆರಂಭಿಕ ಆಟಗಾರ ವಿಲ್ ಯಂಗ್ ವಿಕೆಟ್ ಕಿತ್ತರು.
ಇದೇ ವೇಳೆ ಭಾರತೀಯ ವಿಶ್ವಕಪ್ ದಾಖಲೆ ಪುಸ್ತಕದಲ್ಲಿ ತನ್ನ ಹೆಸರು ಬರೆದರು. ಏಕದಿನ ವಿಶ್ವಕಪ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಗಳ ಸಾಲಿನಲ್ಲಿ ಮೊಹಮ್ಮದ್ ಶಮಿ ಮೂರನೇ ಸ್ಥಾನಕ್ಕೆ ಭಡ್ತಿ ಪಡೆದರು. ಇದುವರೆಗೆ ಮೂರನೇ ಸ್ಥಾನದಲ್ಲಿದ್ದ ಅನಿಲ್ ಕುಂಬ್ಳೆ ನಾಲ್ಕನೇ ಸ್ಥಾನಕ್ಕೆ ಕುಸಿದರು.
ಯಂಗ್ ವಿಕೆಟ್ ನೊಂದಿಗೆ ಶಮಿ ಏಕದಿನ ವಿಶ್ವಕಪ್ ನಲ್ಲಿ 32ನೇ ವಿಕೆಟ್ ಪಡೆದರು. 44 ವಿಕೆಟ್ ಗಳೊಂದಿಗೆ ಜಹೀರ್ ಖಾನ್ ಮೊದಲ ಸ್ಥಾನದಲ್ಲಿದ್ದು, ಅಷ್ಟೇ ವಿಕೆಟ್ ಪಡೆದ ಜಾವಗಲ್ ಶ್ರೀನಾಥ್ ಎರಡನೇ ಸ್ಥಾನದಲ್ಲಿದ್ದಾರೆ. ಅನಿಲ್ ಕುಂಬ್ಳೆ 31 ವಿಶ್ವಕಪ್ ವಿಕೆಟ್ ಕಿತ್ತಿದ್ದರು.